ETV Bharat / state

ಬೆಂಗಳೂರು ಟೆಕ್ ಶೃಂಗಸಭೆ: ಚಂದ್ರಯಾನ, ಇಸ್ರೋ, ಬಾಹ್ಯಾಕಾಶ ಉದ್ಯಮ ಪ್ರದರ್ಶನ ಮಳಿಗೆ

author img

By ETV Bharat Karnataka Team

Published : Nov 22, 2023, 8:21 AM IST

Bengaluru Tech Summit 2023: ನವೆಂಬರ್‌ 29ರಿಂದ ಡಿಸೆಂಬರ್‌ 1ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಚಂದ್ರಯಾನ, ಇಸ್ರೋ, ಬಾಹ್ಯಾಕಾಶ ಉದ್ಯಮದ ಪ್ರದರ್ಶನ ಮಳಿಗೆಯನ್ನು ನೋಡಬಹುದು.

Bengaluru Tech Summit 2023
ಬೆಂಗಳೂರು ಟೆಕ್ ಶೃಂಗಸಭೆ

ಬೆಂಗಳೂರು: ಕರ್ನಾಟಕ ಸರ್ಕಾರ ಆಯೋಜಿಸಿರುವ 'ಬೆಂಗಳೂರು ಟೆಕ್‌ ಸಮ್ಮಿಟ್‌'ನಲ್ಲಿ ಈ ವರ್ಷ ಚಂದ್ರಯಾನ, ಇಸ್ರೋ, ಬಾಹ್ಯಾಕಾಶ ಉದ್ಯಮದ ಪ್ರದರ್ಶನ ಮಳಿಗೆ ಇರಲಿದೆ ಎಂದು ತಿಳಿದು ಬಂದಿದೆ. ಏಷ್ಯಾದ ಅತಿದೊಡ್ಡ ಟೆಕ್‌ ಸಮ್ಮೇಳನ ಎಂದು ಹೆಸರಾದ 'ಬೆಂಗಳೂರು ಟೆಕ್ ಶೃಂಗಸಭೆ'ಯು ಅರಮನೆ ಮೈದಾನದಲ್ಲಿ ನವೆಂಬರ್‌ 29ರಿಂದ ಡಿಸೆಂಬರ್‌ 1ರವರೆಗೆ ನಡೆಯಲಿದೆ. ಸಮ್ಮೇಳನದಲ್ಲಿ ನಿರ್ಮಾಣವಾಗಲಿರುವ ಎಲ್ಲಾ ಮಳಿಗೆಗಳು ಭಾರತದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶನ ಮಾಡುವ ಉದ್ದೇಶಕ್ಕೆ ಪೂರಕವಾಗಿರಲಿದೆ. ಇಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಡೀಪ್‌ಟೆಕ್‌, ಮೆಟಾವರ್ಸ್‌ ಮತ್ತು ವೆಬ್‌ 3.0, ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್ಸ್‌, ಆ್ಯನಿಮೇಶನ್‌, ವಿಶ್ಯುವಲ್‌ ಎಫೆಕ್ಟ್‌, ಗೇಮಿಂಗ್‌, ಟೆಲಿಕಾಮ್‌ ಮತ್ತು 6ಜಿ ತಂತ್ರಜ್ಞಾನಗಳ ಮಾಹಿತಿಯನ್ನು ಪ್ರದರ್ಶನ ಮಾಡಲಾಗುತ್ತದೆ. ಈ ಪ್ರದರ್ಶನವು ಟೆಕ್‌ ಸಮ್ಮಿಟ್‌ನ ಈ ವರ್ಷದ 'ಬ್ರೇಕಿಂಗ್‌ ಬೌಂಡರೀಸ್‌' ಎಂಬ ಗುರಿಗೆ ಅನುಗುಣವಾಗಿರಲಿದ್ದು ಆವಿಷ್ಕಾರ, ಪರಿವರ್ತನೆ ಹಾಗೂ ಅನ್ವೇಷಣೆಯ ಹಾದಿಯಲ್ಲಿ ಸಾಗಲಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೆಚ್ಚಿಸಿಕೊಳ್ಳುತ್ತಿರುವ ಪ್ರಭಾವಕ್ಕೂ ಈ ಪ್ರದರ್ಶನ ಸಾಕ್ಷಿಯಾಗಲಿದೆ. ಬಾಹ್ಯಾಕಾಶ ಸಂಶೋಧನೆಗೆ ಇಸ್ರೋ ನೀಡುತ್ತಿರುವ ಗಣನೀಯ ಕೊಡುಗೆಗಳ ಪ್ರದರ್ಶನವೂ ಇಲ್ಲಿರಲಿದೆ. ನವೋದ್ಯಮಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು (SME) ಹಾಗೂ ಖಾಸಗಿ ಉದ್ಯಮಗಳು ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ವಹಿಸಿದ ಪಾತ್ರವನ್ನು 'ಚಂದ್ರಯಾನ' ಹೆಸರಿನ ಮಳಿಗೆ ಪ್ರದರ್ಶಿಸಲಿದೆ.

ಈ ಪ್ರದರ್ಶನದ ಮೂಲಕ ಬಾಹ್ಯಾಕಾಶ ಉದ್ಯಮದಲ್ಲಿ ಖಾಸಗಿಯವರ ಹೂಡಿಕೆಗೆ ಉತ್ತೇಜನ ನೀಡುವ ಸರ್ಕಾರದ ಪ್ರಯತ್ನಕ್ಕೆ ಬಿಟಿಎಸ್‌ 2023 ನೆರವಾಗಲಿದೆ. ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆ ಮತ್ತು ಆವಿಷ್ಕಾರ ಸಾಧ್ಯವಾಗಲಿದೆ. ಕರ್ನಾಟಕ ಸರ್ಕಾರದ ಪ್ರಸ್ತಾವಿತ ಬಾಹ್ಯಾಕಾಶ ನೀತಿಯು, ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿರಲಿದೆ.

ಈ ಕುರಿತು ಮಾತನಾಡಿದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, "ಬಾಹ್ಯಾಕಾಶ ಕ್ಷೇತ್ರದಲ್ಲಿ ನಾವು ಮುಂಚೂಣಿಯಲ್ಲಿದ್ದು, ಮಿಂಚುತ್ತಿರುವುದನ್ನು ಚಂದ್ರಯಾನ ಪ್ರದರ್ಶನ ಮಳಿಗೆಯು ಮತ್ತೊಮ್ಮೆ ದೃಢಪಡಿಸಲಿದೆ. ಇದು ಬಾಹ್ಯಾಕಾಶ ಸಂಬಂಧಿತ ಉದ್ಯಮಗಳಲ್ಲಿ ನವೋದ್ಯಮಗಳ ಅಸಾಧಾರಣ ಸಾಮರ್ಥ್ಯ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಯಶಸ್ಸಿನ ಕುರಿತು ನವೋದ್ಯಮಗಳ ಪಾತ್ರವನ್ನು ವಿವರಿಸಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು ಟೆಕ್‌ ಸಮ್ಮಿಟ್‌: ನವೆಂಬರ್‌ 17 ರಿಂದ 3 ದಿನ ಸಮಾವೇಶ, 30ಕ್ಕೂ ಹೆಚ್ಚು ದೇಶಗಳು ಭಾಗಿ

ಬಿಟಿಎಸ್ 2023ಗೆ 30ಕ್ಕೂ‌ ಹೆಚ್ಚು ದೇಶಗಳಿಂದ ಸುಮಾರು 400 ಭಾಷಣಕಾರರು ಆಗಮಿಸುವ ನಿರೀಕ್ಷೆ ಇದೆ. ಈ ಭಾಷಣಕಾರರು 75ಕ್ಕೂ ಹೆಚ್ಚು ಕಾರ್ಯಾಗಾರ/ಸಂವಾದಗಳಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. 3,000 ಪ್ರತಿನಿಧಿಗಳು ಸೇರಿದಂತೆ ಪಾಲ್ಗೊಳ್ಳುವವರ ಒಟ್ಟು ಸಂಖ್ಯೆ 50,000 ದಾಟುವ ನಿರೀಕ್ಷೆ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ನವೋದ್ಯಮ, ಸಂಶೋಧನಾ ಲ್ಯಾಬ್‌, ಸಣ್ಣ ಮತ್ತು ಮಧ್ಯಮ ಉದ್ಯಮ, ಪ್ರಮುಖ ನಿಗಮಗಳು, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಅಸಾಧಾರಣ ಪ್ರತಿಭೆಗಳನ್ನು ಆಹ್ವಾನಿಸಿ ಇಲ್ಲಿ ಒಂದುಗೂಡಿಸಲು ಸಿದ್ಧತೆ ನಡೆದಿದೆ.

ಇದನ್ನೂ ಓದಿ: ವರ್ಚುವಲ್‌ ವೇದಿಕೆ ಮೂಲಕ 2.5 ಕೋಟಿಗೂ ಹೆಚ್ಚು ಜನರನ್ನು ತಲುಪಿದ ಬೆಂಗಳೂರು ಟೆಕ್‌ ಸಮಿಟ್-2020

ಮೂರು ದಿನಗಳ ಕಾಲ ನಡೆಯಲಿರುವ ಏಷ್ಯಾದ ಅತಿದೊಡ್ಡ ಟೆಕ್ ಶೃಂಗಸಭೆ 'ಬಿಟಿಎಸ್‌ 2023'ರಲ್ಲಿ ವಿಸ್ತಾರವಾದ ಜ್ಞಾನವನ್ನು ಪಡೆಯಬಹುದಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್, ಡೀಪ್‌ಟೆಕ್, ನವೋದ್ಯಮ ಮತ್ತು ಜೈವಿಕ ತಂತ್ರಜ್ಞಾನ ಕುರಿತಾದ ಸಮ್ಮೇಳನ, ಅಂತಾರಾಷ್ಟ್ರೀಯ ಪ್ರದರ್ಶನ, ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್, ಭಾರತ-ಯುಎಸ್‌ಎ ಟೆಕ್ ಸಭೆ, ಇಂಡಿಯಾ ಇನ್ನೋವೇಶನ್ ಅಲೈಯನ್ಸ್, ಆರ್‌&ಡಿ 2ಮಾರ್ಕೆಟ್, ಬಿ2ಬಿ ಸಭೆಗಳು, ಎಸ್‌ಟಿಪಿಐ ಐಟಿ ಎಕ್ಸ್‌ಪೋರ್ಟ್‌ ಪ್ರಶಸ್ತಿ ಪ್ರದಾನ, ಸ್ಮಾರ್ಟ್ ಬಯೋ ಪ್ರಶಸ್ತಿ ಪ್ರದಾನ, ಯುನಿಕಾರ್ನ್ಸ್ ಸನ್ಮಾನ, ಗ್ರಾಮೀಣ ಐಟಿ ರಸಪ್ರಶ್ನೆ, ಜೈವಿಕ ತಂತ್ರಜ್ಞಾನ ರಸಪ್ರಶ್ನೆ, ಬಯೋ ಪೋಸ್ಟರ್‌ ಮೊದಲಾದ ಕಾರ್ಯಕ್ರಮಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.