ETV Bharat / state

ಇಂದು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ: ಜೆಡಿಎಸ್‌ ಜೊತೆ ಮೈತ್ರಿ ಕುರಿತು ವಿಸ್ತೃತ ಚರ್ಚೆ

author img

By ETV Bharat Karnataka Team

Published : Sep 12, 2023, 8:26 AM IST

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ನಾಯಕರು ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್‌ನೊಂದಿಗೆ ಮೈತ್ರಿ ವಿಚಾರದ ಕುರಿತು ವಿಸ್ತೃತವಾಗಿ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

BJP meeting tomorrow
ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರ ಖಚಿತವಾದ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಇಂದು ರಾಜ್ಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಪಕ್ಷದ ಮುಂದಿನ ಸಂಘಟನಾತ್ಮಕ ಚಟುವಟಿಕೆ, ಲೋಕಸಭಾ ಚುನಾವಣೆಗೆ ಸಿದ್ಧತೆ ಮತ್ತು ಜೆಡಿಎಸ್‌ನೊಂದಿಗಿನ ಹೊಂದಾಣಿಕೆಯ ನಂತರದ ಬೆಳವಣಿಗೆಗಳ ಕುರಿತು ಮಹತ್ವದ ಚರ್ಚೆ ನಡೆಸಲಾಗುತ್ತದೆ.

ಇಂದು ಬೆಳಿಗ್ಗೆ 10.30ಕ್ಕೆ ಸಭೆ ಆಯೋಜಿಸಲಾಗಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದ ಗೌಡ ಸೇರಿದಂತೆ ಪಕ್ಷದ ಹಲವು ನಾಯಕರು ಹಾಗೂ ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಪಕ್ಷದ ಈವರೆಗಿನ ಸಂಘಟನಾತ್ಮಕ ಚಟುವಟಿಕೆಗಳ ವರದಿ ಪರಾಮರ್ಶೆ ನಡೆಯಲಿದ್ದು, ಮುಂಬರಲಿರುವ ಲೋಕಸಭಾ ಚುನಾವಣೆಗೆ ಸಿದ್ದವಾಗುವ ನಿಟ್ಟಿನಲ್ಲಿ ಯಾವ ರೀತಿ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸಬೇಕು ಎನ್ನುವ ಕುರಿತು ಮಾತುಕತೆ ನಡೆಯಲಿದೆ. ಲೋಕಸಭಾ ಚುನಾವಣೆಗೆ ಸಿದ್ದತೆ ಆರಂಭಿಸುವ ಬಗ್ಗೆ ಸಮಾಲೋಚನೆ ನಡೆದು ಪದಾಧಿಕಾರಿಗಳ ಅಭಿಪ್ರಾಯ ಪಡೆಯಲಾಗುತ್ತದೆ. ಹಿರಿಯ ನಾಯಕ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 15 ಅಥವಾ 16ರಿಂದ ಆರಂಭಿಸಲಿರುವ ರಾಜ್ಯ ಪ್ರವಾಸದ ಸಿದ್ಧತೆ ಪಕ್ಷದ ಸಹಕಾರ ಇತ್ಯಾದಿಗಳ ಕುರಿತು ಚರ್ಚೆಯಾಗಲಿದೆ.

ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರ: ಈಗಾಗಲೇ ಜೆಡಿಎಸ್, ಪ್ರಮುಖರ ಸಮಾವೇಶ ನಡೆಸಿ ಬಹಿರಂಗವಾಗಿಯೇ ಬಿಜೆಪಿ ಜೊತೆಗಿನ ಮೈತ್ರಿ ವಿಚಾರವನ್ನು ಪ್ರಸ್ತಾಪಿಸಿ, ಖಚಿತಪಡಿಸಿದೆ. ಬಿಜೆಪಿ ನಾಯಕರು ಕೂಡ ಮೈತ್ರಿ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಬಹುತೇಕ ಮೈತ್ರಿ ಖಚಿತವಾಗಿದ್ದು, ಮೈತ್ರಿ ಹಿನ್ನೆಲೆಯಲ್ಲಿ ಪಕ್ಷದ ಮೇಲಾಗುವ ಪರಿಣಾಮಗಳು, ಬೆಳವಣಿಗೆಗಳ ಕುರಿತು ವಿಸ್ತೃತವಾದ ಚರ್ಚೆಯಾಗಲಿದೆ. ಹೈಕಮಾಂಡ್ ನಾಯಕರ ಜೊತೆ ಮಾತುಕತೆಗೂ ಮೊದಲೇ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ಘಟಕದ ನಿರ್ಧಾರ ತಿಳಿಸಿ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು ಬೇಕಾದ ಕಾರ್ಯತಂತ್ರಕ್ಕೆ ಸನ್ನದ್ಧವಾಗುವ ಕುರಿತು ಹೈಕಮಾಂಡ್ ನಾಯಕರಿಗೆ ಮಾಹಿತಿ ರವಾನಿಸಬೇಕಿದೆ.

ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ಹೇಳಿದ್ದೇನು?: ''ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆ ಮಾಡುತ್ತೇವೆ. ಪಕ್ಷದಲ್ಲಿ ಅಸಮಾಧಾನ ಹೊರ ಹಾಕಿದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಿದೆ" ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಕೋರ್ ಕಮಿಟಿ ಸಭೆಯ ಬಳಿಕ ಮಾತನಾಡಿದ ಅವರು, ''ಕೆಲವರು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಲಿಂಗಾಯತರಿಗೆ ಅನ್ಯಾಯ ಆಗುತ್ತಿದೆ ಎಂದು ಹೇಳಿದ್ದಾರೆ. ಅವು ಬಗೆಹರಿಯಲಾಗದ ಸಮಸ್ಯೆಗಳೇನಲ್ಲ, ವಿಶ್ವಾಸಕ್ಕೆ ತೆಗೆದುಕೊಂಡು ಹೋದ್ರೆ ಎಲ್ಲವೂ ‌ಸರಿ ಹೋಗುತ್ತದೆ'' ಎಂದರು. ಪ್ರದೀಪ್ ಶೆಟ್ಟರ್ ಹಾಗೂ ಶಂಕರ ಪಾಟೀಲ ಮುನೇನಕೊಪ್ಪರಿಂದ ಹಿಡಿದು ಎಲ್ಲರ ಜೊತೆಗೂ ಮಾತನಾಡಿದ್ದೇವೆ.‌ ಲೋಕಸಭಾ ಚುನಾವಣೆ ಸಮೀಪಸುತ್ತಿದೆ. ಹೀಗಾಗಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕಿದೆ. ಬಿಎಲ್‌ಎ 1, ಬಿಎಲ್‌ಎ 2 ಮಟ್ಟದಲ್ಲಿ ಪಕ್ಷ ಪುನರ್‌ಸಂಘಟನೆ ಆಗಬೇಕಿದೆ'' ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಪಕ್ಷಾಂತರಿ, ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ: ಮಾಜಿ ಸಚಿವ ಅಶೋಕ್ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.