ETV Bharat / state

ಬೆಂಗಳೂರು ಕೃಷಿ ಮೇಳ - 2020: ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ

author img

By

Published : Nov 10, 2020, 7:56 AM IST

ಪ್ರತಿ ವರ್ಷದಂತೆ ಈ ಬಾರಿಯೂ ಸಹ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಗುವುದು. ರಾಜ್ಯಮಟ್ಟದಲ್ಲಿ 6, ಜಿಲ್ಲಾ ಮಟ್ಟದ 17 ಮತ್ತು ತಾಲೂಕು ಮಟ್ಟದ 90 ಕೃಷಿ ಸಾಧಕರಿಗೆ ಪ್ರಶಸ್ತಿ ಕೊಡಲಾಗುವುದು.

Bangalore Agricultural Fair -2020 Awarding of For agricultural pros
ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ

ಯಲಹಂಕ : ಕೊರೊನಾ ಹಿನ್ನೆಲೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಈ ಬಾರಿ ಸರಳ ಕೃಷಿ ಮೇಳ ಆಯೋಜನೆ ಮಾಡಿದೆ. ನವೆಂಬರ್ 11 ರಿಂದ ಕೃಷಿ ಮೇಳ ಶುರುವಾಗಲಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಗಾಂಧಿ ವಿಜ್ಞಾನ ಕೃಷಿ ಕೇಂದ್ರ (ಜಿಕೆವಿಕೆ) ಅವರಣದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಪ್ರತಿವರ್ಷದಂತೆ ಈ ಬಾರಿ ಸಹ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಗುವುದು. ರಾಜ್ಯಮಟ್ಟದಲ್ಲಿ 6, ಜಿಲ್ಲಾ ಮಟ್ಟದ 17 ಮತ್ತು ತಾಲೂಕು ಮಟ್ಟದ 90 ಕೃಷಿ ಸಾಧಕರಿಗೆ ಪ್ರಶಸ್ತಿ ಕೊಡಲಾಗುವುದು.

ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗೆ ಡಾ. ಕೆ. ಶಿವರಾಮು ಪಾತ್ರರಾಗಿದ್ದಾರೆ. ಇವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಹಿರಿಯ ವಾರ್ತಾ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಶಿವರಾಮು ಮಾಧ್ಯಮಗಳಲ್ಲಿ ಕೃಷಿ ಕಾರ್ಯಗಾರ ಮತ್ತು “ಕೃಷಿಕರ ಕೈಗೆ ಲೇಖನಿ” ತರಬೇತಿ ಕಾರ್ಯಕ್ರಮಗಳನ್ನು. ಕೃಷಿ ವಿಶ್ವವಿದ್ಯಾನಿಲಯದ ಯೂಟ್ಯೂಬ್ ಚಾನಲ್, ಫೇಸುಬುಕ್ ಮತ್ತು ಟ್ವಿಟರ್ ಪ್ರಾರಂಭಿಸಲು ಕಾರಣಕರ್ತರಾಗಿದ್ದಾರೆ. ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿಯೇ ಪ್ರಪ್ರಥಮ ಭಾರಿಗೆ ವಾಟ್ಸ್​​​​​​ಆ್ಯಪ್​ ಮೂಲಕ 3.25 ಲಕ್ಷ ರೈತರನ್ನ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.

ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿಗೆ ಕೆ.ಎಂ. ರಾಜಣ್ಣ ಪಾತ್ರರಾಗಿದ್ದಾರೆ. ಕೋಲಾರ ತಾಲೂಕಿನ ಕೃಷ್ಣಾಪುರ ಗ್ರಾಮದವರಾದ ರಾಜಣ್ಣ ಬಿ.ಎ. ಮತ್ತು ಎಲ್.ಎಲ್.ಬಿ ಪದವಿದರರಾಗಿದ್ದರು, ಯಾವುದೇ ಹುದ್ದೆಗೆ ಪ್ರಯತ್ನಿಸದೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ 28.0 ಎಕರೆ ಜಮೀನಿನಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಅರಣ್ಯ ಕೃಷಿ, ಹೈನುಗಾರಿಕೆ, ಕುರಿ ಮತ್ತು ಕೋಳಿ ಸಾಕಣೆಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಕೆನರಾ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಹೆಚ್.ಕೆ. ಸುರೇಶ್ ಪಾತ್ರರಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿ ಗ್ರಾಮದವರಾದ ಸುರೇಶ್‍ ತಮ್ಮ 6 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಮಾವು ಬೆಳೆಯುತ್ತಿದ್ದು, ಅಂತರ ಬೆಳೆಯಾಗಿ ರಾಗಿ, ತೊಗರಿ, ಅವರೆ ಮತ್ತು ನವಣೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೇ ತರಕಾರಿಗಳನ್ನು ಬೆಳೆದು ನಿರಂತರ ಆದಾಯ ಗಳಿಸುತ್ತಿದ್ದಾರೆ. ಬದುಗಳ ಮೇಲೆ ಮತ್ತು ಜಮೀನಿನ ಸುತ್ತಾ ತೆಂಗು, ಅರಣ್ಯ ಮರಗಳಾದ ಸಿಲ್ವರ್ ಒಕ್, ಬೇವು, ತೇಗ, ಹೆಬ್ಬೇವು, ಹಲಸು, ಶ್ರೀಗಂಧ, ಹೊಂಗೆ, ಇತ್ಯಾದಿಗಳನ್ನು ಬೆಳೆಸಿದ್ದಾರೆ.

ಡಾ. ಎಂ.ಹೆಚ್. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸಿಗೆ ಎಂ. ಆನಂದ್ ಪಾತ್ರರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಗ್ರಾಮದವರಾದ ಮರಿಗೌಡ ಟೆಲಿಕಮ್ಯೂನಿಕೇಶನ್ ಡಿಪ್ಲೊಮಾ ವ್ಯಾಸಂಗ ಮಾಡಿದ್ದು ತಮ್ಮ 16 ಎಕರೆ ಜಮೀನಿನಲ್ಲಿ ತರಕಾರಿ ಬೆಳೆಗಳು ಮತ್ತು ವಿದೇಶಿ (ಎಕ್ಸಾಟಿಕ್) ತರಕಾರಿಗಳನ್ನು ನೂತನ ತಂತ್ರಜ್ಞಾನಗಳನ್ನು ಬಳಸಿ ಹಸಿರು ಮನೆಗಳಲ್ಲಿ ವೈಜ್ಞಾನಿಕವಾಗಿ ಹೈಡ್ರೋಪೋನಿಕ್ಸ್ ತಂತ್ರಜ್ಞಾನ ಬಳಸಿ ಬೆಳೆದು ಅಧಿಕ ಲಾಭ ಗಳಿಸುತ್ತಿದ್ದಾರೆ. ಜೊತೆಗೆ ಹೂವು, ಹಣ್ಣು, ಪ್ಲಾಂಟೇಶನ್, ಸಾಂಬಾರು, ಔಷಧ ಮತ್ತು ಸುಗಂಧ ಬೆಳೆಗಳನ್ನು ಸಹ ಬೆಳೆದು ಹೆಚ್ಚುವರಿ ಇಳುವರಿ ಮತ್ತು ಆದಾಯ ಪಡೆಯುತ್ತಿದ್ದಾರೆ.

ಸಿ. ಬೈರೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಎಂ.ಎನ್. ರವಿಶಂಕರ್ ಪಾತ್ರರಾಗಿದ್ದಾರೆ. ಕೋಲಾರ ತಾಲೂಕಿನ ಮದನಹಳ್ಳಿ ಗ್ರಾಮದವರಾದ ರವಿಶಂಕರ್‍ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ತಮ್ಮ 12 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿಯಲ್ಲಿ ಕೃಷಿ, ತೋಟಗಾರಿಕೆ, ಜೇನು ಕೃಷಿ, ಕುರಿ, ಮೇಕೆ, ಹಂದಿ ಮತ್ತು ಮೀನು ಸಾಕಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಉಪ ಕಸುಬಾಗಿ ರೇಷ್ಮೆ ಕೃಷಿ ಅಳವಡಿಸಿಕೊಂಡಿದ್ದು, ಹಿಪ್ಪುನೇರಳೆ ಬೆಳೆಯನ್ನು ಜೋಡಿ ಸಾಲು ಪದ್ಧತಿಯಲ್ಲಿ ಬೆಳೆದು ರೇಷ್ಮೆ ಹುಳು ಸಾಕಣೆ ಮಾಡಿ ವಾರ್ಷಿಕವಾಗಿ 1.80 ಲಕ್ಷ ರೂಗಳ ಹೆಚ್ಚುವರಿ ಆದಾಯ ಪಡೆಯುತ್ತಿದ್ದಾರೆ. ಜೊತೆಗೆ ಅರಣ್ಯ ಕೃಷಿಗೆ ಒತ್ತು ನೀಡಿದ್ದು, ತಮ್ಮ ತೋಟದ ಸುತ್ತ ಬದುಗಳ ಮೇಲೆ ಮರಗಳನ್ನು ಬೆಳೆದಿದ್ದಾರೆ.

ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಸಿ.ಎಂ. ನವೀನ್ ಕುಮಾರ್​ ಪಾತ್ರರಾಗಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಚಿಕ್ಕಬೊಮ್ಮನಹಳ್ಳಿಯವರಾದ ನವೀನ್ ಕುಮಾರ್ ಬಿ.ಎ. ಪದವಿ ಬಳಿಕ ಪೊಲೀಸ್ ಕೆಲಸವನ್ನು ತ್ಯಜಿಸಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ 12 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ, ತೋಟಗಾರಿಕೆ ಮತ್ತು ತರಕಾರಿ ಬೆಳೆಗಳ ಜೊತೆಗೆ ಪೌಷ್ಟಿಕ ಕೈ ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ಇದಲ್ಲದೇ ನರ್ಸರಿ ಸಸಿಗಳನ್ನು ಮಾರಾಟ ಮಾಡಿ ಅಧಿಕ ಆದಾಯ ಗಳಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.