ETV Bharat / state

ಸಿಎಂ ವಿರೋಧಿ ಪಡೆ ಶಾಸಕಾಂಗ ಪಕ್ಷದ ಸಭೆಗೆ ಪಟ್ಟು.. ಬಿಜೆಪಿ ಹೈಕಮಾಂಡ್‌ಗೆ ಬಿಎಸ್‌ವೈ ಬಿಸಿ ತುಪ್ಪ..

author img

By

Published : Jun 8, 2021, 3:16 PM IST

ಶಾಸಕಾಂಗ ಪಕ್ಷದ ಸಭೆ ನಡೆಸಿದರೆ ಬಿಎಸ್​ವೈ ಬಣ ಹಾಗೂ ವಿರೋಧಿ ಬಣದ ಶಕ್ತಿ ಎಷ್ಟು ಎನ್ನುವುದನ್ನು ತೋರಿಸಬಹುದು, ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಚಿಂತನೆ ಬಿಎಸ್​​ವೈ ವಿರೋಧಿ ಬಣದ್ದಾಗಿದೆ. ಸದ್ಯ ಸುನೀಲ್ ಕುಮಾರ್ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ವಿರೋಧಿ ಬಣದ ಯತ್ನಾಳ್, ಅರವಿಂದ ಬೆಲ್ಲದ್ ಸೇರಿದಂತೆ ಇತರ ನಾಯಕರೂ ಇದೇ ಬೇಡಿಕೆಗೆ ಪಟ್ಟು ಹಿಡಿಯಲಿದ್ದಾರೆ ಎಂದು ತಿಳಿದು ಬಂದಿದೆ..

ಬಿಎಸ್​ವೈ ವಿರೋಧಿ ಬಣದಿಂದ ಶಾಸಕಾಂಗ ಪಕ್ಷದ ಸಭೆಗೆ ಪಟ್ಟು.
ಬಿಎಸ್​ವೈ ವಿರೋಧಿ ಬಣದಿಂದ ಶಾಸಕಾಂಗ ಪಕ್ಷದ ಸಭೆಗೆ ಪಟ್ಟು.

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ಮುಂದುವರೆದಿದೆ. ಸಿಎಂ ರಾಜೀನಾಮೆ ಹೇಳಿಕೆ ಅಸ್ತ್ರಕ್ಕೆ ಪ್ರತಿಯಾಗಿ ನಾಯಕತ್ವದ ವಿರುದ್ಧ ಅಸಮಧಾನಿತ ಬಣ ಶಾಸಕಾಂಗ ಪಕ್ಷದ ಸಭೆಗೆ ಆಗ್ರಹಿಸಲು ಮುಂದಾಗಿದೆ. ಹೈಕಮಾಂಡ್ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಚರ್ಚೆಗೆ ಪಟ್ಟು ಹಿಡಿಯುವ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ಧ ಎಂದು ಸಿಎಂ ಬಿಎಸ್​​​​ವೈ ಹೇಳಿಕೆ ನೀಡಿದ ಬೆನ್ನಲ್ಲೇ, ರಾಜ್ಯ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸಿಎಂ ಯಡಿಯೂರಪ್ಪನವರ ಬೆಂಬಲಿಗರು ಸಹಿ ಸಂಗ್ರಹ ಅಭಿಯಾನದ ಮೂಲಕ, ಅವರ ಪರ ಬ್ಯಾಟಿಂಗ್ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿರೋಧಿ ಬಣ ಈಗ ಆ್ಯಕ್ಟೀವ್ ಆಗಿದೆ. ತಮ್ಮದೇ ಕಾರ್ಯತಂತ್ರದ ಮೂಲಕ ಯಡಿಯೂರಪ್ಪರನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎನ್ನುವ ಬೇಡಿಕೆಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇಪದೆ ಮುಂದಿಡುತ್ತಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಕರೆಯಲು ಯಡಿಯೂರಪ್ಪ ಅವರಿಗೆ ಹೆದರಿಕೆ ಇದೆಯಾ ಎಂದು ಕುಟುಕಿದ್ದಾರೆ. ಇದಕ್ಕೆ ಶಾಸಕ ಅರವಿಂದ ಬೆಲ್ಲದ್ ದನಿಗೂಡಿಸಿದ್ದು, ಶಾಸಕಾಂಗ ಪಕ್ಷದ ಸಭೆಗೆ ಬೇಡಿಕೆ ಇರಿಸಿದ್ದಾರೆ. ಆದರೆ, ಈ ಬೇಡಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಳ್ಳಿ ಹಾಕಿದ್ದರು. ಅಂತಹ ಸನ್ನಿವೇಶ ಇಲ್ಲ ಎನ್ನುವ ಸ್ಪಷ್ಟೀಕರಣ ನೀಡಿದ್ದರು.

ಆದರೆ, ಇದೀಗ ರಾಜ್ಯ ಬಿಜೆಪಿ ಪಾಳಯದಲ್ಲಿ ರಾಜಕೀಯ ಚದುರಂಗದಾಟ ಪುನಾರಂಭಗೊಂಡಿದೆ. ಮತ್ತೊಮ್ಮೆ ಶಾಸಕಾಂಗ ಪಕ್ಷದ ಸಭೆಯ ಕೂಗು ಆರಂಭಿಸಲಾಗಿದೆ. ಪಕ್ಷ ನಿಷ್ಠ ಶಾಸಕ ಕಾರ್ಕಳದ ಸುನೀಲ್ ಕುಮಾರ್ ಇದೀಗ ಪರೋಕ್ಷವಾಗಿ ಶಾಸಕಾಂಗ ಪಕ್ಷದ ಸಭೆಗೆ ಬೇಡಿಕೆ ಇರಿಸಿದ್ದಾರೆ. ನಮ್ಮ ಸಮಸ್ಯೆಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಳ್ಳಲು ಸಾಧ್ಯವಿಲ್ಲ, ಅದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಘಟಕ ಮತ್ತು ಹೈಕಮಾಂಡ್​ಗೆ ಶಾಸಕಾಂಗ ಸಭೆಯ ಬೇಡಿಕೆ ಮುಂದಿರಿಸಿದ್ದಾರೆ.

ಬಿಎಸ್​ವೈ ವಿರೋಧಿ ಪಾಳಯ ಶಾಸಕಾಂಗ ಸಭೆಯ ಬೇಡಿಕೆಯನ್ನು ಮುಂದಿರಿಸುವ ನಿರ್ಧಾರಕ್ಕೆ ಬಂದಿದ್ದು, ಹೈಕಮಾಂಡ್​​​ನ ವೀಕ್ಷಕರ ಸಮ್ಮುಖದಲ್ಲಿ ಸಭೆ ನಡೆಯಬೇಕು. ಅಲ್ಲಿ ನಮ್ಮ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡು, ನಮ್ಮ ಸಮಸ್ಯೆಗಳನ್ನು ಹೈಕಮಾಂಡ್​ಗೆ ತಲುಪಿಸಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.

ಆಡಳಿತದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಸ್ತಕ್ಷೇಪ, ಅನುದಾನದ ಹಂಚಿಕೆಯಲ್ಲಿ ತಾರತಮ್ಯ, ಕೆಲ ಶಾಸಕರ ಕಡೆಗಣನೆ, ಸಚಿವರು ಶಾಸಕರ ಕೆಲಸ ಮಾಡಿ ಕೊಡದೇ ಇರುವುದು ಸೇರಿದಂತೆ ಎಲ್ಲ ದೂರುಗಳನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪ ಮಾಡಬೇಕು. ಆ ಮೂಲಕ ನಾಯಕತ್ವದ ವಿರುದ್ಧ ನಾವೇಕೆ ದನಿ ಎತ್ತುತ್ತಿದ್ದೇವೆ ಎನ್ನುವುದನ್ನು ಹೈಕಮಾಂಡ್ ಗಮನಕ್ಕೆ ತರಬೇಕು ಎನ್ನುವ ತಂತ್ರಗಾರಿಕೆ ಅನುಸರಿಸಲು ಮುಂದಾಗಿದ್ದಾರೆ.

ಸದ್ಯ ರಾಜ್ಯ ಬಿಜೆಪಿ ಪಾಳಯದಲ್ಲಿ ಶಾಸಕರ ಸಹಿ ಸಂಗ್ರಹ ಅಭಿಯಾನ ಸದ್ದು ಮಾಡುತ್ತಿದೆ. 65ಕ್ಕೂ ಹೆಚ್ಚಿನ ಶಾಸಕರು ಯಡಿಯೂರಪ್ಪ ನಾಯಕತ್ವ ಮುಂದುವರೆಸುವ ಪತ್ರಕ್ಕೆ ಸಹಿ ಮಾಡಿದ್ದಾರೆ, 90ಕ್ಕೂ ಹೆಚ್ಚಿನ ಶಾಸಕರು ಯಡಿಯೂರಪ್ಪ ಪರ ಇದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಇದಕ್ಕೆ ಟಕ್ಕರ್ ನೀಡಲು ವಿರೋಧಿ ಬಣ ಶಾಸಕಾಂಗ ಪಕ್ಷದ ಸಭೆಗೆ ಒತ್ತಾಯಿಸಿದೆ.

ಶಾಸಕಾಂಗ ಪಕ್ಷದ ಸಭೆ ನಡೆಸಿದರೆ ಬಿಎಸ್​ವೈ ಬಣ ಹಾಗೂ ವಿರೋಧಿ ಬಣದ ಶಕ್ತಿ ಎಷ್ಟು ಎನ್ನುವುದನ್ನು ತೋರಿಸಬಹುದು, ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಚಿಂತನೆ ಬಿಎಸ್​​ವೈ ವಿರೋಧಿ ಬಣದ್ದಾಗಿದೆ. ಸದ್ಯ ಸುನೀಲ್ ಕುಮಾರ್ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ವಿರೋಧಿ ಬಣದ ಯತ್ನಾಳ್, ಅರವಿಂದ ಬೆಲ್ಲದ್ ಸೇರಿದಂತೆ ಇತರ ನಾಯಕರೂ ಇದೇ ಬೇಡಿಕೆಗೆ ಪಟ್ಟು ಹಿಡಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಜೂನ್ 14ರಂದು ರಾಜ್ಯದಲ್ಲಿ ಲಾಕ್​​ಡೌನ್ ಅಂತ್ಯಗೊಳ್ಳಲಿದೆ. ನಂತರ ಹಂತ ಹಂತವಾಗಿ ಅನ್​​​ಲಾಕ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಹಾಗಾಗಿ, ಜೂನ್ ಕಡೆಯ ವಾರದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎನ್ನುವ ಬೇಡಿಕೆಯನ್ನು ಬಿಎಸ್​​​​ವೈ ವಿರೋಧಿ ಬಣ ಹೈಕಮಾಂಡ್ ಮುಂದಿಡಲು ನಿರ್ಧರಿಸಿದೆ. ಒಂದು ವೇಳೆ ಹೈಕಮಾಂಡ್ ರೆಬೆಲ್ ಶಾಸಕರ ಬೇಡಿಕೆ ಪರಿಗಣಿಸಿದಲ್ಲಿ ನಾಯಕತ್ವ ಬದಲಾವಣೆ ವಿಷಯ ಹೊರತುಪಡಿಸಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಸೀಮಿತ ಅವಕಾಶ, ನೀಡಿ ಶಾಸಕಾಂಗ ಪಕ್ಷದ ಸಭೆ ನಡೆಸಲು ಯಡಿಯೂರಪ್ಪಗೆ ಸೂಚನೆ ನೀಡಬಹುದು ಎನ್ನಲಾಗುತ್ತಿದೆ.

ಒಂದು ವೇಳೆ ಶಾಸಕಾಂಗ ಪಕ್ಷದ ಸಭೆ ನಡೆದಲ್ಲಿ ಆಡಳಿತದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಸ್ತಕ್ಷೇಪ ನಿಲ್ಲಬೇಕು ಎನ್ನುವುದೇ ಪ್ರಮುಖ ಬೇಡಿಕೆಯಾಗಿದೆ. ಯಡಿಯೂರಪ್ಪ ಬದಲು ಪುತ್ರ ಆಡಳಿತ ನಡೆಸುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಬೇಕು‌ ಎಂದು ವಿಜಯೇಂದ್ರ ಹಸ್ತಕ್ಷೇಪದ ಕುರಿತು ದಾಖಲೆಗಳೊಂದಿಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಯಡಿಯೂರಪ್ಪಗೆ ಸ್ವತಂತ್ರವಾಗಿ ಆಡಳಿತ ನಡೆಸಲು ಸಾಧ್ಯವಾಗದೇ ಇದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೇರೆಯವರಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಕೂಗನ್ನು ಮೊಳಗಿಸಲು ಬಿಎಸ್​​ವೈ ವಿರೋಧಿ ಬಣ ತಂತ್ರಗಾರಿಕೆ ರೂಪಿಸುತ್ತಿದೆ ಎನ್ನಲಾಗಿದೆ.

ಹೈಕಮಾಂಡ್ ಶ್ರೀರಕ್ಷೆ : ಚುನಾವಣೆಗೂ ಮೊದಲೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಘೋಷಣೆ ಮಾಡಿಯೇ ಬಿಜೆಪಿ ಹೈಕಮಾಂಡ್ ಚುನಾವಣಾ ಅಖಾಡಕ್ಕೆ ಇಳಿದಿತ್ತು. ಹೀಗಾಗಿ, ಯಡಿಯೂರಪ್ಪ ನಾಯಕತ್ವಕ್ಕೆ ಜನತೆ ಆಶೀರ್ವಾದ ಮಾಡಿದ್ದಾರೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಕೇಂದ್ರದ ನಾಯಕರು ಸಾಕಷ್ಟು ಬಾರಿ ಸ್ಪಷ್ಟಪಡಿಸಿದ್ದಾರೆ.

ಇದನ್ನು ಮತ್ತೊಮ್ಮೆ ಹೈಕಮಾಂಡ್​​ಗೆ ನೆನಪಿಸುವ ರೀತಿಯಲ್ಲಿಯೇ ಹೈಕಮಾಂಡ್ ಹೇಳುವವರೆಗೂ ಮುಖ್ಯಮಂತ್ರಿಯಾಗಿ ಇರುತ್ತೇನೆ, ರಾಜೀನಾಮೆ ನೀಡಿ ಎಂದಾಗ ಹುದ್ದೆಯಿಂದ ನಿರ್ಗಮಿಸುತ್ತೇನೆ ಎಂದಿದ್ದಾರೆ. ಪರ್ಯಾಯ ನಾಯಕ ಇಲ್ಲದೆ ನಾಯಕತ್ವ ಬದಲಾವಣೆ ಅಸಾಧ್ಯ ಎನ್ನುವುದು ಹೈಕಮಾಂಡ್​ಗೆ ಚೆನ್ನಾಗಿಯೇ ಗೊತ್ತಿದೆ. ಈ ಹಿಂದೆ ಒಕ್ಕಲಿಗ ಸಮುದಾಯದ ಸದಾನಂದಗೌಡ, ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್​​ಗೆ ಪಟ್ಟ ಕಟ್ಟಿ ಮಾಡಿದ ಪ್ರಯೋಗಗಳು ಸಫಲವಾಗದೇ ಇರುವುದು ಗೊತ್ತಿದೆ.

ಯಡಿಯೂರಪ್ಪ ಇಲ್ಲದೆ ಪರ್ಯಾಯ ನಾಯಕತ್ವ ಅಸಾಧ್ಯ ಎನ್ನುವುದನ್ನು ಮನಗಂಡು ಯಡಿಯೂರಪ್ಪ ನೇತೃತ್ವದಲ್ಲಿಯೇ ಪರ್ಯಾಯ ನಾಯಕತ್ವ ಹುಟ್ಟು ಹಾಕಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿಯೇ, ಯಡಿಯೂರಪ್ಪ ವಿರುದ್ಧ ಹೈಕಮಾಂಡ್ ಯಾವ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ. ಹಾಗಾಗಿ, ಸದ್ಯದ ಮಟ್ಟಿಗೆ ಶಾಸಕಾಂಗ ಪಕ್ಷದ ಸಭೆ ನಡೆಸುವಂತೆ ಸೂಚಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಕೇಸರಿ ಪಾಳಯದಲ್ಲಿ ಮತ್ತೊಂದು ಸುತ್ತಿನ ಆಂತರಿಕ ಕಲಹಕ್ಕೆ ವೇದಿಕೆ ಸಜ್ಜುಗೊಂಡಿದೆ. ಯಡಿಯೂರಪ್ಪ ಪರ ಬಣದ ವಿರುದ್ಧ ವಿರೋಧಿ ಬಣ ತಿರುಗಿ ಬೀಳಲು ಮುಂದಾಗಿದೆ. ಹೈಕಮಾಂಡ್ ಯಾವ ರೀತಿ ಆಂತರಿಕ ಕಲಹಕ್ಕೆ ಬ್ರೇಕ್ ಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.