ETV Bharat / state

ಸಿಎಂಗೆ ಸಾಹಿತಿಗಳಿಂದ ಬಹಿರಂಗ ಪತ್ರ : ಬಸವ ಜಯಂತಿಯಂತೆ ಈದ್ ಆಚರಿಸಿ ಶಾಂತಿ ಮರು ಸ್ಥಾಪನೆಗೆ ಒತ್ತಾಯ

author img

By

Published : Jun 24, 2022, 8:40 PM IST

ಸರ್ಕಾರವು ಪವಿತ್ರ ರಂಜಾನ್ ಈದ್ ಉಲ್ ಫಿತರ್ ಹಬ್ಬವನ್ನು ಬಸವ ಜಯಂತಿಯಂತೆಯೇ ಆಚರಿಸಿ ಸತತವಾಗಿ ಕೋಮು ದ್ವೇಷಿಗಳ ದಾಳಿಗೆ ತುತ್ತಾಗುತ್ತಿರುವ ಮುಸ್ಲಿಂ ನಾಗರಿಕರನ್ನು ಉದ್ದೇಶಿಸಿ ಅವರ ರಕ್ಷಣೆ ಮತ್ತು ಸುರಕ್ಷತೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರೆ, ಅದು ಮತ್ತಷ್ಟು ಹೃದಯ ಸ್ಪರ್ಶಿಯಾಗುತ್ತಿತ್ತು ಎಂದು ಸಿಎಂಗೆ ಸಾಹಿತಿಗಳು ಪತ್ರ ಬರೆದಿದ್ದಾರೆ..

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ಕರ್ನಾಟಕದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಬಗ್ಗೆ ಕಾಳಜಿ ಹಾಗೂ ನಾಡನ್ನು “ಸರ್ವ ಜನಾಂಗದ ಶಾಂತಿಯ ತೋಟ"ವಾಗಿ ತುರ್ತಾಗಿ ಮರುಸ್ಥಾಪಿಸುವುದರ ಬಗ್ಗೆ ಸಾಹಿತಿಗಳು, ಚಿಂತಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಸರ್ಕಾರವು ಪವಿತ್ರ ರಂಜಾನ್ ಈದ್ ಉಲ್ ಫಿತರ್ ಹಬ್ಬವನ್ನು ಬಸವ ಜಯಂತಿಯಂತೆಯೇ ಆಚರಿಸಿ ಸತತವಾಗಿ ಕೋಮು ದ್ವೇಷಿಗಳ ದಾಳಿಗೆ ತುತ್ತಾಗುತ್ತಿರುವ ಮುಸ್ಲಿಂ ನಾಗರಿಕರನ್ನು ಉದ್ದೇಶಿಸಿ ಅವರ ರಕ್ಷಣೆ ಮತ್ತು ಸುರಕ್ಷತೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರೆ, ಅದು ಮತ್ತಷ್ಟು ಹೃದಯ ಸ್ಪರ್ಶಿಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಒಂದು ತಿಂಗಳಿಂದ ತಮ್ಮನ್ನು ಭೇಟಿ ಮಾಡಿ ಈ ಕೆಳಕಂಡ ಪತ್ರವನ್ನು ಸಲ್ಲಿಸಲು ತಮ್ಮ ಕಚೇರಿಯ ಮೂಲಕ ಪ್ರಯತ್ನಿಸಿದ್ದೇವೆ. ನಮ್ಮ ಪ್ರಯತ್ನಗಳು ವಿಫಲವಾಗಿರುವುದರಿಂದ, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳು ಕೂಡಿರುವ ಈ ಪತ್ರವನ್ನು ಬಹಿರಂಗ ಪತ್ರವನ್ನಾಗಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಕಾಳಜಿಗಳನ್ನೂ ಸಲಹೆಗಳನ್ನೂ ತಮ್ಮ ಗಮನಕ್ಕೆ ತರುವುದು ನಾಗರಿಕರಾಗಿ ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ.

ತಾವು ಹಾಗೂ ತಮ್ಮ ಸರ್ಕಾರವು ಈ ಪತ್ರವನ್ನು ಗಂಭೀರವಾಗಿ ಪರಿಗಣಿಸುವಿರೆಂದು ನಂಬಿದ್ದೇವೆ ಎಂದು ಗಿರೀಶ್ ಕಾಸರವಳ್ಳಿ, ಎಂ. ಡಿ ಪಲ್ಲವಿ, ವೈದೇಹಿ, ಬಿ. ಸುರೇಶ್, ಹೆಚ್.ಎಸ್ ಅನುಪಮ, ಡಾ. ತೇಜಸ್ವಿನಿ ನಿರಂಜನ್, ನಂಜರಾಜ್ ಅರಸ್ ಸೇರಿದಂತೆ 75 ಜನ ಸಾಹಿತಿಗಳು, ಚಿಂತಕರು, ಬರಹಗಾರರು ಹಾಗೂ ನಿವೃತ್ತ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಸಾಹಿತಿಗಳಿಂದ ಐದು ಬೇಡಿಕೆ

1. ರಾಜ್ಯ ಪೊಲೀಸ್ ಪಡೆಯು ತನ್ನ ಸಾಂವಿಧಾನಿಕ ಕರ್ತವ್ಯಕ್ಕೆ ಬದ್ಧವಾಗಿ ಕಾನೂನು ಪಾಲನೆಯನ್ನು ಎತ್ತಿ ಹಿಡಿದು ಸಮಾಜದ ದುರ್ಬಲ ವರ್ಗದ ನಾಗರಿಕರ ರಕ್ಷಣೆ ಮಾಡುವಂತೆ ಸೂಕ್ತ ನಿರ್ದೇಶನ ನೀಡಬೇಕು. ಮತೀಯವಾದಿ ಮತ್ತು ಜಾತಿವಾದಿ ಅಪರಾಧಗಳಿಗೆ ತುತ್ತಾಗುವ ನಾಗರಿಕರಿಗೆ ಪೂರ್ಣ ನ್ಯಾಯ ದೊರಕುವಂತೆಯೂ, ಇಂಥ ಅಪರಾಧಗಳನ್ನು ಎಸಗುವವರ ವಿರುದ್ಧ ಸಾಕ್ಷಿದಾರರು ಧೈರ್ಯದಿಂದ ಮುಂದೆ ಬಂದು ಮುಕ್ತವಾಗಿ ತಮ್ಮ ಸಾಕ್ಷ್ಯವನ್ನು ನೀಡುವಂತೆಯೂ, ಅವರಿಗೆಲ್ಲಾ ಪೂರ್ಣ ರಕ್ಷಣೆ ಒದಗಿಸಿ ಅವರಲ್ಲಿ ವಿಶ್ವಾಸ ತುಂಬಿಸಬೇಕು.

2. ಕೋಮುವಾದಿ ಗಲಭೆಗಳಿಂದಾಗಿ ಹಿಂಸೆ, ಸಾವು ಹಾಗು ಬದುಕು ನಷ್ಟವಾದಾಗ ಸ್ಥಳೀಯ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಜವಾಬ್ದಾರರಾದ ಅಧಿಕಾರಿಗಳ ವಿರುದ್ಧ ವಿಶೇಷವಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ಹಾಗೂ ಪೊಲೀಸ್​ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

3. ನಿರ್ದಿಷ್ಟ ಕೋಮಿನ ಜನರನ್ನು ನಿಂದಿಸಿ ಅಮಾನವೀಕರಣಗೊಳಿಸುವುದರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಬೇಕು. ದೈಹಿಕ ಹಿಂಸೆಗೆ ಪ್ರಚೋದನೆ ನೀಡುವಂತಹ ಪ್ರವೃತ್ತಿಗೆ ತಡೆಯೊಡ್ಡಿ ಅಲ್ಪಸಂಖ್ಯಾತರ ವಿರುದ್ಧ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತಿರುವ ವ್ಯಕ್ತಿಗಳ ವಿರುದ್ಧ ಪ್ರಬಲ ಕಾನೂನು ಕ್ರಮ ಜರುಗಿಸಬೇಕು.

4. ಸಾಮಾಜಿಕ ಜಾಲತಾಣಗಳು ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸಹ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಸುಳ್ಳು ಸುದ್ದಿಗಳು ಮತ್ತು ಗಾಳಿ ಸಮಾಚಾರಗಳನ್ನು ಹಬ್ಬಿಸುವ ಕೃತ್ಯ ನಡೆಯುತ್ತಿದೆ. ಇದರಿಂದ ಈ ಸಮುದಾಯಗಳನ್ನು ಅನ್ಯವಾಗಿಸುವ ಮತ್ತು ಅವರನ್ನು ಹಿಂಸೆಗೆ ಒಳಪಡಿಸುವ ಅಪಾಯ ಹೆಚ್ಚಾಗುತ್ತಿದೆ. ಇಂಥ ಅಪರಾಧಗಳ ವಿರುದ್ಧ ಸರ್ಕಾರ ಬಹಿರಂಗವಾಗಿ ದನಿಯೆತ್ತಿ ಮಾತನಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.

5. ನೀತಿಯುತ ಪತ್ರಿಕೋದ್ಯಮದ ತತ್ವಬದ್ಧ ಮೌಲ್ಯಗಳನ್ನು ಉಲ್ಲಂಘಿಸಿ ಸುಳ್ಳು ಮಾಹಿತಿಯ ಸುದ್ದಿ ಬಿತ್ತರಿಸುತ್ತಾ ಸಮಾಜದಲ್ಲಿ ಅಸಹಿಷ್ಣುತೆ, ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುತ್ತಿರುವ ಮಾಧ್ಯಮಗಳಲ್ಲಿನ ಹಲವರಿಗೆ ಅಂತಹ ಕರ್ತವ್ಯಲೋಪಗಳನ್ನು ನಿಗ್ರಹಿಸುವಂತೆ ಒತ್ತಾಯಿಸಬೇಕು. ರಾಜ್ಯದಲ್ಲಿನ ಸೌಹಾರ್ದಯುತ ವಾತಾವರಣವನ್ನು ನಿರ್ಭೀತರಾಗಿ ಹಾಳುಗೆಡವುತ್ತಿರುವುದು ಒಪ್ಪಿತವಲ್ಲವೆಂಬುದನ್ನು ಮನದಟ್ಟು ಮಾಡಬೇಕು.

ರಾಜ್ಯ ಸರ್ಕಾರವು ಈ ಸಕ್ರಿಯ ಕ್ರಮಗಳನ್ನು ಕೈಗೊಂಡರೆ ಹಿಂಸೆಯಲ್ಲಿ ತೊಡಗಿರುವ ಹಾಗೂ ಹಿಂಸೆಗೆ ಪ್ರಚೋದನೆ ನೀಡುತ್ತಿರುವವರಿಗೆ ಹಾಗೂ ನಾಗರಿಕರಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ಮೂಡಿಸುತ್ತಿರುವವರಿಗೆ ಇಂತಹ ಕಾನೂನು ಬಾಹಿರ ಹಾಗೂ ಒಪ್ಪಿತವಲ್ಲದ ವರ್ತನೆಗಳನ್ನು ಹಾಗೂ ದ್ವೇಷಪೂರಿತ ಅಪರಾಧಗಳನ್ನು ಸರ್ಕಾರ ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ಸಾರಿದಂತಾಗುವುದು.

ರಾಜ್ಯವು ಇಂತಹ ಸಂಕ್ರಮಣ ಸ್ಥಿತಿಯಲ್ಲಿರುವಾಗ ಮತೀಯ ಸೌಹಾರ್ದತೆಯನ್ನು ಮರುಪ್ರತಿಷ್ಠಾಪಿಸುವುದು ಪ್ರಮುಖವಾದ ಮತ್ತು ಅತ್ಯಂತ ತುರ್ತಿನ ಕಾರ್ಯವೆಂದು ನಾವು ಪರಿಭಾವಿಸಿದ್ದೇವೆ. ಈ ನಿಟ್ಟಿನಲ್ಲಿ ತಮ್ಮ ನೇತೃತ್ವದ ಸರ್ಕಾರವು ಮುನ್ನಡಿ ಇಡಬೇಕೆಂದು ಬಯಸುತ್ತೇವೆ. ಈ ಸಂದರ್ಭದಲ್ಲಿ ರಾಜ್ಯವು ಪ್ರಗತಿಯೆಡೆಗೆ ಸಾಗುವ ಬದಲಾಗಿ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ತಳಮಟ್ಟಕ್ಕಿಳಿಯಿತು ಎನ್ನುವ ಅಪಖ್ಯಾತಿಗೆ ತಾವು ಒಳಗಾಗಬಾರದು ಎನ್ನುವ ಆಶಯ ನಮ್ಮದು. ಈ ನಿಟ್ಟಿನಲ್ಲಿ ಸರ್ಕಾರದ ಪ್ರಬಲ, ಸ್ಪಷ್ಟ, ಅಧಿಕೃತ ಆದೇಶ ಕ್ರಮಗಳನ್ನು ನಾವು ನಿಮ್ಮಿಂದ ನಿರೀಕ್ಷಿಸುತ್ತಿದ್ದೇವೆ ಎಂದು 75 ಸಾಹಿತಿಗಳು ಸಹಿಯೊಂದಿಗೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ.

ಓದಿ : ಪಠ್ಯ ಪರಿಷ್ಕರಣೆ ಬಗ್ಗೆ ನಾಡಿನ ಜನರಿಗೆ ಸುಳ್ಳು ಹೇಳಿದ ಸಚಿವರನ್ನು ವಜಾ ಮಾಡಿ : ಸಿದ್ದರಾಮಯ್ಯ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.