ETV Bharat / state

ಕೀಳು ಅಭಿರುಚಿಯ ಹೇಳಿಕೆ ನೀಡಿದ ಪ್ರಿಯಾಂಕ್ ಖರ್ಗೆ ಮಹಿಳೆಯರ ಕ್ಷಮೆಯಾಚಿಸಬೇಕು: ಗೀತಾ ವಿವೇಕಾನಂದ

author img

By

Published : Aug 13, 2022, 3:34 PM IST

ಬಿಜೆಪಿ ಆಡಳಿತದಲ್ಲಿ ಸರ್ಕಾರಿ ಹುದ್ದೆಗಾಗಿ ಯುವತಿಯರು ಮಂಚ ಹತ್ತಬೇಕು, ಯುವಕರು ಲಂಚ ಕೊಡಬೇಕು ಎಂದು ಪ್ರಿಯಾಂಕ್​ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಈ ಹೇಳಿಕೆಯನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಖಂಡಿಸಿದ್ದಾರೆ.

KN_BNG_04_BJPWOMENCEEL_PRIYANKKARGE_SCRIPT_7201951
ಗೀತಾ ವಿವೇಕಾನಂದ

ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಮಹಿಳೆಯರ ಕುರಿತು ಕೀಳು ಅಭಿರುಚಿಯ ಹೇಳಿಕೆ ನೀಡಿದ್ದು, ಅವರು ದೇಶದ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರಿ ನೌಕರಿ ಪಡೆಯಲು ಮಹಿಳೆಯರು ಮಂಚ ಏರಬೇಕು ಹಾಗೂ ಯುವಕರು ಲಂಚ ಕೊಡಬೇಕೆಂದು ಪ್ರಿಯಾಂಕ್ ಖರ್ಗೆ ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಕುಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಇದು ಭೂತದ ಬಾಯಿಯಲ್ಲಿ ಭಗವದ್ಗೀತೆ ಹೇಳಿದಂತಿದೆ. ಪ್ರಿಯಾಂಕ್ ಖರ್ಗೆ ಅವರು ಸ್ವತಃ ಭ್ರಷ್ಟಾಚಾರ ಮತ್ತು ಕುಸಂಸ್ಕೃತಿಯ ಪದ ಬಳಸಿ ತಮ್ಮನ್ನು ಚಾಲ್ತಿಯಲ್ಲಿಡಲು ಬಯಸುತ್ತಿದ್ದಾರೆ.

ಅವರು ಮಹಿಳೆಯರ ಕುರಿತು ಗೌರವದಿಂದ ಮಾತನಾಡಬೇಕು. ಈ ರೀತಿಯ ಅಸಭ್ಯ ಪದ ಬಳಸಿದ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಉಗ್ರವಾದ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ. ಇದು ಸರ್ಕಾರಿ ನೌಕರಿಯಲ್ಲಿರುವ ಸಮಸ್ತ ಮಹಿಳಾ ಕುಲಕ್ಕೆ ಅವಮಾನ ಮಾಡಿದ ಹಾಗಿದೆ. ಇದರ ವಿರುದ್ಧ ಮಹಿಳಾ ಮೋರ್ಚಾವು ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ಹಮ್ಮಿಕೊಳ್ಳಲಿದೆ.

ನಾಲಿಗೆಯ ಮೇಲೆ ಹಿಡಿತವಿಲ್ಲದ ಪ್ರಿಯಾಂಕ್ ಖರ್ಗೆಗೆ ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ. ಮಹಿಳಾ ಸರ್ಕಾರಿ ನೌಕರರೆಲ್ಲರೂ ಉತ್ತಮ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದಾರೆ. ಪರಿಶ್ರಮದ ಮೂಲಕ ಕೆಲಸ ಪಡೆದು ಉನ್ನತ ಹುದ್ದೆಗಳನ್ನೇರಿದ್ದಾರೆ. ಅಲ್ಲದೆ, ಐಎಎಸ್, ಕೆಎಎಸ್ ಸೇರಿದಂತೆ ಅನೇಕ ಉತ್ತಮ ಕೋರ್ಸ್‍ಗಳ ಮೂಲಕ ಸಾಧನೆ ಮಾಡಿದ್ದಾರೆ ಎಂದಿದ್ದಾರೆ.

ದೇಶದಲ್ಲಿ ರಾಷ್ಟ್ರಪತಿಯಾಗಿ ಮಹಿಳೆಯೊಬ್ಬರು ಇರುವ ಇಂಥ ಕಾಲಘಟ್ಟದಲ್ಲಿ ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆ ಅವರ ಕೀಳು ಅಭಿರುಚಿಗೆ ಸ್ಪಷ್ಟ ನಿದರ್ಶನ ಎಂದು ಟೀಕಿಸಿದ್ದಾರೆ. ಡಾ. ಬಾಬಾಸಾಹೇಬ ಅಂಬೇಡ್ಕರ್, ಗಾಂಧೀಜಿ ಅವರ ಬಗ್ಗೆ ತತ್ವ, ಸಿದ್ಧಾಂತ ಹೇಳುವ ಪ್ರಿಯಾಂಕ್ ಖರ್ಗೆ ಅವರು ಮಹಿಳೆಯರನ್ನು ಈ ರೀತಿ ಅವಮಾನಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ಕಾಂಗ್ರೆಸ್‍ನ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿಗಳನ್ನು ‘ರಾಷ್ಟ್ರಪತ್ನಿ’ ಎಂದು ಸಂಬೋಧಿಸಿ ಅವಮಾನ ಮಾಡಿದ್ದರು. ಇದೀಗ ಪ್ರಿಯಾಂಕ್ ಖರ್ಗೆ ಅದೇ ಮಾದರಿಯಲ್ಲಿ ಕಾಂಗ್ರೆಸ್‍ನವರ ಕೀಳು ಅಭಿರುಚಿಯನ್ನು ಮುಂದುವರಿಸಿದ್ದಾರೆ ಎಂದು ಗೀತಾ ವಿವೇಕಾನಂದ ಕಿಡಿಕಾರಿದ್ದಾರೆ.

ಇದನ್ನೂ ಓದಿ: ನೆಹರು ಸಂತತಿ ಎಂದರೇ ಜಿನ್ನಾ ಸಂತತಿ ಇದ್ದಂಗೆ.. ಕೆ.ಎಸ್ ಈಶ್ವರಪ್ಪ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.