ETV Bharat / state

ನಾಳೆ ಮಧ್ಯಾಹ್ನ ಬಿಜೆಪಿ ಮಹತ್ಬದ ಸಭೆ: ಕೈ ಘೋಷಣೆಗಳಿಗೆ ಟಕ್ಕರ್ ನೀಡಲು ರೂಪಿಸುತ್ತಾ ಕಾರ್ಯತಂತ್ರ..?

author img

By

Published : Jan 19, 2023, 10:42 PM IST

ಜನವರಿ 21ರಿಂದ 29ರವರೆಗೆ ರಾಜ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ - ನಾಳೆ ಬಿಜೆಪಿ ಕಚೇರಿಯಲ್ಲಿ ಸಂಘಟನಾತ್ಮಕ ಸಭೆ - ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮನ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ನಾಯಕರ ಉಪಸ್ಥಿತಿ - ವಿವಿಧ ಕಾರ್ಯತಂತ್ರ ರೂಪಿಸಲು ವಿಚಾರ ವಿನಿಮಯ.

bjp symbol
ಬಿಜೆಪಿ ಚಿಹ್ನೆ ಕಮಲ

ಬೆಂಗಳೂರು: ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಘಟನಾತ್ಮಕ ಸಭೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕಾರ್ಯಕ್ರಮ ಸಿದ್ದತೆ ಸೇರಿದಂತೆ ಹಲವು ವಿಷಯಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗುತ್ತದೆ.


ಬಿಜೆಪಿ ನಾಯಕರ ಮಹತ್ವದ ಸಭೆ: ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಾಳೆ ಮಧ್ಯಾಹ್ನ 2.30 ಕ್ಕೆ ಬಿಜೆಪಿ ನಾಯಕರ ಮಹತ್ವದ ಸಭೆ ಕರೆಯಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಪ್ರಮುಖ ನಾಯಕರು ಉಪಸ್ಥಿತಿ: ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ವಿಭಾಗ ಪ್ರಭಾರಿ, ಸಹ ಪ್ರಭಾರಿಗಳು,ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.

21ರಿಂದ ವಿಜಯ ಸಂಕಲ್ಪ ಅಭಿಯಾನ:
ಜನವರಿ 21ರಿಂದ 29ರವರೆಗೆ ರಾಜ್ಯದಲ್ಲಿ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಜಯಪುರದ ಸಿಂದಗಿಯಲ್ಲಿ ಅಭಿಯಾನಕ್ಕೆ ಚಾಲನೆ ಕೊಡಲಿದ್ದಾರೆ ಹಾಗಾಗಿ ಈ ಕಾರ್ಯಕ್ರಮದ ಸಿದ್ದತೆಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಕೇಂದ್ರ- ರಾಜ್ಯ ಸರಕಾರಗಳ ಸಾಧನೆ, ಕೊಡುಗೆ, ಕಾರ್ಯಕ್ರಮಗಳ ಕುರಿತು ಕರಪತ್ರಗಳನ್ನು ಹಂಚಿಕೆ, 2 ಕೋಟಿಗಿಂತ ಹೆಚ್ಚು ಮತದಾರರ ಸಂಪರ್ಕ ಮಾಡಿ, ಅವರ ಮನೆಮನೆಗೆ ತೆರಳಿ ಕರಪತ್ರ ಹಂಚುವ, ಫಲಾನುಭವಿಗಳನ್ನು ಮಾತನಾಡಿಸಿ ಒಂದು ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸುವದಾಗಿದೆ.

ಬಿಜೆಪಿ ಸರಕಾರಗಳ ಯೋಜನೆಗಳಿಂದ ಈ ಕುಟುಂಬಗಳ ಸಬಲೀಕರಣ ತಿಳಿಸುವ,ವಾಹನಗಳ ಮೇಲೆ ಸ್ಟಿಕರ್ ಹಾಕಿಸುವ ಕೆಲಸವೂ ನಡೆಸಬೇಕಿರುವ ಹಿನ್ನೆಲೆ ಇದಕ್ಕೆ ಬೇಕಾದ ಸಿದ್ದತೆ ಯಾವ ರೀತಿ ನಡೆದಿದೆ ಎಂದು ಸಭೆಯಲ್ಲಿ ಅವಲೋಕನ ಮಾಡಲಾಗುತ್ತಿದೆ. ಈಗಾಗಲೇ ಪೂರ್ವಭಾವಿ ಸಭೆಗಳನ್ನು 10 ವಿಭಾಗ ಮಟ್ಟದಲ್ಲಿ ನಡೆಸಲಾಗಿದ್ದು, 39 ಸಂಘಟನಾತ್ಮಕ ಜಿಲ್ಲೆಗಳು, 312 ಮಂಡಲಗಳಲ್ಲಿ ಸಭೆಗಳನ್ನು ಏರ್ಪಡಿಸಿ ಸಮಿತಿಗಳನ್ನೂ ರಚಿಸಲಾಗಿದ್ದು, ಅವುಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಏಕಕಾಲದಲ್ಲಿ ಎಲ್ಲ ಬೂತ್‍ಗಳಲ್ಲೂ, ಮಂಡಲಗಳಲ್ಲೂ ಅಭಿಯಾನ ನಡೆಸಲು ನಡೆದಿರುವ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತದೆ.


ಸಿಂದಗಿಯಲ್ಲಿ ನಡ್ಡಾ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದರೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಆಯಾಯ ನಾಯಕರ ಸಮ್ಮುಖದಲ್ಲಿ ಅಭಿಯಾನಕ್ಕೆ ಏಕಕಾಲಕ್ಕೆ ಚಾಲನೆ ನೀಡಲಾಗುತ್ತದೆ. ಇದಕ್ಕೆ ಮಾಡಿಕೊಂಡಿರುವ ಸಿದ್ದತೆ ಕುರಿತು ನಾಳಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ.


ಮಿಸ್ಡ್ ಕಾಲ್ ಸದಸ್ಯತ್ವ ನೋಂದಣಿ:ಕೇಂದ್ರ- ರಾಜ್ಯಗಳ ಸಚಿವರು, ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನಸಭೆ, ವಿಧಾನಪರಿಷತ್ತಿನ ಸದಸ್ಯರು, ಪಕ್ಷದ ಪ್ರಮುಖರು ಈ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ. ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನವೂ ನಡೆಯಲಿದೆ. ಒಂದು ಕೋಟಿಗೂ ಹೆಚ್ಚು ಸದಸ್ಯರನ್ನು ನೋಂದಾಯಿಸುವ ಗುರಿಯನ್ನು ರಾಜ್ಯ ಬಿಜೆಪಿ ಹೊಂದಿದೆ. ಸಮಾಜದ ಸಮಸ್ತರನ್ನು ಪಕ್ಷದ ಜತೆಗೆ ಸೇರ್ಪಡೆ ಮಾಡಿ, ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರನ್ನೂ ಜೊತೆಗೂಡಿಸುವುದು ಆ ಮೂಲಕ ಬಿಜೆಪಿ ನೇತೃತ್ವದ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಪ್ರಯತ್ನದ ಭಾಗವಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ.

ಕಾಂಗ್ರೆಸ್​ಗೆ ಬಿಜೆಪಿ ಪ್ರತಿತಂತ್ರ: ಕಾಂಗ್ರೆಸ್‌ನ ಭರವಸೆಯ ಘೋಷಣೆಗಳು, ಪ್ರಜಾಧ್ವನಿ ಯಾತ್ರೆ ತಂತ್ರಗಾರಿಕೆಗೆ ಆಡಳಿತಾರೂಢ ಬಿಜೆಪಿ ಪ್ರತಿತಂತ್ರ ಹೂಡಲು ಗಂಭೀರ ಚಿಂತನೆ ನಡೆಸಿದ್ದು, ಪ್ರಭಾವ ಮತ್ತು ಪರಿಣಾಮಗಳ ಕುರಿತು ಸ್ಥೂಲ ಮಾಹಿತಿ ಸಂಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಕಚೇರಿಯಲ್ಲಿ ನಾಳೆ ಮಧ್ಯಾಹ್ನ ಆಯೋಜಿಸಿರುವ ಸಂಘಟನಾ ಸಭೆಯಲ್ಲಿ ಚರ್ಚಿಸಲಾಗುತ್ತದೆ, ಕಾಂಗ್ರೆಸ್ ಘೋಷಣೆಗಳಿಗೆ ಪ್ರತಿತಂತ್ರ ಹೆಣೆಯಲಾಗುತ್ತದೆ ಎನ್ನಲಾಗಿದೆ.


ವಿಚಾರ ವಿನಿಮಯ:ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಡೆದ ಚರ್ಚೆ, ಕೈಗೊಂಡ ತೀರ್ಮಾನಗಳ ಜಾರಿಗೆ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ವಿಚಾರ ವಿನಿಮಯವಾಗಲಿದೆ. ಪ್ರಧಾನಿ ಮೋದಿ, ಪಕ್ಷದ ವರಿಷ್ಠರ ನೀಡಿದ ಸಲಹೆಗಳನ್ನು ಅಳವಡಿಸಿಕೊಂಡು, ನಿಚ್ಚಳ ಬಹುಮತ ಗಿಟ್ಟಿಸಿಕೊಳ್ಳಲು ಬೇಕಾದ ಭೂಮಿಕೆ ಸಿದ್ಧವಾಗಲಿದೆ. ರಾಜಕೀಯ ಕಾರ್ಯತಂತ್ರ ಹಾಗೂ ಸಂಘಟನಾ ಕಾರ್ಯಯೋಜನೆ ಅನುಷ್ಠಾನ, ಮೇಲ್ವಿಚಾರಣೆ ಜವಾಬ್ದಾರಿಗಳು ಈ ಸಭೆಯಲ್ಲಿ ಹಂಚಿಕೆಯಾಗಲಿವೆ ಎಂದು ತಿಳಿದಿದೆ.
ಇದನ್ನೂಓದಿ:ವಾಚ್ ಪಾರ್ಕ್ ಸ್ಥಾಪನೆಗೆ ಸರ್ಕಾರದಿಂದ ಅಗತ್ಯ ನೆರವು: ಸಚಿವ ಡಾ ಸಿ ಎನ್ ಅಶ್ವತ್ಥ ನಾರಾಯಣ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.