ETV Bharat / state

ಜಾತಿ ಗಣತಿ ವರದಿ ಬಿಡುಗಡೆಗೆ ಕೋರಿದ್ದ ಅರ್ಜಿಗೆ ಮಧ್ಯಂತರ ಅರ್ಜಿ ಸಲ್ಲಿಕೆ : ವರದಿ ತಿರಸ್ಕರಿಸಲು ಮನವಿ

author img

By ETV Bharat Karnataka Team

Published : Jan 2, 2024, 11:02 PM IST

ಹೆಚ್ ಕಾಂತರಾಜು ಅವಧಿಯಲ್ಲಿ ನಡೆಸಿರುವ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ ಬಹಿರಂಗಗೊಳಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಚಂದ್ರು ಸಲ್ಲಿಸಿರುವ ಅರ್ಜಿಗೆ ವಕೀಲರೊಬ್ಬರು ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Etv Bharatappeal-to-high-court-to-reject-caste-census-report
ಜಾತಿ ಗಣತಿ ವರದಿ ಬಿಡುಗಡೆಗೆ ಕೋರಿದ್ದ ಅರ್ಜಿಗೆ ಮಧ್ಯಂತರ ಅರ್ಜಿ ಸಲ್ಲಿಕೆ : ವರದಿ ತಿರಸ್ಕರಿಸಲು ಮನವಿ

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಹೆಚ್ ಕಾಂತರಾಜು ಅವಧಿಯಲ್ಲಿ ನಡೆಸಿರುವ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ (ಜಾತಿ ಗಣತಿ) ಬಹಿರಂಗಗೊಳಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಚಂದ್ರು ಸಲ್ಲಿಸಿರುವ ಅರ್ಜಿಗೆ ವಕೀಲರೊಬ್ಬರು ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿ ಓದನಹಳ್ಳಿಯ ವಕೀಲ ಓ ಕೆ ರಘು ಈ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಜತೆಗೆ, ಮಂಗಳವಾರ ರಘು ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾಗಿ, ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು. ಆ ಮನವಿ ಪರಿಗಣಿಸಿದ ನ್ಯಾಯಪೀಠ, ಮೂಲ ಅರ್ಜಿಯೊಂದಿಗೆ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಆರ್ಥಿಕ, ಶೈಕ್ಷಣಿಕ ವರದಿಯನ್ನು ಬಹಿರಂಗಗೊಳಿಸಿ ಸಾರ್ವಜನಿಕ ಅವಗಾಹನೆಗೆ ತರಬೇಕು ಮತ್ತು ಆಯೋಗವು ಇದನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ದೇಶಿಸಬೇಕು ಎಂದು ಕೋರಿ, ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವಾಧ್ಯಕ್ಷರೂ ಆದ ಚಲನಚಿತ್ರನಟ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಒಟ್ಟು 13 ವಿವಿಧ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.

ಅಲ್ಲದೆ, ಈ ವರದಿ ಕಾನೂನು ಬದ್ಧವಾಗಿಲ್ಲ. ಯಾವುದೇ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ. ಕರ್ನಾಟಕ ಹೈಕೋರ್ಟ್ ನಿಯಮಾವಳಿ 11 ಮತ್ತು 12ರ ಅನುಸಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಅರ್ಜಿದಾರ ತನ್ನ ಪೂರ್ವಾಪರವನ್ನು ಹೈಕೋರ್ಟ್​ಗೆ ಪ್ರಸ್ತುಪಡಿಸಬೇಕು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ತಮ್ಮ ಪೂರ್ವಾಪರಗಳನ್ನೇ ಬಹಿರಂಗಗೊಳಿಸಿಲ್ಲ. ವರದಿ ಬಹಿರಂಗಗೊಳ್ಳುವಂತೆ ಹೈಕೋರ್ಟ್‌ನಿಂದ ನ್ಯಾಯಾಂಗದ ಆದೇಶ ಪಡೆದು ಅದರಿಂದ ರಾಜಕೀಯ ಲಾಭ ಪಡೆಯುವುದು ಅರ್ಜಿದಾರರ ಹುನ್ನಾರ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಕಳೆದ ಎಂಟು ವರ್ಷಗಳ ಹಿಂದೆ ತಯಾರಿಸಲಾಗಿರುವ ಈ ವರದಿ ಹಲವು ಕಾರಣಗಳಿಂದಾಗಿ ಇನ್ನೂ ಬೆಳಕಿಗೆ ಬಂದಿಲ್ಲ. ಆಯೋಗದ ಬಳಿ ಮೂಲ ವರದಿಯೇ ಇಲ್ಲ. ಒಂದೆಡೆ ಮೂಲ ವರದಿ ಕಳುವಾಗಿದೆ ಎಂದು ಹೇಳಲಾಗುತ್ತಿದ್ದರೆ, ಮತ್ತೊಂದೆಡೆ, ಆಯೋಗದ ಸದಸ್ಯ ಕಾರ್ಯದರ್ಶಿ ಈ ವರದಿಗೆ ಸಹಿ ಮಾಡಿಲ್ಲ ಎಂಬ ಅಂಶವನ್ನೂ ಕೋರ್ಟ್ ಗಮನಿಸಬೇಕಿದೆ. ವರದಿಯಲ್ಲಿರುವ ಪ್ರಮುಖ ಅಂಶಗಳೆಲ್ಲವೂ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಈ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ಕೋರಲಾದ ಅರ್ಜಿಗೆ ಉತ್ತರಿಸಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು, ಮಾಹಿತಿಯು ಗೋಪ್ಯ ಸ್ವರೂಪದ್ದಾಗಿದೆ ಎಂಬ ಉತ್ತರ ನೀಡಿದ್ದು, ಇವೆಲ್ಲವೂ ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಪೀಠಕ್ಕೆ ತಿಳಿಸಿದರು.

ಮುಖ್ಯಮಂತ್ರಿ ಚಂದ್ರು ಸಲ್ಲಿಸಿರುವ ಅರ್ಜಿಯಲ್ಲಿ ತಿಗಳ ಕ್ಷತ್ರಿಯ ಮಹಾಸಭಾ, ಕರ್ನಾಟಕ ಪ್ರದೇಶ ಕುರುಬರ ಸಂಘ, ಕರ್ನಾಟಕ ರಾಜ್ಯ ಮಡಿವಾಳರ ಸಂಘ, ಸೂರ್ಯವಂಶ ಆರ್ಯ ಕ್ಷತ್ರಿಯ ಸಮಾಜ, ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ಸವಿತಾ ಕಲಾ ಸಂಘ, ಕರ್ನಾಟಕ ರಾಜ್ಯ ದೇವಾಂಗ ಸಂಘ, ಕರ್ನಾಟಕ ರಾಜ್ಯ ಕ್ಷತ್ರಿಯ ಸಂಘ, ಕರ್ನಾಟಕ ರಾಜ್ಯ ಸುಡುಗಾಡು ಸಿದ್ದ ಮಹಾ ಸಂಘ ಮತ್ತು ಅಲೆಮಾರಿ ಬುಡಕಟ್ಟು ಮಹಾಸಭಾಗಳೂ ಅರ್ಜಿದಾರರಾಗಿವೆ.

ಇದನ್ನೂ ಓದಿ: ಮಾಲ್ ಆಫ್ ಏಷ್ಯಾದ ವಿರುದ್ಧ ಕ್ರಮ ಕೈಗೊಳ್ಳದಂತೆ ಹಿಂದೆ ನೀಡಿದ್ದ ಮಧ್ಯೆಂತರ ಆದೇಶ ವಿಸ್ತರಿಸಿದ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.