ETV Bharat / state

ಅಥ್ಲೀಟ್ ಬಿಂದುರಾಣಿಯ ಮೇಲೆ ಕೋಚ್ ಪತ್ನಿ ಚಪ್ಪಲಿ ತೋರಿಸಿ ಆಕ್ರೋಶ: ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್....

author img

By

Published : Jul 3, 2023, 7:25 PM IST

ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್ ಬಿಂದುರಾಣಿ ಮತ್ತು ಕೋಚ್​ ಪತ್ನಿ ನಡುವಿನ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

athletic bindurani
ಅಥ್ಲೀಟ್ ಬಿಂದುರಾಣಿ

ಅಥ್ಲೀಟ್ ಬಿಂದುರಾಣಿಯ ಮೇಲೆ ಕೋಚ್ ಪತ್ನಿ ಚಪ್ಪಲಿ ತೋರಿಸಿ ಆಕ್ರೋಶ ತೋರಿದ ವೈರಲ್ ವಿಡಿಯೋ

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯದ ಅಥ್ಲೀಟ್ ಬಿಂದುರಾಣಿಯ ಮೇಲೆ ಕೋಚ್ ಪತ್ನಿ ಚಪ್ಪಲಿ ತೋರಿಸಿ ಆಕ್ರೋಶ ಹೊರಹಾಕಿರುವ ಘಟನೆ ಸೋಮವಾರ ಬೆಳಗಿನ ಜಾವ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಬಿಂದುರಾಣಿಯನ್ನು ಕಳ್ಳಿ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯದ ಹಿರಿಯ ಅಥ್ಲೆಟಿಕ್ಸ್ ಕೋಚ್ ಯತೀಶ್ ಅವರ ಪತ್ನಿ ಶ್ವೇತ ಕ್ರೀಡಾಂಗಣಕ್ಕೆ ಆಗಮಿಸಿ ಬೆಳಗ್ಗೆ ಅಭ್ಯಾಸದ ಸಮಯದಲ್ಲಿ ಬಿಂದುರಾಣಿಗೆ ಅಡ್ಡಗಟ್ಟಿ ನಿಂದಿಸಿದ್ದಾರೆ. ನಿಮ್ಮಂತವರಿಂದ ಕರ್ನಾಟಕದ ಮರ್ಯಾದೆ ಹಾಳಾಗುತ್ತಿದೆ. ನಿನಗೆ ಖೇಲ್ ರತ್ನ ಪ್ರಶಸ್ತಿ ಸಿಕ್ಕಿರುವುದು ವೇಸ್ಟ್ ಮತ್ತು ಅದು ದೊಡ್ದ ದುರಂತ ಅನ್ನುವ ರೀತಿಯಲ್ಲಿ ಮಾತನಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಕಳ್ಳತನದ ಆರೋಪ: ಮುಂದುವರೆದು ಶ್ವೇತ ಬಿಂದುರಾಣಿಗೆ ಚಪ್ಪಲಿ ತೋರಿಸಿ ನೀನು ಕಳ್ಳಿ, ಲಕ್ಷಾಂತರ ಮೌಲ್ಯದ ಕ್ರೀಡಾ ಸಾಮಗ್ರಿಯನ್ನು ಕದ್ದಿದ್ದೀಯ ಎಂದು ಆರೋಪ ಮಾಡಿದ್ದಾರೆ. ಟೆಡ್ ಎಕ್ಸ್ ಶೋನಲ್ಲಿ ಬಿಂದುರಾಣಿ ಭಾಗಹಿಸಿದ್ದರ ಕುರಿತಂತೆ ಶ್ವೇತ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆಲ್ಲ ಬಿಂದು ರಾಣಿ ಮಾತ್ರ ಯಾವುದೇ ಉತ್ತರ ಕೊಡದೆ ಸುಮ್ಮನೆ ನಿಂತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಈ ಘಟನೆಗೆ ಪ್ರತಿಕ್ರಿಯಿಸಿರುವ ಬಿಂದುರಾಣಿ, "ಕಂಠೀರವ ಸ್ಟೇಡಿಯಂ ಗ್ರೂಪ್‌ನಲ್ಲಿ ನನ್ನ ಟೆಡ್ ಎಕ್ಸ್ ಶೋ ಬಗ್ಗೆ ವಾಟ್ಸಾಪ್ ಗ್ರೂಪ್‌ನಲ್ಲಿ ಯತೀಶ್ ಪೋಸ್ಟ್ ಮಾಡಿದ್ದರು. ನಾನು ಖೇಲ್ ರತ್ನ ಸ್ಟಾರ್ ಅಲ್ಲ ಎಂದೆಲ್ಲ ಹಾಕಿದ್ದರು. ಅಥ್ಲೆಟಿಕ್ಸ್ ಹೆಸರಿನಲ್ಲಿ ದುಡ್ಡು ಮಾಡುತ್ತೀಯಾ ಎಂದು ಇನ್ನೊಂದು ಪೋಸ್ಟ್ ಹಾಕಿದ್ದರು. ಈ ವಿಷಯವಾಗಿ ನನ್ನ ಗಂಡ ಹಿರಿಯ ಕೋಚ್‌ಗೆ ಫೋನ್ ಮಾಡಿ ಮಾತನಾಡಿದ್ದರು. ಈ ವೇಳೆ ಯತೀಶ್ ಅವರ ಪತ್ನಿ ಫೋನ್ ರಿಸೀವ್ ಮಾಡಿ ಏಕವಚನದಲ್ಲಿ ಮಾತನಾಡಿದ್ದರು" ಎಂದು ಆರೋಪಿಸಿದ್ದಾರೆ.

"ಸೋಮವಾರ ಬೆಳಗಿನಜಾವ ಅಭ್ಯಾಸದ ಸಮಯದಲ್ಲಿ ಬೆಳಗ್ಗೆ ಕ್ರೀಡಾಂಗಣಕ್ಕೆ ಬಂದು ಮತ್ತೆ ನನ್ನ ಮೇಲೆ ನಿಂದನೆ ಮಾಡಿದ್ದಾರೆ. ಅಥ್ಲೆಟಿಕ್ಸ್ ಅಸೋಸಿಯೇಷನ್‌ನಿಂದ ಬಂದು ಯಾರಾದರೂ ಪ್ರಶ್ನೆ ಮಾಡಿದ್ದರೆ ಉತ್ತರ ಕೊಡುತ್ತಿದ್ದೆ. ಈ ಹಿಂದೆ ಶ್ವೇತ ಪರಿಚಯವಿಲ್ಲ. ಅವರು ಕೋಚ್ ಹೆಂಡತಿಯಷ್ಟೇ ಎಂದು ಗೊತ್ತು. ಕೋಚ್ ಜೊತೆ ಅವರನ್ನು ನೋಡಿದ್ದೇನೆ ಅಷ್ಟೇ" ಎಂದು ಬಿಂದು ರಾಣಿ ಹೇಳಿದ್ದಾರೆ.

ಕ್ರೀಡಾ ಸಚಿವ ಬಿ ನಾಗೇಂದ್ರ ಅವರು ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಪಟು ಹಾಗೂ ಕೋಚ್ ಹೆಂಡತಿ ನಡುವೆ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, "ಇಬ್ಬರ ಗಲಾಟೆಯನ್ನು ಮಾಧ್ಯಮಗಳ ವರದಿಯಲ್ಲಿ ನೋಡಿದ್ದೇನೆ. ಅವರಿಬ್ಬರೂ ನಮ್ಮ ಇಲಾಖೆ ಅಡಿಯಲ್ಲಿ ಬರುವವರಲ್ಲ. ಮಕ್ಕಳ ಕ್ರೀಡೆಗೆ ಅನುಕೂಲವಾಗಲಿ ಎಂದು ಕ್ರೀಡಾಂಗಣದಲ್ಲಿ ತರಬೇತಿಗೆ ಅವಕಾಶ ಕಲ್ಪಿಸಿದ್ದೇವೆ. ಒಬ್ಬರು ಕ್ರೀಡಾಪಟು ಮತ್ತೊಬ್ಬರು ಕೋಚ್ ಹೆಂಡತಿಯಂತೆ. ಕ್ರೀಡಾಪಟು ಹಾಗೂ ಮಕ್ಕಳ ಮುಂದೆ ಈ ರೀತಿ ವರ್ತನೆ ಮಾಡಿರುವುದು ಸರಿಯಲ್ಲ. ಕೂಡಲೇ ಅವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ" ಎಂದಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್, ಸಂಕಷ್ಟದಲ್ಲಿ ಆಟೋ ಚಾಲಕರು: ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.