ಶಾಸಕಾಂಗ ಸಭೆಗೆ ಹಾಜರಾಗಲ್ಲ ಎಂದ ಯತ್ನಾಳ್; ಹೀಗಿದೆ ವಿಜಯೇಂದ್ರ ಪ್ರತ್ಯುತ್ತರ

author img

By ETV Bharat Karnataka Desk

Published : Dec 4, 2023, 12:15 PM IST

Updated : Dec 4, 2023, 9:35 PM IST

Basanagowda Yatnal

Basanagowda Yatnal decided not to attend BJP legislators meeting: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ಬಗ್ಗೆ ಅಸಮಾಧಾನ ಹೊಂದಿರುವ ಶಾಸಕ ಬಸನಗೌಡ ಯತ್ನಾಳ್ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ, ನ್ಯಾಯ ಕೊಡುವವರೆಗೂ ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಿದರು.

ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿಕೆ

ಬೆಳಗಾವಿ: ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೆ ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ತಿಳಿಸಿದ್ದಾರೆ. ಸುವರ್ಣಸೌಧದಲ್ಲಿಂದು ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಭಾಗದವರಿಗೆ ನಾಯಕತ್ವ ನೀಡಿಲ್ಲ. ನಾವು ದ.ಕರ್ನಾಟಕ ಭಾಗದ ನಾಯಕರ ಗುಲಾಮರಲ್ಲ ಎಂದು ಅಸಮಾಧಾನ ಹೊರಹಾಕಿದರು.

ದೇಶಕ್ಕೆ ನರೇಂದ್ರ ಮೋದಿಯೇ ಗ್ಯಾರಂಟಿ ಇರುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿದೆ. ಈ ಗೆಲುವಿಗೆ ಕಾರಣ ಹಿಂದುತ್ವ, ಅಭಿವೃದ್ಧಿ, ಹೊಂದಾಣಿಕೆ ಇಲ್ಲದ ರಾಜಕಾರಣ. ಕುಟುಂಬ ರಾಜಕಾರಣವನ್ನು ತೆಲಂಗಾಣದಲ್ಲಿ ಕಿತ್ತು ಹಾಕಲಾಗಿದೆ. ಇಡೀ ದೇಶದಲ್ಲೂ ಕುಟುಂಬ ರಾಜಕಾರಣವನ್ನು ಕಿತ್ತು ಹಾಕಲಾಗುವುದು ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು.

ಮುಂದುವರೆದು ಮಾತನಾಡಿ, ಪ್ರಾಮಾಣಿಕರು, ಹಿಂದೂ ವಿಚಾರಧಾರೆ ಹೊಂದಿರುವವರು ಆಡಳಿತ ನಡೆಸಬೇಕು. ವಂಶವಾದದ ನಿರ್ಮೂಲನೆಯೇ ನಮ್ಮ ಗುರಿ. ಇನ್ಮೇಲೆ ಬದಲಾವಣೆ ಆಗಲಿದೆ. ಲೋಕಸಭೆ ಚುನಾವಣೆ ಮುಗಿಯಲಿ, ಬದಲಾವಣೆ ಬರುತ್ತದೆ ಎಂದರು.

ಬಿ.ವೈ.ವಿಜಯೇಂದ್ರ ಹೇಳಿಕೆ

ಬಿ.ವೈ. ವಿಜಯೇಂದ್ರ ಪ್ರತ್ಯುತ್ತರ: ನನ್ನ ಆಯ್ಕೆ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವವರಿಗೆ ರಾಷ್ಟ್ರ ನಾಯಕರು ಉತ್ತರ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡುತ್ತಾ, ನಾನು ಬೇರೆ ವಿಚಾರದ ಬಗ್ಗೆ ಮಾತನಾಡಲ್ಲ. ಅಧಿವೇಶನ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯ ಬಳಿಕ ವಿಪಕ್ಷ, ರಾಜ್ಯಾಧ್ಯಕ್ಷರು ಬದಲಾವಣೆ ಆಗುತ್ತಾರೆ ಎಂಬ ಯತ್ನಾಳ್ ಹೇಳಿಕೆಗೆ, ತುಂಬಾ ಸಂತೋಷ ಎಂದರು. ಬಿಜೆಪಿ ಗೆಲುವು ಕಾಂಗ್ರೆಸ್ ಪಕ್ಷವನ್ನು ಪಂಚರ್ ಮಾಡಿದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ, ಇಂಡಿಯಾ ಮೈತ್ರಿಕೂಟವನ್ನೇ ಪಂಚರ್ ಮಾಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗುತ್ತೇನೆ ಎನ್ನುತ್ತಿದ್ದವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಅವರ ವಿಶ್ವಾಸಕ್ಕೆ ದೊಡ್ಡ ಏಟು ನೀಡಿದೆ ಎಂದರು.

ಬರ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನಾವು, ಜೆಡಿಎಸ್​ನವರು ಜಂಟಿಯಾಗಿ ಹೋರಾಟ ಮಾಡುತ್ತೇವೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ಬರಗಾಲ‌ ಇದೆ, ರೈತರು ಸಂಕಷ್ಟದಲ್ಲಿದ್ದಾರೆ. ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ನಮ್ಮ‌ ಸರ್ಕಾರ ಇದ್ದಾಗ ಉತ್ತರ ಕರ್ನಾಟಕ ಭಾಗಕ್ಕೆ ಹಲವು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದನ್ನು ಈ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿಲ್ಲ. ಈ ಕುರಿತು ಸದನದಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಪಕ್ಷದ ಪೊಳ್ಳು ಗ್ಯಾರಂಟಿಗಳನ್ನು ಜನ ನಂಬಲಿಲ್ಲ: ಬಿ.ವೈ.ವಿಜಯೇಂದ್ರ

Last Updated :Dec 4, 2023, 9:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.