ವಿದೇಶಿಯರ ಪಾಸ್​ಪೋರ್ಟ್ ವಶಕ್ಕೆ ಪಡೆಯಲು ಬ್ಯಾಂಕ್‌ಗೆ ಅಧಿಕಾರವಿಲ್ಲ: ಹೈಕೋರ್ಟ್

author img

By ETV Bharat Karnataka Desk

Published : Jan 17, 2024, 8:08 AM IST

bank-not-authorized-to-seize-passport-of-foreigners-high-court

ವಿದೇಶಿಗರ ಪಾಸ್​ಪೋರ್ಟ್ ಮತ್ತು ಭಾರತೀಯ ಸಾಗರೋತ್ತರ ನಾಗರಿಕ ಕಾರ್ಡ್‌ ವಶಕ್ಕೆ ಪಡೆಯಲು ಬ್ಯಾಂಕ್‌ಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಬೆಂಗಳೂರು: ವಿದೇಶಿ ಪೌರತ್ವ ಹೊಂದಿರುವವರ ಪಾಸ್​ಪೋರ್ಟ್ ಮತ್ತು ಭಾರತೀಯ ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡ್‌ ವಶಕ್ಕೆ ಪಡೆಯುವುದಕ್ಕೆ ಬ್ಯಾಂಕ್‌ಗೆ ಅಧಿಕಾರ ಇರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ತನ್ನ ಪಾಸ್​ಪೋರ್ಟ್ ಮತ್ತು ಒಸಿಐ ಕಾರ್ಡ್‌ ಅನ್ನು ವಶಕ್ಕೆ ಪಡೆದಿದ್ದ ಕ್ರಮವನ್ನು ಪ್ರಶ್ನಿಸಿ ಯುಕೆ ಪೌರತ್ವ ಹೊಂದಿರುವ ಕೋಶಿ ವರ್ಗೀಸ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

2022ರ ಅಕ್ಟೋಬರ್ 17ರಿಂದ ಬ್ಯಾಂಕ್ ವಶದಲ್ಲಿಟ್ಟುಕೊಂಡಿದ್ದ ಬ್ರಿಟಿಷ್ ಪಾಸ್​ಪೋರ್ಟ್ ಮತ್ತು ಒಐಸಿ ಕಾರ್ಡನ್ನು ಹಿಂದಿರುಗಿಸಲು ಕೋರ್ಟ್ ನಿರ್ದೇಶನ ನೀಡಿದೆ. ಅರ್ಜಿದಾರರು ಗ್ರೇಟ್ ಬ್ರಿಟನ್‌ನ ಪ್ರಜೆಯಾಗಿದ್ದು, ಭಾರತದಲ್ಲಿ 2017ರಿಂದ ಭಾರತದಲ್ಲಿ ನೆಲೆಸಲು ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್(ಒಸಿಐ) ಅನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(ಎಫ್‌ಆರ್‌ಆರ್‌ಒ) ನೀಡಿದೆ. ಪಾಸ್​ಪೋರ್ಟ್ ನೀಡುವ ಸಂದರ್ಭದಲ್ಲಿ ಇಲ್ಲಿಯ ಯಾವುದೇ ಕಾನೂನುಗಳ ಅಡಿಯಲ್ಲಿ ನೀಡಿಲ್ಲ ಎಂದು ಕೋರ್ಟ್​ ಹೇಳಿದೆ.

ಒಸಿಐ ಕಾರ್ಡ್‌ ಅನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿದೇಶಿ ಪ್ರಜೆ ಭಾರತದಲ್ಲಿ ಉಳಿಯುವುದಕ್ಕಾಗಿ ನೀಡುವ ಅನುಮತಿಯಾಗಿದೆ. ಇದು ಅಧಿಕಾರಿಗಳಿಗೆ ಮತ್ತೆ ಹಿಂದಿರುಗಿಸಬೇಕಾದ ವಸ್ತು. ಅರ್ಜಿದಾರರ ಒಸಿಐ ಕಾರ್ಡ್ ಮತ್ತು ಪಾಸ್​ಪೋರ್ಟ​​​ನ್ನು ಬ್ಯಾಂಕ್ ಅಧಿಕಾರಿಗಳಿಗೆ ಠೇವಣಿ ಬದಲು ಸ್ವಯಂಪ್ರೇರಿತವಾಗಿ ನೀಡಿದ್ದರೂ ಅದನ್ನು ಬ್ಯಾಂಕ್ 15 ದಿನಕ್ಕಿಂತಲೂ ಹೆಚ್ಚು ಕಾಲ ತನ್ನಲ್ಲಿಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿತು.

ಅರ್ಜಿದಾರರ ಒಸಿಐ ಎಫ್‌ಆರ್‌ಆರ್‌ಒ ಕಚೇರಿಗೆ ಬ್ಯಾಂಕ್ ಅಧಿಕಾರಿಗಳು ಹಿಂದಿರುಗಿಸಬೇಕಾಗಿತ್ತು. ಅಗತ್ಯವಿದ್ದಲ್ಲಿ ಎಫ್‌ಆರ್‌ಆರ್‌ಒ ಕಚೇರಿ ಅಧಿಕಾರಿಗಳು ಅರ್ಜಿದಾರರ ವಿರುದ್ಧ ಕ್ರಮಕ್ಕೆ ಮುಂದಾಗಬಹುದಿತ್ತು. ಆದರೆ, ಬ್ಯಾಂಕ್ ಈ ಕಾರ್ಯಕ್ಕೆ ಮುಂದಾಗದೆ, ತನ್ನಲ್ಲಿ ಉಳಿಸಿಕೊಂಡಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಪೀಠ ತಿಳಿಸಿತು.

ಪಾಸ್​ಪೋರ್ಟ್ ಯುಕೆಯಿಂದ ಪಡೆದುಕೊಂಡಿದ್ದು, ಭಾರತದಲ್ಲಿ ಅದನ್ನು ವಶಕ್ಕೆ ಪಡೆಯುವುದಕ್ಕೆ ಅಧಿಕಾರವಿಲ್ಲ. ಆದರೆ, ಬ್ಯಾಂಕ್ ಈ ಎರಡೂ ವಸ್ತುಗಳನ್ನು ನಾಲ್ಕು ವರ್ಷಗಳ ಕಾಲ ತನ್ನಲ್ಲಿಟ್ಟುಕೊಂಡಿದೆ. ಆದ್ದರಿಂದ ಎರಡೂ ದಾಖಲೆಗಳನ್ನು ಅರ್ಜಿದಾರರಿಗೆ ಹಿಂದಿರುಗಿಸಬೇಕು ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2019ರಲ್ಲಿ ಅಂದಿನ ವಿಜಯಾ ಬ್ಯಾಂಕ್ (ಪ್ರಸ್ತುತ ಬ್ಯಾಂಕ್ ಆಫ್ ಬರೋಡಾ) ಅರ್ಜಿದಾರರ, ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ಧ ವಂಚನೆ, ಪೋರ್ಜರಿ ಸೇರಿದಂತೆ ವಿವಿಧ ಆರೋಪಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಲ್ಲಿ ಅರ್ಜಿದಾರ ಕೋಶಿ ವರ್ಗೀಸ್ ಅವರು 5.6 ಕೋಟಿ ರೂ. ಮೊತ್ತದ ಎರಡು ಗೃಹ ಸಾಲಗಳಿಗೆ ಸಂಬಂಧಿಸಿದಂತೆ ಜವಾಬ್ದಾರಿ ವಹಿಸಿಕೊಂಡಿದ್ದರು. ಅದನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಪಾಸ್​ಪೋರ್ಟ್ ಮತ್ತು ಒಸಿಐ ಕಾರ್ಡನ್ನು 2018ರ ಅಕ್ಟೋಬರ್‌ನಲ್ಲಿ ಬ್ಯಾಂಕ್‌ ವಶಕ್ಕೆ ನೀಡಿದ್ದರು. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ, ಬ್ಯಾಂಕ್ ತನ್ನ ಪಾಸ್​ಪೋರ್ಟ್ ವಶಕ್ಕೆ ಪಡೆದಿದೆ ಎಂದು ಆರೋಪಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಬ್ಯಾಂಕ್ ಪರ ವಕೀಲರು, ಅರ್ಜಿದಾರರ ಸಾಲಕ್ಕೆ ಬದಲಾಗಿ ಬ್ಯಾಂಕ್‌ಗೆ ನೀಡಿರುವ ಚೆಕ್‌ಗಳು ನಗದೀಕರಿಸುವವರೆಗೆ ತಮ್ಮ ದಾಖಲೆಗಳಾದ ಪಾಸ್​ಪೋರ್ಟ್ ಮತ್ತು ಒಸಿಐ ಅನ್ನು ಸ್ವಯಂಪ್ರೇರಿತವಾಗಿ ಬ್ಯಾಂಕ್‌ಗೆ ನೀಡಿದ್ದಾರೆ ಎಂದು ವಾದಿಸಿದ್ದರು.

ಇದನ್ನೂ ಓದಿ: ನ್ಯಾಯಾಲಯದ ಆದೇಶ ಪಾಲಿಸದ ಸರ್ಕಾರ; 5 ಲಕ್ಷ ಠೇವಣಿ ಇಡುವಂತೆ ಹೈಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.