ETV Bharat / state

ರಾಜ್ಯ ಕುಸ್ತಿ ಫೆಡರೇಷನ್​ ನೂತನ ಅಧ್ಯಕ್ಷರಾಗಿ ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಆಯ್ಕೆ

author img

By

Published : Dec 5, 2022, 4:38 PM IST

ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ ಮೇಲುಸ್ತುವಾರಿಯಲ್ಲಿ ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್​ಗೆ ಚುನಾವಣೆ ನಡೆದಿದ್ದು, ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Karnataka State Wrestling Federation
ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್

ಬೆಂಗಳೂರು: ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್‌ಗೆ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಫೆಡರೇಷನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ ಮೇಲುಸ್ತುವಾರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗುಣರಂಜನ್ ಶೆಟ್ಟಿ ಅವರನ್ನು ಭಾರತೀಯ ಕುಸ್ತಿ ಸಂಘದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅಭಿನಂದಿಸಿದರು.

ಕಳೆದ 50 ವರ್ಷಗಳಿಂದ ರಾಜ್ಯದಲ್ಲಿ ಕುಸ್ತಿಪಟುಗಳ ಅಭ್ಯುದಯಕ್ಕಾಗಿ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಗಿತ್ತು.

ಈ ಸಮಿತಿಯು 21 ದಿನಗಳ ಕಾಲ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿದೆ. ದೇಶದ ಕುಸ್ತಿ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಾ ಬಂದಿರುವ ಕರ್ನಾಟಕ ರಾಜ್ಯಕ್ಕೆ ಹೊಸ ಉತ್ಸಾಹಿ ಸಮಿತಿಯು ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ. 2022-26 ವರೆಗೆ ಈ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಸಮಿತಿಯ ಮೇಲುಸ್ತುವಾರಿ ಬಿ.ಎಸ್ ಪ್ರಸೂದ್ ಹೇಳಿದ್ದಾರೆ.

ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಮಾತನಾಡಿ, 'ಸರಿಯಾದ ನಿರ್ವಹಣೆ ಮತ್ತು ಮುತುವರ್ಜಿ ಇಲ್ಲದೆ ನಮ್ಮ ರಾಜ್ಯ ಕುಸ್ತಿಪಟುಗಳ ಕ್ಷೇತ್ರ ಸೊರಗಿದೆ. ಇದಕ್ಕೆ ಅಗತ್ಯ ಪುನಶ್ಚೇತನ ನೀಡುವ ಮೂಲಕ ರಾಜ್ಯದ ಕುಸ್ತಿಪಟುಗಳಿಗೆ ಅವಶ್ಯಕ ಸೌಲಭ್ಯಗಳನ್ನು ನೀಡುವುದು ಹಾಗೂ ಒಟ್ಟಾರೆಯಾಗಿ ನಮ್ಮ ರಾಜ್ಯದ ಕುಸ್ತಿ ಸ್ಪರ್ಧಾ ಕ್ಷೇತ್ರವನ್ನು ಅಭಿವೃದ್ದಿಗೊಳಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ನನ್ನ ನೇತೃತ್ವದ ತಂಡ ಸಮರ್ಥವಾಗಿ ನಿಭಾಯಿಸಲಿದೆ' ಎಂದು ಹೇಳಿದರು.

ಹರಿಹರದಲ್ಲಿ ಸೀನಿಯರ್ ಕುಸ್ತಿ ಚಾಂಪಿಯನ್‌ಶಿಪ್ ಟ್ರಯಲ್ಸ್: ಡಿಸೆಂಬರ್ 21 ರಿಂದ 25 ರ ವರೆಗೆ ಆಂಧ್ರ ಪ್ರದೇಶದ ವೈಜಾಗ್​ನಲ್ಲಿ ಸೀನಿಯರ್ಸ್ ಕುಸ್ತಿ ಚಾಂಪಿಯನ್‌ಶಿಪ್ ಸ್ಪರ್ಧೆ ಆಯೋಜಿಸಲಾಗಿದೆ. ಇದಕ್ಕೆ ನಮ್ಮ ರಾಜ್ಯದ ಕುಸ್ತಿಪಟುಗಳ ಆಯ್ಕೆಗಾಗಿ ಡಿಸೆಂಬರ್ 10 ರಂದು ಹರಿಹರದಲ್ಲಿ ಸೀನಿಯರ್ ಕುಸ್ತಿ ಚಾಂಪಿಯನ್‌ಶಿಪ್ ಟ್ರಯಲ್ಸ್ ಆಯೋಜಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಸರಕಾರದ ಜೊತೆಗೆ ಖಾಸಗಿ ಸಹಭಾಗಿತ್ವ: ರಾಜ್ಯದ ಕುಸ್ತಿಪಟುಗಳ ಅಭಿವೃದ್ದಿಗಾಗಿ ಸರಕಾರದ ಜೊತೆಗೆ ಕುಸ್ತಿ ಸ್ಪರ್ಧೆಯ ಬಗ್ಗೆ ಆಸಕ್ತಿ ಹೊಂದಿರುವ ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಸಹಕಾರವನ್ನು ತಗೆದುಕೊಳ್ಳಲಾಗುವುದು. ಸದ್ಯದಲ್ಲೇ ಅಸೋಷಿಯೇಷನ್ ಕಚೇರಿಯನ್ನು ಪ್ರಾರಂಭಿಸಲಿದ್ದೇವೆ. ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಹೆಚ್ಚಾಗಿ ಗ್ರಾಮೀಣ ಪ್ರದೇಶದವರು. ಅವರು ಸ್ಪರ್ಧೆಗೆ ತೆರಳಿದಾಗ ಗೌರವದಿಂದ ಭಾಗವಹಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಮ್ಮ ಸಮಿತಿಯು ಹೆಚ್ಚಿನ ಕಾಳಜಿ ವಹಿಸಲಿದೆ ಎಂದಿದ್ದಾರೆ. ಕೆಲವೇ ದಿನಗಳಲ್ಲಿ ರಾಜ್ಯ ಕುಸ್ತಿ ಫೆಡರೇಷನ್ ವತಿಯಿಂದ ರಾಜ್ಯ ಮತ್ತು ದೇಶೀಯ ಮಟ್ಟದ ಸ್ಪರ್ಧೆಗಳನ್ನು ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಕರ್ನಾಟಕ 1000 ಕಾರು ರೇಸ್​.. ತುಮಕೂರಲ್ಲಿ ಧೂಳೆಬ್ಬಿಸಿದ ಸ್ಪರ್ಧೆ, ಪ್ರೇಕ್ಷಕರು ಖುಷ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.