ETV Bharat / state

ಕರ್ನಾಟಕದತ್ತ ಮೋದಿ - ಅಮಿತ್ ಶಾ ಚಿತ್ತ: ಸಿದ್ದವಾಗ್ತಿದೆ ಎಲೆಕ್ಷನ್ ಆ್ಯಕ್ಷನ್ ಪ್ಲಾನ್!

author img

By

Published : Dec 7, 2022, 5:19 PM IST

ತವರಿನ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿತ್ತ ಕರ್ನಾಟಕದ ಕಡೆ ಹರಿಸಿದ್ದಾರೆ.

ಕರ್ನಾಟಕದತ್ತ ಮೋದಿ-ಅಮಿತ್ ಶಾ ಚಿತ್ತ: ಸಿದ್ದವಾಗ್ತಿದೆ ಎಲೆಕ್ಷನ್ ಆಕ್ಷನ್ ಪ್ಲಾನ್!
amit-shah-and-modi-eyes-on-action-plan-in-karnataka-assembly-election

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮರಳಿ ಕೇಸರಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬಲಪಡಿಸಲು ಕರ್ನಾಟಕವನ್ನೇ ವೇದಿಕೆಯನ್ನಾಗಿ ಮಾಡಿಕೊಳ್ಳಬೇಕು ಎಂದು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಗುಜರಾತ್ ಬಳಿಕ ಇದೀಗ ಮೋದಿ ಅಮಿತ್ ಶಾ ಜೋಡಿ ಕನ್ನಡ ನೆಲದ ಕಡೆ ದೃಷ್ಟಿ ಹರಿಸಿದೆ.

ಈಗಾಗಲೇ ರಾಜ್ಯದ ನಾಯಕರಿಗೆ ಚುನಾವಣೆಗೆ ಸಿದ್ದರಾಗುವಂತೆ ಸಂದೇಶ ರವಾನಿಸಿದ್ದು, ದೆಹಲಿಯಲ್ಲಿ ಸಿದ್ದವಾಗುವ ಕ್ರಿಯಾಯೋಜನೆಯನ್ನು ಅನುಷ್ಠಾನಗೊಳಿಸುವುದಷ್ಟೇ ಈ ಬಾರಿ ರಾಜ್ಯದ ನಾಯಕರ ಕೆಲಸವಾಗಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

2023 ರ ಮೇ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಸಿದ್ದತೆ ಆರಂಭಿಸಿದೆ. ತವರಿನ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕದ ಕಡೆ ಚಿತ್ತ ಹರಿಸಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್​​ಗೆ ಉಸಿರಾಡಲು ಜಾಗವಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ.

ಹಾಗಾಗಿ ರಾಜ್ಯದಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಹವಣಿಕೆಯಲ್ಲಿ ಕಾಂಗ್ರೆಸ್​ ಇದೆ. ಆದರೆ, ಬಿಜೆಪಿ ಮಾತ್ರ ಕಾಂಗ್ರೆಸ್​ ಅನ್ನು ಅಧಿಕಾರದಿಂದ ದೂರವಿಡುವ ಮೂಲಕ ಮತ್ತೆ ಐತಿಹಾಸಿಕ ಪಕ್ಷವನ್ನು ದೇಶದಲ್ಲಿ ಮೂಲೆಗುಂಪು ಮಾಡಬೇಕು ಎಂಬ ಕೇಸರಿ ಪಕ್ಷ ನಿರ್ಧರಿಸಿದೆ. ಹಾಗಾಗಿ ಖುದ್ದು ಮೋದಿ, ಅಮಿತ್ ಶಾ ಜೋಡಿಯೇ ರಾಜ್ಯದ ಚುನಾವಣೆ ನೇತೃತ್ವ ವಹಿಸಿಕೊಂಡು ತಂತ್ರಗಾರಿಕೆ ರೂಪಿಸಲಿದೆ.

ಇನ್ನು ಉತ್ತರ ಭಾರತ, ಮಧ್ಯ ಭಾರತದಲ್ಲಿ ಬಿಜೆಪಿ ಸಾಕಷ್ಟು ಬಲಗೊಂಡಿದೆ. ಆದರೆ ದ್ರಾವಿಡ ನೆಲದ ದಕ್ಷಿಣ ಭಾರತ ಮಾತ್ರ ಬಿಜೆಪಿಗೆ ದಕ್ಕುತ್ತಿಲ್ಲ. ಕರ್ನಾಟಕ ಹೊರತುಪಡಿಸಿದರೆ ಇತರ ರಾಜ್ಯಗಳಲ್ಲಿ ಬಹಳ ದುರ್ಬಲವಾಗಿದೆ. ಹಾಗಾಗಿ ತೆಲಂಗಾಣ,ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿಯೂ ಕಮಲ ಅರಳಿಸಲು ಕರ್ನಾಟಕವನ್ನೇ ರಹದಾರಿಯನ್ನಾಗಿ ಮಾಡಿಕೊಳ್ಳಬೇಕಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಧಿಕಾರದಲ್ಲಿರುವ ದಕ್ಷಿಣ ಭಾರತದ ಏಕೈಕ ರಾಜ್ಯವಾದ ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದು ನಿರ್ಧರಿಸಿರುವ ಹೈಕಮಾಂಡ್ ಶತಾಯ ಗತಾಯ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಬೇಕು ಎನ್ನುವ ನಿರ್ಧಾರ ಮಾಡಿದೆ.

ಸಿದ್ದವಾಗುತ್ತಿದೆ ಆ್ಯಕ್ಷನ್​ ಪ್ಲಾನ್​: ಸದ್ಯ ರಾಜ್ಯದಲ್ಲಿ ಸರ್ಕಾರದ ಸಾಧನಾ ಸಮಾವೇಶದ ಭಾಗವಾಗಿ ಜನಸಂಕಲ್ಪ ಯಾತ್ರೆ ನಡೆಯುತ್ತಿದ್ದು, ವಿವಿಧ ಮೋರ್ಚಾಗಳ ಬೃಹತ್ ಸಮಾವೇಶಗಳನ್ನು ಆಯೋಜನೆ ಮಾಡಿ ಶಕ್ತಿ ಪ್ರದರ್ಶನ ಮಾಡುತ್ತಿದೆ. ಹಿರಿಯ ನಾಯಕ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಜಂಟಿಯಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಸಂಘಟನಾತ್ಮಕ ಜವಾಬ್ದಾರಿ ಹೊತ್ತಿರುವ ರಾಜ್ಯಾಧ್ಯಕ್ಷ ಕಟೀಲ್ ಮತ್ತೊಂದು ತಂಡದಲ್ಲಿ ಪ್ರವಾಸ ನಡೆಸಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುತ್ತಿದ್ದಾರೆ. ಇದರ ಮುಂದುವರೆದ ಭಾಗದ ಕಾರ್ಯತಂತ್ರವನ್ನು ಇನ್ಮುಂದೆ ಹೈಕಮಾಂಡ್ ವಹಿಸಿಕೊಳ್ಳಲಿದೆ. ಮುಂದಿನ ಮೂರು ತಿಂಗಳ ಆಕ್ಷನ್ ಪ್ಲಾನ್ ಸಿದ್ದವಾಗುತ್ತಿದೆ.

ಪಕ್ಷದ ನಾಯಕರ ಪ್ರವಾಸ, ಪ್ರಚಾರ ಕಾರ್ಯ, ಸಭೆಗಳು, ಸಮಾವೇಶಗಳ ಬಗ್ಗೆ ಸಂಪೂರ್ಣ ನೀಲನಕ್ಷೆ ಸಿದ್ದಪಡಿಸಿ ಅದರಂತೆ ಕಾರ್ಯನಿರ್ವಹಿಸುವ ಹೊಸ ಟಾಸ್ಕ್ ಅನ್ನು ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೆ ನೀಡಲಿದೆ ಎಂದು ಪಕ್ಷದ ನಾಯಕರೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಸಂಪೂರ್ಣ ಹೊಣೆ ಹೈಕಮಾಂಡ್​ಗೆ: ವಲಸಿಗ ಸಚಿವರು ಸೇರಿದಂತೆ ಎಲ್ಲ ಸಚಿವರಿಗೆ ಕ್ಷೇತ್ರಗಳ ಜವಾಬ್ದಾರಿ ಹಂಚಿಕೆ ಮಾಡಲಿದ್ದು, ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವುದು, ಪಕ್ಷ ದುರ್ಬಲವಾಗಿದ್ದ ಕ್ಷೇತ್ರವಾಗಿದ್ದಲ್ಲಿ ಇತರ ಪಕ್ಷದ ಪ್ರಭಾವಿಗಳನ್ನು ಕರೆತರುವುದು, ಸಂಘಟನಾತ್ಮಕ ಚುಟುವಟಿಕೆ ಬಲಪಡಿಸುವುದು, ಬೂತ್ ಮಟ್ಟದಿಂದಲೇ ಪಕ್ಷ ಸಕ್ರಿಯವಾಗಿದೆ.

ಚುನಾವಣೆ ಮುಗಿಯುವವರೆಗೂ ಅವಿಶ್ರಾಂತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು, ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರು, ಕೋರ್ ಕಮಿಟಿ ಸದಸ್ಯರು, ಕಾರ್ಯಕಾರಿಣಿ ಸದಸ್ಯರಿಗೆ ಚುನಾವಣಾ ಜವಾಬ್ದಾರಿ ಹಂಚಿಕೆ ಮಾಡಿ ಸಮರೋಪಾದಿಯಲ್ಲಿ ಚುನಾವಣೆಗೆ ಬೇಕಾದ ಎಲ್ಲ ಸಿದ್ದತೆಯನ್ನು ಖುದ್ದು ಪಕ್ಷದ ವರಿಷ್ಠರೇ ಮಾಡಲಿದ್ದಾರೆ.

ಈವರೆಗೂ ಯಡಿಯೂರಪ್ಪ, ಅನಂತ್ ಕುಮಾರ್ ಜೋಡಿ ಚುನಾವಣೆಗಳನ್ನು ನಿರ್ವಹಣೆ ಮಾಡುತ್ತಿತ್ತು. ಆದರೆ, ಅನಂತ್ ಕುಮಾರ್ ನಿಧನರಾಗಿದ್ದು, ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ ಹಾಗಾಗಿ ಈ ಬಾರಿ ಇದೇ ಮೊದಲ ಬಾರಿಗೆ ಹೈಕಮಾಂಡ್ ಇಡೀ ಚುನಾವಣೆಯನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡಲಿದೆ. ಹಾಗಾಗಿ ಈ ಬಾರಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಮಾರ್ಗ ರಚನೆ, ಸಮಾವೇಶಗಳ ಆಯೋಜನೆ, ಘೋಷವಾಕ್ಯಗಳು ಸೇರಿದಂತೆ ಎಲ್ಲವೂ ಹೈಕಮಾಂಡ್ ನಿಂದಲೇ ಅಂತಿಮಗೊಳ್ಳಲಿದೆ.

ರಾಜ್ಯದ ನಾಯಕರ ಜೊತೆ ರೂಪು ರೇಷ ಸಿದ್ಧ: ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಬಗ್ಗೆ ಮೋದಿ ಮತ್ತು ಅಮಿತ್ ಶಾ ವಿಶೇಷ ಸಭೆ ನಡೆಸಲಿದ್ದು, ಚುನಾವಣಾ ಸಿದ್ದತೆ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಹಿರಿಯ ನಾಯಕ ಯಡಿಯೂರಪ್ಪ ಜೊತೆ ಸಭೆ ನಡೆಸಿ ರೂಪುರೇಷುಗಳ ಕುರಿತು ಚರ್ಚೆ ನಡೆಸಲಾಗುತ್ತದೆ.

ತಿಂಗಳಾಂತ್ಯಕ್ಕೆ ಅಮಿತ್ ಶಾ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಪಕ್ಷದ ಕೋರ್ ಕಮಿಟಿ ಸದಸ್ಯರ ಜೊತೆ ಸಭೆ ನಡೆಸಲಿದ್ದಾರೆ. ಹೈಕಮಾಂಡ್ ಸಿದ್ದಪಡಿಸುವ ಟಾಸ್ಕ್ ಅನ್ನು ರಾಜ್ಯದ ನಾಯಕರಿಗೆ ವಹಿಸಲಿದ್ದು, ಮೂರು ತಿಂಗಳ ಕಾಲ ಸರ್ಕಾರ ಮತ್ತು ಪಕ್ಷ ಯಾವ ರೀತಿ ಮುನ್ನಡೆಯಬೇಕು ಎನ್ನುವುದನ್ನು ನಿಯಂತ್ರಣ ಮಾಡಲಿದ್ದಾರೆ.

ಬಿಎಸ್​ವೈ ಅಣತಿಯಂತೆ ಕಾರ್ಯ: ಈಗಾಗಲೇ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪಗೆ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡುವ ಜೊತೆಗೆ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸದಸ್ಯ ಸ್ಥಾನ ನೀಡಿ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎನ್ನುವ ಸಂದೇಶವನ್ನು ರವಾನಿಸಿ ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ಭದ್ರಪಡಿಸಿಕೊಳ್ಳುವಲ್ಲಿ ಬಹುತೇಕ ಸಫಲವಾಗಿದೆ.

ಯಡಿಯೂರಪ್ಪ ಜೊತೆಯಲ್ಲಿಯೂ ಹೈಕಮಾಂಡ್ ನಾಯಕರು ಮಾತುಕತೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಸೂಚಿಸಲಿದ್ದು, ಅದಕ್ಕೆ ಯಡಿಯೂರಪ್ಪ ಒಪ್ಪಿಕೊಳ್ಳಲಿದ್ದಾರೆ. ಒಬ್ಬ ಪುತ್ರ ಸಂಸದನಾಗಿದ್ದು, ಮತ್ತೋರ್ವ ಪುತ್ರ ಬಿಜೆಪಿ ಉಪಾಧ್ಯಕ್ಷ ಸ್ಥಾನದಲ್ಲಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಯಡಿಯೂರಪ್ಪ ಹೈಕಮಾಂಡ್ ಅಣತಿಯಂತೆ ಕೆಲಸ ಮಾಡಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿವಾದ ಬದಿಗಿರಿಸುವ ಯತ್ನ: ಇನ್ನು ಮೀಸಲಾತಿ ವಿಚಾರದಲ್ಲಿಯೂ ಬಿಜೆಪಿಗೆ ಸಾಕಷ್ಟು ಲಾಭವಾಗಲಿದೆ. ಎಸ್ಸಿಎಸ್ಟಿ ಮೀಸಲು ಹೆಚ್ಚಳದಿಂದ ಆ ಸಮುದಾಯ ಬಿಜೆಪಿ ಪರ ನಿಲ್ಲಲಿದ್ದು, ಇತರ ಸಮುದಾಯಗಳ ಮೀಸಲಾತಿ ವಿಚಾರದಲ್ಲಿಯೂ ಲೆಕ್ಕಾಚಾರದಲ್ಲಿ ಹೆಜ್ಜೆ ಇಡಲಿದೆ ಹಾಗಾಗಿ ಮತಗಳ ಕ್ರೋಢೀಕರಣದಲ್ಲಿಯೂ ಬಿಜೆಪಿ ಹೈಕಮಾಂಡ್ ಸಾಕಷ್ಟು ಎಚ್ಚರಿಕೆಯ ಹೆಜ್ಜೆಗಳನ್ನು ಇಡಲಿದೆ.

ಆದರೆ, ಈಗ ಎದುರಾಗಿರುವ ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಚುನಾವಣೆ ವೇಳೆ ಬೀರಬಹುದಾದ ಪರಿಣಾಮಗಳ ಕುರಿತು ಸಧ್ಯ ಬಿಜೆಪಿ ನಾಯಕರು ಅವಲೋಕನದಲ್ಲಿ ತೊಡಗಿದ್ದಾರೆ. ವಿವಾದವನ್ನು ಸದ್ಯದ ಮಟ್ಟಿಗೆ ತಣ್ಣಗಾಗಿಸಿ ಚುನಾವಣೆಗೆ ಹೋಗುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಕರ್ನಾಟಕದಲ್ಲಿ ಮರಳಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೈಕಮಾಂಡ್ ಎಲ್ಲ ರೀತಿಯ ಪ್ರಯತ್ನ ನಡೆಸಲಿದ್ದು, ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೇಸರಿ ಪಕ್ಷವನ್ನು ಮರಳಿ ಪ್ರತಿಷ್ಠಾಪಿಸಲು ಖುದ್ದು ರಂಗಪ್ರವೇಶಕ್ಕೆ ಮೋದಿ, ಅಮಿತ್ ಶಾ ಸಿದ್ದರಾಗಿದ್ದಾರೆ. 2024 ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ರಾಜ್ಯದಲ್ಲಿ ಅಧಿಕಾರ ಕೈತಪ್ಪದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರಾಮರಾಜ್ಯ ಮಾಡುತ್ತೇವೆಂದವರು ರೌಡಿ ರಾಜ್ಯ ಮಾಡಲು ಮುಂದಾಗಿದ್ದಾರೆ: ಕಾಂಗ್ರೆಸ್ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.