ETV Bharat / state

ಹಿಂದೂ-ಮುಸ್ಲಿಂ ಒಂದೇ ತಾಯಿ ಮಕ್ಕಳು.. ಕಾಂಗ್ರೆಸ್‌ಗೆ ಏನೂ ಚಟುವಟಿಕೆ ಇಲ್ಲದ್ದಕ್ಕೆ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸ್ತಿದೆ.. ಬಿಎಸ್​ವೈ

author img

By

Published : Apr 11, 2022, 2:26 PM IST

ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳ ರೀತಿ ಬದುಕಬೇಕು ಎನ್ನುವುದು ನಮ್ಮ ಅಪೇಕ್ಷೆ. ಇನ್ನು ಮುಂದೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು..

ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ

ಬೆಂಗಳೂರು : ಸಮಾಜದಲ್ಲಿ ಅಹಿತಕರ ಘಟನೆಗಳು ಸಲ್ಲದು. ಹಿಂದೂ-ಮುಸ್ಲಿಮರು ಸಹೋದರರಂತೆ ಬದುಕಬೇಕು. ಇಂತಹ ಘಟನೆಗಳನ್ನು ನಿಲ್ಲಿಸಿ ಎಲ್ಲರೂ ಅವರವರ ಕೆಲಸ ಮಾಡಿಕೊಂಡಿರಬೇಕು. ಪ್ರತಿಯೊಬ್ಬರು ಗೌರವದಿಂದ ಬದುಕಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿವಿ ಮಾತು ಹೇಳಿದರು.

ಬೆಳಗಾವಿ ಪ್ರವಾಸಕ್ಕೆ ಹೊರಡುವ ಸಂದರ್ಭದಲ್ಲಿ ಅಧಿಕೃತ ನಿವಾಸ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳ ರೀತಿ ಬದುಕಬೇಕು ಎನ್ನುವುದು ನಮ್ಮ ಅಪೇಕ್ಷೆ. ಯಾರೋ ಕಿಡಿಗೇಡಿಗಳು ಇದಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ.

ಇಂತಹ ಕೃತ್ಯದಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇನ್ನು ಮುಂದೆ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ನಾನು ಕೂಡ ಸಮುದಾಯದವರಿಗೆ ಕಿವಿಮಾತು ಹೇಳುತ್ತೇನೆ. ಇದನ್ನು ನಿಲ್ಲಿಸಿ, ನಿಮ್ಮ ನಿಮ್ಮ ಕೆಲಸ ಮಾಡಿಕೊಂಡಿರಿ. ಎಲ್ಲರೂ ಸಹ ಸಂಯಮದಿಂದ ಗೌರವದಿಂದ ಬದುಕಲು ಬಿಡಿ ಎಂದರು.

ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಿಎಂ ಬಿಎಸ್​ವೈ..

ಮೂರು ತಂಡದಲ್ಲಿ ರಾಜ್ಯ ಪ್ರವಾಸ : ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಮೊದಲನೇ ತಂಡದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎರಡನೇ ತಂಡದಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ನಾನು ಜೊತೆಗಿರುತ್ತೇನೆ, ಮೂರನೇ ತಂಡದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇರಲಿದ್ದಾರೆ.

ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದ ಹೈಕಮಾಂಡ್ ಜೊತೆ ವಿಶೇಷವಾಗಿ ಸಮಾಲೋಚನೆ ಮಾಡಿ, ಮುಂದಿನ ಚುನಾವಣೆಗೆ ಸಿದ್ಧತೆ ಮಾಡುವ ದೃಷ್ಟಿಯಿಂದ ಪ್ರವಾಸ ಮಾಡುತ್ತಿದ್ದೇವೆ. ಮುಂದೆ ನಿರಂತರವಾಗಿ ಪ್ರವಾಸ ನಡೆಯಲಿದೆ. ಈಗ ಮೊದಲ ಹಂತದಲ್ಲಿ ಮೂರು ತಂಡಗಳಲ್ಲಿ ಪ್ರವಾಸ ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪ ವಿವರ ನೀಡಿದರು.

ಗೊಂದಲ ಸೃಷ್ಟಿಸಬೇಡಿ : ಕಾಂಗ್ರೆಸ್​ನವರಿಗೆ ಏನೂ ಚಟುವಟಿಕೆ ಇಲ್ಲದ ಕಾರಣ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆ ಹೆಚ್ಚಿನ ಪ್ರತಿಕ್ರಿಯೆ ಕೊಡಲು ಇಷ್ಟಪಡುವುದಿಲ್ಲ. ಎಲ್ಲರೂ ಒಟ್ಟಾಗಿ ಸೇರಿ ರಾಜ್ಯದ ಅಭಿವೃದ್ಧಿ ಕೆಲಸ ಮಾಡಬೇಕೆ ಹೊರತು, ಸಣ್ಣಪುಟ್ಟ ವಿಷಯಗಳನ್ನು ಇರಿಸಿಕೊಂಡು ಗೊಂದಲ ಸೃಷ್ಟಿಸುವ ಕೆಲಸವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಡಬಾರದು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಶ್ರೀ ಮುರುಘಾ ಶರಣರ ಜನ್ಮದಿನ ಇನ್ಮೇಲೆ ಸಮಾನತೆ ದಿನವಾಗಿ ಸರ್ಕಾರದಿಂದಲೇ ಆಚರಣೆ : ಸಿಎಂ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.