ETV Bharat / state

ನಾನೂ ಕೋರ್ಟ್ ಮೊರೆ ಹೋಗುತ್ತೇನೆ: ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ

author img

By

Published : May 14, 2023, 2:28 PM IST

ಸೌಮ್ಯ ರೆಡ್ಡಿ ಕೋರ್ಟ್​ಗೆ ಹೋದರೆ ನಾನೂ ಕೋರ್ಟ್ ಮೊರೆ ಹೋಗುತ್ತೇನೆ ಎಂದು ಜಯನಗರ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಹೇಳಿದ್ಧಾರೆ.

CK Ramamurthy and Sowmya Reddy
ಸಿ.ಕೆ ರಾಮಮೂರ್ತಿ ಹಾಗೂ ಸೌಮ್ಯ ರೆಡ್ಡಿ

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶದ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ನ್ಯಾಯಾಲಯಕ್ಕೆ ಹೋದರೆ ನಾನೂ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ವಿಜಯಿಯಾದ ಬಿಜೆಪಿ ಅಭ್ಯರ್ಥಿ ಸಿ.ಕೆ ರಾಮಮೂರ್ತಿ ಹೇಳಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರೋಮಾಂಚಕ ಫಲಿತಾಂಶ ಬಂದಿದೆ. 16 ಮತಗಳ ಅಂತರದಿಂದ ಜನ ಗೆಲ್ಲಿಸಿದ್ದಾರೆ. ಸಮಸ್ತ ನಾಗರಿಕರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಇವಿಎಂ ಮತಗಳ ಎಣಿಕೆ ನಂತರ ಪೋಸ್ಟಲ್ ಬ್ಯಾಲೆಟ್ ಮರು ಎಣಿಕೆ ಮಾಡುವಂತೆ ನಾನು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಮರು ಮತ ಎಣಿಕೆ ಮಾಡಿದರು. ಸೌಮ್ಯ ರೆಡ್ಡಿ ಅವರು ಮತ್ತೆ ಅರ್ಜಿ ಕೊಟ್ಟರು. ಅದರಲ್ಲಿ ನಾನು ಗೆದ್ದಿದ್ದೇನೆ. ಆದರೂ ರಾಮಲಿಂಗಾ ರೆಡ್ಡಿ ಸೇರಿದಂತೆ ಎಲ್ಲರೂ ದೌರ್ಜನ್ಯ ಮಾಡಿದರು. ಹೊರಗೆ ಬೇರೆಯವರು ಗಲಾಟೆ ಮಾಡಿದರು. ಸಿಸಿ ಟಿವಿ, ಕ್ಯಾಮರಾ ಇದೆ. ರಾಮಲಿಂಗಾ ರೆಡ್ಡಿ ಮಧ್ಯಾಹ್ನ 3.30ಕ್ಕೆ ಬಂದರು. ಬಳಿಕ ಪೊಲೀಸರು ರಾಮಲಿಂಗಾರೆಡ್ಡಿ ಅವರನ್ನ ಹೊರಗೆ ಕಳಿಸಿದರು.

ಅಬ್ಸರ್ವರ್ ನಮಗೆ ಸರ್ಟಿಫಿಕೇಟ್ ನೀಡಿದರು. ಕಾಂಗ್ರೆಸ್ ಅವರು ಗೂಂಡಾ ವರ್ತನೆ ತೋರಿದ್ದಾರೆ. ಕೋರ್ಟಿಗೆ ಹೋಗಲಿ. ನಾನೂ ಕೋರ್ಟಿಗೆ ಹೋಗುತ್ತೇನೆ. ಪಕ್ಕದ ಕ್ಷೇತ್ರದ ಶಾಸಕರು ನಮ್ಮ ಮತಗಟ್ಟೆಗೆ ಬಂದು ಗಲಾಟೆ ಮಾಡಿದ್ದಾರೆ ಎಂದು ರಾಮಮೂರ್ತಿ ಆರೋಪಿಸಿದರು.

ಇದನ್ನೂ ಓದಿ: ಜಯನಗರ ಹೈಡ್ರಾಮಾಗೆ ತೆರೆ: ಸೌಮ್ಯರೆಡ್ಡಿಗೆ ಸೋಲು, ರಾಮಮೂರ್ತಿಗೆ 16 ಮತಗಳಿಂದ ಜಯ

ಘಟನೆಯ ವಿವರ: ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ 160 ಮತಗಳ ಅಂತರದ ಗೆಲುವು ಸಾಧಿಸಿದ ನಂತರ ಬಿಜೆಪಿ ತಕರಾರು ತೆಗೆದು ಅಂಚೆ ಮತಗಳ ಮರು ಪರಿಶೀಲನೆ ಮೂಲಕ ಬಿಜೆಪಿಗೆ ಮುನ್ನಡೆ ಸಿಕ್ಕಿತ್ತು. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದ್ದು, ಮತ ಎಣಿಕೆ ಕೇಂದ್ರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ 160 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ನಂತರ ಬಿಜೆಪಿ ಅಭ್ಯರ್ಥಿ ಸಿ ಕೆ ರಾಮಮೂರ್ತಿ ಅಂಚೆ ಮತಗಳ ಮರುಪರಿಶೀಲನೆಗೆ ಮನವಿ ಮಾಡಿದ್ದರು. ಬಿಜೆಪಿ ಅಭ್ಯರ್ಥಿ ಮನವಿಯಂತೆ ಎರಡು ಬಾರಿ ಅಂಚೆ ಮತಗಳ ಮರು ಪರಿಶೀಲನೆ ನಡೆಸಿದ ನಂತರ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಎನ್ನುವ ಮಾಹಿತಿ ಹೊರಬಿದ್ದಿದೆ. 17 ಮತಗಳಿಂದ ಸಿ ಕೆ ರಾಮಮೂರ್ತಿ ಮುನ್ನಡೆ ಎಂದು ಮಾಹಿತಿ ರವಾನಿಸಲಾಗಿತ್ತು.

ಇದರಿಂದಾಗಿ ಎಸ್ಎಸ್ಎಂಆರ್ವಿ ಕಾಲೇಜು ಬಳಿ ಗಲಾಟೆ ವಾತಾವರಣ ಸೃಷ್ಟಿಯಾಯಿತು. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿಕೊಂಡು ಗದ್ದಲವೆಬ್ಬಿಸಿದ್ದರು. ಅಕ್ರಮವಾಗಿ ಸಂಸದ ತೇಜಸ್ವಿ ಸೂರ್ಯ ಮತ ಎಣಿಕೆ ಕೇಂದ್ರಕ್ಕೆ ಬಂದು ಆರ್​​ಒ ಮತ್ತು ವೀಕ್ಷಕರ ಮೇಲೆ ಒತ್ತಡ ಹಾಕಿ ಮರು ಎಣಿಕೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: ಮೊದಲು ಕಾಂಗ್ರೆಸ್, ಈಗ ಬಿಜೆಪಿಗೆ ಮುನ್ನಡೆ.. ಜಯನಗರ ಕ್ಷೇತ್ರದಲ್ಲಿ ಗೊಂದಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.