ETV Bharat / state

ಬಿಎಂಆರ್‌ಸಿಎಲ್ ಹುದ್ದೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ: ಬೊಮ್ಮಾಯಿ ಭರವಸೆ

author img

By

Published : Feb 4, 2021, 6:36 PM IST

ಬಿಎಂಆರ್​ಸಿಎಲ್​ನಲ್ಲಿ ಹುದ್ದೆಗಳ ಭರ್ತಿ ಅಧಿಕಾರವನ್ನು ನಿರ್ದೇಶಕರ ಬದಲು ವ್ಯವಸ್ಥಾಪಕ ನಿರ್ದೇಶಕರಿಗೆ ವಹಿಸಲಾಗುತ್ತದೆ ಎಂಬ ಭರವಸೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ನೀಡಿದರು.

BMRCL post
ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಿಎಂಆರ್​ಸಿಎಲ್​ನಲ್ಲಿ ಹುದ್ದೆಗಳ ಭರ್ತಿ ಅಧಿಕಾರವನ್ನು ನಿರ್ದೇಶಕರ ಬದಲು ವ್ಯವಸ್ಥಾಪಕ ನಿರ್ದೇಶಕರಿಗೆ ವಹಿಸಲಾಗುತ್ತದೆ ಮತ್ತು ಕನ್ನಡಿಗರಿಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ನಮ್ಮ ಮೆಟ್ರೋ ಸಿಬ್ಬಂದಿ ನೇಮಕಾತಿಯಲ್ಲಿ ಕನ್ನಡಿಗರ ಕಡೆಗಣನೆ ಕುರಿತು ಸದಸ್ಯ ಕಾಂತರಾಜ್ ಸರ್ಕಾರವನ್ನು ಪ್ರಶ್ನಿಸಿದರು. ಬಿಎಂಆರ್​ಸಿಎಲ್ ಬದಲು ಕನ್ನಡಿಗರ ವಿರೋಧಿ ಮೆಟ್ರೋ ರೈಲು ಕಾರ್ಪೊರೇಷನ್ ಅಂತಾ ಹೆಸರುಬಿಡಬೇಕು. ಕೀ ಪೋಸ್ಟ್​ನಲ್ಲಿ ಹೊರ ರಾಜ್ಯದವರು ಇದ್ದಾರೆ. ಅವರು ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ. ಗುತ್ತಿಗೆ ಆಧಾರಿತ ನೇಮಕಾತಿಯಲ್ಲೂ ಕನ್ನಡಿಗರನ್ನು ಪರಿಗಣಿಸಬೇಕು. ಟಿಕೆಟ್ ಕೌಂಟರ್​​ನಲ್ಲಿಯೂ ಕನ್ನಡ ಮಾತನಾಡುವವರಿಲ್ಲದಾಗಿದೆ. ಕನ್ನಡಿಗರನ್ನು ಟಾರ್ಗೆಟ್ ಮಾಡಿ ತೆಗೆದುಹಾಕಿದ್ದಾರೆ. 22 ಕೀ ಪೋಸ್ಟ್​ನಲ್ಲಿ 21 ಮಂದಿ ಹೊರ ರಾಜ್ಯದವರಿದ್ದಾರೆ ಎಂದರು.

ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ನಮ್ಮ ಮೆಟ್ರೋದ 22 ಕೀ ಪೋಸ್ಟ್​ಗಳಲ್ಲಿ 21 ಬೇರೆ ರಾಜ್ಯದವರಿದ್ದಾರೆ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಅಧಿಕಾರ ಅವರಿಗಿದೆ. ಅವರು ಅವರವರ ರಾಜ್ಯದವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ‌ ನಮ್ಮ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಸೂಕ್ತ ನಿಯಮಾವಳಿ ತರಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮೆಟ್ರೋ ನಿಗಮದಲ್ಲಿ 22 ಆಯಕಟ್ಟಿನ ಹುದ್ದೆಗಳಲ್ಲಿ 21 ಜನ ತಮಿಳುನಾಡಿನವರಿದ್ದಾರೆ. ಅಧಿಕಾರಿಗಳೇ ಎಲ್ಲಾ ನೇಮಕಾತಿ ಮಾಡುತ್ತಾರೆ. ಕರ್ನಾಟಕದವರಿಗೆ ಶೇ. 5ರಷ್ಟು ಉದ್ಯೋಗವೂ ಸಿಕ್ಕಿಲ್ಲ. ಕಳೆದ 10 ವರ್ಷದಿಂದ ಕನ್ನಡಿಗರಿಗೆ ಪದೋನ್ನತಿ ಸಿಕ್ಕಿಲ್ಲ. ನೆರೆಯ ರಾಜ್ಯದಲ್ಲಿ ಕರ್ನಾಟಕದ ಜನ ಕೆಲಸ ಮಾಡಲ್ಲ. ಆದರೆ ಕರ್ನಾಟಕದಲ್ಲಿ ಹೊರಗಿನವರೇ ಜಾಸ್ತಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಪ್ರತಿಪಕ್ಷದ ಸಚೇತಕ ನಾರಾಯಣಸ್ವಾಮಿ ಮಾತನಾಡಿ, ಟಿಕೆಟ್ ಕೌಂಟರ್​ನಲ್ಲಿ ಕನ್ನಡ ಮಾತನಾಡುವವರಿಲ್ಲ. ಕೊರೊನಾ ವೇಳೆ ಪಾಸ್ ವಿಚಾರದಲ್ಲಿಯೂ ಕನ್ನಡ ಬರಲ್ಲ ಎಂದು ಕೆಲ ಪ್ರಯಾಣಿಕರನ್ನು ಹೊರ ಕಳುಹಿಸಿದ್ದಾರೆ. ಇದು ಖಂಡನೀಯ, ಇಂತಹ ವರ್ತನೆಯನ್ನು ಸರಿಪಡಿಸಿ ಎಂದರು‌.

ಸಿಎಂ ಪರ ಉತ್ತರ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸದ್ಯ ನಿರ್ದೇಶಕರು ಸಿಬ್ಬಂದಿ ನೇಮಕಾತಿ ಮಾಡುತ್ತಿದ್ದಾರೆ. ಈ ಅಧಿಕಾರವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ವರ್ಗಾವಣೆ ಮಾಡಲಾಗುತ್ತದೆ. ಸಿಬ್ಬಂದಿ ನೇಮಕ ಅಧಿಕಾರ ಎಂಡಿ ನಿಯಂತ್ರಣಕ್ಕೆ ತಂದು ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವ ಆದೇಶ ಹೊರಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.