ETV Bharat / state

ಭದ್ರಾ ಮೇಲ್ದಂಡೆ ಯೋಜನೆ: ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ

author img

By ETV Bharat Karnataka Team

Published : Sep 4, 2023, 6:24 PM IST

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ಜಯಚಂದ್ರ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದಕೊಂಡು ಕೆಲವು ಸೂಚನೆಗಳನ್ನು ಕೊಟ್ಟಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ
ಭದ್ರಾ ಮೇಲ್ದಂಡೆ ಯೋಜನೆ

ಬೆಂಗಳೂರು : ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಮುಂದಿನ ಒಂದು ವರ್ಷದಲ್ಲಿ ಅನುಷ್ಠಾನಗೊಳಿಸಿ ರೈತರಿಗೆ ನೀರು ನೀಡಬೇಕೆಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅಧಿಕಾರಿಗಳಿಂದ ಜಯಚಂದ್ರ ಅವರು ಮಾಹಿತಿ ಪಡೆದುಕೊಂಡರು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ವೇಗ ನೀಡುವ ಸಂಬಂಧ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆ ಭಾಗದ ಶಾಸಕರ ಹಾಗೂ ಸಂಸದರ ಸಭೆಯನ್ನು ಅತಿ ಶೀಘ್ರದಲ್ಲಿ ಕರೆಯುವುದಾಗಿ ತಿಳಿಸಿದರು.

ಅಷ್ಟೇ ಅಲ್ಲದೆ ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ ಹಾಗೂ ನಾರಾಯಣಸ್ವಾಮಿ ಅವರ ಜೊತೆ ತಮ್ಮ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆ ನಡೆಸುವುದಾಗಿ ತಿಳಿಸಿದ ಅವರು, ಈ ತಿಂಗಳ 18 ರಿಂದ ಲೋಕಸಭೆ ಅಧಿವೇಶನ ನಡೆಯಲಿದ್ದು, ಆ ಸಮಯದಲ್ಲಿ ತಾವು ದೆಹಲಿಗೆ ತೆರಳಿ ಕೇಂದ್ರ ಜಲಸಂಪನ್ಮೂಲ ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಸಹ ಭೇಟಿಯಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಇರುವ ತೊಡಕುಗಳನ್ನು ನಿವಾರಿಸಿ ಹಣ ನೀಡುವಂತೆ ಒತ್ತಾಯಿಸುವುದಾಗಿ ಜಯಚಂದ್ರ ಹೇಳಿದರು.

21473 ಕೋಟಿ ರೂ. ವೆಚ್ಚದ ಈ ಕೇಂದ್ರದ ಯೋಜನೆಗೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ 5,300 ಕೋಟಿ ರೂ. ನೀಡುವುದಾಗಿ ಹೇಳಿದ್ದು, ಕೇಂದ್ರ ಜಲಶಕ್ತಿ ಹಾಗೂ ಕೇಂದ್ರ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವಾರ ಸಭೆ ನಡೆಸಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣ ಚಿತ್ತಯ್ಯ ಅವರು ಸಭೆಯಲ್ಲಿ ವಿವರಿಸಿದರು. ಪ್ರಧಾನಮಂತ್ರಿಯವರ ಸಭೆಯ ವಿವರಗಳ ಮಾಹಿತಿ ಇಂದು ಸಂಜೆ ಗೊತ್ತಾಗುತ್ತದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.

ಈ ಯೋಜನೆಗೆ ರಾಜ್ಯ ಸರ್ಕಾರ ಕಳೆದ ಬಜೆಟ್​ನಲ್ಲಿ 2500 ಕೋಟಿ ರೂ. ತೆಗೆದಿರಿಸಿದೆ. ತಕ್ಷಣವೇ ರಾಜ್ಯ ಸರ್ಕಾರ 500 ಕೋಟಿ ರೂ. ನೀಡಲು ಸಿದ್ದವಿದ್ದು, ಕೇಂದ್ರ ಸರ್ಕಾರ ಕನಿಷ್ಠ 2000 ಕೋಟಿ ರೂ. ಗಳನ್ನು ನೀಡುವಂತೆ ಸಹ ರಾಜ್ಯ ಸರ್ಕಾರ ಒತ್ತಾಯಿಸುತ್ತಿದೆ. ತರೀಕೆರೆ, ಕಡೂರು ಹಾಗೂ ಅಜ್ಜಂಪುರದಲ್ಲಿ 220ಕ್ಕೂ ಹೆಚ್ಚು ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಹಣವನ್ನು ಪರಿಹಾರ ಕೋರಿ ಚಿಕ್ಕಮಂಗಳೂರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಮೊಕದ್ದಮೆಗಳನ್ನು ಆದಷ್ಟು ಶೀಘ್ರವಾಗಿ ಇತ್ಯರ್ಥಪಡಿಸಿದರೆ ಯೋಜನೆಗೆ ವೇಗ ಸಿಗಲಿದೆ ಎಂದು ನೀರಾವರಿ ನಿಗಮದ ವ್ಯವಸ್ಥಾಪಕರು, ನಿರ್ದೇಶಕರು ತಿಳಿಸಿದರು.

ಕಾನೂನು ಇಲಾಖೆ ಕಾರ್ಯದರ್ಶಿ ಜಗದೀಶ್ ಅವರು ಮಾತನಾಡಿ, ಈ ಎಲ್ಲಾ ಮೊಕದ್ದಮೆಗಳನ್ನು ಲೋಕ ಅದಾಲತ್ ನಲ್ಲಿ ಮಂಡಿಸಿ ರೈತರಿಗೆ ಅಲ್ಲಿಯೇ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಆ ಭಾಗದ ಜನಪ್ರತಿನಿಧಿಗಳ ಸಭೆಯನ್ನು ಸಹ ಕರೆಯುವಂತೆ ಜಗದೀಶ್ ಅವರು ಸಲಹೆ ನೀಡಿದರು‌. ತರೀಕೆರೆ ಕಡೂರು ಚಿಕ್ಕನಾಯಕನಹಳ್ಳಿ ಹಾಗೂ ಹೊಸದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆದಷ್ಟು ಬೇಗ ಭೂಸ್ವಾಧೀನ ಮಾಡಿ ಕಾಮಗಾರಿಗೆ ಚಾಲನೆ ನೀಡಿದರೆ ಮುಂದಿನ ಒಂದೆರಡು ವರ್ಷಗಳಲ್ಲಿ ನೀರು ತರಬಹುದು ಎಂದು ಜಯಚಂದ್ರ ಅವರು ನುಡಿದರು.

ಇದನ್ನೂ ಓದಿ : ತಂತ್ರಜ್ಞಾನದ ಅಭಿವೃದ್ಧಿ ಎಲ್ಲರಿಗೂ ದೊರೆಯುವಂತೆ ಮಾಡುವುದು ನಮ್ಮ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.