ETV Bharat / state

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಿಯೋಗದಿಂದ ಮುಖ್ಯ ಚುನಾವಣಾಧಿಕಾರಿಗೆ ದೂರು

author img

By

Published : Apr 23, 2023, 10:29 PM IST

Updated : Apr 24, 2023, 9:42 AM IST

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಬಿಜೆಪಿ ನಿಯೋಗ
ಬಿಜೆಪಿ ನಿಯೋಗ

ಬೆಂಗಳೂರು : ಲಿಂಗಾಯತ ಸಮುದಾಯವನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಿಎಂ, ವರುಣಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ಭಾನುವಾರ ದೂರು ನೀಡಿದೆ.

ಲಿಂಗಾಯತ ಸಿಎಂ ಕುರಿತಾದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಲಿಂಗಾಯತ ಯುವ ವೇದಿಕೆಯ ಕಾನೂನು ಘಟಕ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದು, ಸಿದ್ದರಾಮಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ರಾಜಕೀಯ ತಿರುವು ಪಡೆಯುತ್ತಿರುವ ಸಿದ್ದರಾಮಯ್ಯ ಹೇಳಿಕೆ: ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಲಿಂಗಾಯತ ಸಿಎಂ ವಿರುದ್ಧ ಹೇಳಿಕೆ ನೀಡಿದ್ದರು. ಈ ಸಂಬಂಧ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಕ್ಷಮೆ ಯಾಚಿಸುವಂತೆ ಆಗ್ರಹಿಸುತ್ತಿದ್ದಾರೆ‌. ಇತ್ತ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾನು ಲಿಂಗಾಯತ ಸಮುದಾಯವನ್ನು ನಿಂದಿಸಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಚುನಾವಣೆ ಸಂದರ್ಭ ಸಿದ್ದರಾಮಯ್ಯರ ಈ ಹೇಳಿಕೆ ಇದೀಗ ರಾಜಕೀಯ ತಿರುವು ಪಡೆಯುತ್ತಿದೆ.

ಈ ಸಂಬಂಧ ಬಿಜೆಪಿ ಲಿಂಗಾಯತ ಯುವ ವೇದಿಕೆಯ ಕಾನೂನು ಘಟಕ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದು, ಸಿದ್ದರಾಮಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಲಿಂಗಾಯತ ಯುವ ವೇದಿಕೆಯ ಮುಖಂಡ ಬಸವರಾಜ್ ಮಾತನಾಡಿ, ಸಿದ್ದರಾಮಯ್ಯನವರು ವ್ಯಕ್ತಿಯನ್ನ ನಿಂದನೆ ಮಾಡಿಲ್ಲ. ಇಡೀ ಲಿಂಗಾಯತ ಸಮುದಾಯವನ್ನ ನಿಂದಿಸಿದ್ದಾರೆ. ಲಿಂಗಾಯತ ಸಿಎಂ ಭ್ರಷ್ಟಾಚಾರ ಮಾಡಿದ್ದಾರೆ ಅಂತ ಹೇಳಿಕೆ ನೀಡಿರೋದು ಸಮಂಜಸವಲ್ಲ. ನಾವು ಯಾವುದೇ ಪಕ್ಷದ ಪರವಾಗಿ ದೂರು ನೀಡಲು ಬಂದಿಲ್ಲ. ಇಲ್ಲಿ ಲಿಂಗಾಯತ ಸಮುದಾಯವನ್ನ ತೇಜೋವಧೆ ಮಾಡಿದ್ದಾರೆ. ಕೂಡಲೇ ಸಿದ್ದರಾಮಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರು ಯಾವುದೇ ನಿರ್ದಿಷ್ಟ ಸಮುದಾಯ, ಧರ್ಮವನ್ನು ನಿಂದಿಸುವ ಹಾಗಿಲ್ಲ ಎಂದು ಚುನಾವಣಾ ಆಯೋಗ ಮಾರ್ಗಸೂಚಿ ಹೊರಡಿಸಿದೆ. ಚುನಾವಣೆ ಇಲ್ಲದ ಸಮಯದಲ್ಲೂ ಆ ರೀತಿ ಟೀಕೆ ಮಾಡುವ ಹಾಗಿಲ್ಲ. ಆದರೆ, ''ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಏ. 22ರಂದು ಲಿಂಗಾಯತ ಸಿಎಂಗಳು ಭ್ರಷ್ಟರು ಎಂದಿದ್ದಾರೆ. ಇದು ಲಿಂಗಾಯತ ಸಮುದಾಯದ ವಿರುದ್ಧದ ದ್ವೇಷದ ಹೇಳಿಕೆಯಾಗಿದೆ'' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಲೋಕಾಯುಕ್ತ ರದ್ದುಪಡಿಸಿ ಎಸಿಬಿ ತಂದಿದ್ದರು : ಬಸವ ಜಯಂತಿ ಸಂದರ್ಭ ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯದ ವಿರುದ್ಧ ದ್ವೇಷದ ಹೇಳಿಕೆ ನೀಡಿದ್ದಾರೆ‌. ಇದು ತಪ್ಪು ಹೇಳಿಕೆಯಾಗಿದೆ. ಆ ಹೇಳಿಕೆ ಪ್ರತಿ ಲಿಂಗಾಯತ ಸಮುದಾಯದ ವ್ಯಕ್ತಿಯ ಭಾವನೆಗೆ ಹಾನಿ ಉಂಟಾಗಿದೆ. ಬೊಮ್ಮಾಯಿ‌ ಹಾಗೂ ಯಡಿಯೂರಪ್ಪ ರಾಜ್ಯಕ್ಕೆ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಸಿದ್ದರಾಮಯ್ಯ ಆಡಳಿತದಲ್ಲಿ ಲೋಕಾಯುಕ್ತ ರದ್ದುಪಡಿಸಿ ಎಸಿಬಿ ತಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಐಪಿಸಿ 153A ನಿಯಮದಡಿ ಅಪರಾಧವಾಗುತ್ತದೆ: ಕಾಂಗ್ರೆಸ್ ನಾಯಕರಿಗೆ ಮತಯಾಚನೆ ಮಾಡುವ ಅಧಿಕಾರ ಇದೆ. ಆದರೆ ಯಾವುದೇ ಸಮುದಾಯದ ಮಾನಹಾನಿ ಮಾಡುವ ಅಧಿಕಾರ ಇಲ್ಲ. ಅವರ ಹೇಳಿಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ. ಆ ಹೇಳಿಕೆ ದ್ವೇಷ, ಶತ್ರುತ್ವ, ಶಾಂತಿ ಹದಗೆಡಿಸುವ ಸಾಧ್ಯತೆ ಇದ್ದು, ಐಪಿಸಿ 153A ನಿಯಮದಡಿ ಅಪರಾಧವಾಗುತ್ತದೆ. ಹೀಗಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ : ಬಿಜೆಪಿಯೊಳಗೆ ಲಿಂಗಾಯತ ನಾಯಕರನ್ನು ಮುಗಿಸುವ ವ್ಯವಸ್ಥಿತ ಸಂಚು: ಸಿದ್ದರಾಮಯ್ಯ

Last Updated : Apr 24, 2023, 9:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.