ETV Bharat / state

ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಅಭಿಯಾನ: ಸಿಎಂ

author img

By

Published : Feb 10, 2023, 7:49 PM IST

ಸರ್ಕಾರದಿಂದ ಜನರಿಗಿರುವ ಯೋಜನೆಗಳ ಕುರಿತು ಗ್ರಾಮದ ಪ್ರತಿ ಅಂಚಿಗೂ ಮಾಹಿತಿ ತಲುಪಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾಗೃತಿ ಅಭಿಯಾನ ಮಾಡಲು ನಿರ್ಧರಿಸಿದೆ.

CM Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ ಅಭಿಯಾನ

ಬೆಂಗಳೂರು: ಸರ್ಕಾರದ ಯೋಜನೆಗಳು ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳಿಗೆ ಮುಟ್ಟಬೇಕೆಂಬ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ಮೇಲೆ ಬಹಳಷ್ಟು ಪಾರದರ್ಶಕತೆ ಸಾಧ್ಯವಾಗಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಫಲಾನುಭವಿಗಳಿಗೆ ನೇರವಾಗಿ ಮುಟ್ಟಿಸಲು ಡಿಬಿಟಿ (ಡೈರೆಕ್ಟ್​ ಬೆನಿಫಿಟ್​ ಟ್ರಾನ್ಸ್​ಫರ್​) ವ್ಯವಸ್ಥೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದ್ದು, ಜನರು ಕಚೇರಿಗಳಿಗೆ ಒಡಾಡುವುದನ್ನು ತಪ್ಪಿಸಲಾಗಿದೆ. ಕಿಸಾನ್​ ಸಮ್ಮಾನ್​, ಪಿಎಂ ಸ್ವನಿಧಿ, ರೈತ ವಿಧ್ಯಾ ನಿಧಿ, ರೈತ ಶಕ್ತಿ ಯೋಜನೆಗಳು ಡಿಬಿಟಿ ಮುಖಾಂತರವಾಗಿ ನೇರವಾಗಿ ರೈತರ ಖಾತೆಗೆ ಪಾವತಿಯಾಗುತ್ತಿವೆ. ಈ ಎಲ್ಲಾ ಯೋಜನೆಗಳು ಡಿಬಿಟಿ ವ್ಯವಸ್ಥೆ ಮೂಲಕ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ: ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ನೇರವಾಗಿ ಮುಟ್ಟುವಂತೆ ಹಾಗೂ ಯಾರಾದರೂ ಸೌಲಭ್ಯ ವಂಚಿತರಾಗಿದ್ದರೆ, ಅಂತಹವರಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತ್ವರಿತವಾಗಿ ಮುಟ್ಟಿಸಲು ಕೂಡಲೇ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಎರಡು ಮೂರು ಯೋಜನೆಗಳನ್ನು ನಾವು ಜಾರಿ ಮಾಡಲಿದ್ದೇವೆ.

ಪ್ರತಿ ಜಿಲ್ಲೆಯಲ್ಲೂ ಜಾಗೃತಿ ಅಭಿಯಾನ: ಸ್ತ್ರೀ ಸಾಮರ್ಥ್ಯ ಶಕ್ತಿ ಯೋಜನೆ, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ, ಕುರಿಗಾಹಿಗಳಿಗೆ ಅಮೃತ ಯೋಜನೆಗಳನ್ನು ಜಾರಿಗೆ ತರಬೇಕಿದ್ದು, ಇದಕ್ಕೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಬಾಕಿ ಇರುವ ಫಲಾನುಭವಿಗಳನ್ನು ಗುರುತಿಸಿ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸವಾಗಬೇಕು. ಪ್ರತಿ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನ ಕೈಗೊಂಡು ಒಂದು ಸಮ್ಮೇಳನ ಮಾಡುವ ಮುಖಾಂತರ ಯೋಜನೆಗಳನ್ನು ಮುಟ್ಟಿಸಲಾಗುವುದು. ಇದರಿಂದ ಅತ್ಯಂತ ತಳಸ್ತರದಲ್ಲಿರುವ ಜನರಿಗೆ ಮಾಹಿತಿ ತಲುಪಬೇಕು ಎನ್ನುವುದು ನಮ್ಮ ಉದ್ದೇಶ.

ಕೆಲವೊಂದು ಯೋಜನೆಗಳ, ಉದಾಹರಣೆಗೆ ಎಸ್ಸಿ​ ಎಸ್​ಟಿ ಯೋಜನೆಗಳನ್ನು ನಾವು ಮಾಡಿದಾಗ ಕೆಲವು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸರಿಯಾಗಿ ಮಾಹಿತಿ ತಲುಪುವುದಿಲ್ಲ. ಅಂತಹ ಸಮಯದಲ್ಲಿ ಪ್ರತಿ ಗ್ರಾಮಗಳ ಪ್ರತಿಯೊಬ್ಬನಿಗೂ ಇದರ ಮಾಹಿತಿ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಸಮ್ಮೇಳನದ ಮೂಲಕ ಜಾಗೃತಿ ಮೂಡಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ಇದರ ಬಗ್ಗೆ ವಿವರವಾದ ಮಾಹಿತಿಯನ್ನು ಎರಡು ದಿನಗಳಲ್ಲಿ ನೀಡಲಾಗುವುದು.

ಈ ಕುರಿತಂತೆ ಅತಿ ಶೀಘ್ರದಲ್ಲಿಯೇ ಆದೇಶ ಹೊರಬೀಳಲಿದೆ. ಅಭಿಯಾನದಿಂದ ಮಾಹಿತಿ ಇಲ್ಲದವರಿಗೂ ಮಾಹಿತಿ ಮುಟ್ಟಬೇಕು. ಈ ಸಮ್ಮೇಳನಕ್ಕಿಂತ ಮುಂಚೆ ಅಭಿಯಾನ ಮಾಡಿ ಜಾಗೃತಿ ಮೂಡಿಸಿ, ಜನರಿಗೆ ಮಾಹಿತಿ ದೊರೆತು ಸೌಲಭ್ಯಗಳನ್ನು ಪಡೆಯುವಂತೆ ಮಾಡಲಾಗುವುದು. ಈ ಫಲಾನುಭವಿಗಳ ಸಮ್ಮೇಳನವನ್ನು ಎಲ್ಲಾ ಜಿಲ್ಲೆಗಳಲ್ಲಿ ಮಾಡಲು ತೀರ್ಮಾನ ಮಾಡಿದ್ದೇವೆ. ಈ ಅಭಿಯಾನ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಸಿಎಂ ವಿವರಿಸಿದರು.

ಇದನ್ನೂ ಓದಿ: ಬಿಬಿಎಂಪಿ ವಿಕೇಂದ್ರೀಕರಣಕ್ಕೆ ಶಿಫಾರಸು: ಸರ್ಕಾರಕ್ಕೆ ಆಡಳಿತ ಸುಧಾರಣಾ ಆಯೋಗದ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.