ETV Bharat / state

ನಾಳೆ ರಾಷ್ಟ್ರಪತಿ ಚುನಾವಣೆ.. ಮತದಾನದ ತರಬೇತಿ ಪಡೆದ ಬಿಜೆಪಿ ನಾಯಕರು

author img

By

Published : Jul 17, 2022, 6:06 PM IST

ಸೋಮವಾರ ರಾಷ್ಟ್ರಪತಿ ಚುನಾವಣೆಯ ಮತದಾನ- ಇಂದು ಬಿಜೆಪಿ ನಾಯಕರಿಗೆ ಮತದಾನದ ತರಬೇತಿ- ಶಾಂಗ್ರಿಲಾ ಹೋಟೆಲ್​ನಲ್ಲಿ ನಡೆದ ಅಣಕು ಮತದಾನ ಪ್ರಕ್ರಿಯೆ

BJP leaders trained to vote for presidential election
ರಾಷ್ಟ್ರಪತಿ ಚುನಾವಣೆ: ಮತದಾನದ ತರಬೇತಿ ಪಡೆದ ಬಿಜೆಪಿ ನಾಯಕರು

ಬೆಂಗಳೂರು: ನಾಳೆ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗಾಗಿ ಬಿಜೆಪಿ ಶಾಸಕರಿಗೆ ಮತದಾನದ ತರಬೇತಿ ನೀಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಶಾಸಕರಿಗೆ ದೆಹಲಿಯಲ್ಲಿ ತರಬೇತಿ ಪಡೆದು ಬಂದ ನಾಯಕರು, ಅಣಕು ಮತದಾನದ ಮೂಲಕ ಮತ ಚಲಾಯಿಸುವ ವಿಧಾನವನ್ನು ವಿವರಿಸಿದರು.

ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ಶಾಂಗ್ರಿಲಾ ಹೋಟೆಲ್​ಗೆ ಸಿಎಂ ಬಸವರಾಜ ಬೊಮ್ಮಾಯಿ‌ ಭೇಟಿ ನೀಡಿದರು. ಶಾಸಕರೊಂದಿಗಿನ ಭೋಜನ ಕೂಟದಲ್ಲಿ ಪಾಲ್ಗೊಂಡ ಸಿಎಂ ಬೊಮ್ಮಾಯಿ, ಬಳಿಕ ಚುನಾವಣೆ ಮತದಾನ ತರಬೇತಿ ಪ್ರಕ್ರಿಯೆ ಕುರಿತ ಸಭೆ ನಡೆಸಿದರು. ದೆಹಲಿಯಿಂದ ರಾಷ್ಟ್ರಪತಿ ಚುನಾವಣೆಗೆ ಮತದಾನದ ತರಬೇತಿ ಪಡೆದು ಬಂದಿರುವ ಬಿಜೆಪಿ ರಾಷ್ಟ್ರೀಯ‌ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಚಿವ ಸುನೀಲ್ ಕುಮಾರ್, ಬಿಜೆಪಿ ಮುಖ್ಯ ಸಚೇತಕ ಸತೀಶ್ ರೆಡ್ಡಿ, ಶಾಸಕ ಅಭಯ್ ಪಾಟೀಲ್ ಉಳಿದವರಿಗೆ ಮತದಾನ ಪ್ರಕ್ರಿಯೆ ಕುರಿತು ವಿವರಣೆ ನೀಡಿದರು. ಸಂಸದರು, ರಾಜ್ಯಸಭೆ ಸದಸ್ಯರಿಂದ ಅಣಕು ಮತದಾನ ಮಾಡಿಸುವ ಮೂಲಕ‌ ಅಭ್ಯಾಸ ಮಾಡಿಸಿದರು.

BJP leaders trained to vote for presidential election
ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ದ್ರೌಪದಿ ಮುರ್ಮು ಅವರೊಂದಿಗೆ ಬಿಜೆಪಿ ನಾಯಕರು

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಬಹುತೇಕ ಸಚಿವರು, ಶಾಸಕರು ಅತಿವೃಷ್ಠಿ ಪರಿಶೀಲಿಸಿ ಬಂದಿದ್ದಾರೆ. ಇದರ ಬಗ್ಗೆ ಯಾರೂ ಕೂಡ ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಅಗತ್ಯ ಸೂಚನೆ ನೀಡಿದ್ದಾರೆ. ಮಳೆ ಹಾನಿ ಸಂತ್ರಸ್ತರಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡುತ್ತಿದ್ದೇವೆ. ಕ್ಷೇತ್ರದಲ್ಲಿ ಜನರಿಗೆ ಸಮಸ್ಯೆ ಆಗದ ರೀತಿ ಕ್ರಮ ವಹಿಸಿದ್ದಾರೆ ಎಂದು ಶಾಸಕರ ಹೋಟೆಲ್ ವಾಸ್ತವ್ಯವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ವಿಧಾನಸೌಧದಲ್ಲಿ ಸಕಲ ಸಿದ್ಧತೆ: ರಾಜ್ಯದ ಶಾಸಕರಿಂದ ನಾಳೆ ಮತದಾನ

ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷ ಬಣದ ಅಭ್ಯರ್ಥಿ ಯಶವಂತ ಸಿನ್ಹಾ ನಡುವಿನ ರಾಷ್ಟ್ರಪತಿ ಚುನಾವಣೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 106 ಮತಕೇಂದ್ರದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ರಾಜ್ಯದ ಎಲ್ಲಾ ವಿಧಾನಸಭೆ ಸದಸ್ಯರು ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ ನಾಳೆ ವಿಧಾನಸೌಧದಲ್ಲಿ ಹಕ್ಕು ಚಲಾಯಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.