ETV Bharat / state

ಕೊನೆಯ ತ್ರೈಮಾಸಿಕದಲ್ಲಿ ಆರ್​ಬಿಐದಿಂದ ಸಾಲ ಎತ್ತುವಳಿಗೆ ಬೊಮ್ಮಾಯಿ‌ ಸರ್ಕಾರ ಕೊಂಚ ಬ್ರೇಕ್

author img

By

Published : Feb 12, 2023, 10:10 PM IST

ಸಿ ಎಂ ಬೊಮ್ಮಾಯಿ 2023 24 ಸಾಲಿನ ಆಯವ್ಯಯ ಮಂಡನೆಗೆ ಸಿದ್ಧತೆ- ಈ ವರ್ಷ ಗುರಿ ಮೀರಿ ತೆರಿಗೆ ಆದಾಯ ಸಂಗ್ರಹ- ಸರ್ಕಾರ ಸಾಲ ಎತ್ತುವಳಿ ಮಾಡುವುದಕ್ಕೆ ಸ್ವಲ್ಪ ಬ್ರೇಕ್.

Vidhana Soudha
ವಿಧಾನಸೌಧ

ಬೆಂಗಳೂರು: 2022-23ರ ಬಜೆಟ್ ವರ್ಷ ಮುಕ್ತಾಯದ ಹೊಸ್ತಿಲಲ್ಲಿ ಇದ್ದು, ಸಿ ಎಂ ಬೊಮ್ಮಾಯಿ 2023-24 ಸಾಲಿನ ಆಯವ್ಯಯ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಹಣ ಹೊಂದಾಣಿಕೆಗೆ ಬಹುತೇಕ ಆರ್ ಬಿಐ ಮೂಲಕ ಸರ್ಕಾರ ಸಾಲ ಎತ್ತುವಳಿ ಮಾಡುತ್ತದೆ. ಆದರೆ ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸರ್ಕಾರ ಸಾಲ ಮಾಡುವ ಪ್ರಕ್ರಿಯೆಗೆ ಕೊಂಚ ಬ್ರೇಕ್ ಹಾಕಿದೆ.

2022-23 ಸಾಲಿನ ಬಜೆಟ್ ವರ್ಷ ಮುಕ್ತಾಯ ಹಂತದಲ್ಲಿದೆ. ಕೊರತೆಯ ಬಜೆಟ್ ಮಂಡಿಸಿದ್ದ ಸಿಎಂ ಬೊಮ್ಮಾಯಿ ಅವರು ಪ್ರಸಕ್ತ ಬಜೆಟ್ ವರ್ಷದಲ್ಲಿ ಬಂಡವಾಳ ವೆಚ್ಚಕ್ಕಾಗಿ ಸಾಲವನ್ನೇ ನೆಚ್ಚಿಕೊಂಡಿದೆ. ಅದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಬೊಮ್ಮಾಯಿ ಸರ್ಕಾರ ಒಟ್ಟು ಅಂದಾಜು ಸುಮಾರು 72,089 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿತ್ತು. ಆ ಪೈಕಿ 67,911 ಕೋಟಿ ರೂ. ಮುಕ್ತ ಮಾರುಕಟ್ಟೆ ಮೂಲಕ ಸಾಲ ಮಾಡಲು ಮುಂದಾಗಿದೆ. ಆರಂಭಿಕ ಎರಡು ತ್ರೈಮಾಸಿಕದಲ್ಲಿ ಆರ್ ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡದ ಸರ್ಕಾರ ಮೂರನೇ ತ್ರೈಮಾಸಿಕದಲ್ಲಿ ಸಾಲ ಮಾಡಲು ಆರಂಭಿಸಿತ್ತು.

ಕೋವಿಡ್ ಬಳಿಕ ಆರ್ಥಿಕ ಚೇತರಿಕೆ ಫಲವಾಗಿ, ಈ ವರ್ಷ ತೆರಿಗೆ ಸಂಗ್ರಹ ಗುರಿಮೀರಿ ಸಾಧಿಸುತ್ತಿದೆ. ಆರ್ ಬಿಐ ಮೂಲಕ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಬಹುತೇಕ ಸಾಲ ಎತ್ತುವಳಿ ಮಾಡುತ್ತದೆ.

ನ.15ರಂದು ರಾಜ್ಯ ಸರ್ಕಾರ ಮೊದಲ ಸಾಲ ಎತ್ತುವಳಿ ಮಾಡಲು ಪ್ರಾರಂಭಿಸಿತ್ತು. ಮೂರನೇ ತ್ರೈ ಮಾಸಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲದ ಮೊರೆ ಹೋಗಿದ್ದ ಬೊಮ್ಮಾಯಿ‌ ಸರ್ಕಾರ ಪ್ರಸಕ್ತ ಚಾಲ್ತಿಯಲ್ಲಿರುವ ಅಂತಿಮ ತ್ರೈಮಾಸಿಕದಲ್ಲಿ ಆರ್ ಬಿಐ ಮೂಲಕ ಮಾಡುವ ಸಾಲದ ಪ್ರಕ್ರಿಯೆಗೆ ಕೊಂಚ ಬ್ರೇಕ್ ಹಾಕಿದೆ.

ಈವರೆಗೆ ಆರ್ ಬಿಐ ಮೂಲಕ ಸಾಲ 36,000 ಕೋಟಿ: ರಾಜ್ಯ ಸರ್ಕಾರ ನ.15ರಿಂದ ಮಾರುಕಟ್ಟೆ ಸಾಲವನ್ನು ಎತ್ತುವಳಿ ಮಾಡಲು ಆರಂಭಿಸಿದೆ. ನವೆಂಬರ್ ತಿಂಗಳಲ್ಲಿ 16,000 ಕೋಟಿ ರೂ. ಸಾಲ ಎತ್ತುವಳಿ ಮಾಡಿತ್ತು. ಡಿಸೆಂಬರ್ ತಿಂಗಳಲ್ಲೂ ಒಟ್ಟು 16,000 ಕೋಟಿ ರೂ. ಸಾಲ ಮಾಡಿದೆ. ಈ ವರೆಗೆ ಆರ್ ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಒಟ್ಟು 36,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.

ಆರ್ಥಿಕ ಇಲಾಖೆ ನೀಡಿರುವ ಮಾಹಿತಿಯಂತೆ ಡಿಸೆಂಬರ್ ವರೆಗೆ ಸಾರ್ವಜನಿಕ ಸಾಲದ ಮೂಲಕ ಒಟ್ಟು ಸುಮಾರು 37,601 ಕೋಟಿ ರೂ. ಸಾಲ ಮಾಡಿರುವುದಾಗಿ ತಿಳಿಸಿದೆ. ಕಳೆದ ಬಾರಿ ಡಿಸೆಂಬರ್ ಅಂತ್ಯಕ್ಕೆ ಸಾರ್ವಜನಿಕ ಸಾಲವಾಗಿ 41,983 ಕೋಟಿ ರೂ‌. ಸಾಲ ಮಾಡಿತ್ತು.

ಕೊನೆಯ ತ್ರೈಮಾಸಿಕ ಜನವರಿಯಲ್ಲಿ ಬರೀ 4,000 ಕೋಟಿ ಸಾಲ:ಕೊನೆಯ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಬರೋಬ್ಬರಿ 36,000 ಕೋಟಿ ರೂ.‌ ಸಾಲ ಮಾಡಲು ಯೋಚಿಸಿದೆ.‌ ಜನವರಿಯಿಂದ ಮಾರ್ಚ್ ವರೆಗಿನ ಕೊನೆಯ ತ್ರೈಮಾಸಿಕದಲ್ಲಿ 36,000 ಕೋಟಿ ರೂ. ಸಾಲ ಮಾಡುವುದಾಗಿ ರಾಜ್ಯ ಸರ್ಕಾರ ಆರ್ ಬಿಐಗೆ ಮಾಹಿತಿ ನೀಡಿದೆ.

ಆರ್ ಬಿಐಗೆ ರಾಜ್ಯ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಜನವರಿಯಲ್ಲಿ ಒಟ್ಟು 16,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ತಿಳಿಸಿದೆ. ಆದರೆ, ಜನವರಿ ತಿಂಗಳಲ್ಲಿ ಕೇವಲ 4,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ.

ಆರ್​ಬಿಐ ಸಾಪ್ತಾಹಿಕವಾಗಿ ರಾಜ್ಯಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಅಭಿವೃದ್ಧಿ ಸಾಲದ ಹರಾಜು ಪ್ರಕ್ರಿಯೆ ಮಾಡುತ್ತದೆ. ಜನವರಿ ಮೊದಲ ವಾರದಲ್ಲಿ ಕರ್ನಾಟಕ 4,000 ಕೋಟಿ ಸಾಲ ಎತ್ತುವಳಿ ಮಾಡಿದ್ದರೆ, ಮಿಕ್ಕ ಮೂರು ವಾರಗಳಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಫೆಬ್ರವರಿ ಮೊದಲ ವಾರದಲ್ಲೂ ಯಾವುದೇ ಸಾಲ ಎತ್ತುವಳಿ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಒಟ್ಟು 12,000 ಕೋಟಿ ರೂ. ಹಾಗೂ ಮಾರ್ಚ್ ತಿಂಗಳಲ್ಲಿ ಒಟ್ಟು 8,000 ಕೋಟಿ ರೂ. ಸಾಲ ಮಾಡುವುದಾಗಿ ಆರ್ ಬಿಐಗೆ ಸೂಚಿಸಿತ್ತು. ಆದರೆ, ಸರ್ಕಾರ ಜನವರಿ ತಿಂಗಳಲ್ಲಿ ಒಂದು ಬಾರಿ ಮಾತ್ರ ಆರ್​ಬಿಐ ಮೂಲಕ ಸಾಲ ಎತ್ತುವಳಿ ಮಾಡಿದೆ. ಕೊನೆಯ ಎರಡು ತಿಂಗಳಲ್ಲಿ ಸಂಪೂರ್ಣ ಸಾಲ ಎತ್ತುವಳಿ ಮಾಡಲಿದೆ ಎಂದು ಹೇಳಲಾಗಿದೆ. ಆದರೆ ಗುರಿ ಮೀರಿ ಆದಾಯ ಸಂಗ್ರಹವಾಗುತ್ತಿರುವುದರಿಂದ ಸರ್ಕಾರ ಆರ್ ಬಿಐ ಮೂಲಕ ಸಾಲ ಎತ್ತುವಳಿ ಮಾಡುವುದಕ್ಕೆ ಸ್ವಲ್ಪ ಬ್ರೇಕ್ ಹಾಕಿದೆ ಎಂದು ಹೇಳಲಾಗುತ್ತಿದೆ.

2022-23ರ ಆರ್ಥಿಕ ವರ್ಷದಲ್ಲಿ ಒಟ್ಟು ಸುಮಾರು 68,000 ಕೋಟಿ ಸಾಲವನ್ನು ಆರ್​​ಬಿಐಯಿಂದ ರಾಜ್ಯ ಅಭಿವೃದ್ಧಿ ಸಾಲದ ಮೂಲಕ ಎತ್ತುವಳಿ ಮಾಡುವುದಾಗಿ ರಾಜ್ಯ ಸರ್ಕಾರ ಆರ್ ಬಿಐಗೆ ಸೂಚಿಸಿತ್ತು. ಆದರೆ, ಉಳಿದಿರುವ ಎರಡು ತಿಂಗಳಲ್ಲಿ ಅಷ್ಟೂ ಸಾಲವನ್ನು ಎತ್ತುವಳಿ ಮಾಡಲಿದೆಯಾ ಎಂಬ ಅನುಮಾನ ಮೂಡಿದೆ.

ಇದನ್ನೂಓದಿ:ಏರ್ ಶೋ ಉದ್ಘಾಟನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.