ETV Bharat / state

ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಸಜ್ಜಾದ ಬಿಜೆಪಿ-ಜೆಡಿಎಸ್

author img

By ETV Bharat Karnataka Team

Published : Nov 28, 2023, 6:04 PM IST

Belagavi winter session: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯಲು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಿದ್ಧತೆ ನಡೆಸಿವೆ.

Etv Bharatbjp-and-jds-ready-to-raise-voice-against-congress-government-in-winter-session
ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಚಳಿ ಬಿಡಿಸಲು ಸಜ್ಜಾದ ಬಿಜೆಪಿ-ಜೆಡಿಎಸ್

ಬೆಂಗಳೂರು: ಈ ಬಾರಿ ಬೆಳಗಾವಿ ಸುವರ್ಣ ಸೌಧದಲ್ಲಿ ಡಿಸೆಂಬರ್ 4 ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನ ಬಾರಿ ಮಹತ್ವ ಪಡೆದುಕೊಂಡಿದೆ. ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್, ಜಂಟಿಯಾಗಿ ಕಾಂಗ್ರೆಸ್ ಸರ್ಕಾರವನ್ನು ಸದನದಲ್ಲಿ ಕಟ್ಟಿಹಾಕಲು ಸಜ್ಜಾಗಿವೆ. ಈ ಸಲ ಬೆಳಗಾವಿ ಅಧಿವೇಶನದ ಕಾವು ಹೆಚ್ಚಾಗುವ ನಿರೀಕ್ಷೆ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮೊನ್ನೆ ಬಿಡದಿಯ ಕೇತಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಈ ವೇಳೆ ಪ್ರಸ್ತುತ ರಾಜಕೀಯ ವಿದ್ಯಮಾನ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಹಾಗೂ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದರು. ಇನ್ನು ವಿಷಯಾಧಾರಿತವಾಗಿ ಆಡಳಿತ ಪಕ್ಷ ಕಾಂಗ್ರೆಸ್ ಅನ್ನು ಸದನದೊಳಗೆ ಕಟ್ಟಿಹಾಕಲು ಉಭಯ ನಾಯಕರು ತಮ್ಮ ತಮ್ಮ ಪಕ್ಷದ ಶಾಸಕರನ್ನು ಅಣಿಗೊಳಿಸಲು ಸನ್ನದ್ಧರಾಗಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನವೆಂದರೆ ಉತ್ತರಕರ್ನಾಟಕಕ್ಕೆ ಪ್ರಾತಿನಿಧ್ಯವೆಂದೇ ಬಿಂಬಿತವಾಗಿದೆ. ಈ ನಿಟ್ಟಿನಲ್ಲಿ ಮಿಕ್ಕೆಲ್ಲ ರಾಜಕೀಯ ಕಾರ್ಯಸೂಚಿಗಿಂತ ಅಭಿವೃದ್ಧಿ ಅಜೆಂಡಾಗಳು, ಜನರಿಗೆ ಇನ್ನೂ ಸರಿಯಾಗಿ ತಲುಪದ ಗ್ಯಾರಂಟಿ ಯೋಜನೆಗಳು, ವಿದ್ಯುತ್ ಸಮಸ್ಯೆ, ವರ್ಗಾವಣೆ ಮತ್ತಿತರ ವಿಚಾರಗಳ ಬಗ್ಗೆ ಸದನದೊಳಗೆ ಧ್ವನಿ ಎತ್ತಲು ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಉಭಯ ನಾಯಕರ ಮಧ್ಯೆ ಸಹಮತ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವುದು ಬಿಜೆಪಿಯ ಗುರಿಯಾಗಿದೆ. ದೆಹಲಿ ವರಿಷ್ಠರು ವಿಶೇಷ ಆಸಕ್ತಿ ವಹಿಸಿ, ಜೆಡಿಎಸ್ ಪಕ್ಷವನ್ನು ಎನ್​ಡಿಎ ತೆಕ್ಕೆಗೆ ಸೆಳೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಲೋಕಸಭೆ ಚುನಾವಣೆಗೆ ಮೈತ್ರಿ ಸೀಮಿತವಾಗಿಲ್ಲ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆಗೂಡಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಿತವಚನ ಬೋಧಿಸಿದ್ದಾರೆ. ಹೀಗಾಗಿ, ಉಭಯ ನಾಯಕರು ಬೆಳಗಾವಿ ಅಧಿವೇಶನಕ್ಕೆ ತಾಲೀಮು ನಡೆಸಿದ್ದಾರೆ.

ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಲಿವೆ. ಆಡಳಿತ ಪಕ್ಷದ ತಪ್ಪುಗಳನ್ನು ದಾಖಲೆ ಸಮೇತ ಎತ್ತಿ ಹಿಡಿಯುತ್ತೇವೆ. ಮೈತ್ರಿ ಸರ್ಕಾರದಲ್ಲಿ ಒಳ್ಳೆಯ ಆಡಳಿತ ನೀಡಿದ್ದು, ಜನ ಈಗಲೇ ಅಂತಹ ಸರ್ಕಾರ ಬಯಸುತ್ತಿದ್ದಾರೆ. 2028-29ರಲ್ಲಿ ಮತ್ತೆ ಅಂಥಹದ್ದೇ ಸರ್ಕಾರ ಕೊಡುವ ಪ್ರಯತ್ನ ಮಾಡುತ್ತೇವೆ. ದೇಶದ ಹಿತದೃಷ್ಟಿಯಿಂದ ಮುಂದಿನ ಅವಧಿಗೂ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಚರ್ಚಿಸಿದ್ದೇವೆ. ಕೇತ್ರ ಹಂಚಿಕೆ ಕುರಿತು ವರಿಷ್ಠರು ಚರ್ಚೆ ನಡೆಸುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದರು.

ಸೀಟು ಹಂಚಿಕೆ ಕುರಿತು ಬಿಜೆಪಿ ವರಿಷ್ಠರು ಮತ್ತು ಕುಮಾರಸ್ವಾಮಿ ದೆಹಲಿಯಲ್ಲಿ ಚರ್ಚಿಸಲಿದ್ದು, ಉಭಯ ಪಕ್ಷಗಳ ಗೆಲುವಿನ ಕಾರ್ಯತಂತ್ರವನ್ನು ಮಾತುಕತೆ ನಡೆಸಿ ತೀರ್ಮಾನ ಮಾಡುತ್ತೇವೆ. ದೇಶ, ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಒಂದಾಗಿ ಲೋಕಸಭೆ ಚುನಾವಣೆ ಎದುರಿಸಲಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಲು ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದರು.

ಅಧಿವೇಶನದಲ್ಲಿ ಮೈತ್ರಿ ಪಕ್ಷಗಳ ಅಸ್ತ್ರಗಳೇನು?: ವರ್ಗಾವಣೆ ದಂಧೆ, ರಾಜ್ಯದಲ್ಲಿ ಬರ ಪರಿಸ್ಥಿತಿ, ಸಿಎಂ ಪುತ್ರ ಯತೀಂದ್ರ ವಿಡಿಯೋ ಸಂಭಾಷಣೆಯ ವಿಚಾರ ಪ್ರಸ್ತಾಪ, ರಾಜ್ಯದ ಜನರಿಗೆ ಇನ್ನೂ ತಲುಪದ ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಉಳಿದ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿರುವ ಬಗ್ಗೆ ಸದನದಲ್ಲಿ ಪ್ರಸ್ತಾಪ ಸಾಧ್ಯತೆ. ಕಾವೇರಿ ಜಲ ವಿವಾದ ಸೇರಿ ಹಲವು ನೀರಾವರಿ ವಿಷಯದಲ್ಲಿ ವಿಳಂಬ, ಜಾತಿಗಣತಿ ವಿಚಾರ, ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದತ್ತ ಕೈ ತೋರಿಸಿ ಹೊಣೆಯಿಂದ ನುಣುಚಿಕೊಳ್ಳುವ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮೈತ್ರಿ ಪಕ್ಷಗಳು ತಯಾರಿ ಮಾಡಿಕೊಂಡಿವೆ.

ಜೆಡಿಎಸ್​ನಿಂದ ಬರ ಅಸ್ತ್ರ: ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಪಕ್ಷದ ಮುಖಂಡರು ನಡೆಸಿರುವ ಅಧ್ಯಯನದ ಜಿಲ್ಲಾವಾರು ಮಾಹಿತಿಯನ್ನು ಜೆಡಿಎಸ್ ಸಂಗ್ರಹ ಮಾಡುತ್ತಿದೆ. ಜಿಲ್ಲಾವಾರು ತಂಡಗಳನ್ನು ರಚನೆ ಮಾಡಿದ್ದು, ಆಯಾ ಜಿಲ್ಲೆಯಲ್ಲಿನ ವಾಸ್ತವ ಪರಿಸ್ಥಿತಿ ಅಧ್ಯಯನ ಮಾಡಿ ವರದಿ ನೀಡಲು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಿರ್ದೇಶನ ನೀಡಿದ್ದರು. ಆಯಾ ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷರು, ಹಾಲಿ ಶಾಸಕರು, ಮಾಜಿ ಶಾಸಕರು, ಪರಾಭವಗೊಂಡಿರುವ ಅಭ್ಯರ್ಥಿಗಳು, ಮತ್ತಿತರ ಹಿರಿಯ ಮುಖಂಡರನ್ನು ಒಳಗೊಂಡ 31 ತಂಡಗಳನ್ನು ರಚನೆ ಮಾಡಲಾಗಿತ್ತು.

ಪಕ್ಷದ ಕೇಂದ್ರ ಕಚೇರಿಯು ಆಯಾ ತಂಡದ ಮುಖ್ಯಸ್ಥರಿಂದ ಬರ ಅಧ್ಯಯನದ ಮಾಹಿತಿಯನ್ನು ಕಲೆ ಹಾಕುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳ ಮಾಹಿತಿ ಪಕ್ಷದ ಕೇಂದ್ರ ಕಚೇರಿಗೆ ತಲುಪಿದೆ. ಎಲ್ಲಾ ಜಿಲ್ಲೆಗಳ ಮಾಹಿತಿ ಒಳಗೊಂಡ ಬರ ಕುರಿತ ವರದಿಯೊಂದನ್ನು ಸಿದ್ಧಪಡಿಸಲಾಗುತ್ತಿದ್ದು, ಅಧ್ಯಯನ ವರದಿ ಮುಂದಿಟ್ಟುಕೊಂಡು ಪಕ್ಷವು ವಿಧಾನ ಮಂಡಲದ ಒಳಗೆ, ಹೊರಗೆ ದೊಡ್ಡ ಮಟ್ಟದಲ್ಲಿ ರೈತರ ಪರವಾಗಿ ದನಿ ಎತ್ತುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು.

ಬರ ಪರಿಹಾರ ಕ್ರಮಗಳನ್ನು ಸರ್ಕಾರ ಸಮರ್ಪಕವಾಗಿ ಕೈಗೊಂಡಿಲ್ಲ. ಬೆಳೆ ಹಾನಿಗೆ ಪರಿಹಾರ ನೀಡಿಲ್ಲ. ಒಂದೆಡೆ ಬರ ಮತ್ತೊಂದೆಡೆ ವಿದ್ಯುತ್ ಅಭಾವದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ರೈತರ ಪರವಾಗಿ ಪಕ್ಷ ಹೋರಾಟ ನಡೆಸುವ ಪೂರ್ವಭಾವಿಯಾಗಿ ಅಧ್ಯಯನ ನಡೆಸಬೇಕು ಎಂಬ ನಿರ್ದೇಶನವನ್ನು ಕುಮಾರಸ್ವಾಮಿ ನೀಡಿದ್ದರು. ಬರ ವರದಿ ಮೂಲಕ ಹೆಚ್​ಡಿಕೆ ಅಧಿವೇಶನದಲ್ಲಿ ಸರ್ಕಾರಕ್ಕೆ ಚಾಟಿ ಬೀಸಲು ಸಜ್ಜಾಗಿದ್ದಾರೆ. ಒಟ್ಟಾರೆ, ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಚಳಿ ಬಿಡಿಸಲು ಬಿಜೆಪಿ ಹಾಗೂ ಜೆಡಿಎಸ್ ಎಲ್ಲಾ ಸಿದ್ಧತೆ ಮಾಡಿಕೊಂಡಿವೆ.

ಇದನ್ನೂ ಓದಿ: ನಿಗ‌ಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನ ನೀಡಿದರೆ ಸರ್ಕಾರದ ವಿರುದ್ಧ ಪಿಐಎಲ್ ಸಲ್ಲಿಕೆ: ಭೀಮಪ್ಪ ಗಡಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.