ETV Bharat / state

ಬೆಂಗಳೂರು: ಸಹಾಯದ ನೆಪದಲ್ಲಿ ಉದ್ಯಮಿಗಳಿಗೆ ವಂಚನೆ, ಪ್ರಕರಣ ದಾಖಲು

author img

By ETV Bharat Karnataka Team

Published : Nov 26, 2023, 12:22 PM IST

Updated : Nov 26, 2023, 3:00 PM IST

Cheating case : ಉದ್ಯಮಿಗಳನ್ನು ನಂಬಿಸಿ ವಂಚಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

Etv Bharat
Etv Bharat

ಬೆಂಗಳೂರು: ಉದ್ಯಮಿಗಳನ್ನು ಪರಿಚಯಿಸಿಕೊಂಡು ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿ ವಿರುದ್ಧ ಮಲ್ಲೇಶ್ವರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುಸೂಫ್ ಸುಬ್ಬಯ್ಯಕಟ್ಟೆ ಎಂಬಾತನೆ ವಂಚನೆ ಮಾಡಿರುವ ಆರೋಪಿ. ಉದ್ಯಮಿ ಶಾಜಿ ಕೃಷ್ಣನ್ ಎಂಬುವರನ್ನು ಖಾತರಿದಾರರನ್ನಾಗಿಸಿ ₹2.4 ಕೋಟಿ ಲೋನ್ ಪಡೆದು ವಂಚಿಸಿರುವ ಸಂಬಂಧ ಪ್ರಕರಣ ದಾಖಲಾಗಿದೆ.

ಹೋಟೆಲ್ ಉದ್ಯಮಿಯಾಗಿರುವ ಶಾಜಿ ಕೃಷ್ಣನ್ ಅವರಿಗೆ ಮೊದಲು ಪರಿಚಯವಾಗಿ ಬಳಿಕ ಅವರ ದಾಖಲೆಗಳ ಮೂಲಕ ಬ್ಯಾಂಕ್ ಲೋನ್ ಪಡೆದು ವಂಚಿಸಲಾಗಿದೆ ಎಂದು ದೂರು ದಾಖಲಾಗಿದೆ. 'ಲೋನ್ ಪಡೆಯಲು ಪ್ರಯತ್ನಿಸುತ್ತಿದ್ದಾಗ ತನಗೆ ಕೆನರಾ ಬ್ಯಾಂಕ್‌ನ ಹಲಸೂರು ಬ್ರ್ಯಾಂಚಿನ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಪರಿಚಯ' ಎಂದು ಆರೋಪಿ ನಂಬಿಸಿದ್ದ. ಬಳಿಕ ಮ್ಯಾನೇಜರ್ ಬಳಿ ಕರೆದೊಯ್ದು ದಾಖಲೆಗಳನ್ನು ಪಡೆದುಕೊಂಡಿದ್ದ. ಆದರೆ ನನ್ನನ್ನು ಖಾತರಿದಾರರನ್ನಾಗಿಸಿ ನನ್ನ ದಾಖಲೆಗಳನ್ನು ಸಲ್ಲಿಸಿ 2.4 ಕೋಟಿ ರೂ ಲೋನ್ ಪಡೆದುಕೊಂಡಿದ್ದ. ಅದೇ ಹಣದಲ್ಲಿ ಮಲ್ಲೇಶ್ವರಂನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಖರೀದಿಸಿದ್ದ. ಬಳಿಕ‌ ಲೋನ್ ಮರು ಪಾವತಿ ಮಾಡಿರಲಿಲ್ಲ. ಕೆಲ ದಿನಗಳ ಬಳಿಕ ಬ್ಯಾಂಕ್‌ಗೆ ತೆರಳಿದ್ದಾಗ ವಂಚನೆಯಾಗಿರುವುದು ಬಯಲಾಗಿತ್ತು. ಆರೋಪಿಯನ್ನು ಪ್ರಶ್ನಿಸಿದಾಗ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ. ಆರೋಪಿಯ ಕೃತ್ಯದಿಂದ ತಮ್ಮ ಉದ್ಯಮಕ್ಕೆ ಹಿನ್ನಡೆಯಾಗಿದೆ' ಎಂದು ಮಲ್ಲೇಶ್ವರಂ ಠಾಣೆಗೆ ಶಾಜಿ ಕೃಷ್ಣನ್ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಬಂಧನಕ್ಕೆ ಜಾಲ ಬೀಸಿದ್ದಾರೆ.

ಉದ್ಯಮಿಗಳೇ ಟಾರ್ಗೆಟ್!: ಆರೋಪಿಯು ಮೊದಲು ಉದ್ಯಮಿಗಳನ್ನು ಪರಿಚಯಿಸಿಕೊಂಡು ನಂತರ ಆ ಉದ್ಯಮಿಗಳಿಗೆ ಅಗತ್ಯವಿರುವ ಸಹಾಯ ಮಾಡುವ ನೆಪದಲ್ಲಿ ಆಪ್ತನಾಗುತ್ತಿದ್ದ, ಬಳಿಕ ವಂಚಿಸುತ್ತಾನೆ. ಇದೇ ರೀತಿ ಟ್ರಾವೆಲ್ಸ್ ಕಂಪನಿ ಮಾಲೀಕರೊಬ್ಬರ ಬಳಿ 'ಜಿ.ಎಸ್.ಟಿ ಕಮಿಷನರ್ ತನಗೆ ಪರಿಚಯವಿದ್ದಾರೆ. ತಾನು 50% ಜಿ.ಎಸ್.ಟಿ ಕಡಿಮೆ ಮಾಡಿಸುತ್ತೇನೆ' ಎಂದು ನಂಬಿಸಿ ಸುಮಾರು ಇಪ್ಪತ್ತು ಲಕ್ಷ ರೂ. ಹಣ ಪಡೆದು ವಂಚಿಸಿರುವ ಆರೋಪವಿದೆ. ಅದೇ ರೀತಿಯಲ್ಲಿ ಶಿವಾನಂದ ಮೂರ್ತಿ ಎಂಬುವರಿಗೆ ಸೆಕೆಂಡ್ ಹ್ಯಾಂಡ್ ಫಾರ್ಚುನರ್ ಕಾರು ಕೊಡಿಸುವುದಾಗಿ 5 ಲಕ್ಷ ರೂ. ಪಡೆದು ವಂಚಿಸಿದ್ದ ಸಂಬಂಧ ಆಗಸ್ಟ್‌ನಲ್ಲಿ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಮಲ್ಲೇಶ್ವರಂ ಪೊಲೀಸ್​ ಠಾಣೆಯಲ್ಲಿ ಮತ್ತೊಂದು ಪ್ರಕರಣ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಪಿಎಸ್​ಐ ಮೇಲೆ ಹಲ್ಲೆಗೈದು ತಪ್ಪಿಸಿಕೊಳ್ಳಲು ಯತ್ನ: ನಟೋರಿಯಸ್ ರೌಡಿಶೀಟರ್​ಗೆ ಗುಂಡೇಟು

Last Updated :Nov 26, 2023, 3:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.