ETV Bharat / state

'ಸಾಲಭಾಗ್ಯದ ರೂವಾರಿ' ಸಿದ್ದರಾಮಯ್ಯ ಆರ್ಥಿಕತೆಗೆ ನೊಬೆಲ್ ಪ್ರಶಸ್ತಿ ನೀಡಬೇಕು : ಬಿಜೆಪಿ ವ್ಯಂಗ್ಯ

author img

By

Published : Oct 23, 2021, 3:47 PM IST

siddaramaiah
ಸಿದ್ದರಾಮಯ್ಯ

ರಾಜ್ಯ ಏಕೀಕರಣಗೊಂಡ ಬಳಿಕ 2013ರ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಸಾಲ ಎತ್ತುವಳಿ 1 ಲಕ್ಷ ಕೋಟಿ ಮಾತ್ರ.‌ ಆದರೆ, ಸಿದ್ದರಾಮಯ್ಯ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಮೊತ್ತ 3 ಲಕ್ಷ ಕೋಟಿ ತಲುಪಿತು. ಈಗ ಹೇಳಿ ರಾಜ್ಯಕ್ಕೆ ಸಾಲಭಾಗ್ಯ ನೀಡಿದ್ದು ಯಾರು ಸಿದ್ದರಾಮಯ್ಯ? ನಿಮ್ಮ ಆರ್ಥಿಕತೆಗೆ ನೊಬೆಲ್ ಪ್ರಶಸ್ತಿಯೇ ಕೊಡಬೇಕು ಎಂದು ಬಿಜೆಪಿ ಕುಹಕವಾಡಿದೆ..

ಬೆಂಗಳೂರು : ಮುಖ್ಯಮಂತ್ರಿ ಆಗಿ ರಾಜ್ಯಕ್ಕೆ ಸಾಲಭಾಗ್ಯ ನೀಡಿದ್ದ ಸಿದ್ದರಾಮಯ್ಯನವರ ಆರ್ಥಿಕತೆಗೆ ನೊಬೆಲ್ ಪ್ರಶಸ್ತಿಯನ್ನ ನೀಡಬೇಕು ಎಂದು ಪ್ರತಿಪಕ್ಷ ನಾಯಕನ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

ಇನ್ನೆಷ್ಟು ದಿನ ಸಂತೆ ಭಾಷಣ ಹೊಡೆಯುತ್ತೀರಿ ಸಿದ್ದರಾಮಯ್ಯ? ನೀವು ಘೋಷಣೆ ಮಾಡಿದ 15 ಲಕ್ಷ ಮನೆ ಎಲ್ಲಿದೆ? ಭೂಮಿಯ ಮೇಲಿದೆಯೋ, ಮಂಗಳ ಗ್ರಹದಲ್ಲಿದೆಯೋ? ಕೇವಲ ಘೋಷಣೆ ಮಾಡಿದ ಮಾತ್ರಕ್ಕೆ ಮನೆ ನಿರ್ಮಾಣವಾಗುತ್ತದೆಯೇ? ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯರಿಗೆ ಪಿಹೆಚ್​ಡಿ ನೀಡಬೇಕು : ಅಧಿಕಾರಾವಧಿಯ ಕೊನೆಯಲ್ಲಿ 'ಮುಖ್ಯಮಂತ್ರಿ 1 ಲಕ್ಷ ಮನೆ' ಯೋಜನೆಯನ್ನು ಬೆಂಗಳೂರು ನಗರದ ಬಡವರಿಗೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಆದರೆ, ಬಜೆಟ್‌ನಲ್ಲಿ ಸೂಕ್ತ ಅನುದಾನ ಕಾಯ್ದಿರಿಸಲಿಲ್ಲ. ಮನೆ ಕಟ್ಟುವುದಕ್ಕೆ ಆಯ್ದುಕೊಂಡ ಜಾಗವೇ ವಿವಾದಗ್ರಸ್ಥವಾಗಿತ್ತು. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯಗೆ ಪಿಹೆಚ್‌ಡಿ ನೀಡಬಹುದು ಎಂದು ಲೇವಡಿ ಮಾಡಿದೆ.

ಅಂಗೈಯಲ್ಲಿ ಆಕಾಶ ತೋರಿಸುವ ಪ್ರವೀಣ : ಕೃಷ್ಣಾ ಕಣಿವೆ ನೀರಾವರಿ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ಅನುದಾನ ನೀಡುತ್ತೇನೆಂದು 'ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆ'ಗೆ ಪಾದಯಾತ್ರೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದಿರಿ. ಆದರೆ, ಕೊಟ್ಟಿದ್ದು ಬಿಡಿಗಾಸು. ಅಂಗೈಯಲ್ಲಿ ಆಕಾಶ ತೋರಿಸುವ ವಿಚಾರದಲ್ಲಿ ನೀವು ಪ್ರವೀಣರಲ್ಲವೇ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದೆ?.

ಸಾಲವೇ ಸಿದ್ದು ಸಾಧನೆ : ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ ಎಂಬ ಮಜಾವಾದಿ ರಾಜಕಾರಣಿಗಳ ಪಟ್ಟಿಯಲ್ಲಿ ಮೊದಲ ಶ್ರೇಣಿಯಲ್ಲಿ ನಿಲ್ಲುವವರು ಸಿದ್ದರಾಮಯ್ಯ. ತಾವು ಮುಖ್ಯಮಂತ್ರಿಯಾಗಿದ್ದಾಗ ಕೇವಲ 4 ವರ್ಷದ ಅವಧಿಯಲ್ಲಿ ಸಾಲ ಎತ್ತುವಳಿಯನ್ನು 4 ಲಕ್ಷ ಕೋಟಿಗೆ ತಲುಪಿಸಿದ್ದೇ ಸಿದ್ದು ಸಾಧನೆ ಎಂದು ಟೀಕಿಸಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮಾಡಿದ ಅತಿದೊಡ್ಡ ಸಾಧನೆ ಎಂದರೆ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೂ 44 ಸಾವಿರಕ್ಕೂ ಅಧಿಕ ಸಾಲದ ಹೊರೆ ಹೇರಿದ್ದು.

ಅಕ್ಕಿ ಕೊಟ್ಟೆ, ಎಣ್ಣೆ ಕೊಟ್ಟೆ ಎಂದು ರಾಜ್ಯದ ಜನತೆಯ ಮೇಲೆ ಮಂಕು ಬೂದಿ ಎರಚುತ್ತಾ ಎಲ್ಲರನ್ನೂ ಸಾಲದ ಸುಳಿಗೆ ದೂಡಿಬಿಟ್ಟರು. ವಿತ್ತೀಯ ಶಿಸ್ತನ್ನೇ ಹದೆಗೆಡಿಸಿದರು ಎಂದು ಬಿಜೆಪಿ ಆರೋಪಿಸಿದೆ.

ನೊಬೆಲ್​ ಪ್ರಶಸ್ತಿ ನೀಡಬೇಕು : ರಾಜ್ಯ ಏಕೀಕರಣಗೊಂಡ ಬಳಿಕ 2013ರ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಸಾಲ ಎತ್ತುವಳಿ 1 ಲಕ್ಷ ಕೋಟಿ ಮಾತ್ರ.‌ ಆದರೆ, ಸಿದ್ದರಾಮಯ್ಯ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಮೊತ್ತ 3 ಲಕ್ಷ ಕೋಟಿ ತಲುಪಿತು. ಈಗ ಹೇಳಿ ರಾಜ್ಯಕ್ಕೆ ಸಾಲಭಾಗ್ಯ ನೀಡಿದ್ದು ಯಾರು ಸಿದ್ದರಾಮಯ್ಯ? ನಿಮ್ಮ ಆರ್ಥಿಕತೆಗೆ ನೊಬೆಲ್ ಪ್ರಶಸ್ತಿಯೇ ಕೊಡಬೇಕು ಎಂದು ಬಿಜೆಪಿ ಕುಹಕವಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.