ETV Bharat / state

ನ. 29ರಿಂದ ಮೂರು ದಿನ ಬೆಂಗಳೂರು ಟೆಕ್ ಶೃಂಗಸಭೆ : ಸಚಿವ ಪ್ರಿಯಾಂಕ್ ಖರ್ಗೆ

author img

By ETV Bharat Karnataka Team

Published : Nov 25, 2023, 5:27 PM IST

Bengaluru Tech Summit: ನವೆಂಬರ್​​ 29ರಿಂದ ಡಿಸೆಂಬರ್​ 1ರವರೆಗೆ ಬೆಂಗಳೂರು ಟೆಕ್ ಶೃಂಗಸಭೆ 2023 ನಡೆಯಲಿದೆ.

bengaluru-tech-summit-start-from-november-29
ನ.29ರಿಂದ ಮೂರು ದಿನ ಬೆಂಗಳೂರು ಟೆಕ್ ಶೃಂಗಸಭೆ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: 26ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ 2023 ನವೆಂಬರ್​​ 29ರಿಂದ ಡಿಸೆಂಬರ್​ 1ರವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದ್ದು, ಏಷ್ಯಾದ ಅತಿ ದೊಡ್ಡ ಟೆಕ್ ಸಮ್ಮಿಟ್ ಇದಾಗಿದೆ ಎಂದು ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬಿಟಿಎಸ್ 2023 ಉದ್ಘಾಟನೆ ಮಾಡುತ್ತಿದ್ದಾರೆ. ಸರ್ಕಾರದ ಜೊತೆಗೆ ಜೊತೆಗೆ ಕೈಗಾರಿಕಾ ನಾಯಕರು ಇರಲಿದ್ದಾರೆ. ರೂರಲ್‌ ಐಟಿ ಕ್ವಿಜ್ ಇರಲಿದ್ದು, ಗ್ರಾಮೀಣ ಪ್ರದೇಶದ ಪ್ರತಿಭಾವಂತರಿಗೆ ಅವಕಾಶ ನೀಡಲಿದ್ದೇವೆ. ಬಿಟಿಎಸ್​​ನಲ್ಲಿ ಒಟ್ಟು 75 ಸೆಷನ್, 400 ಸ್ಪೀಕರ್, 350 ಸ್ಟಾರ್ಟ್ ಅಪ್, 600 ಪ್ರದರ್ಶಕರು, 20,000 ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಖ್ಯಾತ ಉದ್ಯಮಿ ನಾರಾಯಣ ಮೂರ್ತಿ ಅವರೂ ಈ ಬಿಟಿಎಸ್​​ನಲ್ಲಿ ಭಾಗವಹಿಸಲಿದ್ದಾರೆ.‌ ಬಹಳ ವರ್ಷಗಳ ಬಳಿಕ ಅವರು ಪಾಲ್ಗೊಳ್ಳಲಿದ್ದಾರೆ. ಲೆಜೆಂಡ್, ಲೆಗಸಿ ಅಂಡ್​ ಲೀಡರ್​​ಶಿಪ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೆರೋದಾ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆ ಅವರು ಸಂವಾದ ನಡೆಸಲಿದ್ದಾರೆ. ಈ ಸಲ 33 ದೇಶಗಳ ಪೈಕಿ 17 ದೇಶಗಳು ತಾವೇ ಸೆಷನ್ ಕೈಗೊಳ್ಳಲಿದ್ದಾರೆ. ಬಿಟಿಎಸ್​ನಲ್ಲಿ ಭಾರತ-ಯುಎಸ್ ಟೆಕ್ ಕಾನ್​ಕ್ಲೇವ್ ಮಾಡಲಿದ್ದೇವೆ. ಇದರಿಂದ ನವೋದ್ಯಮಗಳಿಗೆ ಸಾಕಷ್ಟು ಸಹಾಯ ಹಾಗೂ ಅಮೆರಿಕಾದವರಿಗೂ ಇಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲವಾಗಲಿದೆ ಎಂದರು.

ನಾವು ವಿಶ್ವದ ನಾಲ್ಕನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದ್ದೇವೆ. ಮುಂದಿನ‌ ಮೂರು ವರ್ಷಗಳ ತನಕ‌ ಒಂದೇ ಥೀಮ್ ಇಟ್ಟಿದ್ದು, ಅಲ್ಲಿಯವರೆಗಿನ ಬಿಟಿಎಸ್​ನ ದಿನಾಂಕ ಕೂಡ ನಿಗದಿ ಆಗಿದೆ.‌ ಇದರಿಂದ ಅಂತಾರಾಷ್ಟ್ರೀಯ ಉದ್ಯಮಿಗಳ ಸಮಯಾವಕಾಶ ಸಿಗಲಿದೆ. 'ಬ್ರೇಕಿಂಗ್ ಬೌಂಡರೀಸ್, ಇನ್ನೊವೇಷನ್ ಫ್ರಂ ಇಂಡಿಯಾ ಇಂಪಾಕ್ಟ್ ಫಾರ್ ದಿ ವರ್ಲ್ಡ್' ಎಂಬುದು ನಮ್ಮ‌ ಥೀಮ್ ಆಗಿದೆ. ಸುಮಾರು 25,000 ನವೋದ್ಯಮ ನಮ್ಮ‌ ರಾಜ್ಯದಲ್ಲಿದೆ. ಸುಮಾರು 15,000 ನೋಂದಣಿ ರಾಜ್ಯ ಸರ್ಕಾರದಲ್ಲಿ ಆಗಿದೆ ಎಂದು ಮಾಹಿತಿ ನೀಡಿದರು.

ವೈವಿಧ್ಯಮಯ ಕಾರ್ಯಕ್ರಮ ಆಯೋಜನೆ: ವೈವಿಧ್ಯಮಯ ಮತ್ತು ಉತ್ಕೃಷ್ಟ ಕಾರ್ಯಕ್ರಮಗಳು ಇರಲಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಂವಾದಗಳು, ಡೀಪ್ ಟೆಕ್, ಸ್ಟಾರ್ಟ್-ಅಪ್‌ಗಳು ಮತ್ತು ಬಯೋಟೆಕ್, ಅಂತರಾಷ್ಟ್ರೀಯ ಪ್ರದರ್ಶನ, ಜಾಗತಿಕ ಆವಿಷ್ಕಾರ ಮೈತ್ರಿ, ಭಾರತ-ಅಮೆರಿಕ ಟೆಕ್ ಕಾನ್ಕ್ಲೇವ್, ಆರ್ ಅಂಡ್ ಡಿ-ಲ್ಯಾಬ್2-ಮಾರುಕಟ್ಟೆ, ಬಿ2ಬಿ ಸಭೆಗಳು ನಡೆಯಲಿವೆ. ಎಸ್.ಟಿ.ಪಿ.ಐ-ಐಟಿ ರಫ್ತು ಪ್ರಶಸ್ತಿ, ಸ್ಮಾರ್ಟ್ ಬಯೋ ಪ್ರಶಸ್ತಿ, ವಿಸಿ ಪ್ರಶಸ್ತಿ, ಎಟಿಎಫ್ ಪ್ರಶಸ್ತಿಗಳು, ಗ್ರಾಮೀಣ ಐಟಿ ರಸಪ್ರಶ್ನೆ, ಬಯೋ ಕ್ವಿಜಾಂಡ್ ಬಯೋ ಪೋಸ್ಟರ್‌ಗಳು ಸಹ ಶೃಂಗಸಭೆಯ ಭಾಗವಾಗಿರಲಿದೆ ಎಂದು ಪ್ರಿಯಾಂಕ್​ ಖರ್ಗೆ ವಿವರಿಸಿದರು.

ಐಟಿಇ ಮತ್ತು ಡೀಪ್ ಟೆಕ್ ಟ್ರ್ಯಾಕ್ ಜಿಸಿಸಿಗಳಿಗೆ ಅವಕಾಶಗಳು, ಕೃತಕ ಬುದ್ಧಿಮತ್ತೆ, ಸುಸ್ಥಿರತೆಗಾಗಿ ತಂತ್ರಜ್ಞಾನ, ಭವಿಷ್ಯದ ಚಲನಶೀಲತೆ, ಸೈಬರ್‌ ಸುರಕ್ಷತೆ ಮತ್ತು ಸೈಬರ್‌ವಾರ್‌ಫೇರ್, 5ಜಿ ಅಳವಡಿಕೆ ಮತ್ತು ಭವಿಷ್ಯದ ವೈರ್‌ಲೆಸ್ ತಂತ್ರಜ್ಞಾನಗಳು, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳಂತಹ ಕೆಲವು ಆಸಕ್ತಿದಾಯಕ ಸೆಷನ್​ಗಳು ಇರಲಿವೆ. ಕಾರ್ಬನ್ ಮುಕ್ತ ಭವಿಷ್ಯಕ್ಕಾಗಿ ಜೈವಿಕ ತಂತ್ರಜ್ಞಾನ, ಸಂಶ್ಲೇಷಿತ ಜೀವಶಾಸ್ತ್ರ, ಸುಸ್ಥಿರ ಆಹಾರ ಮತ್ತು ಕೃಷಿ-ವ್ಯವಸ್ಥೆಗಳು, ಭವಿಷ್ಯದ ಕಾಯಿಲೆಗಳನ್ನು ತಡೆಗಟ್ಟುವುದು ಮತ್ತು ಸಾಂಕ್ರಾಮಿಕ ರೋಗಗಳನ್ನು ದೂರ ಇಡುವುದು, ಬಯೋಟೆಕ್‌ನಲ್ಲಿ ಹೂಡಿಕೆ, ಕೌಶಲ್ಯ ಅಭಿವೃದ್ಧಿ, ನೀತಿ ಮತ್ತು ನಿಯಮಗಳಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಹಲವು ರಾಷ್ಟ್ರಗಳು ಭಾಗಿ: ಸಮ್ಮೇಳನದಲ್ಲಿ ಆಸ್ಟ್ರೇಲಿಯಾ, ಫಿನ್‌ಲ್ಯಾಂಡ್, ನೆದರ್‌ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಡೆನ್ಮಾರ್ಕ್ ಸೇರಿದಂತೆ ಪಾಲುದಾರ ರಾಷ್ಟ್ರಗಳನ್ನು ಒಳಗೊಂಡು ಸ್ವೀಡನ್, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಇಸ್ರೇಲ್, ಪೋಲೆಂಡ್, ಆಸ್ಟ್ರಿಯಾ, ಜರ್ಮನಿ ಮತ್ತು ಎನ್.ಆರ್.ಡಬ್ಲ್ಯು, ಜಪಾನ್, ಸ್ವಿಟ್ಜರ್ಲೆಂಡ್, ಲಿಥುವೇನಿಯಾ ಮತ್ತು ಇಯು ಭಾಗವಹಿಸಲಿವೆ.

ಬರ್ಲಿನ್ ದೇಶದ ಸೆನೆಟರ್ ಫ್ರಾನ್ಜಿಸ್ಕಾ ಗಿಫ್ಫೆ, ಜರ್ಮನಿಯ ಡಸೆಲ್ಡಾರ್ಫ್‌ನ ಮೇಯರ್ ಡಾ. ಸ್ಟೀಫನ್ ಕೆಲ್ಲರ್, ಕೆನಡಾದ ಒಂಟಾರಿಯೊದ ಆರ್ಥಿಕತೆ, ಉದ್ಯೋಗ ಸೃಷ್ಟಿ ಮತ್ತು ವ್ಯಾಪಾರದ ಸಚಿವ ವಿಕ್ಟರ್ ಫೆಡೆಲಿ ಅವರು ಜಿಐಎ ಸೆಷನ್‌ಗಳಲ್ಲಿ ಮಾತನಾಡಲಿದ್ದಾರೆ. ಇನ್ನೂ ಹಲವು ದೇಶಗಳ ಸಚಿವರ ನೇತೃತ್ವದ ನಿಯೋಗಗಳು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.