ಸಿಎಂ, ಕುಟುಂಬ ಸದಸ್ಯರ ಅವಹೇಳನ ಆರೋಪ: ಬಿಜೆಪಿ ಕಾರ್ಯಕರ್ತೆ ಬಂಧನ, ಬಿಡುಗಡೆ

author img

By

Published : Jul 28, 2023, 1:36 PM IST

Updated : Jul 28, 2023, 6:08 PM IST

BJP worker shakuntala

Bengaluru police arrests BJP worker Shakuntala: ಉಡುಪಿ ಕಾಲೇಜು ವಿಡಿಯೋ ವಿವಾದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಆರೋಪದಡಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ಬಳಿಕ ಶಕುಂತಲಾ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದಡಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ.ಎಸ್ ಎಂಬವರನ್ನು ಇಂದು ಪೊಲೀಸರು ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತ ಹನುಮಂತರಾಯ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದರು.

ಉಡುಪಿ ಕಾಲೇಜು ವಿಡಿಯೋ ಚಿತ್ರೀಕರಣ ಪ್ರಕರಣದ ಕುರಿತು ರಾಜ್ಯ ಕಾಂಗ್ರೆಸ್‌ ಮಾಡಿದ್ದ ಟ್ವೀಟ್ ವಿರೋಧಿಸುವ ಭರದಲ್ಲಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರು ಸಿದ್ದರಾಮಯ್ಯ ಅವರ ಕುಟುಂಬ ಸದಸ್ಯರನ್ನು ಉಲ್ಲೇಖಿಸಿ ಮರು ಟ್ವೀಟ್ ಮಾಡಿದ್ದರು. ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರ ಕುರಿತು ಅವಾಚ್ಯ ಶಬ್ದ ಬಳಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತ ಹನುಮಂತರಾಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಶಕುಂತಲಾರನ್ನು ಬಂಧಿಸಿದ್ದರು. ಪೊಲೀಸ್​ ವಿಚಾರಣೆ ಬಳಿಕ ಶಕುಂತಲಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಇದನ್ನೂ ಓದಿ: Udupi video row: ಉಡುಪಿ ವಿಡಿಯೋ ಪ್ರಕರಣ; ಎರಡು FIR ದಾಖಲು, ಖುಷ್ಬೂ ಭೇಟಿ

ಕಾರ್ಯಕರ್ತೆ ಬಂಧನಕ್ಕೆ ಸುನೀಲ್​ ಕುಮಾರ್ ಆಕ್ರೋಶ: ನೊಂದವರ ಪರ ಧ್ವನಿ ಎತ್ತಿದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ. ಸಂತ್ರಸ್ತೆಯರ ಪರವಾಗಿ ಧ್ವನಿ ಎತ್ತುವುದು ತಪ್ಪು ಎಂದಾದರೆ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರ ಹಕ್ಕು, ಮಾನ- ಸಮ್ಮಾನದ ಬಗ್ಗೆ ಗೌರವ ಇಲ್ಲವೆಂದು ಅರ್ಥವೇ? ನಿಮ್ಮ ಮನೆಯ ಹೆಣ್ಣು ಮಕ್ಕಳಿಗೂ ಅಪಮಾನವಾದರೆ ಸಹಿಸುತ್ತೀರಾ ಎಂದು ಶಕುಂತಲಾ ಪ್ರಶ್ನಿಸಿದ್ದರಲ್ಲಿ ತಪ್ಪೇನಿದೆ? ಸಿದ್ದರಾಮಯ್ಯನವರೇ ಇನ್ನಾದರೂ ನಿಮ್ಮ ಬೂಟಾಟಿಕೆ ನಿಲ್ಲಿಸಿ ಎಂದು ಶಾಸಕ ಸುನೀಲ್​ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಶಾಸಕರು​, ಹಿಟ್ಲರ್, ಮುಸಲೋನಿಯವರನ್ನೇ ಮೀರಿಸುವ ಸರ್ವಾಧಿಕಾರಿ ನೀವು. ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ತ್ರೀ ಸಮಾನತೆ, ಸಂವಿಧಾನದ ಆಶಯ ಎಂಬ ಶಬ್ದಗಳನ್ನು ಬಳಸುವುದಕ್ಕೆ ನೀವು ಅನರ್ಹ. ದಮ್ಮು, ತಾಕತ್ತಿನ ಬಗ್ಗೆ ವೀರಾವೇಶದಿಂದ ಮಾತನಾಡುವ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪೊಲೀಸರಿಗೆ ಉಡುಪಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವುದಕ್ಕೆ ತಾಕತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರೇ, ಹ್ಯಾಂಡ್ ಗ್ರೆನೇಡ್ ಹಾಗೂ ಸ್ಫೋಟಕಗಳನ್ನು ಮನೆಯಲ್ಲಿಟ್ಟುಕೊಂಡವರನ್ನು ಉಗ್ರರು ಎನ್ನುವುದಕ್ಕೆ ನಿಮಗೆ ಶಕ್ತಿಯಿಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಾಕಿದವರು ನಿಮ್ಮ ದೃಷ್ಟಿಯಲ್ಲಿ ಅಮಾಯಕರು. ಆದರೆ ಉಡುಪಿ ಕಾಲೇಜಿನಲ್ಲಿ ನಡೆದಿದ್ದು, ತಮಾಷೆ ಪ್ರಕರಣ, ಮಕ್ಕಳಾಟ! ನೀವು ಕರ್ನಾಟಕದ ಗೃಹ ಸಚಿವರೋ ಅಥವಾ ಒಂದು ವರ್ಗಕ್ಕೋ? ಎಂದು ಸುನೀಲ್​ ಕುಮಾರ್ ಟೀಕಿಸಿದ್ದಾರೆ.

  • .@siddaramaiah ರವರೇ,#UdupiHorror ಘಟನೆಯ ಸಾಕ್ಷಿ ನಾಶಗೊಳಿಸಿ, ಆ ಪ್ರಕರಣವನ್ನೇ ತಿರುಚುವ ನಿಮ್ಮ ಹೀನ ಮನಸ್ಥಿತಿಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಕ್ಕೆ ಸುಳ್ಳು ಕೇಸುಗಳನ್ನು ಹಾಕಿ ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತಿದ್ದೀರಿ.

    ಉಡುಪಿಯ ಘಟನೆಯ ಬಗ್ಗೆ ಜಾಗೃತವಾಗಿದೆ ಸಮಾಜ, ಎಲ್ಲರೂ ನಿಮ್ಮ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.…

    — BJP Karnataka (@BJP4Karnataka) July 28, 2023 " class="align-text-top noRightClick twitterSection" data=" ">

ಬಿಜೆಪಿ ಟ್ವೀಟ್​: ಬಂಧನದ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ,​ ಉಡುಪಿ ಘಟನೆಯ ಸಾಕ್ಷಿ ನಾಶಗೊಳಿಸಿ, ಆ ಪ್ರಕರಣವನ್ನೇ ತಿರುಚುವ ನಿಮ್ಮ ಹೀನ ಮನಸ್ಥಿತಿಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಕ್ಕೆ ಸುಳ್ಳು ಕೇಸುಗಳನ್ನು ಹಾಕಿ ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತಿದ್ದೀರಿ. ಉಡುಪಿಯ ಘಟನೆಯ ಬಗ್ಗೆ ಜಾಗೃತವಾಗಿದೆ ಸಮಾಜ, ಎಲ್ಲರೂ ನಿಮ್ಮ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಅವರೆಲ್ಲರನ್ನೂ ನೀವು ಬಂಧಿಸುವಿರಾ? ಎಂದು ಪ್ರಶ್ನಿಸಿದೆ. ನಿಮ್ಮ ಇಂತಹ ಗೊಡ್ಡು ಬೆದರಿಕೆಗಳಿಗೆ ನಾವೆಂದಿಗೂ ಜಗ್ಗುವುದಿಲ್ಲ. ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ, ತುಷ್ಟೀಕರಣ ಬದಿಗೊತ್ತಿ ಅಪರಾಧಿಗಳನ್ನು ಬಂಧಿಸಿ ಎಂದು ಆಗ್ರಹಿಸಿತ್ತು.

ಇದನ್ನೂ ಓದಿ: ಉಡುಪಿ ವಿಡಿಯೋ ಪ್ರಕರಣ: ಕಾಲೇಜು ಆಡಳಿತ ಮಂಡಳಿ, ಪೊಲೀಸ್​ ಇಲಾಖೆಯಿಂದ ಸ್ಪಷ್ಟನೆ

Last Updated :Jul 28, 2023, 6:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.