ETV Bharat / state

ಪೊಲೀಸ್ ದೂರು ಪ್ರಾಧಿಕಾರ ಅಧ್ಯಕ್ಷ ಹುದ್ದೆ ಖಾಲಿ: ಭರ್ತಿಗೆ ಸೂಚಿಸಿ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್

author img

By

Published : Jan 7, 2023, 9:40 AM IST

2022ರ ಆಗಸ್ಟ್​ ತಿಂಗಳಿನಿಂದ ಖಾಲಿಯಿರುವ ಹುದ್ದೆಗಳು- ಪೊಲೀಸ್​ ದೂರು ಪ್ರಾಧಿಕಾರದ ಅಧ್ಯಕ್ಷ ಮತ್ತು ಇಬ್ಬರು ಸದಸ್ಯರುಗಳ ಭರ್ತಿ ಮಾಡಿ- ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್​

high court
ಹೈಕೋರ್ಟ್​

ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ ಎಂಬುದು ಸರ್ಕಾರದ ಅಂಕಿ ಅಂಶಗಳಿಂದಲೇ ತಿಳಿಯುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅವರು ಒಂದು ವರ್ಷದಲ್ಲಿ ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದ್ದರು. ಅದೇ ರೀತಿ ಕಳೆದ ಆಗಸ್ಟ್​ ತಿಂಗಳಿನಿಂದ ಖಾಲಿಯಿರುವ ಕರ್ನಾಟಕ ಪೊಲೀಸ್​ ದೂರು ಪ್ರಾಧಿಕಾರದ ಅಧ್ಯಕ್ಷ ಮತ್ತು ಇಬ್ಬರು ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡುವುದಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿದೆ.

ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್​ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ. ವಕೀಲರಾದ ಸುಧಾ ಕಾಟ್ವಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ. ಅಲ್ಲದೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗೆ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.

ಅಧ್ಯಕ್ಷ ಸ್ಥಾನ ಭರ್ತಿ ಕೋರಿ ಅರ್ಜಿ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್ ಉಮಾಪತಿ ವಾದ ಮಂಡಿಸಿ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಅಧಿಕಾರಿಗಳ ವಿರುದ್ಧ ದೂರು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪೊಲೀಸ್ ಪ್ರಾಧಿಕಾರ ರಚನೆ ಮಾಡಬೇಕಾಗಿದೆ. ಸ್ವತಂತ್ರ ಮತ್ತು ಶಾಸನಾತ್ಮಕ ಹುದ್ದೆಯಾದ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯನ್ನು ನೇಮಿಸಬೇಕಿದೆ. ಅಧ್ಯಕ್ಷ ಹುದ್ದೆಯು 2022ರ ಆ.11ರಿಂದ ಖಾಲಿ ಉಳಿದಿದೆ ಎಂದು ವಿವರಿಸಿದರು.

ಆದರೆ, ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಯಾಗಿರುವ ಕುಮಾರಸ್ವಾಮಿ ಅವರನ್ನು 2019ರ ಜುಲೈ 18ರಂದು ನೇಮಕ ಮಾಡಿತ್ತು. 2022ರ ಆಗಸ್ಟ್ 11ಕ್ಕೆ ಅವರ ಅವಧಿ ಮುಕ್ತಾಯವಾಗಿದೆ. ಆದರೆ ಈವರೆಗೂ ಅಧ್ಯಕ್ಷ ಹಾಗೂ ಸದಸ್ಯರ ನೇಮಕ ಪ್ರಕ್ರಿಯೆಯನ್ನು ನಡೆಸುತ್ತಿಲ್ಲ. ಅಲ್ಲದೇ ಈ ಪ್ರಾಧಿಕಾರಕ್ಕೆ ಈವರೆಗೂ ಅಗತ್ಯ ಸಿಬ್ಬಂದಿ ಮತ್ತು ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಎರಡು ಸದಸ್ಯ ಸ್ಥಾನಗಳ ಹುದ್ದೆ ಖಾಲಿ: ಒಂದು ಸದಸ್ಯ ಸ್ಥಾನ 2020ರ ಮೇ 8ರಿಂದ ಹಾಗೂ ಮತ್ತೊಂದು ಸದಸ್ಯ ಸ್ಥಾನ 2022ರ ಡಿ.28ರಿಂದ ಖಾಲಿ ಉಳಿದಿದೆ. ಸಕಾಲಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸದ ಕಾರಣ ಪ್ರಾಧಿಕಾರ ತನ್ನ ಶಾಸನಾತ್ಮಕ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ. ಅಪಾರ ಪ್ರಮಾಣದಲ್ಲಿ ದೂರುಗಳು ಮತ್ತು ಕುಂದುಕೊರತೆಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಆದ್ದರಿಂದ ಖಾಲಿ ಇರುವ ಪ್ರಾಧಿಕಾರದ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರನ್ನು ಕೂಡಲೇ ನೇಮಕ ಮಾಡಲು ಸರ್ಕಾರಕ್ಕೆ ಅದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂ ಓದಿ: ಕೇಂದ್ರದಿಂದ ಮತ್ತೊಂದು ದಿಟ್ಟ ನಿರ್ಧಾರ.. ಪೀಪಲ್ಸ್​ ಆ್ಯಂಟಿ ಫ್ಯಾಸಿಸ್ಟ್​ ಫ್ರಂಟ್ ಸಂಘಟನೆ ನಿಷೇಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.