ETV Bharat / state

ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನಾಳೆ ಬಿಜೆಪಿ ಪ್ರತಿಭಟನೆ: ಎನ್ ರವಿಕುಮಾರ್

author img

By

Published : Jun 4, 2023, 4:44 PM IST

ರಾಜ್ಯ ಸರ್ಕಾರದ ಮೂರು ಜನ ವಿರೋಧಿ ನಿರ್ಧಾರಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಬಿಜೆಪಿ ವತಿಯಿಂದ ನಾಳೆ ಮತ್ತು ನಾಡಿದ್ದು ರಾಜ್ಯಾದ್ಯಂತ ಪ್ರತಿಭಟನೆ ನಡೆಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.

bjp-protest-against-policies-of-the-state-government-says-n-ravikumar
ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ನಾಳೆ ಬಿಜೆಪಿ ಪ್ರತಿಭಟನೆ: ಎನ್.ರವಿಕುಮಾರ್

ಬೆಂಗಳೂರು : ಮೊನ್ನೆ 200 ಯೂನಿಟ್‍ವರೆಗೆ ವಿದ್ಯುತ್ ಉಚಿತ ಎಂದಿದ್ದ ಕರ್ನಾಟಕ ರಾಜ್ಯದ ಸಿದ್ದರಾಮಯ್ಯ ಸರ್ಕಾರ, ಈಗ 80 ಯೂನಿಟ್‍ವರೆಗೆ ಎಂದು ಆದೇಶ ಹೊರಡಿಸಿ ಜನವಿರೋಧಿ ನೀತಿ ಪ್ರದರ್ಶಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆರೋಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮೂರು ಜನ ವಿರೋಧಿ ನಿರ್ಧಾರಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಬಿಜೆಪಿ ವತಿಯಿಂದ ನಾಳೆ ಮತ್ತು ನಾಡಿದ್ದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಮನೆಗಳಲ್ಲಿ ಪ್ರತಿ ತಿಂಗಳು 70 ಯೂನಿಟ್ ವಿದ್ಯುತ್ ಬಳಸುತ್ತಿದ್ದರೆ 80 ಯೂನಿಟ್ ಬಳಸಿ. ಆದರೆ, ಯಾವುದೇ ಕಾರಣಕ್ಕೂ 80 ಯೂನಿಟ್‍ ಮೀರುವಂತಿಲ್ಲ ಎಂದು ಕರ್ನಾಟಕ ಸರ್ಕಾರ ಶರತ್ತು ಅಥವಾ ನಿರ್ಬಂಧವನ್ನು ಹಾಕಿದೆ. ಹಾಗಿದ್ದರೆ ಈ ಹಿಂದೆ 200 ಯೂನಿಟ್ ಎಂದಿದ್ದೀರಲ್ಲವೇ? ಆ ಮಾತನ್ನು ನಡೆಸಿಕೊಡದೆ ಮಾತು ತಪ್ಪಿದ್ದು ವಚನಭ್ರಷ್ಟತೆ ಆದಂತಲ್ಲವೇ? ಎಂದು ಪ್ರಶ್ನಿಸಿದರು.

ವಿದ್ಯುತ್​ ಶುಲ್ಕ ಹೆಚ್ಚಿಸಿ ಜನರಿಂದಲೇ ವಸೂಲಾತಿ : ವಿದ್ಯುತ್ ಶುಲ್ಕವನ್ನೂ ಏರಿಸಿದ್ದೀರಿ. ಒಂದು ಯೂನಿಟ್‍ಗೆ 70 ಪೈಸೆ ಹೆಚ್ಚಿಸಲಾಗಿದೆ. ಅಂದರೆ 80 ಯೂನಿಟ್‍ಗೆ 56 ರೂ. ಹೆಚ್ಚಿಸಿದಂತಾಗಿದೆ. ಹಾಗಿದ್ದರೆ ಸರ್ಕಾರ ಮಾಡಿದ್ದೇನು? ಸರ್ಕಾರ ಒಂದೆಡೆ ಉಚಿತ ಎನ್ನುತ್ತದೆ. ಅದೇ ರೀತಿಯಲ್ಲಿ ಶುಲ್ಕ ಹೆಚ್ಚಿಸಿ ಜನರಿಂದಲೇ ಮತ್ತೆ ವಸೂಲಾತಿ ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹೆಚ್ಚಿಸಿದ 70 ಪೈಸೆ ದರವನ್ನು ವಾಪಸ್ ಪಡೆಯಲು ಆಗ್ರಹಿಸುತ್ತದೆ ಎಂದು ತಿಳಿಸಿದರು.

ಹಾಲಿನ ಪ್ರೋತ್ಸಾಹಧನವನ್ನು ಪ್ರತಿ ಲೀಟರ್​ಗೆ 5 ರೂಪಾಯಿಗೆ ಬಿಜೆಪಿ ಸರ್ಕಾರ ಹೆಚ್ಚಿಸಿತ್ತು. ಅದನ್ನು 1.5 ರೂ. ಕಡಿಮೆ ಮಾಡಿದ್ದೀರಿ. ಇದರಿಂದ ಸರ್ಕಾರಕ್ಕೆ ಹಣ ಉಳಿತಾಯ ಆಗುತ್ತಿದೆ. ಹಾಗಿದ್ದರೆ ನೀವು ಬಡವರಿಗೆ ಏನು ಸಹಾಯ ಮಾಡಿದಂತಾಯಿತು? ಬಡವರಿಗೆ ಹೇಗೆ ನೆರವಾದಂತಾಯಿತು? ಎಂದು ಕೇಳಿದರು. ಹಾಲು ಉತ್ಪಾದನೆಯಿಂದ ಜೀವನ ಮಾಡುವ ಲಕ್ಷಾಂತರ ಕುಟುಂಬಗಳು ಕರ್ನಾಟಕದಲ್ಲಿವೆ. ಅವರಿಗೆ ಸಹಾಯ ಮಾಡಬೇಕೆಂಬ ದೃಷ್ಟಿಯಿಂದ ನಾವು ಪ್ರೋತ್ಸಾಹಧನವನ್ನು 5 ರೂಪಾಯಿಗೆ ಹೆಚ್ಚಿಸಿದ್ದೆವು ಎಂದು ವಿವರಿಸಿದರು. ಹಾಲು ಉತ್ಪಾದಕರಿಗೆ ದೊಡ್ಡ ಹೊಡೆತ ಇದು. ಇದನ್ನು ಬದಲಿಸಿ ಹಿಂದಿನಂತೆ ಪ್ರೋತ್ಸಾಹಧನ ಕೊಡಲು ಆಗ್ರಹಿಸಿದರು.

ನೂತನ ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರು ಒಂದು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಈ ಹಿಂದೆ ಜಾರಿ ಮಾಡಿದ್ದ ಗೋಹತ್ಯೆ ನಿಷೇಧ ಕಾನೂನು ಕುರಿತು ಚರ್ಚಿಸಿ ಅದನ್ನು ಹಿಂಪಡೆಯುತ್ತೇವೆ ಮತ್ತೆ ಗೋಹತ್ಯೆಗೆ ಅವಕಾಶ ಕೊಡುತ್ತೇವೆ. ನಮ್ಮ ಮನೆಯಲ್ಲೇ ವಯಸ್ಸಾದ ಹಸುಗಳಿದ್ದವು. ಅವುಗಳನ್ನು ಹೇಗೆ ರಕ್ಷಿಸುವುದು? ಸಾಕಲು ಹೇಗೆ ಸಾಧ್ಯ? ನಮಗೆ ನಷ್ಟ ಆಗುತ್ತದೆ ಎಂದಿದ್ದಾರೆ. ಅವುಗಳು ಸತ್ತಾಗ ಹೂಳಲೂ ಕಷ್ಟವಾಗುತ್ತಿದೆ. ಆದ್ದರಿಂದ ವಯಸ್ಸಾದ ಗೋವುಗಳನ್ನು ವಧೆ ಮಾಡಲು ಅವಕಾಶ ಕೊಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ಹರಿಹಾಯ್ದರು.

ಗೋ ಹತ್ಯೆ ನಿಷೇಧವನ್ನು ವಾಪಸ್​ ಪಡೆದರೆ ದೊಡ್ಡ ಹೋರಾಟ : ಹಸುಗಳನ್ನು ನಮ್ಮ ದೇಶದಲ್ಲಿ ಪವಿತ್ರ ಭಾವನೆಯಿಂದ ಪೂಜೆ ಮಾಡುತ್ತಾರೆ. ಮಹಾತ್ಮ ಗಾಂಧಿಯವರು ಕೂಡ ಗೋಹತ್ಯೆ ಮಾಡಬಾರದು ಎಂದಿದ್ದರು. 1948 ಮತ್ತು 1964ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದಿತ್ತು. ಇದರಲ್ಲಿ ಎಮ್ಮೆ ಮತ್ತು ಕೋಣಗಳನ್ನು ವಧಿಸಬಹುದೆಂದು ಇದೆ. 1978ರ ಕಾನೂನಿನಲ್ಲಿ ಎತ್ತು ಮತ್ತು ಹೋರಿಗಳನ್ನು, 2020ರ ನಮ್ಮ ಸರ್ಕಾರ ತಂದ ಕಾನೂನಿನಲ್ಲಿ ಗೋಹತ್ಯೆ ಮತ್ತು ಎತ್ತು/ಹೋರಿಗಳನ್ನು ಹತ್ಯೆ ಮಾಡಬಾರದು ಎಂದು ಹೇಳಿವೆ. ಆದರೆ, ಸಿದ್ದರಾಮಯ್ಯ ಸರ್ಕಾರವು ಗೋಹತ್ಯೆಗೆ ಅವಕಾಶ ಮಾಡಿಕೊಡಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ರದ್ದತಿ ಪ್ರಸ್ತಾಪವನ್ನು ಬಿಜೆಪಿ ಖಂಡಿಸುತ್ತದೆ. ಗೋಹತ್ಯೆ ನಿಷೇಧ ಕಾನೂನು ಹಿಂಪಡೆದರೆ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ : ಗೋವುಗಳನ್ನು ಏಕೆ ಕಡಿಯಬಾರದು; ಪಶು ಸಂಗೋಪನಾ ಸಚಿವರ ಹೇಳಿಕೆ ಖಂಡನೀಯ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.