ETV Bharat / state

ಸೆ. 26ರ ಬೆಂಗಳೂರು ಬಂದ್‌ಗೆ ಬಿಜೆಪಿ ಬೆಂಬಲ

author img

By ETV Bharat Karnataka Team

Published : Sep 24, 2023, 2:20 PM IST

ಬೆಂಗಳೂರಿನಲ್ಲಿ ಮಂಗಳವಾರ (ಸೆ. 26) ನಡೆಸಲು ಉದ್ದೇಶಿಸಿರುವ ಬಂದ್‌ಗೆ ಬಿಜೆಪಿ ಬೆಂಬಲ ನೀಡಿದೆ.

BJP
ಬಿಜೆಪಿ

ಬೆಂಗಳೂರು: ಕಾವೇರಿಗಾಗಿ ಸೆ. 26ರಂದು (ಮಂಗಳವಾರ) ಕರೆ ನೀಡಿರುವ 'ಬೆಂಗಳೂರು ಬಂದ್'ಗೆ ಬಿಜೆಪಿ ಸಂಪೂರ್ಣ ಬೆಂಬಲ ಘೋಷಿಸಿದೆ. ಹೋರಾಟಕ್ಕೆ ಕೈ ಜೋಡಿಸುವಂತೆ ಪಕ್ಷದ ಕಾರ್ಯಕರ್ತರಿಗೂ ಕರೆ ನೀಡಿದೆ. ಬಂದ್‌ಗೆ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳ ಜೊತೆ ರಾಜಕೀಯ ಪಕ್ಷದ ಬಲವೂ ಸಿಕ್ಕಿದಂತಾಗಿದೆ.

ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ಖಾಸಗಿ ನಿವಾಸ ಧವಳಗಿರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, "ಎಲ್ಲರೂ ಸೇರಿ ಬೆಂಗಳೂರು ಬಂದ್​ಗೆ ಕರೆ ಕೊಟ್ಟಿದ್ದಾರೆ. ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ" ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಹೇಳಿಕೆಗೆ ದನಿಗೂಡಿಸಿದ ಸಿ.ಟಿ.ರವಿ, "ಮಂಗಳವಾರದ ಬೆಂಗಳೂರು ಬಂದ್​ಗೆ ಬಿಜೆಪಿ ಬೆಂಬಲ ನೀಡಲಿದೆ. ನಮ್ಮ ನಾಯಕರಾದ ಯಡಿಯೂರಪ್ಪ ಅವರು ಸಹ ಈಗಾಗಲೇ ಬೆಂಬಲ ನೀಡುವ ಕುರಿತು ಹೇಳಿದ್ದಾರೆ. ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯುವ ಬಂದ್​ಗೆ ನಾವು ಬೆಂಬಲ ನೀಡುತ್ತೇವೆ. ಕುಡಿಯುವ ನೀರಿಗೆ, ರೈತರ ಹಿತ ದೃಷ್ಟಿಯಿಂದ ಹೋರಾಟ ಕೈಗೊಂಡಿದ್ದಾರೆ. ಹೀಗಾಗಿ ನಮ್ಮ ಕಾರ್ಯಕರ್ತರಿಗೆ ನಾವು ಕರೆ ನೀಡುತ್ತೇವೆ. ಬಂದ್​ಗೆ ಬಿಜೆಪಿ ಬೆಂಬಲ ಇರಲಿದೆ" ಎಂದರು.

ಇದನ್ನೂ ಓದಿ: Cauvery Water Dispute: ಕಾವೇರಿ ಹೋರಾಟದ ಜಾಗೃತಿ ಸಭೆ : ಸೆ.26ಕ್ಕೆ ಬೆಂಗಳೂರು ಬಂದ್‌ಗೆ ಕರೆ ನೀಡಿದ ಸರ್ವ ಸಂಘಟನೆ

ನಮ್ಮ ನೀರು ನಮ್ಮ ಹಕ್ಕು ಈಗ ಎಲ್ಲಿದೆ?: ಸಿದ್ದರಾಮಯ್ಯ, ಕಾಕಾ ಪಾಟೀಲ್ ನಿನಗೂ ಫ್ರೀ, ಮಹಾದೇವಪ್ಪ ನಿನಗೂ ಫ್ರೀ ಎಂದ ಹಾಗೆ ಈಗ ಸ್ಟಾಲಿನ್ ನಿನಗೂ ಫ್ರೀ, ರಾಜಾ ನಿನಗೂ ಫ್ರೀ ಎಂದು ನೀರು ಬಿಡ್ತಾ ಇದ್ದಾರೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು. ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದ್ದು ನೀವೆ ಅಲ್ಲವಾ?. ನಿಮ್ಮ ಜತೆ ಏಳು ಕೋಟಿ ಜನರು ಇದ್ದಾರೆ. ಆದರೂ ತಮಿಳುನಾಡು ಕೇಳುವ ಮೊದಲೇ ನೀರು ಬಿಟ್ಟಿದ್ದು ಯಾಕೆ?. ನೀವು ನೀರು ಬಿಟ್ಟಿದ್ದು ಸ್ಟಾಲಿನ್ ಓಲೈಸಿಕೊಳ್ಳಲು. ಅವರು ಜತೆ ಬರದೆ ಹೋದರೆ ರಾಜಕೀಯ ನಷ್ಟ ಎನ್ನುವ ಕಾರಣಕ್ಕೆ ಓಲೈಕೆ ಮಾಡಿದ್ದೀರಿ. ನಮ್ಮ ನೀರು ನಮ್ಮ ಹಕ್ಕು ಈಗ ಎಲ್ಲಿದೆ ಡಿ.ಕೆ.ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದರು.

ನಾನು ಸೋತಿರಬಹುದು. ಯಾಕೆ ಸೋತೆ ಎಂಬುವುದು ಕ್ಷೇತ್ರದ ಜನತೆಗೆ ಗೊತ್ತಿದೆ. ಸೋಲು ಶಾಶ್ವತ ಅಲ್ಲ ಎನ್ನುವುದೂ ಗೊತ್ತು. ಆದರೆ ಅಹಂಕಾರದ ಮಾತು ಬೇಡ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಿ.ಟಿ.ರವಿ ಟಾಂಗ್ ನೀಡಿದರು.

ಇಂದು ಅಕ್ರಮ ಗೋಮಾಂಸವನ್ನು ದೊಡ್ಡಬಳ್ಳಾಪುರ ಬಳಿ ಹಿಡಿದಿದ್ದಾರೆ. ಅಕ್ರಮ ಗೋಮಾಂಸ ಮಾರಾಟಕ್ಕೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಅಕ್ರಮ ಗೋಮಾಂಸ ಹಿಡಿದವರನ್ನೇ ನೀವು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತೀರಿ ಎಂದರೆ ನಿಮಗೆ ನಾಚಿಕೆ ಆಗಲ್ವಾ? ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕರ್ನಾಟಕ ಬಂದ್​ಗೆ ಸೋಮವಾರ ದಿನಾಂಕ ಘೋಷಣೆ: ವಾಟಾಳ್ ನಾಗರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.