ETV Bharat / state

ಫ್ಯಾನ್​ಗೆ ನೇಣು ಬಿಗಿದುಕೊಂಡರೂ ಹೋಗಲ್ಲ ಜೀವ: ಮಾರ್ಕೆಟ್​ಗೆ ಬಂದಿದೆ ಸೇಫ್ ಫ್ಯಾನ್ ಡಿವೈಸ್..!

author img

By

Published : Nov 3, 2022, 8:51 PM IST

ಸೇಫ್ ಹ್ಯಾಲೋ ಕಂಪನಿ ಆವಿಷ್ಕಾರ ಮಾಡಿರುವ ಈ ಹೊಸ ಸೇಫ್ ಫ್ಯಾನ್ ಡಿವೈಸ್ ಅನ್ನು ಫ್ಯಾನ್​ಗೆ ಅಳವಡಿಸಿದಲ್ಲಿ ಆ ಫ್ಯಾನ್​ನಿಂದ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗದಂತಹ ಉಪಕರಣವನ್ನು ವಿನ್ಯಾಸ ಮಾಡಲಾಗಿದೆ.

ಸೂಸೈಡ್ ಡಿವೈಸ್
ಸೂಸೈಡ್ ಡಿವೈಸ್

ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು ಜನರಿಗೆ ಸುಲಭವಾಗಿ ಸಿಗುವ ಉಪಾಯ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಳ್ಳುವುದು. ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆ, ಜಿಗುಪ್ಸೆ ಇತ್ಯಾದಿ ಕಾರಣಗಳಿಂದ ನೊಂದು ಜನರು ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ. ಮನೆಯಲ್ಲಿಯೇ ಸುಲಭವಾಗಿ ಫ್ಯಾನ್​ಗೆ ನೇಣು ಬಿಗಿದುಕೊಳ್ಳುತ್ತಾರೆ. ಆದರೆ, ಫ್ಯಾನ್​ಗೆ ನೇಣು ಬಿಗಿದರೂ ಪ್ರಾಣಹಾನಿ ಆಗದಂತೆ ತಡೆಯುವ ತಂತ್ರಜ್ಞಾನವನ್ನು ಸೇಫ್ ಹ್ಯಾಲೋ ಎನ್ನುವ ಕಂಪನಿ ಆವಿಷ್ಕಾರ ಮಾಡಿ ಪೇಟೆಂಟ್ ಕೂಡ ಪಡೆದುಕೊಂಡಿದ್ದು, ಈ ಉಪಕರಣವನ್ನು ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರದರ್ಶನಕ್ಕಿಡಲಾಗಿದೆ.

ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿನ ವಸ್ತು ಪ್ರದರ್ಶನ ಮಳಿಗೆಯ ವಿಶೇಷ ಆಕರ್ಷಣೆ ಸೂಸೈಡ್ ತಡೆಗಟ್ಟುವ ಫ್ಯಾನ್ ಡಿವೈಸ್. ಸೇಫ್ ಹ್ಯಾಲೋ ಕಂಪನಿ ಆವಿಷ್ಕಾರ ಮಾಡಿರುವ ಹೊಸ ಉಪಕರಣವನ್ನು ಸೇಫ್ ಫ್ಯಾನ್ ಹೆಸರಿನಲ್ಲಿ ಪ್ರದರ್ಶನಕ್ಕಿಟ್ಟಿದೆ. ಈ ಉಪಕರಣ ಫ್ಯಾನ್​ಗೆ ಅಳವಡಿಸಿದಲ್ಲಿ ಆ ಫ್ಯಾನ್​ನಿಂದ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗದಂತೆ ಉಪಕರಣವನ್ನು ವಿನ್ಯಾಸ ಮಾಡಲಾಗಿದೆ.

ಮನೆ, ಕಚೇರಿ, ಶಾಲಾ ಕಾಲೇಜು, ವಸತಿ ನಿಲಯ, ಹೋಟೆಲ್ ಸೇರಿದಂತೆ ಎಲ್ಲ ಕಡೆ ಸೀಲಿಂಗ್ ಫ್ಯಾನ್​ಗಳನ್ನು ಅಳವಡಿಸಲಾಗಿರುತ್ತದೆ. ಈ ಸೀಲಿಂಗ್ ಫ್ಯಾನ್ ಮೂಲಕವೇ ಸಾಕಷ್ಟು ಆತ್ಮಹತ್ಯೆ ಘಟನೆ ನಡೆದಿವೆ. ಹತ್ತು ಹಲವು ಕಾರಣಗಳಿಂದ ಮನನೊಂದು ಫ್ಯಾನ್​ಗೆ ಸೀರೆ, ಬೆಡ್ ಶೀಟ್, ಶಾಲು, ಹಗ್ಗವನ್ನು ಸುತ್ತಿ ಸುಲಭವಾಗಿ ನೇಣು ಹಾಕಿಕೊಳ್ಳುತ್ತಾರೆ. ದುಡುಕಿನ ಈ ನಿರ್ಧಾರದಿಂದಾಗಿ ಸಾಕಷ್ಟು ಜೀವಗಳು ಬಲಿಯಾಗುತ್ತಿವೆ.

ಕೆಲವರು ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳಲು ನೇಣುಬಿಗಿದುಕೊಂಡರೆ, ಮತ್ತೆ ಕೆಲವರು ಹೆದರಿಸಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿಗಳು, ಹೋಟೆಲ್​ಗಳಲ್ಲಿ ಗ್ರಾಹಕರು, ಕ್ವಾಟ್ರಸ್​ಗಳಲ್ಲಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ನಿದರ್ಶನಗಳಿವೆ. ಮರ್ಯಾದೆಗೆ ಅಂಜಿ ಕೆಲವರು ಮನೆಯಲ್ಲಿಯೂ ಫ್ಯಾನ್ ಬಳಸಿ ನೇಣಿಗೆ ಕೊರಳೊಡ್ಡಿರುವ ಉದಾಹರಣೆ ಕಡಿಮೆಯೇನಿಲ್ಲ. ಕಂಪನಿ ಮೂಲಗಳ ಪ್ರಕಾರ ಆತ್ಮಹತ್ಯೆ ಕೇಸ್ ಗಳಲ್ಲಿ ಶೇ.30 ರಷ್ಟು ಫ್ಯಾನ್​ಗೆ ನೇಣು ಬಿಗಿದುಕೊಂಡೇ ಆಗಿವೆ.

ಡಿವೈಸ್​ನಿಂದ ಕನೆಕ್ಟೆಡ್​ ನಂಬರ್​ಗೆ ಮೆಸೇಜ್​: ಈ ರೀತಿ ದುಡುಕಿನ ನಿರ್ಧಾರಕ್ಕೆ ಫ್ಯಾನ್ ಮೂಲಕ ನೇಣಿಗೆ ಕೊರಳೊಡ್ಡಲು ಮುಂದಾಗುವವರ ಪ್ರಾಣ ರಕ್ಷಣೆಗೆ ಇದೀಗ ಈ ಫ್ಯಾನ್​ ಡಿವೈಸ್ ಬಂದಿದೆ. ನೇರವಾಗಿ ಸೀಲಿಂಗ್ ಫ್ಯಾನ್ ಅನ್ನು ರೂಫ್​ಗಳಿಗೆ ಫಿಟ್ ಮಾಡುವ ಬದಲು ಸೇಫ್ ಹ್ಯಾಲೋ ಕಂಪನಿ ಒದಗಿಸುವ ಸೇಫ್ ಕ್ಲಾಂಪ್ ಅಳವಡಿಸಿ ಅದರ ಮೂಲಕ ಸೀಲಿಂಗ್ ಫ್ಯಾನ್ ಫಿಟ್ ಮಾಡಬೇಕು. ಈ ರೀತಿ ಡಿವೈಸ್ ಕನೆಕ್ಟ್ ಆದ ಫ್ಯಾನ್ ಮೂಲಕ ಯಾರಾದರೂ ಆತ್ಮಹತ್ಯೆಗೆ ಯತ್ನಿಸಿದರೆ ಅದು ಸಫಲವಾಗಲ್ಲ.

ಯಾಕೆಂದರೆ ಈ ಡಿವೈಸ್ 20 ಕೆಜಿ ಭಾರ ಬೀಳುತ್ತಲೇ ನಿಧಾನಕ್ಕೆ ಕೆಳಗಡೆ ಜಾರಿ ನೇಣಿಗೆ ಕೊರಳೊಡ್ಡಿದ ವ್ಯಕ್ತಿಯನ್ನು ನೆಲಕ್ಕೆ ತಲುಪಿಸುತ್ತದೆ ಹಾಗಾಗಿ ನೇಣು ಬಿಗಿಯುವುದಿಲ್ಲ. ಅಲ್ಲದೆ ಅಲಾರಾಂ ಕೂಡ ಆಗಲಿದೆ. ಇದರಿಂದ ಅಕ್ಕಪಕ್ಕದವರು ಅಥವಾ ಸಮೀಪದಲ್ಲಿ ಇರುವವರು ನೆರವಿಗೆ ಧಾವಿಸಲು ಸಹಕಾರಿಯಾಗಲಿದೆ. ಇದರ ಜೊತೆಗೆ ಡಿವೈಸ್​ಗೆ ಕನೆಕ್ಟ್ ಆದ ಮೊಬೈಲ್ ಸಂಖ್ಯೆಗೆ ಸಂದೇಶವೂ ರವಾನೆಯಾಗಲಿದ್ದು, ಕೂಡಲೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಲು ಸಹಕಾರಿಯಾಗಲಿದೆ.

ಕೈಗೆಟುಕುವ ದರದಲ್ಲೇ ಲಭ್ಯ: 700-1000 ರೂ. ಗಳಿಗೆ ಉಪಕರಣ ಸಿಗಲಿದೆ ಮೆಕ್ಯಾನಿಕಲ್ ಡಿವೈಸ್ ಆಗಿರುವ ಉಪಕರಣದಲ್ಲಿ ಅಲಾರಮ್ ಬಳಕೆಯಾಗಲಿದ್ದು, ಇದು ಬ್ಯಾಟರಿ ಚಾಲಿತವಾಗಿರಲಿದೆ. ಬ್ಯಾಟರಿ 10 ವರ್ಷ ಬಾಳಿಕೆ ಬರಲಿದೆ. ಅಲಾರಾಮ್ ಜೊತೆ ಮೊಬೈಲ್​ಗೆ ಮೆಸೇಜ್ ಕೂಡ ಬರಲಿದೆ.

ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಸೇಫ್ ಹ್ಯಾಲೋ ತಂತ್ರಾಂಶ ನಿರ್ದೇಶಕ ಸುಮಂತ್, ಈಗಾಗಲೇ ನಾವು ಈ ಉಪಕರಣವನ್ನು ಕೆಲವು ಕಡೆ ಐಐಟಿ, ಏಮ್ಸ್, ಏರ್ ಫೋರ್ಸ್ ಕ್ವಾರ್ಟರ್ಸ್​ನಲ್ಲಿ ಅಳವಡಿಸಿದ್ದೇವೆ. 1.2 ಲಕ್ಷ ಡಿವೈಸ್ ಮಾರಾಟ ಮಾಡಿದ್ದೇವೆ. ಇದು ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ಆಗಿದ್ದು, ನಾವೇ ಆವಿಷ್ಕಾರ ಮಾಡಿದ್ದೇವೆ. ನಮಗೆ ಪೇಟೆಂಟ್ ಕೂಡ ಇದೆ. ಫ್ಯಾನ್ ಮೂಲಕ ಆತ್ಮಹತ್ಯೆ ಪ್ರಕರಣ ಹೆಚ್ಚಿದ ಹಿನ್ನಲೆಯಲ್ಲಿ ಈ ಯೋಚನೆ ಮಾಡಿ ಉಪಕರಣ ಆವಿಷ್ಕಾರ ಮಾಡಿದ್ದೇವೆ. ಕಾಲೇಜುಗಳು ಸೇರಿ ಮಕ್ಕಳಿಗೆ ಎಲ್ಲೆಲ್ಲಿ ಒತ್ತಡ ಇದೆಯೋ ಅಲ್ಲಿ ಇದನ್ನು ಬಳಸಬಹುದಾಗಿದೆ ಎಂದರು.

ನಾವು ಸಂಸ್ಥೆಗಳಿಗೆ ಈ ಡಿವೈಸ್ ಸರಬರಾಜು ಮಾಡುತ್ತಿದ್ದು, ಖಾಸಗಿಯಾಗಿಯೂ ಯಾರು ಬೇಕಾದರೂ ಖರೀದಿ ಮಾಡಬಹುದಾಗಿದೆ. ಸದ್ಯ ನಮಗೆ ವಾಯುಪಡೆ ವಸತಿಗೃಹಗಳು ಮುಖ್ಯ ಗ್ರಾಹಕರಾಗಿದ್ದು, ರಾಜ್ಯದಲ್ಲಿ ಹೆಚ್ಚಿನ ಅವಕಾಶದ ನಿರೀಕ್ಷೆಯಲ್ಲಿದ್ದೇವೆ. ಸರ್ಕಾರ ಈ ಬಗ್ಗೆ ಜಾಗೃತಿ ಮೂಡಿಸಬೇಕು. ರಾಜ್ಯದ ಪೊಲೀಸ್ ವಸತಿಗೃಹ, ವಿದ್ಯಾರ್ಥಿ ವಸತಿಗೃಹದಲ್ಲಿ ಆತ್ಮಹತ್ಯೆ ಕೇಸ್ ವರದಿಯಾದ ಉದಾಹರಣೆ ಇದ್ದು, ಅಲ್ಲೆಲ್ಲಾ ಈ ಡಿವೈಸ್ ಅಳವಡಿಸಲು ಅವಕಾಶವಿದೆ ಎಂದರು.

ಹಾಲಿ ಇರುವ ಫ್ಯಾನ್​ಗಳಿಗೆ ಈ ಡಿವೈಸ್ ಅಳವಡಿಸಬಹುದಾಗಿದೆ. ಸೇಫ್ ಹ್ಯಾಲೋ(safehalo.in) ವೆಬ್ ಸೈಟ್ ಮೂಲಕ ಡಿವೈಸ್ ಖರೀದಿಸಬಹುದಾಗಿದ್ದು, ಇತರ ಕೆಲ ಆನ್ ಲೈನ್ ಶಾಪಿಂಗ್ ತಾಣಗಳ ಮೂಲಕವೂ ಉಪಕರಣ ಖರೀದಿಸಬಹುದಾಗಿದೆ ಎಂದರು.

ಇದನ್ನೂ ಓದಿ: ವೇಗದ ಬ್ಯಾಟರಿ ಚಾರ್ಜಿಂಗ್.. ಹೊಸ ಸಾಧನದ ವಿನ್ಯಾಸ ಸಿದ್ಧಪಡಿಸಿದ ಭಾರತೀಯ ಸಂಶೋಧಕರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.