ETV Bharat / state

150 ಸ್ಥಾನ ಗೆಲ್ಲಲು ರೋಡ್ ಮ್ಯಾಪ್: ಅರುಣ್ ಸಿಂಗ್

author img

By

Published : Oct 6, 2022, 8:06 PM IST

ಸಿಎಂ ಬೊಮ್ಮಾಯಿ ಅವರು ರೈತ ಮಕ್ಕಳ ಶಿಕ್ಷಣಕ್ಕೆ ಧನ ಸಹಾಯ ಮಾಡಿದ್ದಾರೆ. ಬಡವರ ಕಲ್ಯಾಣಕ್ಕೆ ಹಾಗೂ ಬಡವರ, ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಬೆಂಗಳೂರು: 2023 ರ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಬೇಕಾದ ರೋಡ್ ಮ್ಯಾಪ್ ಸಿದ್ದಪಡಿಸಿಕೊಳ್ಳಲಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ರಚನೆಯಾಗಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಅರುಣ್ ಸಿಂಗ್ ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬರುವ ದಿನಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಬಿಜೆಪಿ 150 ಸೀಟುಗಳು ಗೆಲ್ಲುವ ಬಗ್ಗೆ ಚರ್ಚೆ ಮಾಡಲಿದ್ದೇವೆ. ರೋಡ್ ಮ್ಯಾಪ್ ತಯಾರಿ ಮಾಡಲಿದ್ದೇವೆ‌ ಎಂದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಮಾತನಾಡಿದರು

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ಯತ್ನಾಳ್ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲ್ಲ. ಯತ್ನಾಳ್ ಇದೇ ಮೊದಲ ಬಾರಿ ಹೇಳಿಕೆ ನೀಡಿಲ್ಲ. ಅವರ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಸರ್ಕಾರದ ಮೇಲೆ ಶೇ 40ರಷ್ಟು ಕಮೀಷನ್ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ರಾಹುಲ್ ಗಾಂಧಿ ಯಾತ್ರೆ ಕರ್ನಾಟಕದಲ್ಲಿ ನಡೆಯುತ್ತಿದೆ. ಚುನಾವಣೆ ಸಮಯದಲ್ಲಿ ಆರೋಪ ಮಾಡೋದು ಅವರ ಕೆಲಸ. ಇಡೀ ಯಾತ್ರೆಯನ್ನ ಆರೋಪ ಮಾಡಲು ಅಂತಲೇ ಮಾಡುತ್ತಿದ್ದಾರೆ. ಇದು ಭಾರತ್ ಜೋಡೋ ಅಲ್ಲ,‌ ತೋಡೋ ಯಾತ್ರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಶೇ 40ರಷ್ಟು ಆರೋಪ ವಿಚಾರ ಮಾಡುತ್ತಿದೆ. ಬೇಕಾದರೆ ಲೋಕಾಯುಕ್ತ ಇದೆ, ಅಲ್ಲಿಗೆ ಹೋಗಲಿ. ಲೋಕಾಯುಕ್ತ ಇರುವಾಗ ನ್ಯಾಯಾಂಗ ತನಿಖೆ ಯಾಕೆ.? ಕಾಂಗ್ರೆಸ್ ಪಕ್ಷ ಸುಳ್ಳು ಪಕ್ಷ. ಕಾಂಗ್ರೆಸ್ ಪಕ್ಷ ಫೋನ್ ಕದ್ದಾಲಿಕೆ ಮಾಡಿದ ಪಕ್ಷ. ಅನೇಕ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವ ಪಕ್ಷ ಎಂದು ಆರೋಪಿಸಿದರು.

ಮಕ್ಕಳ ಶಿಕ್ಷಣಕ್ಕೆ ಧನ ಸಹಾಯ: ಬೊಮ್ಮಾಯಿ ಅವರು ರೈತ ಮಕ್ಕಳ ಶಿಕ್ಷಣಕ್ಕೆ ಧನ ಸಹಾಯ ಮಾಡಿದ್ದಾರೆ. ಬಡವರ ಕಲ್ಯಾಣಕ್ಕೆ ಕೆಲಸ ಮಾಡುತ್ತಿದ್ದಾರೆ. ಬಡವರ, ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸುಖಾ ಸುಮ್ಮನೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಬೊಮ್ಮಾಯಿ ಅವರ ರಾಜಕೀಯ ಇತಿಹಾಸದಲ್ಲಿ ಅನೇಕ ಸಚಿವ ಸ್ಥಾನಗಳನ್ನು ನಿಭಾಯಿಸಿದ್ದಾರೆ, ಎಂದೂ ಅವರ ವಿರುದ್ಧ ಆರೋಪ ಬಂದಿಲ್ಲ. ಅವರ ಮೇಲೆ ಆರೋಪ ಮಾಡೋದು ಸರಿಯಲ್ಲ. 2023ರ ವೇಳೆಗೆ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದು ಅರುಣ್​ ಸಿಂಗ್​ ಭವಿಷ್ಯ ನುಡಿದರು.

ಉದ್ಯೋಗ ಸೃಷ್ಟಿ ಮಾಡುತ್ತಿದ್ದಾರೆ: ದತ್ತಾತ್ರೇಯ ಹೊಸಬಾಳೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ಪ್ರಧಾನಿ ಮೋದಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದಾರೆ. ಸ್ಟಾರ್ಟಪ್ ಕೂಡ ಮಾಡುತ್ತಿದ್ದಾರೆ. ಭಾರತ ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ಉದ್ಯೋಗ ನೀಡುವ ಮೂಲಕ ನಿರುದ್ಯೋಗ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಓದಿ: ಬೆಂಗಳೂರಿನಲ್ಲಿ ನಾಳೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ: ಸಿ ಟಿ ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.