ETV Bharat / state

'ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ ಮುಂದುವರಿದ ಭಾಗವೇ ಈ ಬಜೆಟ್‌': ಸಿದ್ದರಾಮಯ್ಯ

author img

By

Published : Feb 1, 2023, 6:02 PM IST

ಕೇಂದ್ರ ಬಜೆಟ್​ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

Opposition leader Siddaramayya
ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: "ಕೇಂದ್ರದ ಟ್ರಬಲ್ ಎಂಜಿನ್ ಸರ್ಕಾರ ಕಳೆದ ಎಂಟು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ 'ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ (ಶ್ರೀಮಂತರ ಪೋಷಣೆ ಮತ್ತು ಬಡವರ ವಿನಾಶ) ಎಂಬ ಜನವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಬಜೆಟನ್ನು ಮಂಡಿಸಿದ್ದಾರೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಶಿವಾನಂದ ವೃತ್ತ ಸಮೀಪದಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಾತನಾಡಿ, "ಕೇಂದ್ರ ಸರ್ಕಾರದ ದುರಾಡಳಿತ ಮತ್ತು ಕೊರೊನಾ ರೋಗದಿಂದಾಗಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಬಹಳ ಮುಖ್ಯವಾಗಿ ದೇಶದ ಬೆನ್ನೆಲುಬು ಎಂದು ಭಾಷಣದಲ್ಲಿ ಎಲ್ಲರೂ ಕೊಂಡಾಡುವ ರೈತರ ಬದುಕು ನೆಲ ಹಿಡಿದಿದೆ. ನಿರುದ್ಯೋಗದ ಪ್ರಮಾಣದಲ್ಲಿ ಹೆಚ್ಚಾಗಿದೆ. ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಅಂದರೆ ಸುಮಾರು ಶೇ 54ರಷ್ಟು ಉದ್ಯೋಗವನ್ನು ಸೃಷ್ಟಿಸುವ ಮತ್ತು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡುವ ಕೃಷಿ ಕ್ಷೇತ್ರವನ್ನು ಬಜೆಟ್​ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. 2022-23ರ ಬಜೆಟ್​ಗೆ ಹೋಲಿಸಿದರೆ ಈ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ರೂ.8.468.21 ಕೋಟಿಯಷ್ಟು ಹಣ ಕಡಿಮೆ ನೀಡಲಾಗಿರುವುದೇ ಈ ನಿರ್ಲಕ್ಷ್ಯಕ್ಕೆ ಸಾಕ್ಷಿ. ಸಣ್ಣ ಮತ್ತು ಮಧ್ಯಮ ರೈತರನ್ನು ಕೂಡ ಕಡೆಗಣಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿನ ಅನ್ಯಾಯ, ಅವೈಜ್ಞಾನಿಕ ಬೆಳೆ ವಿಮೆ, ಸಾಲದ ಹೊರೆ, ನೆರೆ ಮತ್ತು ಬರಪರಿಹಾರದಲ್ಲಿನ ಕೊರತೆಗಳ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪವೇ ಇಲ್ಲ" ಎಂದರು.

ಹೊಸ ಸಾಲ ಪಡೆದು ಹಳೆ ಸಾಲ ತೀರಿಸಿ: "ರೈತರ ಆದಾಯವನ್ನು ದುಪ್ಪಟ್ಟು ಮಾಡಲಾಗುವುದು ಎಂಬ ಘೋಷಣೆ ಪೊಳ್ಳಾಗಿದೆ. ಕನಿಷ್ಠ ಸಣ್ಣ ಹಿಡುವಳಿದಾರ ರೈತರ ಸಾಲವನ್ನಾದರೂ ಮನ್ನಾ ಮಾಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ರೈತರಿಗೆ ಸಾಲ ನೀಡಲು ಎರಡು ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ರೈತರನ್ನು ಋಣಮುಕ್ತಗೊಳಿಸಬೇಕಾಗಿರುವ ಸರ್ಕಾರ ಅವರನ್ನು ಇನ್ನಷ್ಟು ಸಾಲದ ಬಲೆಗೆ ನೂಕಲು ಹೊರಟಿದೆ. ಹೊಸ ಸಾಲ ಪಡೆದು ಹಳೆಸಾಲ ತೀರಿಸಿ ಎನ್ನುವುದನ್ನು ಸರ್ಕಾರ ಹೇಳಿದೆ. ಈ ಸಾಲದ ಬಡ್ಡಿದರ ಎಷ್ಟು ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಹತ್ತಿ ಬೆಳೆಯನ್ನು ಹೊರತು ಪಡಿಸಿದರೆ ಬೇರೆ ಯಾವ ಬೆಳೆಗೂ ಬೆಳೆ ಕೇಂದ್ರಿತ ಯೋಜನೆಗಳು ಬಜೆಟ್​ನಲ್ಲಿ ಇಲ್ಲ. ತೋಟಗಾರಿಕಾ ಬೆಳೆಗಳನ್ನು ಪ್ರಸ್ತಾಪ ಮಾಡಲಾಗಿದ್ದರೂ, ಅಲ್ಲಿಯೂ ಬೆಳೆ ಕೇಂದ್ರಿತ ಉದಾಹರಣೆಗೆ ತೆಂಗು, ಅಡಿಕೆ ಇತ್ಯಾದಿ ಬೆಳೆಗಳಿಗೆ ನಿರ್ದಿಷ್ಟ ಯೋಜನೆಗಳನ್ನು ಹೇಳಿಲ್ಲ" ಎಂದು ಟೀಕಿಸಿದರು.

"ಭದ್ರ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆ ಪೂರ್ಣಗೊಳ್ಳಬೇಕಾದರೆ ರೂ.23,000 ಕೋಟಿ ಅವಶ್ಯಕತೆಯಿದೆ. ಕೇಂದ್ರ ಸರ್ಕಾರ ನೀಡಲು ಒಪ್ಪಿರುವುದು ಯೋಜನಾ ವೆಚ್ಚದ ಕಾಲುಭಾಗ ಮಾತ್ರ. ಈ ಹಣದಲ್ಲಿ 40% ಕಮಿಷನ್ ಕಳೆದರೆ ಕೊನೆಗೆ ಯೋಜನೆಗೆ ಸಿಗಲಿರುವುದು ರೂ.3000 ಕೋಟಿಗಿಂತಲೂ ಕಡಿಮೆ. ನಿಗದಿ ಪಡಿಸಿರುವ ಹಣ ಕೂಡಾ ಒಂದು ವರ್ಷಕ್ಕೋ ಐದು ವರ್ಷಕ್ಕೋ ಎನ್ನುವದನ್ನೂ ಸ್ಪಷ್ಟಪಡಿಸಿಲ್ಲ."

ನಿರೀಕ್ಷೆಗಳು ಸುಳ್ಳಾದ್ವು​: "ಕೃಷ್ಣಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ಯೋಜನೆ ಅನುಷ್ಠಾನಗೊಳ್ಳಬೇಕಾದರೆ ಬಿ ಸ್ಕೀಮ್​ಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥವಾಗಬೇಕು. ಅಲ್ಲಿಯವರೆಗೆ ಈ ಹಣವನ್ನು ಖರ್ಚು ಮಾಡುವ ಹಾಗಿಲ್ಲ. ಕೃಷ್ಣಾ ಮೇಲ್ದಂಡೆ, ಮಹಾದಾಯಿ, ಮೇಕೆದಾಟು ಯೋಜನೆಗಳಿಗೆ ಪೈಸೆ ಹಣವನ್ನೂ ನೀಡಿಲ್ಲ. ಉಪನಗರ ರೈಲ್ವೆ ಮತ್ತು ಮೆಟ್ರೋ ರೈಲು ಯೋಜನೆಗೆ ಹೆಚ್ಚಿನ ಅನುದಾನ ನೀಡಬಹುದೆಂಬ ನಿರೀಕ್ಷೆ ಇತ್ತು. ಅದೂ ಸುಳ್ಳಾಗಿದೆ" ಎಂದು ಅಭಿಪ್ರಾಯಪಟ್ಟರು.

"ಆಹಾರ ಸಬ್ಸಿಡಿಯನ್ನು ಶೇ 31ರಷ್ಟು ಕಡಿಮೆ ಮಾಡಲಾಗಿದೆ. 2022-23ರಲ್ಲಿ ರೂ. 2,87,194 ಕೋಟಿಯಷ್ಟು ಆಹಾರ ಸಬ್ಸಿಡಿ ನೀಡಲಾಗಿತ್ತು. ಈ ಬಾರಿ ಅದನ್ನು ರೂ. 1,97,350 ಕೋಟಿಗೆ ಇಳಿಸಲಾಗಿದೆ. ನರೇಗಾ ಯೋಜನೆಗೆ ಶೇಕಡಾ 32ರಷ್ಟು ಕಡಿಮೆ ಅನುದಾನ ನಿಗದಿಪಡಿಸಲಾಗಿದೆ. 2022-23ರಲ್ಲಿ ರೂ. 89,154 ಕೋಟಿಗಳಷ್ಟು ನೀಡಲಾಗುತ್ತಿದ್ದ ಅನುದಾನವನ್ನು 2023-24ರ ಸಾಲಿನಲ್ಲಿ ರೂ. 61,032 ಕೋಟಿಗೆ ಇಳಿಸಲಾಗಿದೆ."

"ಎಲ್​ಪಿಜಿ ಸಬ್ಸಿಡಿಯನ್ನು ಶೇಕಡಾ 75ರಷ್ಟು ಕಡಿತಗೊಳಿಸಲಾಗಿದೆ. 2022-23ರಲ್ಲಿ ರೂ. 9,170 ಕೋಟಿಗಳಷ್ಟಿದ್ದ ಎಲ್​ಪಿಜಿ ಸಬ್ಸಿಡಿ 2023-24ರ ಸಾಲಿಗೆ ರೂ. 2,257 ಕೋಟಿಗೆ ಇಳಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ ವೆಚ್ಚವನ್ನು ಶೇಕಡಾ 66ರಷ್ಟು ಹೆಚ್ಚಿಸಲಾಗಿದೆ. ಪ್ರತಿಮನೆ ನಿರ್ಮಾಣ ವೆಚ್ಚವನ್ನು ರೂ. 48,000 ರೂಪಾಯಿಗಳಿಂದ ರೂ. 79,590 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳ ಬಡ ಕುಟುಂಬಗಳಿಗೆ ನೆರವಾಗುವುದಕ್ಕೋ? ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲಿಕ್ಕಾಗಿಯೋ? ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರವೇ ಶೇಕಡಾ 50ರಷ್ಟು ಮನೆಗಳನ್ನೇ ನಿರ್ಮಿಸಲಾಗಿಲ್ಲ. ಬಹಳ ಮುಖ್ಯವಾಗಿ ನಗರ ಪ್ರದೇಶದಲ್ಲಿರುವ ಕೊಳಗೇರಿ ನಿವಾಸಿಗಳ ವಸತಿ ಸಮಸ್ಯೆಯನ್ನು ಪರಿಹರಿಸುವ ಪ್ರಸ್ತಾಪ ಬಜೆಟ್​ನಲ್ಲಿ ಇಲ್ಲ."

ಕರ್ನಾಟಕ ಸಂಪೂರ್ಣ ನಿರ್ಲಕ್ಷ್ಯ: "ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದರೂ ಅವರು ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಒಂದೆರಡು ಬಾರಿ ಕರ್ನಾಟಕದ ಹೆಸರನ್ನು ಉಲ್ಲೇಖ ಮಾಡಿದ ಹೊರತಾಗಿ ವಿಶೇಷ ನೆರವಿನ ಘೋಷಣೆಗಳನ್ನು ಮಾಡಿಲ್ಲ. ಕೇಂದ್ರ ಸರ್ಕಾರದ ಅಡಿಯಾಳಿನಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರ ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಂಪೂರ್ಣ ವಿಫಲವಾಗಿದೆ. ಸಾಮಾನ್ಯವಾಗಿ ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಸಂಸತ್ ಸದಸ್ಯರ ಜೊತೆ ಸಮಾಲೋಚನೆ ನಡೆಸಿ ರಾಜ್ಯದ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಡುವುದು ರೂಢಿ. ಆದರೆ ಈ ಬಾರಿ ಈ ಸಂಪ್ರದಾಯವನ್ನು ಮುರಿಯಲಾಗಿದೆ."

"ರಾಜ್ಯದಿಂದ ಆರಿಸಿ ಹೋಗಿರುವ ಬಿಜೆಪಿಯ 25 ಲೋಕಸಭಾ ಸದಸ್ಯರು ಮತ್ತು ಆರು ರಾಜ್ಯಸಭಾ ಸದಸ್ಯರಿದ್ದಾರೆ. ಇವರಲ್ಲಿ ಯಾರೊಬ್ಬರೂ ರಾಜ್ಯದ ಬೇಡಿಕೆಗಳ ಬಗ್ಗೆಯಾಗಲಿ, ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆಯಾಗಲಿ ಎಲ್ಲಿಯೂ ಸೊಲ್ಲೆತ್ತಿಲ್ಲ, ಇದರಿಂದಾಗಿ ಕೇಂದ್ರ ಸರ್ಕಾರ ಕೂಡಾ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ" ಎಂದು ಬಜೆಟ್‌ ವಿಶ್ಲೇಷಣೆ ಮಾಡಿದರು.

ಇದನ್ನೂ ಓದಿ: ಮೋದಿಯವರ ದೂರದೃಷ್ಟಿಯ ಬಜೆಟ್-ನಡ್ಡಾ; ವಿಧಾನಸಭಾ ಚುನಾವಣೆಗಳೇ ಟಾರ್ಗೆಟ್- ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.