ETV Bharat / state

ಡ್ರಗ್ಸ್ ದಂಧೆ ನಡೆಸುತ್ತಿದ್ದ ಮೂವರು ಅಂದರ್‌: ಪೊಲೀಸ್​ ಮಾಹಿತಿದಾರನೇ ಪೆಡ್ಲರ್‌

author img

By

Published : Sep 14, 2021, 6:25 PM IST

ನಗರದಲ್ಲಿ ನಡೆಯುವ ಡ್ರಗ್ಸ್​ ದಂಧೆ ಬಗ್ಗೆ ಮಾಹಿತಿ ನೀಡುತ್ತಿದ್ದ ಮಾಹಿತಿದಾರನೇ ವಿದೇಶಿ ಪ್ರಜೆ ಜೊತೆ ಸೇರಿಕೊಂಡು ಅಕ್ರಮ ವ್ಯವಹಾರದಲ್ಲಿ ತೊಡಗಿದ್ದು, ಈತನೂ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Arrest of 3 accused who involved in drug mafia
ಡ್ರಗ್ಸ್ ದಂಧೆ: ಪೊಲೀಸ್​ ಮಾಹಿತಿದಾರ ಸೇರಿ ಮೂವರ ಬಂಧನ

ಬೆಂಗಳೂರು: ಡ್ರಗ್ಸ್ ಜಾಲದ ದಂಧೆಯಲ್ಲಿ ಭಾಗಿಯಾಗಿದ್ದ ಪೊಲೀಸ್​ ಮಾಹಿತಿದಾರ ಹಾಗೂ ವಿದೇಶಿ‌‌ ಪ್ರಜೆ ಸೇರಿ ಒಟ್ಟು ಮೂವರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ನುಡುಬಾ, ಕೆ.ಜಿ.ಹಳ್ಳಿ‌ ನಿವಾಸಿಗಳಾದ ರವಿ ಹಾಗೂ ಶಾಕೀರ್ ಬಂಧಿತರು. ಇವರಿಂದ 5 ಲಕ್ಷ ಮೌಲ್ಯದ 150 ಎಕ್ಸ್ಟೆಸಿ ಮಾತ್ರೆ ಹಾಗೂ ಎಂಡಿಎಂಎ ಡ್ರಗ್ಸ್ ವಶ‌ಪಡಿಸಿಕೊಳ್ಳಲಾಗಿದೆ.

ಕೆಲ ವರ್ಷಗಳ ಹಿಂದೆ ಬಿಸ್ನೆಸ್ ವೀಸಾದಡಿ ಬೆಂಗಳೂರಿಗೆ ಬಂದು ನುಡುಬಾ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದ ಕಾರಣ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ. ಈ ದಂಧೆಗೆ ಈತನ ಜೊತೆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರವಿ ಹಾಗೂ ಶಾಕಿಬ್ ಕೂಡ ಕೈಜೋಡಿಸಿದ್ದಾರೆ. ಮೂವರು ಒಗ್ಗೂಡಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಪೊಲೀಸ್​ ಮಾಹಿತಿದಾರ ಸೇರಿ ಮೂವರ ಬಂಧನ

ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆ ಬ್ಯಾಂಕ್‌ ಮ್ಯಾನೇಜರ್‌ ತಂದೆಯಿಂದ ಲೈಂಗಿಕ ದೌರ್ಜನ್ಯ

ಪೊಲೀಸ್ ಮಾಹಿತಿದಾರನೇ ಡ್ರಗ್ಸ್ ಪೆಡ್ಲರ್:

ನಗರದಲ್ಲಿ ನಡೆಯುವ ಅಕ್ರಮ ಡ್ರಗ್ಸ್ ದಂಧೆ ಬಗ್ಗೆ ಪೊಲೀಸರಿಗೆ ಆರೋಪಿ ರವಿ ಮಾಹಿತಿ ನೀಡುತ್ತಿದ್ದ. ಕೆ.ಜಿ.ಹಳ್ಳಿ, ಬಾಣಸವಾಡಿ ಸೇರಿದಂತೆ ವಿವಿಧ ಠಾಣಾ ಪೊಲೀಸರಿಗೆ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ಕೊಡುತ್ತಿದ್ದ. ಪೊಲೀಸ್ ವಲಯದಲ್ಲಿ ಗುರುತಿಸಿಕೊಂಡಿದ್ದರಿಂದ ತಾನು ದಂಧೆಯಲ್ಲಿ ತೊಡಗಿಕೊಂಡಿರುವ ಮಾಹಿತಿ ಗೊತ್ತಾಗುವುದಿಲ್ಲ ಎಂದು ಭಾವಿಸಿಕೊಂಡು ಹಲವು ವರ್ಷಗಳಿಂದ ಜಾಲದಲ್ಲಿ ಭಾಗಿಯಾಗಿದ್ದಾನೆ.

ನೈಜೀರಿಯಾ ಪ್ರಜೆ ಜೊತೆ ಸೇರಿಕೊಂಡು ಯುವ ಜನಾಂಗವನ್ನು ಗಮನದಲ್ಲಿರಿಸಿಕೊಂಡು ನಗರದೆಲ್ಲೆಡೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

ಬಂಧಿತ ವಿದೇಶಿ ಪ್ರಜೆಯ ವೀಸಾ ಗಡುವು ಮುಗಿದರೂ ಅಕ್ರಮವಾಗಿ ನಗರದಲ್ಲಿ ನೆಲೆಯೂರಿದ್ದಾನೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಕ್ರಮ ಚಟುವಟಿಕೆಯಲ್ಲಿ ನಿರತನಾದರೂ ಪೂರ್ವಾಪರ ಪರಿಶೀಲಿಸದೆ ಮನೆ ಬಾಡಿಗೆ ನೀಡಿದ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.