ETV Bharat / state

ಕರ್ನಾಟಕದ ಹಾಲಿ ಶಾಸಕರ ಅಪರಾಧ ಹಿನ್ನೆಲೆ, ಶಿಕ್ಷಣದ ಮಾಹಿತಿ ತಿಳಿಯಿರಿ..

author img

By

Published : Mar 23, 2023, 10:28 PM IST

Updated : Mar 24, 2023, 11:50 AM IST

ಕರ್ನಾಟಕದ ಹಾಲಿ ಶಾಸಕರ ಹಿನ್ನೆಲೆಯ ಬಗ್ಗೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹಾಗೂ ಕರ್ನಾಟಕ ಎಲೆಕ್ಷನ್ ವಾಚ್​​ ಎಂಬ ಸಂಸ್ಥೆಗಳು ವಿಶ್ಲೇಷಣೆ ಮಾಡಿವೆ.

assembly-elections-details-of-karnataka-existing-mlas
ಕರ್ನಾಟಕದ ಹಾಲಿ ಶಾಸಕರ ಅಪರಾಧದ ಹಿನ್ನೆಲೆ, ಶಿಕ್ಷಣದ ಮಾಹಿತಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸಿಗೊಂಡಿವೆ. ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಸಭೆ - ಸಮಾವೇಶಗಳನ್ನು ಜಿದ್ದಿಗೆ ಬಿದ್ದಿರುವಂತೆ ಎಲ್ಲ ಪಕ್ಷಗಳು ಆಯೋಜಿಸುತ್ತಿವೆ. ಈಗಿನ ಹಾಲಿ ಶಾಸಕರ ಹಿನ್ನೆಲೆ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ರಾಜ್ಯ ವಿಧಾನಸಭಾ ಅವಧಿ ಮೇ 24ಕ್ಕೆ ಅಂತ್ಯ: 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ

ಕರ್ನಾಟಕದ ಹಾಲಿ ಶಾಸಕರ ಹಿನ್ನೆಲೆ, ಶಿಕ್ಷಣ, ಅಪರಾಧದ ಮಾಹಿತಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಸ್​​ (ಎಡಿಆರ್​) ಮತ್ತು ಕರ್ನಾಟಕ ಎಲೆಕ್ಷನ್ ವಾಚ್​​ ಎಂಬ ಸಂಸ್ಥೆಗಳು ವಿಶ್ಲೇಷಣೆ ಮಾಡಿವೆ. 224 ಶಾಸಕರ ಪೈಕಿ 219 ಜನರ ಪ್ರಸ್ತುತ ಹಿನ್ನೆಲೆಯನ್ನು ಕಲೆ ಹಾಕಲಾಗಿದೆ. ಸದ್ಯ ಎರಡು ಶಾಸಕ ಸ್ಥಾನಗಳು ಖಾಲಿ ಇದ್ದು, ಮೂವರು ಶಾಸಕರ ಚುನಾವಣಾ ಅಫಿಡವಿಟ್​ಗಳು ಲಭ್ಯವಾಗದ ಕಾರಣ ಈ ಐವರನ್ನು ಹೊರತುಪಡಿಸಿ ಎಲ್ಲ ಹಾಲಿ ಶಾಸಕರ ಮಾಹಿತಿಯನ್ನು ವಿಶ್ಲೇಷಿಸಲಾಗಿದೆ ಎಂದು ಈ ಸಂಸ್ಥೆಗಳು ತಿಳಿಸಿವೆ.

ಹಾಲಿ ಶಾಸಕರ ಅಪರಾಧದ ಹಿನ್ನೆಲೆ: ಸದ್ಯದ 219 ಶಾಸಕರ ಪೈಕಿ ಶೇ.35ರಷ್ಟು ಎಂದರೆ 76 ಜನರು ತಮ್ಮ ವಿರುದ್ಧ ಕ್ರಿಮಿನಲ್​ ಕೇಸ್​ಗಳು ಇರುವುದನ್ನು ಬಹಿರಂಗ ಪಡಿಸಿದ್ದಾರೆ. ಇದೇ ವೇಳೆ ಶೇ.26ರಷ್ಟು ಎಂದರೆ 56 ಜನ ಶಾಸಕರು ತಮ್ಮ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿರುವ ಬಗ್ಗೆ ಘೋಷಿಸಿಕೊಂಡಿದ್ದಾರೆ. ನಾಲ್ವರು ಶಾಸಕರು ತಮ್ಮ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿರುವ ಕುರಿತೂ ತಮ್ಮ ಅಫಿಡವಿಟ್​ಗಳಲ್ಲಿ ಉಲ್ಲೇಖಿಸಿದ್ದಾರೆ.

assembly-elections-details-of-karnataka-existing-mlas
ಶಾಸಕರ ಅಪರಾಧ ಹಿನ್ನೆಲೆ

ಪಕ್ಷವಾರು ಶಾಸಕರ ಕ್ರಿಮಿನಲ್ ಕೇಸ್​​: ಪಕ್ಷವಾರು ಶಾಸಕರ ಕ್ರಿಮಿನಲ್​ ಕೇಸ್​ಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಬಿಜೆಪಿಯ 118 ಶಾಸಕರ ಪೈಕಿ ಶೇ.42ರಷ್ಟು ಎಂದರೆ 49 ಶಾಸಕರ ವಿರುದ್ಧ ಕ್ರಿಮಿನಲ್​ ಕೇಸ್​ಗಳು ದಾಖಲಾಗಿದೆ. ಕಾಂಗ್ರೆಸ್​ನ 67 ಶಾಸಕರಲ್ಲಿ 16 ಜನ (ಶೇ.24) ಮತ್ತು ಜೆಡಿಎಸ್​ನ 30 ಶಾಸಕರ ಪೈಕಿ 9 ಮಂದಿ (ಶೇ.30) ತಮ್ಮ ವಿರುದ್ಧ ಕ್ರಿಮಿನಲ್​ ಕೇಸ್​ಗಳನ್ನು ಘೋಷಿಸಿದ್ದಾರೆ. ನಾಲ್ವರು ಪಕ್ಷೇತರ ಶಾಸಕರ ಪೈಕಿ ಇಬ್ಬರ (ಶೇ.50) ವಿರುದ್ಧ ಕ್ರಿಮಿನಲ್​ ಪ್ರಕರಣಗಳು ಇವೆ.

ಗಂಭೀರ ಅಪರಾಧ ಪ್ರಕರಣಗಳು: ಗಂಭೀರ ಅಪರಾಧ ಪ್ರಕರಣಗಳಲ್ಲಿ ಬಿಜೆಪಿಯ ಶಾಸಕರ ಪಾಲು ಹೆಚ್ಚಾಗಿದೆ. 118 ಬಿಜೆಪಿ ಶಾಸಕರ ಪೈಕಿ 35 ಜನರ ವಿರುದ್ಧ (ಶೇ.30) ಗಂಭೀರ ಕ್ರಿಮಿನಲ್​ ಕೇಸ್​ಗಳು​ ಇವೆ. ಕಾಂಗ್ರೆಸ್​ನ 67 ಶಾಸಕರಲ್ಲಿ 13 ಮಂದಿ (ಶೇ.19) ಮತ್ತು ಜೆಡಿಎಸ್​ನ 30 ಶಾಸಕರ ಪೈಕಿ 8 ಜನ ಮಂದಿ (ಶೇ.27) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್​ ಕೇಸ್​ಗಳು ಇರುವ ಬಗ್ಗೆ ಬಹಿರಂಗ ಪಡಿಸಿಕೊಂಡಿದ್ದಾರೆ.

assembly-elections-details-of-karnataka-existing-mlas
ಅಪರಾಧ ಹಿನ್ನೆಲೆಯುಳ್ಳ ಶಾಸಕರ ಪಕ್ಷವಾರು ಮಾಹಿತಿ

ಶಾಸಕರ ಶಿಕ್ಷಣದ ಮಾಹಿತಿ: ಒಟ್ಟು ಹಾಲಿ ಶಾಸಕರು ಪೈಕಿ ಶೇ.33ರಷ್ಟು ಎಂದರೆ 73 ಶಾಸಕರು ತಮ್ಮ ಶಿಕ್ಷಣವು 5ರಿಂದ 12ನೇ ತರಗತಿಯವರೆಗೆ ಮುಗಿದಿದೆ ಎಂದು ಘೋಷಿಸಿದ್ದಾರೆ. 140 ಶಾಸಕರು (ಶೇ.64) ತಮ್ಮ ವಿದ್ಯಾಭ್ಯಾಸವನ್ನು ಪದವಿ ಮತ್ತು ಅದಕ್ಕೂ ಮೇಲ್ಪಟ್ಟು ಇದೆ ಎಂದು ಪ್ರಕಟಿಸಿದ್ದಾರೆ. ಐವರು ಡಿಪ್ಲೊಮಾ ಪದವಿ ಹೊಂದಿರುವುದಾಗಿ ಹೇಳಿಕೊಂಡರೆ, ಒಬ್ಬ ಶಾಸಕರು ಮಾತ್ರ ತಾವು ಕೇವಲ ಅಕ್ಷರಸ್ಥರು ಎಂದು ಪ್ರಕಟಿಸಿದ್ದಾರೆ.

ಶಾಸಕರ ವಯಸ್ಸಿನ ಮಾಹಿತಿ: ಸದ್ಯದ 219 ಹಾಲಿ ಶಾಸಕರ ಪೈಕಿ 80 ಮಂದಿ (ಶೇ.33) 25ರಿಂದ 50 ವರ್ಷದೊಳಗಿನವರಾಗಿದ್ದಾರೆ. 138 ಶಾಸಕರು (ಶೇ.63) 51ರಿಂದ 80 ವರ್ಷದೊಳಗಿನವರು ಆಗಿದ್ದು, ಒಬ್ಬ ಶಾಸಕರು 80 ವರ್ಷಕ್ಕೂ ಹೆಚ್ಚಿನ ವಯಸ್ಸಿನರಾಗಿದ್ದಾರೆ. ಪುರುಷ ಮತ್ತು ಮಹಿಳೆಯರ ಸಂಖ್ಯೆ ನೋಡುವುದಾದರೆ 219 ಶಾಸಕರ ಪೈಕಿ ಶೇ.4ರಷ್ಟು ಎಂದರೆ 9 ಮಂದಿ ಮಹಿಳಾ ಶಾಸಕರು ಇದ್ದಾರೆ.

ಇದನ್ನೂ ಓದಿ: ಗುಜರಾತ್​ನ ನೂತನ 40 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್​: ಇದರಲ್ಲಿ ಯಾವ ಪಕ್ಷದವರು, ಎಷ್ಟು ಜನ?

Last Updated : Mar 24, 2023, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.