ETV Bharat / state

ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದ ಜೊತೆ ಹೊಂದಿಕೊಂಡು ಹೋಗಬೇಕು: ಬಿ.ವೈ.ವಿಜಯೇಂದ್ರ

author img

By ETV Bharat Karnataka Team

Published : Nov 5, 2023, 2:28 PM IST

ರಾಜ್ಯದಲ್ಲಿ ಬರಗಾಲವಿದೆ. ಯಡಿಯೂರಪ್ಪನವರು ಪ್ರವಾಸಕ್ಕೆ ಮುಂದಾದ ನಂತರ 350 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದಾರೆ. ಕೇಂದ್ರವೂ ಆದಷ್ಟು ಬೇಗ ಸ್ಪಂದನೆ ಮಾಡಲಿದೆ, ಬರಗಾಲದ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಡಿ, ನೆರವು ನೀಡಲು ಮುಂದಾಗಿ ಎಂದು ರಾಜ್ಯ ಸರ್ಕಾರಕ್ಕೆ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.

vijayendra
ವಿಜಯೇಂದ್ರ

ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ

ಬೆಂಗಳೂರು: ರಾಜ್ಯದ ಜನರನ್ನು ಪ್ರತಿನಿಧಿಸಬೇಕಾದವರು ಕೇಂದ್ರದೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡು ಕೆಲಸ ಮಾಡಬೇಕು, ಚುನಾವಣೆ ವೇಳೆ ರಾಜಕಾರಣ ಮಾಡಬೇಕು, ಇತರೆ ಸಮಯದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದೊಂದಿಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ಕೊಟ್ಟಿದ್ದಾರೆ.

ಬಿ.ವೈ.ವಿಜಯೇಂದ್ರ ಅವರಿಗೆ ಇಂದು 49ನೇ ಜನ್ಮದಿನದ ಸಂಭ್ರಮವಾಗಿದ್ದು, ಅಭಿಮಾನಿಗಳು, ಆಪ್ತರು, ಕಾರ್ಯಕರ್ತರಿಂದ ಶುಭಾಶಯಗಳ ಮಹಾಪೂರ ಹರಿದುಬಂತು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಧವಳಗಿರಿಯಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಮುಂದಿನ ಸಿಎಂ ವಿಜಯೇಂದ್ರ‌, ಮುಂದಿನ ರಾಜ್ಯಾಧ್ಯಕ್ಷ ವಿಜಯೇಂದ್ರ‌ ಎಂದು ಬೆಂಬಲಿಗರು, ಅಭಿಮಾನಿಗಳು ಘೋಷಣೆ ಕೂಗಿದರು.

ನಂತರ ಮಾತನಾಡಿದ ವಿಜಯೇಂದ್ರ, "ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬದ ಅವಶ್ಯಕತೆಯಿಲ್ಲ ಎಂದಿದ್ದೆ. ಆದರೂ ಅಭಿಮಾನಿಗಳು ಬಂದು ಶುಭ ಕೋರುತ್ತಿದ್ದಾರೆ. ಅವರಿಗೆ ಋಣಿ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಬರ ಅಧ್ಯಯನ ಪ್ರವಾಸ ಮಾಡಲಿದ್ದಾರೆ. ಏಳು ಮತ್ತು ಎಂಟರಂದು ಜಿಲ್ಲಾ ಪ್ರವಾಸಕ್ಕೆ ಹೋಗಲಿದ್ದಾರೆ" ಎಂದರು.

ಬರ ಪ್ರವಾಸದ ಅಧ್ಯಯನಕ್ಕೆ ಹೋಗುವ ಬದಲು ಕೇಂದ್ರದಿಂದ ಅನುದಾನ ತನ್ನಿ ಎನ್ನುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ಕಿಡಿಕಾರಿದ ವಿಜಯೇಂದ್ರ, "ಅವರು ಉದ್ಧಟತನದ ಮಾತುಗಳನ್ನಾಡುತ್ತಿದ್ದಾರೆ, ಸರ್ಕಾರದ ಗೌರವಾನ್ವಿತ ಸ್ಥಾನದಲ್ಲಿದ್ದು ಅವರ ಹೇಳಿಕೆ ರಾಜ್ಯಕ್ಕೆ ಮಾರಕವಾಗಲಿದೆ. ಆಡಳಿತದಲ್ಲಿದ್ದು ರಾಜ್ಯದ ಜನರನ್ನು ಪ್ರತಿನಿಧಿಸಬೇಕಾದವರು ಕೇಂದ್ರದ ಜೊತೆ ಉತ್ತಮ ಸಂಬಂಧ ಇರಿಸಿಕೊಂಡು ಕೆಲಸ ಮಾಡಬೇಕು, ಚುನಾವಣೆ ವೇಳೆ ರಾಜಕಾರಣ ಮಾಡಬೇಕು ಇತರೆ ಸಮಯದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದ ಜೊತೆ ಹೊಂದಿಕೊಂಡು ಕೆಲಸ ಮಾಡಬೇಕು, ನಿಮಗೆ ಹೋಗಲಾಗದಿದ್ದರೆ ಪ್ರಧಾ‌ನಿಗಳ ಬಳಿ ನಿಮ್ಮ ಅಧಿಕಾರಿಗಳನ್ನಾದರೂ ಕಳಿಸಿ, ಕೇಂದ್ರದ ಜೊತೆ ಸರಿಯಾದ ಸ್ಪಂದನೆ ಸಿಗಬೇಕು, ಇನ್ನು ಮೇಲಾದರೂ ಅದನ್ನು ಮಾಡಲಿದ್ದಾರಾ ನೋಡಬೇಕು?" ಎಂದರು.

"ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಪಕ್ಷದ ಸದಸ್ಯರ ನಡವಳಿಕೆ ಹಾಸ್ಯಾಸ್ಪದವಾಗಿದೆ, ಯಾರು ಸಿಎಂ, ಡಿಸಿಎಂ ಆಗಲಿದ್ದಾರೆ ಎನ್ನುವುದಕ್ಕಿಂತ ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದನೆ ಮಾಡಬೇಕು. ಆದರೆ ಇವರು ಬೇರೆ ದಿಕ್ಕಿನತ್ತ ಸಾಗುತ್ತಿದ್ದಾರೆ" ಎಂದು ಟೀಕಿಸಿದರು.

"ಜಾತಿಗಣತಿ ವರದಿ ವಿಚಾರದಲ್ಲಿ ಎಲ್ಲ ವರ್ಗದ ಹಿತದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಆಲೋಚನೆ ಮಾಡಬೇಕು, ಕಾಂತರಾಜ್ ವರದಿ ಯಾವ ಸರ್ಕಾರ ಇದ್ದಾಗ ಸಿದ್ದವಾಗಿತ್ತು?, ಮೊದಲ ಬಾರಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಂಡನೆ ಮಾಡದೆ ಈಗೆ ಯಾಕೆ ಆತುರ ಮಾಡುತ್ತಿದ್ದಾರೆ, ವರದಿ ಬಗ್ಗೆ ಸಾಕಷ್ಟು ಪ್ರಶ್ನೆ ಎದ್ದಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಬದಲು ಎಲ್ಲ ಸಮಾಜಕ್ಕೆ ನ್ಯಾಯ ಕೊಡುವುದು ಸರ್ಕಾರದ ಕರ್ತವ್ಯ, ಇದಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದರೆ ರಾಜ್ಯದ ಜನರು ಅವರನ್ನು ಕ್ಷಮಿಸಲ್ಲ" ಎಂದರು.

"ಆಪರೇಷನ್ ಕಮಲದ ಆರೋಪ ಮಾಡುತ್ತಿದ್ದಾರೆ. ಆದರೆ ಇವರು ಗ್ಯಾರಂಟಿ ಘೋಷಣೆ ಮಾಡಿ ಜನರ ಮೂಗಿಗೆ ತುಪ್ಪ ಹಚ್ಚಿದ್ದಾರೆ. ಗೃಹಜ್ಯೋತಿ, ಶಕ್ತಿ ಯೋಜನೆ ಕುಂಠಿತವಾಗುತ್ತಿದೆ. ಸರ್ಕಾರಿ ಬಸ್ ಸಮಸ್ಯೆ ಆಗುತ್ತಿದೆ. ಪುರುಷ ಪ್ರಯಾಣಿಕರಿಗೆ ಬಸ್ ಪ್ರಯಾಣ ಹೊರೆಯಾಗುತ್ತಿದೆ, ಲೋಕಸಭಾ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಗ್ಯಾರಂಟಿ ಯೋಜನೆ ತಂದಿದ್ದಾರೆ ಅಷ್ಟೆ. 136 ಶಾಸಕರಿರುವ ಪಕ್ಷದ ಸಿಎಂ ಐದು ವರ್ಷ ನಾನೇ ಆಡಳಿತ ನಡೆಸುತ್ತೇನೆ ಎನ್ನುತ್ತಾರೆ, ಇವರ ಸಾಲಿನಲ್ಲಿ ಎಂಟು ಜನ ಕ್ಯೂ ನಿಂತಿದ್ದಾರೆ. ಇದರ ಜೊತೆಗೆ ಕೇಂದ್ರದಲ್ಲಿ ತಲೆ ಎತ್ತಿಕೊಂಡು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲದರ ವಿಷಯಾಂತರ ಮಾಡಲು ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ, ರಾಜ್ಯದ ಅಭಿವೃದ್ಧಿ ಕುಂಟಿತವಾಗಿದೆ. ಅವರ ಶಾಸಕರೇ ಸರ್ಕಾರ ಉರುಳಿಸಿದರೆ ಆಶ್ಚರ್ಯ ಇಲ್ಲ" ಎಂದರು.

ಇದನ್ನೂ ಓದಿ: ಕಾಂಗ್ರೆಸ್​ನ​ ಒಳಗೆ ಆಪರೇಷನ್​ ಹಸ್ತ ನಡೆಯುತ್ತಿದೆ: ನಳಿನ್​ ಕುಮಾರ್​ ಕಟೀಲ್​ ವ್ಯಂಗ್ಯ

ಚಳಿಗಾಲದ ಅಧಿವೇಶನದ ಒಳಗೆ ವಿಪಕ್ಷ ನಾಯಕರ ಆಯ್ಕೆ ಆಗುತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದ ಶಾಸಕ ವಿಜಯೇಂದ್ರ‌, "ರಾಜ್ಯದ ಗ್ರಾಮ ಪಂಚಾಯತ್ ಅಧ್ಯಕ್ಷರು, ‌ಸದಸ್ಯರ ಗೌರವಧನ ಬಾಕಿ ಇದೆ. ಇದರಿಂದ ಆರ್ಥಿಕ ಪರಿಸ್ಥಿತಿ ಯಾವ ರೀತಿ ಇದೆ‌ ಅನ್ನೋದು ಗೊತ್ತಾಗುತ್ತಿದೆ. ಬರಪೀಡಿತ ತಾಲೂಕು ಘೋಷಣೆ ಮಾಡುವುದಕ್ಕೂ ಮೀನಮೇಷ ಮಾಡಿದ್ದರು. ಈಗಲಾದರೂ ರೈತರ‌ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು" ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.