ETV Bharat / state

ಶಾಲೆಗಳಿಗೆ ಬಾಂಬ್​ ಬೆದರಿಕೆ ಇ- ಮೇಲ್ ಪ್ರಕರಣ​: ಇಂದು ಎಂದಿನಂತೆ ಕಾರ್ಯನಿರ್ವಹಿಸಿದ ಶಾಲೆಗಳು

author img

By ETV Bharat Karnataka Team

Published : Dec 2, 2023, 12:37 PM IST

Updated : Dec 2, 2023, 8:26 PM IST

Bomb threat e mail to schools: ನಿನ್ನೆ ಆತಂಕದಲ್ಲಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದ ಪೋಷಕರು ಇಂದು ಎಂದಿನಂತೆ ಶಾಲೆಗೆ ಕರೆದುಕೊಂಡು ಬಂದರು.

Bomb threat e mail to schools : Schools functioning as usual today
ಇಂದು ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು

ಶಾಲೆಗಳಿಗೆ ಬಾಂಬ್​ ಬೆದರಿಕೆ ಇ- ಮೇಲ್ ಪ್ರಕರಣ​: ಇಂದು ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು

ಬೆಂಗಳೂರು: ಶುಕ್ರವಾರ ಬಾಂಬ್ ಬೆದರಿಕೆಯ ಇ-ಮೇಲ್​ ಬಂದಿದ್ದ ಶಾಲೆಗಳು ಇಂದು ತೆರೆದಿದ್ದು, ಎಂದಿನಂತೆ ತರಗತಿಗಳು ಆರಂಭವಾದವು. ನಿನ್ನೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ 60 ಶಾಲೆಗಳಿಗೆ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಇ- ಮೇಲ್​ ಬಂದಿತ್ತು. ಹಾಗಾಗಿ ಶಾಲೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬೆಳಗ್ಗೆ ಎಂದಿನಂತೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದರು.

ಈ ಹಿನ್ನೆಲೆಯಲ್ಲಿ ಈಟಿವಿ ಭಾರತದ ಜೊತೆ ಪೂರ್ಣಪ್ರಜ್ಞ ಶಾಲೆಯ ಶಿಕ್ಷಕಿ ಕವಿತಾ ಮಾತನಾಡಿ, "ನಿನ್ನೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದರಿಂದ ಸ್ವಲ್ಪ ಆತಂಕದ ವಾತಾವರಣವಿತ್ತು. ಜಾಗೃತರಾಗಿ ಎಚ್ಚರಿಕೆ ವಹಿಸಿ ಮಕ್ಕಳನ್ನು ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದೆವು. ಇವತ್ತು ಯಾವುದೇ ತೊದರೆಯಾಗುವುದಿಲ್ಲ ಎಂದು ಶಾಲೆಯ ವತಿಯಿಂದ ಆಶ್ವಾಸನೆ ನೀಡಲಾಗಿತ್ತು. ಆದ್ದರಿಂದ ಇಂದು ಮಕ್ಕಳು ನಿರಾತಂಕವಾಗಿ ಬಂದಿದ್ದಾರೆ" ಎಂದು ಹೇಳಿದರು.

"ನಿನ್ನೆ ಮತ್ತು ಇವತ್ತು ಪರಿಸ್ಥಿತಿ ನಿಭಾಯಿಸುವುದರಲ್ಲಿ ಪೋಷಕರ ಸಹಕಾರ ಬಹಳಷ್ಟಿದೆ. ಆದರೆ ಈ ರೀತಿಯ ಬೆದರಿಕೆ ಸಂದೇಶ ಆತಂಕ ತರುವ ವಿಚಾರವಾಗಿದೆ. ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ದುಃಖಕರ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಸಂಪೂರ್ಣ ತನಿಖೆ ಕೈಗೊಂಡು ಎಲ್ಲಿಂದ ಈ ರೀತಿಯ ಸಂದೇಶ ಬಂದಿದೆ? ಯಾಕೆ ಈ ರೀತಿಯ ಸಂದೇಶ ಕಳುಹಿಸಲಾಗಿದೆ?ಎನ್ನುವುದನ್ನು ಪತ್ತೆಹಚ್ಚಿ ಪರಿಹಾರ ಸೂಚಿಸಬೇಕು. ಮುಂದಿನ ದಿನಗಳಲ್ಲಿ ಸಹ ಈ ತರಹದ ಸೈಬರ್ ಕ್ರೈಮ್ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.

"ಇವತ್ತು ಶಾಲೆಗೆ ಬಂದು ಎಂದಿನಂತೆ ತರಗತಿಗಳಿಗೆ ಹಾಜರಾಗಿದ್ದೇವೆ. ನಿನ್ನೆ ಬಾಂಬ್ ಆತಂಕ ಎದುರಾಗಿದ್ದರಿಂದ ಎಲ್ಲರನ್ನೂ ಆಟದ ಮೈದಾನಕ್ಕೆ ಕರೆತರಲಾಗಿತ್ತು. ನಂತರ ಎಲ್ಲ ಪೋಷಕರು ಬಂದು ಅವರವರ ಮಕ್ಕಳನ್ನು ಕರೆದುಕೊಂಡು ಮನೆಗೆ ತೆರಳಿದರು. ಮೊದಲು ನಮಗೆಲ್ಲ ವಿಚಾರ ತಿಳಿದಾಗ ಇದು ಸುಳ್ಳು ಸುದ್ದಿ ಎನ್ನಿಸಿತ್ತು. ಆದರೆ ಮನೆಗೆ ಹೋಗಿ ಸುದ್ದಿಗಳನ್ನು ನೋಡಿದ ನಂತರ ನಿಜ ವಿಚಾರ ಗೊತ್ತಾಯಿತು" ಎಂದು ಪೂರ್ಣಪಜ್ಞ ಶಾಲಾ ವಿದ್ಯಾರ್ಥಿಗಳು ಹೇಳಿದರು.

ಇನ್ನೊಬ್ಬ ಶಾಲಾ ವಿದ್ಯಾರ್ಥಿ ಮಾತನಾಡಿ, "ಈ ರೀತಿಯಲ್ಲಿ ಮಕ್ಕಳಿಗೆ ಬಾಂಬ್ ಬೆದರಿಕೆ ಒಡ್ಡುವುದು ಸರಿಯಲ್ಲ. ಇವತ್ತು ಸಹ ಆತಂಕದಲ್ಲೇ ಇದ್ದೇನೆ. ಬಾಂಬ್ ನಿಜವಾಗಲೂ ಇದ್ದು ಅನಾಹುತ ಸಂಭವಿಸಿದ್ದರೆ ಗತಿ ಏನು ಎನ್ನುವ ಭಯ ಇನ್ನೂ ಕಾಡುತ್ತಿದೆ. ಯಾರಾದರೂ ಆಗಲಿ ಮಕ್ಕಳಿಗೆ ಹೆದರಿಸಿವುದು ಸರಿಯಲ್ಲ" ಎಂದರು.

ಪೋಷಕರಾದ ಬಿಎಸ್​ಎನ್​ಎಲ್ ಸಂಸ್ಥೆಯ ನಿವೃತ್ತ ಅಧಿಕಾರಿ ಗೋಪಾಲ್ ಮಲ್ಲಿಗೆ ಮಾತನಾಡಿ, "ನನ್ನ ಮೊಮ್ಮಗಳು ನರ್ಸರಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವತ್ತು ಶಾಲೆಯಲ್ಲಿ ಡ್ಯಾನ್ಸ್ ಕಾರ್ಯಕ್ರಮದ ತಯಾರಿ ನಡೆಯುತ್ತಿದೆ. ಇಂದು ಸ್ವಲ್ಪ ನಿರಾತಂಕವಾಗಿ ಇದ್ದೇವೆ. ಆದರೆ ನಿನ್ನೆ ಆತಂಕದಲ್ಲಿ ಓಡಿಕೊಂಡು ಬರುವ ಪ್ರಸಂಗ ಬಂದಿತ್ತು. ಈ ರೀತಿಯ ಬೆದರಿಕೆಗಳನ್ನು ಸರ್ಕಾರ ಮಟ್ಟಹಾಕಬೇಕಿದೆ" ಎಂದು ಹೇಳಿದರು.

"ಮಕ್ಕಳಿಗೆ ಹೆದರಿಕೆ ಇನ್ನೂ ಇದೆ. ಶಾಲೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಮುಂದೆಯೂ ಈ ರೀತಿಯ ಬೆದರಿಕೆಗಳು ಬಾರದಂತೆ ಮುನ್ನೆಚ್ಚರಿಕೆಯನ್ನು ಸರ್ಕಾರ ವಹಿಸಬೇಕು. ಹೀಗೆ ಬಿಟ್ಟರೆ ಇನ್ನೂ ಜಾಸ್ತಿ ಬೆದರಿಕೆಗಳು ಬರುವ ಸಾಧ್ಯತೆ ಇದೆ" ಎಂದು ತಿಳಿಸಿದರು.

ಪೋಷಕರಾದ ಪುಟ್ಟಲಾಬಾಯಿ ಮಾತನಾಡಿ, "ಆರ್.ಟಿ ನಗರದಲ್ಲಿ ನಮ್ಮ ನಿವಾಸವಿದೆ. ನಮ್ಮ ಮೊಮ್ಮಗಳು ಪೂರ್ಣಪ್ರಜ್ಞಾ ನರ್ಸರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನಿನ್ನೆಯ ಘಟನೆ ಭಯ ಸೃಷ್ಟಿಸಿತ್ತು. ಶಾಲೆಯಿಂದ ಸಂದೇಶ ಬಂದ ತಕ್ಷಣ ಮೊಮ್ಮಗಳನ್ನು ಮನೆಗೆ ಕರೆದುಕೊಂಡು ಬಂದೆವು. ಈ ರೀತಿ ಮುಂದೆ ಆಗದಂತೆ ಸರ್ಕಾರ ಕ್ರಮಗಳನ್ನು ತಗೆದುಕೊಳ್ಳಬೇಕು" ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು

Last Updated : Dec 2, 2023, 8:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.