ETV Bharat / state

ನಾಳೆ ಬಿಜೆಪಿ ಶಾಸಕಾಂಗ ಸಭೆ: ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಸಾಧ್ಯತೆ

author img

By ETV Bharat Karnataka Team

Published : Nov 16, 2023, 9:11 PM IST

ಬೆಂಗಳೂರಿನಲ್ಲಿ ನಾಳೆ ಸಂಜೆ ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ಬಿ ವೈ ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಚೊಚ್ಚಲ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಕೇಂದ್ರದಿಂದ ಆಗಮಿಸುವ ವೀಕ್ಷಕರ ಸಮ್ಮುಖದಲ್ಲಿ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ಕೂಡ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

bjp
ಬಿಜೆಪಿ ಪಕ್ಷ

ಬೆಂಗಳೂರು: ರಾಜ್ಯ ಬಿಜೆಪಿಗೆ ನೂತನ ಸಾರಥಿ ಆಯ್ಕೆಯಾಗಿರುವ ಬೆನ್ನಲ್ಲೆ ಪ್ರತಿಪಕ್ಷ ನಾಯಕರ ಆಯ್ಕೆ ಮುಹೂರ್ತ ನಿಗದಿಯಾಗಿದೆ. ನಾಳೆ ಸಂಜೆ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರದಿಂದ ಆಗಮಿಸಲಿರುವ ವೀಕ್ಷಕರ ಸಮ್ಮುಖದಲ್ಲಿ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ಕೂಡ ನಡೆಯಲಿದೆ.

ನಾಳೆ ಸಂಜೆ 6 ಗಂಟೆಗೆ ನಗರದ ಯುಬಿ ಸಿಟಿ ಪಕ್ಕದಲ್ಲಿರುವ ಐಟಿಸಿ ಗಾರ್ಡೇನಿಯಾ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ಬಿ.ವೈ ವಿಜಯೇಂದ್ರ ತಮ್ಮ ಅಧ್ಯಕ್ಷತೆಯಲ್ಲಿ ಚೊಚ್ಚಲ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಈ ಸಭೆಗೆ ಕೇಂದ್ರದಿಂದ ಇಬ್ಬರು ನಾಯಕರು ಹೈಕಮಾಂಡ್ ಪ್ರತಿನಿಧಿಗಳಾಗಿ ಆಗಮಿಸಲಿದ್ದಾರೆ.

ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಆರಂಭವಾಗುತ್ತಿದ್ದಂತೆ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಶಾಸಕಾಂಗ ಪಕ್ಷದ ಸಭೆ ಅಭಿನಂದನೆ ಸಲ್ಲಿಸಲಿದೆ. ನಂತರ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಶಾಸಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವ ಅಭಯ ನೀಡಿ ಶಾಸಕರ ಸಲಹೆ ಆಲಿಸಲಿದ್ದಾರೆ. ನಂತರ ನಿಕಟಪೂರ್ವ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಕೆ ಮಾಡಲಾಗುತ್ತದೆ.

ಇದಾದ ನಂತರ ಪ್ರತಿಪಕ್ಷ ನಾಯಕರ ಆಯ್ಕೆ ವಿಚಾರವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುತ್ತದೆ. ಈಗಾಗಲೇ ಹೈಕಮಾಂಡ್ ಹೆಸರನ್ನು ಅಂತಿಮಗೊಳಿಸಿದ್ದರೆ ನೇರವಾಗಿ ಆ ಹೆಸರನ್ನು ಹೈಕಮಾಂಡ್ ನ ಪ್ರತಿನಿಧಿಗಳು ಪ್ರಕಟಿಸಲಿದ್ದಾರೆ. ಅಭಿಪ್ರಾಯ ಸಂಗ್ರಹ ಮಾಡುವ ಸೂಚನೆ ಇದ್ದರೆ ಅಭಿಪ್ರಾಯ ಆಲಿಸುವ ಕೆಲಸವನ್ನು ಹೈಕಮಾಂಡ್​​​​ನ ವೀಕ್ಷಕರು ಮಾಡಲಿದ್ದಾರೆ. ಆದರೆ ಮತದಾನದಂತಹ ಪ್ರಕ್ರಿಯೆ ಇರುವುದಿಲ್ಲ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ಒಂದು ಹೈಕಮಾಂಡ್ ಕಳಿಸಿರುವ ಹೆಸರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಕಟಿಸುವುದು ಅಥವಾ ಎರಡನೆಯದ್ದಾಗಿ ಶಾಸಕರ ಅಭಿಪ್ರಾಯ ಆಲಿಸಿ ಹೈಕಮಾಂಡ್ ನಾಯಕರ ಜೊತೆ ಸಂಪರ್ಕ ಮಾಡಿ ಹೆಸರನ್ನು ಅಂತಿಮಗೊಳಿಸಿ ಶಾಸಕಾಂಗ ಪಕ್ಷದ ಸಭೆಯಲ್ಲೇ ಹೆಸರು ಪ್ರಕಟಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕರ ಸ್ಥಾನಕ್ಕೆ ಮಾಜಿ ಡಿಸಿಎಂ ಆರ್ ಅಶೋಕ್, ಡಾ.ಅಶ್ವತ್ಥನಾರಾಯಣ್, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಸುನೀಲ್ ಕುಮಾರ್,ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರೇಸ್​ನಲ್ಲಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಆರ್.ಅಶೋಕ್, ನಾನು ಕೂಡ ಪ್ರತಿಪಕ್ಷ ನಾಯಕನ ಸ್ಥಾನದ ಆಕಾಂಕ್ಷಿಯಾಗಿದ್ದೇನೆ, ರಾಜ್ಯಾಧ್ಯಕ್ಷ ಸ್ಥಾನ ಬೇಡ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಪರಿಗಣಿಸಿ ಎಂದು ಹೈಕಮಾಂಡ್ ಮನವಿ ಮಾಡಿದ್ದೆನು. ಅದರಂತೆ ನಾಳೆ ಪ್ರತಿಪಕ್ಷ ನಾಯಕರ ಆಯ್ಕೆಯಾಗಲಿದೆ, ನನಗೆ ಸಿಕ್ಕರೆ ಸಂತೋಷ, ಬೇರೆಯವರಿಗೆ ಸಿಕ್ಕರೂ ಸಹಕಾರ ನೀಡುತ್ತೇನೆ ನಾಳೆ ಹೆಸರು ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.

ಡಾ.ಅಶ್ವತ್ಥನಾರಾಯಣ್ ನೇರ ಪ್ರತಿಪಕ್ಷ ಸ್ಥಾನ ಕೇಳದಿದ್ದರೂ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಯಾವ ಸ್ಥಾನ ಸಿಕ್ಕರೂ ನಿಭಾಯಿಸಲು ಸಿದ್ದವಾಗಿ ಕುಳಿತಿದ್ದಾರೆ. ಈಗಾಗಲೇ ರಾಜ್ಯಾಧ್ಯಕ್ಷರ ಆಯ್ಕೆ ಮುಗಿದಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಕ್ಷ ನಾಯಕ ಸ್ಥಾನವನ್ನು ನೇರವಾಗಿ ಕೇಳದಿದ್ದರೂ ಪಕ್ಷ ನೀಡುವ ಯಾವುದೇ ಜವಾಬ್ದಾರಿ ನಿರ್ವಹಿಸುತ್ತೇನೆ. ಪ್ರತಿಪಕ್ಷ ನಾಯಕನ ಸ್ಥಾನ ನೀಡಿದರೂ ನಿರ್ವಹಿಸುವ ಅರ್ಹತೆ ನನಗಿದೆ ಎಂದು ತಮ್ಮ ಅಪೇಕ್ಷೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಇನ್ನುಳಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಳೆದ ಅಧಿವೇಶನದಲ್ಲಿಯೇ ಪ್ರತಿಪಕ್ಷ ನಾಯಕನ ರೀತಿಯಲ್ಲಿ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದರು, ಸದನದಲ್ಲಿ ಸಾಮರ್ಥ್ಯ ಪ್ರದರ್ಶಿಸಿ ಪ್ರತಿಪಕ್ಷ ನಾಯಕನ ಸ್ಥಾನದ ರೇಸ್​​​​ಗೆ ಬಂದಿದ್ದಾರೆ. ಹೈಕಮಾಂಡ್ ನಾಯಕರ ಮೇಲೆ ವಿಶ್ವಾಸ ವ್ಯಕ್ತಪಡಿಸಿ ಪ್ರತಿಪಕ್ಷ ನಾಯಕನ ಸ್ಥಾನದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ.

ಇವರ ಜೊತೆ ಮಾಜಿ ಸಚಿವ ಸುನೀಲ್ ಕುಮಾರ್ ಕೂಡ ರೇಸ್ ನಲ್ಲಿದ್ದಾರೆ. ಹಿಂದುಳಿದ ವರ್ಗದ ನಾಯಕ, ಉತ್ತಮ ವಾಗ್ಮಿಯೂ ಆಗಿರುವ ಸುನೀಲ್ ಕುಮಾರ್ ಯಾವ ಬಣದಲ್ಲಿಯೂ ಗುರುತಿಸಿಕೊಳ್ಳದೇ ಪಕ್ಷದ ಪರವಾಗಿ ದನಿ ಎತ್ತುತ್ತಾ ಬಂದಿದ್ದು, ಈ ಬಾರಿ ಪ್ರತಿಪಕ್ಷ ನಾಯಕನ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮುಂದುವರಿಸುವ ಚಿಂತನೆ ಆರಂಭದಲ್ಲಿ ಇತ್ತು. ಬೊಮ್ಮಾಯಿ ನೇತೃತ್ವದಲ್ಲಿ ಪಕ್ಷ ಉತ್ತಮ ಸಾಧನೆ ತೋರದ ಹಿನ್ನೆಲೆಯಲ್ಲಿ ಅವರು ಹೆಸರನ್ನು ಪರಿಗಣಿಸಲಿಲ್ಲ. ಆದರೂ ಬೊಮ್ಮಾಯಿ ಅವಕಾಶ ಸಿಕ್ಕರೆ ನಿಭಾಯಿಸಲು ಸಿದ್ದರಾಗಿ ಕುಳಿತಿದ್ದಾರೆ. ಆದರೆ ಬಹಿರಂಗವಾಗಿ ಅಪೇಕ್ಷೆ ವ್ಯಕ್ತಪಡಿಸಲು ಸಿದ್ದರಿಲ್ಲ.

ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡಲಾಗಿದೆ. ಪ್ರತಿಪಕ್ಷ ನಾಯಕನ ಸ್ಥಾನವನ್ನು ಮತ್ತೆ ಲಿಂಗಾಯತ ಸಮುದಾಯಕ್ಕೆ ನೀಡುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಸವರಾಜ ಬೊಮ್ಮಾಯಿ ಅವರಿಬ್ಬರಿಗೂ ಈಗಾಗಲೇ ತಮಗೆ ಅವಕಾಶ ಸಿಗುವುದಿಲ್ಲ ಎನ್ನುವ ಮಾಹಿತಿ ಪರೋಕ್ಷವಾಗಿ ತಿಳಿದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಜಾತಿ ಸಮೀಕರಣದ ಆಧಾರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಲು ನಿರ್ಧರಿಸಿದ್ದರೆ ಆರ್.ಅಶೋಕ್ ಹಾಗೂ ಅಶ್ವತ್ಥನಾರಾಯಣ್ ಹೆಸರು ಚರ್ಚೆಗೆ ಬರಲಿವೆ. ಇಬ್ಬರೂ ಡಿಸಿಎಂಗಳಾಗಿ ಕೆಲಸ ಮಾಡಿದ್ದಾರೆ. ಆದರೆ ಅಶೋಕ್ ಬೆಂಗಳೂರಿನಲ್ಲಿ ಹೆಚ್ಚು ಹಿಡಿತ ಹೊಂದಿದ್ದಾರೆ. ಅಲ್ಲದೇ ಯಡಿಯೂರಪ್ಪ ಬೆಂಬಲ ಕೂಡ ಅಶೋಕ್​​​ಗೆ ಇದೆ. ಅಶೋಕ್​ಗೆ ಅವಕಾಶ ನೀಡಿದರೆ ರಾಜ್ಯಾಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರ ನಡುವೆ ಸಮನ್ವಯತೆ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಅಶೋಕ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಹಾಗಂತ ಅಶ್ವತ್ಥನಾರಾಯಣ್ ಅವರನ್ನು ಕಡೆಗಣಿಸಲೂ ಸಾಧ್ಯವಿಲ್ಲ. ಡಿಸಿಎಂ ಡಿ ಕೆ ಶಿವಕುಮಾರ್ ಗೆ ಟಕ್ಕರ್ ಕೊಡುತ್ತಲೇ ಬಂದಿರುವ ಅಶ್ವತ್ಥನಾರಾಯಣ್​​​ಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ ಎನ್ನುವುದು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

ಒಂದು ವೇಳೆ ಲಿಂಗಾಯತ, ಒಕ್ಕಲಿಗ ಸಮುದಾಯದ ಬದಲು ಹಿಂದುಳಿದ ಸಮುದಾಯಕ್ಕೆ ಅವಕಾಶ ನೀಡಲು ನಿರ್ಧರಿಸಿದರೆ ಮಾಜಿ ಸಚಿವ ಸುನೀಲ್ ಕುಮಾರ್​ಗೆ ಅವಕಾಶ ಸಿಗಲಿದೆ. ಈಗಾಗಲೇ ಸದನದಲ್ಲಿ ತಮ್ಮ ವಾಕ್ ಚಾತುರ್ಯ, ಕಾಂಗ್ರೆಸ್ ಅನ್ನು ಕಟ್ಟಿಹಾಕುವ ಸಾಮರ್ಥ್ಯ ತೋರಿಸಿರುವ ಹಿನ್ನೆಲೆ ಅನಾಯಾಸವಾಗಿ ಸುನೀಲ್ ಕುಮಾರ್​​​​ಗೆ ಅವಕಾಶ ಒದಗಿಬರಲಿದೆ ಎನ್ನಲಾಗಿದೆ. ಆದರೂ ಹೈಕಮಾಂಡ್ ಜಾತಿ ಲೆಕ್ಕಾಚಾರ ಬಿಟ್ಟು ತನ್ನದೇ ಆದ ರೀತಿ ಅಚ್ಚರಿ ಆಯ್ಕೆ ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಇನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರ ಸ್ಥಾನಕ್ಕೂ ಹೆಸರನ್ನು ಪ್ರಕಟಿಸಲಾಗುತ್ತದೆ. ಒಮ್ಮೆ ಪ್ರತಿಪಕ್ಷ ನಾಯಕರಾಗಿ ಸಭಾ ನಾಯಕರಾಗಿ ಕೋಟಾ ಶ್ರೀನಿವಾಸ ಪೂಜಾರಿ ಕೆಲಸ ಮಾಡಿರುವ ಹಿನ್ನೆಲೆ ಈ ಬಾರಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ. ಆದರೆ ಇಲ್ಲಿ ಅಷ್ಟಾಗಿ ರಾಜಕೀಯ ಲೆಕ್ಕಾಚಾರ ಹಾಕುವುದಿಲ್ಲ, ಪಕ್ಷದ ಮೂಲಗಳ ಪ್ರಕಾರ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅಥವಾ ಮಹಿಳೆಗೆ ಅವಕಾಶ ನೀಡಲು ನಿರ್ಧರಿಸಿದರೆ ತೇಜಸ್ವಿನಿಗೌಡ ಅವರಿಗೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಆದರೂ ಇಲ್ಲಿಯೂ ಅಚ್ಚರಿ ಆಯ್ಕೆ ತಳ್ಳಿಹಾಕುವಂತಿಲ್ಲ.

ನಾಳೆ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸುವಂತೆ ಪಕ್ಷದ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಆಹ್ವಾನ ಕಳಿಸಿದ್ದು, ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಇನ್ನು ಹೈಕಮಾಂಡ್ ನ ವೀಕ್ಷಕರಾಗಿ ಯಾರು ಬರುತ್ತಾರೆ ಎನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ, ಪಂಚ ರಾಜ್ಯಗಳ ಚುನಾವಣಾ ಕರ್ತವ್ಯದಲ್ಲಿ ಬಹುತೇಕ ನಾಯಕರು ಬ್ಯುಸಿ ಇರುವ ಹಿನ್ನೆಲೆ ಇನ್ನು ಹೆಸರನ್ನು ಕಳಿಸಿಕೊಟ್ಟಿಲ್ಲ. ಇಂದು ತಡರಾತ್ರಿ ಅಥವಾ ನಾಳೆ ಬೆಳಗ್ಗೆ ವೀಕ್ಷಕರಾಗಿ ಬರುವ ಹೈಕಮಾಂಡ್ ಪ್ರತಿನಿಧಿಗಳ ಹೆಸರು ಬಿಜೆಪಿ ರಾಜ್ಯ ಘಟಕಕ್ಕೆ ತಲುಪಲಿದೆ ಎನ್ನಲಾಗಿದೆ.

ಇದನ್ನೂಓದಿ:ಯತೀಂದ್ರ ಸಿದ್ದರಾಮಯ್ಯ ವೈರಲ್ ವಿಡಿಯೋ ನೋಡಿಲ್ಲ, ಕೇಳಿಲ್ಲ: ಸಚಿವ ಡಾ.ಎಚ್ ಸಿ.ಮಹಾದೇವಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.