ETV Bharat / state

ಆಂಧ್ರಪ್ರದೇಶ ಕಾಂಗ್ರೆಸ್​ ಉಸ್ತುವಾರಿಯಾಗಿ ಕನ್ನಡಿಗ ರಕ್ಷಾ ರಾಮಯ್ಯ ಆಯ್ಕೆ

author img

By

Published : Jun 30, 2022, 4:39 PM IST

'ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಬೇರುಗಳು ಗಟ್ಟಿಯಾಗಿದ್ದು, ಯುವ ಕಾಂಗ್ರೆಸ್ ಮೂಲಕ ಪಕ್ಷವನ್ನು ಮತ್ತಷ್ಟು ಸದೃಢ ಮತ್ತು ಪ್ರಬಲವಾಗಿ ಸಂಘಟಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ' - ಆಂಧ್ರ ರಾಜ್ಯ ಉಸ್ತುವಾರಿ ರಕ್ಷಾ ರಾಮಯ್ಯ.

Andhra Pradesh State In charge responsibility to Raksha Ramaiah
ರಕ್ಷಾ ರಾಮಯ್ಯಗೆ ಆಂಧ್ರಪ್ರದೇಶ ರಾಜ್ಯ ಉಸ್ತುವಾರಿ ಜವಾಬ್ದಾರಿ

ಬೆಂಗಳೂರು: ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್ ರಕ್ಷಾ ರಾಮಯ್ಯ ಅವರಿಗೆ ಆಂಧ್ರಪ್ರದೇಶ ರಾಜ್ಯದ ಉಸ್ತುವಾರಿ ನೀಡಲಾಗಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್​ನ ಹಲವು ಪದಾಧಿಕಾರಿಗಳಿಗೆ ವಿವಿಧ ರಾಜ್ಯಗಳ ಜವಾಬ್ದಾರಿ ಕೊಟ್ಟಿದ್ದು, ರಕ್ಷಾ ರಾಮಯ್ಯ ಅವರಿಗೆ ಆಂಧ್ರ ಪ್ರದೇಶದಲ್ಲಿ ಯುವ ಕಾಂಗ್ರೆಸ್ ವ್ಯವಹಾರಗಳನ್ನು ನೋಡಿಕೊಳ್ಳುವ ಉಸ್ತುವಾರಿ ವಹಿಸಲಾಗಿದೆ.

ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಬೇರುಗಳು ಗಟ್ಟಿಯಾಗಿದ್ದು, ಯುವ ಕಾಂಗ್ರೆಸ್ ಮೂಲಕ ಪಕ್ಷವನ್ನು ಮತ್ತಷ್ಟು ಸದೃಢ ಮತ್ತು ಪ್ರಬಲವಾಗಿ ಸಂಘಟಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಎಲ್ಲರ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆಂದು ರಕ್ಷಾ ರಾಮಯ್ಯ ಹೇಳಿದ್ದಾರೆ. ತಮಗೆ ನೂತನ ಜವಾಬ್ದಾರಿ ವಹಿಸಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ, ಎಐಸಿಸಿ ಜಂಟಿ ಕಾರ್ಯದರ್ಶಿ ಕೃಷ್ಣ ಅಲ್ಲವಾರು ಅವರಿಗೆ ರಕ್ಷಾ ರಾಮಯ್ಯ ಕೃತಜ್ಞತೆ ಸಲ್ಲಿಸಿದ್ದಾರೆ.

ಈಗಾಗಲೇ ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ರಕ್ಷಾ ರಾಮಯ್ಯ ತಮ್ಮ ತಂದೆ ಎಂ.ಆರ್ ಸೀತಾರಾಮ್ ಜೊತೆ ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಮಾಜಿ ಸಚಿವ ಸೀತಾರಾಮ್ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಳ್ಳುವ ನಿರೀಕ್ಷೆ ಹೊಂದಿದ್ದರು. ಇದು ಸಾಧ್ಯವಾಗದೇ ಪಕ್ಷದ ನಾಯಕರು ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ಬೇಸರಕ್ಕೆ ಒಳಗಾಗಿ ಇತ್ತೀಚೆಗಷ್ಟೇ ಬೆಂಬಲಿಗರ ಸಮಾವೇಶವನ್ನು ಅರಮನೆ ಮೈದಾನದಲ್ಲಿ ನಡೆಸಿದ್ದರು. ಚಿಕ್ಕಬಳ್ಳಾಪುರ ಇಲ್ಲವೇ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಚಿಂತನೆ ನಡೆಸಿರುವ ಸೀತಾರಾಮ್ ಸದ್ಯವೇ ಬಿಜೆಪಿಗೆ ಸೇರ್ಪಡೆಯಾಗುವ ಚಿಂತನೆ ನಡೆಸಿದ್ದಾರೆ ಎನ್ನಲಾಗ್ತಿದೆ. ಪುತ್ರ ರಕ್ಷಾ ರಾಮಯ್ಯ ಸಹ ಇವರ ಜೊತೆ ಕಾಂಗ್ರೆಸ್ ತ್ಯಜಿಸಲಿದ್ದು, ಚಿಕ್ಕಬಳ್ಳಾಪುರ ಇಲ್ಲವೇ ಕೋಲಾರ ಜಿಲ್ಲೆಯ ಯಾವುದಾದರೂ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಧಾರವಾಡ ಹೈಕೋರ್ಟ್

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ತಮ್ಮ ಅಧಿಕಾರದ ಅವಧಿಯನ್ನು ಮೂರು ವರ್ಷದ ಬದಲು ಕೇವಲ ಒಂದು ವರ್ಷಕ್ಕೆ ಮೊಟಕುಗೊಳಿಸಿರುವ ಕಾಂಗ್ರೆಸ್ ನಾಯಕರ ತೀರ್ಮಾನದಿಂದ ರಕ್ಷಾ ರಾಮಯ್ಯ ಬೇಸರಗೊಂಡಿದ್ದಾರೆ. ತಂದೆ-ಮಗನ ಅಸಮಾಧಾನ ತೀವ್ರಗೊಂಡಿದ್ದು, ಪಕ್ಷ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಇವರನ್ನು ತಡೆಯುವ ಪ್ರಯತ್ನವಾಗಿ ಕಾಂಗ್ರೆಸ್ ನಾಯಕರು ಸಾಕಷ್ಟು ಮುತುವರ್ಜಿ ವಹಿಸುತ್ತಿದ್ದಾರೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ವಿಶೇಷ ಕಾಳಜಿ ವಹಿಸಿ ರಕ್ಷಾ ರಾಮಯ್ಯಗೆ ಕಳೆದ ತಿಂಗಳು ರಾಷ್ಟ್ರೀಯ ಮಟ್ಟದ ಯುವ ಕಾಂಗ್ರೆಸ್ ಜವಾಬ್ದಾರಿ ನೀಡಿದ್ದರು. ಇದೀಗ ಆಂಧ್ರಪ್ರದೇಶದ ಜವಾಬ್ದಾರಿಯನ್ನು ಕೊಡಿಸಿದ್ದಾರೆ ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.