ETV Bharat / state

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು: ಬೆಂಗಳೂರು ಹೊರವಲಯದ ರೆಸಾರ್ಟ್​ನಲ್ಲಿ ಅಭಿಪ್ರಾಯ ಸಂಗ್ರಹ ಸಭೆ

author img

By

Published : Apr 1, 2023, 12:39 PM IST

ಕಾಂಗ್ರೆಸ್, ಜೆಡಿಎಸ್​ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ 2ನೇ ಪಟ್ಟಿ ಬಿಡುಗಡೆಗೆ ಸಿದ್ಧಗೊಂಡೊದ್ದು, ಬಿಜೆಪಿ ಮಾತ್ರ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸುತ್ತಿದೆ.

Golden Palm Resort
ಗೋಲ್ಡನ್ ಪಾಮ್ ರೆಸಾರ್ಟ್​

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಆಯ್ಕೆಗಾಗಿ ಕಸರತ್ತು ಆರಂಭಿಸಿದ್ದು, ಇಂದು, ನಾಳೆ ಅಭ್ಯರ್ಥಿಗಳ ಆಯ್ಕೆಗಾಗಿ ರಾಜ್ಯ ಬಿಜೆಪಿ ನಾಯಕರು ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯ ಗೋಲ್ಡನ್ ಪಾಮ್ ರೆಸಾರ್ಟ್ ​ನಲ್ಲಿ ರಾಜ್ಯ ಬಿಜೆಪಿ ಅಭ್ಯರ್ಥಿ ಆಯ್ಕೆಗಾಗಿ ಮಹತ್ವದ ಸರಣಿ ಸಭೆ ನಡೆಸುತ್ತಿದೆ.‌ ಜಿಲ್ಲಾ ಕೋರ್ ಕಮಿಟಿ ಸದಸ್ಯರ ಜತೆ ರಾಜ್ಯ ಕೋರ್ ಕಮಿಟಿ‌ ಪ್ರಮುಖರ ಸಭೆ ನಡೆಸುತ್ತಿದೆ.

ಇಡೀ ದಿನ ಹಾಲಿ ಶಾಸಕರು ಹಾಗೂ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಬಿಜೆಪಿ ನಾಯಕರು ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಜಿಲ್ಲಾ ಕೋರ್ ಕಮಿಟಿಗಳ‌ ಸದಸ್ಯರಿಂದ‌ ಹಾಲಿಗಳು, ಸಂಭಾವ್ಯರ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಸಭೆಯಲ್ಲಿ ಬಿಜೆಪಿ ನಾಯಕರು, ಜಿಲ್ಲಾ ಕೋರ್ ಕಮಿಟಿ ಸದಸ್ಯರು ಪಾಲ್ಗೊಂಡಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹ ಸಭೆ ಆರಂಭವಾಗಿದ್ದು, ಇಂದು 20 ಜಿಲ್ಲೆಗಳ ಜಿಲ್ಲಾ ಕೋರ್ ಕಮಿಟಿ ಸದಸ್ಯರಿಂದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಅಭಿಪ್ರಾಯ ಹೇಳಲು ಪ್ರತೀ ಜಿಲ್ಲಾ ಕೋರ್ ಕಮಿಟಿಗೆ ತಲಾ ಅರ್ಧ ಗಂಟೆ ಸಮಯ ನಿಗದಿ ಪಡಿಸಲಾಗಿದೆ.

ಕ್ಷೇತ್ರದ ಆಕಾಂಕ್ಷಿಗಳು, ಅವರ ಸಾಮರ್ಥ್ಯವೇನು? ಎದುರಾಳಿ ಪಕ್ಷದ ಅಭ್ಯರ್ಥಿಯನ್ನು ಎದುರಿಸುವ ಸಾಮರ್ಥ್ಯವಿದೆಯಾ? ಎಂಬ ಬಗ್ಗೆ ಸದಸ್ಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಕಡೆ ಹೆಚ್ಚಿನ ಒಲವಿದೆ ಎಂಬ ಬಗ್ಗೆ ರಾಜ್ಯ ನಾಯಕರಿಗೆ ಜಿಲ್ಲಾ ಕೋರ್ ಕಮಿಟಿ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೆ ಗೆಲುವು ಸಾಧಿಸಬಹುದೆಂಬ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕ್ಷೇತ್ರದ ರಾಜಕೀಯ ಚಿತ್ರಣ ಬಗ್ಗೆಯೂ ರಾಜ್ಯ ಬಿಜೆಪಿ ನಾಯಕರು ಜಿಲ್ಲಾ ಕೋರ್ ಕಮಿಟಿ ಸದಸ್ಯರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಗೋಲ್ಡನ್ ಪಾಮ್ಸ್ ರೆಸಾರ್ಟ್ ಬಳಿ ಆಕಾಂಕ್ಷಿಗಳು ಹಾಗೂ ಹಾಲಿ ಶಾಸಕರ ಬೆಂಬಲಿಗರು ಜಮಾಯಿಸಿದ್ದಾರೆ. ಆ ಮೂಲಕ ತಮ್ಮ ನಾಯಕರ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಎರಡು ದಿನಗಳ ಕಾಲ ಈ ಅಭಿಪ್ರಾಯ ಸಂಗ್ರಹ ಸಭೆ ನಡೆಯಲಿದೆ. ಬಳಿಕ ಒಂದು ನಿರ್ಧಾರಕ್ಕೆ ಬರಲಿರುವ ಬಿಜೆಪಿ ನಾಯಕರು ಅಭ್ಯರ್ಥಿ ಆಯ್ಕೆಗಾಗಿ ಅಂತಿಮ ಪ್ರಕ್ರಿಯೆ ಆರಂಭಿಸಲಿದ್ದಾರೆ. ರಾಜ್ಯ ನಾಯಕರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಬಿಜೆಪಿ ಹೈ ಕಮಾಂಡ್​ಗೆ ಕಳುಹಿಸಿಕೊಡಲಿದ್ದಾರೆ.

ಬಹುತೇಕ ಕ್ಷೇತ್ರಗಳಲ್ಲಿ ಹಾಲಿ ಶಾಸಕರ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಅನುಮಾನ ಎಂಬ ಮುನ್ಸೂಚನೆ ನೀಡಿದ್ದಾರೆ. ಜಿಲ್ಲಾ ಕೋರ್ ಕಮಿಟಿ ಸದಸ್ಯರು ಅಭಿಪ್ರಾಯದ ಮೇಲೆ ರಾಜ್ಯ ನಾಯಕರು ಅಭ್ಯರ್ಥಿ ಆಯ್ಕೆ ಬಗ್ಗೆ ಒಂದು ನಿಲುವು ತಾಳಲಿದ್ದಾರೆ.

ಇದರ ಜೊತೆಗೆ ಬಿಜೆಪಿ ಈಗಾಗಲೇ ನಾಲ್ಕು ಸರ್ವೇಗಳನ್ನು ಮಾಡಿದೆ. ಕ್ಷೇತ್ರವಾರು ಸರ್ವೇ ಮಾಡಿರುವ ಬಿಜೆಪಿ ಹಾಲಿ ಶಾಸಕರು, ಆಕಾಂಕ್ಷಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ‌. ಇಂದು ಮತ್ತು ನಾಳೆ ನಡೆಯಲಿರುವ ಅಭ್ಯರ್ಥಿಗಳ ಆಯ್ಕೆಗಾಗಿನ ಅಭಿಪ್ರಾಯ ಸಂಗ್ರಹದ ಮಾಹಿತಿ ಹಾಗೂ ಸರ್ವೇಗಳ ವರದಿಯನ್ನು ಆಧರಿಸಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಿದೆ.

ಇದನ್ನೂ ಓದಿ: ನಮ್ಮ ಪಕ್ಷದ ಯಾವುದೇ ನಾಯಕರಿಗೆ ಯಾವ ಕ್ಷೇತ್ರ ಅನ್ನೋದು ತೀರ್ಮಾನವಾಗಿಲ್ಲ: ಲಕ್ಷ್ಮಣ ಸವದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.