ETV Bharat / state

ನಾಳಿನ ಬೆಂಗಳೂರು ಬಂದ್ ಯಶಸ್ವಿಯಾಗಲಿದೆ, ಬಂದ್​ಗೆ ಬಿಜೆಪಿ ಜೆಡಿಎಸ್ ಬೆಂಬಲ ನೀಡಲಿದೆ : ಬಿ ಎಸ್ ಯಡಿಯೂರಪ್ಪ

author img

By ETV Bharat Karnataka Team

Published : Sep 25, 2023, 10:52 PM IST

ತಮಿಳುನಾಡಿಗೆ ನೀರು ಬಿಡುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್​ ಯಶಸ್ವಿಯಾಗಲಿದೆ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

bengaluru-bandh-will-be-a-success-bs-yeddyurappa
ನಾಳಿನ ಬೆಂಗಳೂರು ಬಂದ್ ಯಶಸ್ವಿಯಾಗಲಿದೆ, ಬಂದ್​ಗೆ ಬಿಜೆಪಿ ಜೆಡಿಎಸ್ ಬೆಂಬಲ ನೀಡಲಿದೆ : ಬಿಎಸ್ ಯಡಿಯೂರಪ್ಪ

ನಾಳಿನ ಬೆಂಗಳೂರು ಬಂದ್ ಯಶಸ್ವಿಯಾಗಲಿದೆ, ಬಂದ್​ಗೆ ಬಿಜೆಪಿ ಜೆಡಿಎಸ್ ಬೆಂಬಲ ನೀಡಲಿದೆ : ಬಿಎಸ್ ಯಡಿಯೂರಪ್ಪ

ಬೆಂಗಳೂರು : ನಾಳೆ ರೈತ ಸಂಘಟನೆಗಳು ಹಾಗು ವಿವಿಧ ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್ ಯಶಸ್ವಿಯಾಗಲಿದೆ. ನಗರ ಪೊಲೀಸರು ಸೆಕ್ಷನ್ 144 ಹಾಕಲಿ. ಏನಾದರೂ ಮಾಡಲಿ. ಆದರೆ ಬಂದ್ ತಡೆಯಲು ಸಾಧ್ಯವಿಲ್ಲ. ಈ ಬಂದ್ ಗೆ ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳ ಬೆಂಬಲ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗು ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಾವೇರಿ ವಿಚಾರದಲ್ಲಿ ಪಕ್ಷದ ಹೋರಾಟ ಕುರಿತು ಪಕ್ಷದ ನಾಯಕರ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾವೇರಿ ವಿವಾದದ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡಿ ಕೆಲ ತೀರ್ಮಾನ ತೆಗೆದುಕೊಂಡಿದ್ದೇವೆ. ನಾಳೆ ಯಾವುದೇ ಗೊಂದಲ ಇಲ್ಲದೆ ಇಡೀ ಬೆಂಗಳೂರು ಬಂದ್ ಯಶಸ್ವಿ ಆಗಬೇಕು. ಹಾಗಾಗಿ ಹೋಟೆಲ್ ಮಾಲೀಕರಿಗೆ ಮನವಿ ಮಾಡುತ್ತೇನೆ. ನಾಳೆ ಬೆಳಗ್ಗೆಯಿಂದ ಸಂಜೆ 6ರ ವರೆಗೂ ಹೋಟೆಲ್ ಬಂದ್ ಮಾಡಬೇಕು. ಯಾರಾದ್ರೂ ಹೋಟೆಲ್ ತೆರೆದು ಗೊಂದಲ ಮಾಡಿದರೆ ಕಾನೂನು ಸುವ್ಯವಸ್ಥೆ ವ್ಯತ್ಯಯಕ್ಕೆ ನೀವೇ ಕಾರಣ. ವ್ಯತಿರಿಕ್ತ ಪರಿಣಾಮವಾದರೆ ನೀವೇ ಜವಾಬ್ದಾರಿ. ಹಾಗಾಗಿ ಗೊಂದಲ ಬೇಡ, ಹೋಟೆಲ್ ಮುಚ್ಚಿ ಸಹಕಾರ ಕೊಡಬೇಕು ಎಂದರು.

ಸೆಪ್ಟೆಂಬರ್​ 27ಕ್ಕೆ ಬಿಜೆಪಿಯಿಂದ ಪ್ರತಿಭಟನೆ : ನಾಳಿನ ಬಂದ್ ನಂತರ ಸೆಪ್ಟೆಂಬರ್ 27ರಂದು ಗಾಂಧಿ ಪ್ರತಿಮೆ ಎದುರು ಬಿಜೆಪಿ ಪ್ರತಿಭಟನೆ ನಡೆಸಲಿದೆ. ಶಾಸಕರು, ಸಂಸದರು, ಪರಿಷತ್ ಸದಸ್ಯರು ಮಾತ್ರ ಕುಳಿತು ಧರಣಿ ಮಾಡುತ್ತೇವೆ. ಕುಮಾರಸ್ವಾಮಿ ಅವರ ಬಳಿ ಈಗ ಮಾತನಾಡಿದ್ದೇನೆ. ನಾಳೆ ನಡೆಯಲಿರುವ ಬೆಂಗಳೂರು ಬಂದ್‌ಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ನಾಡಿದ್ದು ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹದಲ್ಲಿ ಭಾಗಿಯಾಗಲು ಹೇಳಿದ್ದೇನೆ. ಅವರು ಅದಕ್ಕೂ ಒಪ್ಪಿಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಎರಡೂ ಕೂಡ ಒಟ್ಟಿಗೆ ಪ್ರತಿಭಟನೆ ನಡೆಸಲಿದೆ ಎಂದರು.

ಕಾಂಗ್ರೆಸ್​ ಸರ್ಕಾರಕ್ಕೆ ಬಿಎಸ್​ವೈ ಎಚ್ಚರಿಕೆ : ಸರ್ಕಾರ ಸುಪ್ರೀಂಕೋರ್ಟ್ ಹೇಳುವ ಮೊದಲೇ ನೀರು ಬಿಟ್ಟು ಗೊಂದಲ ಮಾಡಿದೆ. ಇದು ಸರ್ಕಾರದ ಬೇಜವಾಬ್ದಾರಿತನ ಆಗಿದೆ. ಈಗಲೇ ಕುಡಿಯುವ ನೀರಿನ ಸಮಸ್ಯೆ ಇದೆ. ವಿದ್ಯುತ್ ಅಭಾವ ಇದೆ. ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯ. ಈಗ ಕಾವೇರಿ, ಹಾರಂಗಿ ಎಲ್ಲ ಸೇರಿ 54 ಟಿಎಂಸಿ ನೀರು ಮಾತ್ರ ಇದೆ. ಇನ್ನು ಒಂದು ಹನಿ ನೀರನ್ನು ಸರ್ಕಾರ ಬಿಟ್ಟರೆ ಮುಂದಾಗುವ ಎಲ್ಲ ಘಟನೆಗಳಿಗೆ ನೀವೇ ಹೊಣೆ. ಸರ್ಕಾರ ಮತ್ತೆ ನೀರು ಬಿಟ್ಟರೆ ಬೇರೆ ರೀತಿ ಆಗಲಿದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

ಬಿಜೆಪಿ- ಜೆಡಿಎಸ್​ ಒಟ್ಟಾಗಿ ಪ್ರತಿಭಟನೆ : ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡು ಏಜೆಂಟ್ ರೀತಿ ವರ್ತಿಸುತ್ತಿರುವುದನ್ನು ಖಂಡಿಸುತ್ತೇನೆ. ನಾವು ಎಲ್ಲಾ ಕಡೆ ಬಂದ್ ಆಗುವಂತೆ ನಮ್ಮ ಕಾರ್ಯಕರ್ತರು ಪ್ರಯತ್ನ ಮಾಡುತ್ತಾರೆ. ಅಕಸ್ಮಾತ್ ಎರಡು ದಿನದಲ್ಲಿ ಪರಿಸ್ಥಿತಿ ಸುಧಾರಣೆ ಆಗದಿದ್ದರೆ ಮುಂದಿನ ಹೋರಾಟ ಮಾಡುತ್ತೇವೆ. ಜೆಡಿಎಸ್, ಬಿಜೆಪಿ ಎಲ್ಲರೂ ಒಟ್ಟಾಗಿದ್ದೇವೆ. ಕಾವೇರಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಒಟ್ಟಾಗಿ ನಾವು ಹೋರಾಟ ಮಾಡುತ್ತೇವೆ ಎಂದರು.

ನಾಳಿನ ಬೆಂಗಳೂರು ಬಂದ್ ಗೆ ನಗರ ಪೊಲೀಸ್ ಆಯುಕ್ತರು ಅವಕಾಶ ನೀಡೋದಿಲ್ಲ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಸ್ವಯಂ ಪ್ರತಿಭಟನೆ ಇದು. ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಬಂದ್ ನಡೆಯಲಿದೆ. ನಾಳೆ ಬಂದ್ ಸಕ್ಸಸ್ ಆಗಿಯೇ ಆಗುತ್ತದೆ ಅವರು 144 ಸೆಕ್ಷನ್ ಹಾಕಲಿ, ಏನಾದರೂ ಮಾಡಲಿ ಬಂದ್ ಯಶಸ್ವಿ ಆಗುತ್ತದೆ ಎಂದರು. ಕಾವೇರಿ ನದಿ ದಕ್ಷಿಣ ಭಾರತದ ಆಸ್ತಿ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ ಅದಕ್ಕೆಲ್ಲ ನಾನು ಉತ್ತರ ಕೊಡಕ್ಕಾಗಲ್ಲ. ಡಿಕೆಶಿಗೇ ಇನ್ನು ಸ್ವಲ್ಪ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದರು.

ನೀರು ಕೊಡಿ ಎಂದರೆ ಸಾರಾಯಿ ಕೊಡುತ್ತಿದ್ದಾರೆ : ಹೊಸದಾಗಿ ಮಧ್ಯ ಮಾರಾಟಕ್ಕೆ ಪರವಾನಗಿ ಕೊಡುವ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗ ಈ ಸರ್ಕಾರ ಜನ ಹಿತವನ್ನು ಸಂಪೂರ್ಣ ಮರೆತಿದೆ. ನೀರು ಕೊಡಿ ಅಂತ ಹೋರಾಟ ಮಾಡ್ತಿದರೆ ಸಾರಾಯಿ ಅಂಗಡಿ ಕೊಡುತ್ತಿದ್ದಾರೆ. ಸಾರಾಯಿ ಅಂಗಡಿ ತೆರೆಯೋದು ಅಕ್ಷಮ್ಯ ಅಪರಾಧ. ಕುಡಿಯುವ ನೀರು ಕೊಡೋದು ಬಿಟ್ಟು ಸಾರಾಯಿ ಕುಡಿಸುತ್ತಿದ್ದಾರೆ.ಇದನ್ನ ನಾನು ಖಂಡಿಸುತ್ತೇನೆ. ತಕ್ಷಣ ಸಾರಾಯಿ ಅಂಗಡಿ ತೆರೆಯೋದನ್ನ ನಿಲ್ಲಿಸಬೇಕು ಅಂತ ಆಗ್ರಹ ಮಾಡುತ್ತೇನೆ ಎಂದರು.

ಮಧ್ಯ ಮಾರಾಟ ವಿಚಾರದ ಕುರಿತು ಸರ್ಕಾರದ ವಿರುದ್ಧ ಮಾಜಿ ಸಚಿವ ಮುನಿರತ್ನ ವ್ಯಂಗ್ಯವಾಡಿದ್ದು, ಮಾಲ್, ರೇಷನ್ ಅಂಗಡಿ, ಕೊನೆಗೆ ಫುಟ್ ಪಾತ್‌ಗಳಲ್ಲಿ ಮದ್ಯ ಮಾರಾಟ ಮಾಡುವ ಕಾಲ ಬರಲಿದೆ. ಅವರು ಕೊಡುವ 2 ಸಾವಿರ ವಾಪಸ್ ಪಡೆಯುವ ದಾರಿ ಇದು. ಪ್ರತಿಯಾಗಿ ನಾಲ್ಕು ಸಾವಿರ ಪಡೆಯುವ ಪ್ಲಾನ್ ಇದು. ಹಣ ವಾಪಸ್ ಪಡೆಯಲು ಜನರನ್ನು ಕುಡುಕರನ್ನಾಗಿ ಮಾಡುತ್ತಿದ್ದಾರೆ ಎಂದು ಬಿಎಸ್​ವೈ ಹರಿಹಾಯ್ದರು.

ಇದನ್ನೂ ಓದಿ : ಕಾವೇರಿ ಕಿಚ್ಚು: ರೈತರ ಹೋರಾಟಕ್ಕೆ ಹಿರಿಯ ನಟಿ ಲೀಲಾವತಿ ಸಾಥ್.. ಮಂಡ್ಯದಲ್ಲಿ ಬಿಜೆಪಿಯಿಂದ ಚಡ್ಡಿ ಚಳವಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.