ETV Bharat / state

ನಾನ್‌ ವೆಜ್ ತಿಂದಿದ್ದು ಮರೆತಿದ್ದೆ, ಗರ್ಭಗುಡಿಯ ಹೊರಭಾಗದಲ್ಲಿ ನಿಂತಿದ್ದೆ: ಸಿ.ಟಿ.ರವಿ

author img

By

Published : Feb 23, 2023, 5:24 PM IST

ರಾಜ್ಯದಲ್ಲಿ ವೆಜ್ ಮತ್ತು ನಾನ್ ವೆಜ್ ದೇವಸ್ಥಾನಗಳಿವೆ. ನಾನ್‌ ವೆಜ್‌ ದೇವಸ್ಥಾನಗಳಲ್ಲಿ ಮಾಂಸಹಾರವನ್ನು ನೈವೇದ್ಯ ಮಾಡಲಾಗುತ್ತದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಸಿ ಟಿ ರವಿ
ಸಿ ಟಿ ರವಿ

ಬೆಂಗಳೂರು: ನಾನು ನಾನ್‌ ವೆಜ್ ತಿಂದಿದ್ದು ಹೌದು. ಆದ್ರೆ, ದೇವಸ್ಥಾನದ ಗರ್ಭಗುಡಿಗೆ ಹೋಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ದೇವಸ್ಥಾನದ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ. ಗರ್ಭಗುಡಿಯ ಹೊರಭಾಗದಲ್ಲಿದ್ದೆ. ದೇವಸ್ಥಾನದ ಆವರಣದಲ್ಲಿ ಕಟ್ಟಡ ಕಟ್ಟಲು ಮುಸ್ಲಿಮರು ಅವಕಾಶ ಕೊಟ್ಟಿರಲಿಲ್ಲ. ಅದರ ವೀಕ್ಷಣೆಗೆ ತೆರಳಿದ್ದೆ. ಅಲ್ಲಿಯ ಸ್ಥಳೀಯರೇ ಕರೆದುಕೊಂಡು ಹೋಗಿದ್ದರು ಎಂದರು.

ನಾನ್‌ ವೆಜ್ ತಿಂದಿರುವುದನ್ನು ಮರೆತಿದ್ದೆ: ಎಲ್ಲವನ್ನೂ ಎದೆ ಬಗೆದು ತೋರಿಸಲು ನಾನು ಹನುಮಂತನಲ್ಲ. ಕಾಂಗ್ರೆಸ್​ನವರಂತೆ ನಾನು ನಾನ್‌ ವೆಜ್ ತಿಂದು ಹೋಗಿದ್ದೆ, ಏನೀಗ ಅಂತ ನಾನು ಹೇಳಲ್ಲ. ರಾಜ್ಯದಲ್ಲಿ ಕೆಲವು ವೆಜ್ ಮತ್ತು ನಾನ್ ವೆಜ್ ದೇವಸ್ಥಾನಗಳಿವೆ. ನಾನ್ ವೆಜ್‌ ದೇವಸ್ಥಾನಗಳಲ್ಲಿ ಮಾಂಸಹಾರ ನೈವೇದ್ಯ ಮಾಡಲಾಗುತ್ತದೆ. ಅಂಥ ದೇವಸ್ಥಾನಗಳಿಗೆ ಹೋಗಬಹುದು. ಆದ್ರೆ ನಾನು ನಾನ್‌ ವೆಜ್ ತಿಂದಿರುವುದನ್ನು ಮರೆತಿದ್ದೆ. ಅದು ಉದ್ದೇಶಪೂರಿತ ಭೇಟಿಯಾಗಿರಲಿಲ್ಲ. ಅಲ್ಲಿನ ಸ್ಥಳೀಯರ ಅಪೇಕ್ಷೆ‌ಯ ಮೇರೆಗೆ ಹೋಗಿದ್ದೆ ಎಂದು ತಿಳಿಸಿದರು.

ವಿವಾದ: ಇತ್ತೀಚೆಗೆ ಶಾಸಕ ಸುನಿಲ್ ನಾಯ್ಕ ಅವರ ಮನೆಯಲ್ಲಿ ಬಾಡೂಟ ಸೇವಿಸಿದ ಬಳಿಕ ಶಾಸಕ ಸಿ.ಟಿ.ರವಿ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಭಟ್ಕಳದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಾಡೂಟ ಸೇವಿಸುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಈ ಬಗ್ಗೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ್ದ ಅವರು, ನಾನು ಹುಟ್ಟಿರುವುದೇ ಮಾಂಸ ತಿನ್ನುವ ಜಾತಿಯಲ್ಲಿ. ಆದರೆ ಮಾಂಸ ತಿಂದು ನಾನು ದೇವಾಲಯಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ವಿಚಾರ ಮತ್ತಷ್ಟೂ ಚರ್ಚೆಗೆ ಕಾರಣವಾಗಿ ಇದೀಗ ಮತ್ತೆ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಬಿಎಸ್​ವೈ ವಿದಾಯ ಬಾಷಣ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಎಸ್​ವೈ ರಾಜ್ಯಕ್ಕೆ ಮಾರ್ಗದರ್ಶನ ಮಾಡಿದ್ದರು. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂದು ಜನ ಮಾತನಾಡಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಉತ್ತಮ ಆಡಳಿತ ನೀಡಿದ್ದರು. ಅವರ ಮಾರ್ಗದರ್ಶನ ನಮಗಿರುತ್ತದೆ. ಚುನಾವಣೆಯಿಂದ ಮಾತ್ರ ಆಚೆ ಹೋಗಿದ್ದಾರೆ. ಸಕ್ರಿಯವಾಗಿ ರಾಜಕೀಯದಲ್ಲಿ ಇರುತ್ತಾರೆ.‌ ಅವರ ಮಾರ್ಗದರ್ಶನಿಂದ ಮತ್ತೆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು.

ಸರ್ಕಾರಿ ನೌಕರರಿಗೆ ಏಳನೇ ವೇತನ ವಿಚಾರವಾಗಿ ಮಾತನಾಡಿ, ನಮ್ಮ ನಾಯಕ ಯಡಿಯೂರಪ್ಪನವರು ನಿನ್ನೆ ಸದನದಲ್ಲೂ ಸಿಎಂಗೆ ಹೇಳಿದ್ದಾರೆ. ಅವರ ಮಾತನ್ನು ಸಿಎಂ ತೆಗೆದು ಹಾಕುವುದಿಲ್ಲ. ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಸಿ. ಟಿ. ರವಿ ವಾದ, ಹಸಿಹಸಿ ಸುಳ್ಳು ಹೇಳುವ ಅವರ ಹುಟ್ಟುಗುಣಕ್ಕೆ ತಕ್ಕ ಹಾಗಿದೆ: ಸಿದ್ದರಾಮಯ್ಯ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.