ETV Bharat / state

ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ತೀರ್ಮಾನಿಸಲಾಗಿದೆ: ಸಿಎಂ ಬೊಮ್ಮಾಯಿ‌

author img

By

Published : Mar 23, 2023, 11:03 PM IST

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಫಿಲ್ಮ್​ ಫೆಸ್ಟಿವಲ್ ಕಾರ್ಯಕ್ರಮ ನಡೆಯುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ
ಸಿಎಂ ಬಸವರಾಜ್ ಬೊಮ್ಮಾಯಿ

ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ

ಬೆಂಗಳೂರು: ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ. ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಬಳಿ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದೇವೆ. ಅವರ ಹೆಸರಿನಲ್ಲಿ ಸ್ಮಾರಕ ಮಾಡಲು ಎಲ್ಲ ಸಿದ್ಧತೆ ನಡೆದಿದೆ. ಇದೇ ವರ್ಷ ನಟ ದಿ ಪುನಿತ್ ರಾಜ್​ಕುಮಾರ್ ಅವರ ಸ್ಮಾರಕ ಅಭಿವೃದ್ಧಿ ಮಾಡುತ್ತೇವೆ. ಇದರ ಜೊತೆಗೆ ಅಂಬರೀಶ್ ಅವರ ಸ್ಮಾರಕ ಸಿದ್ಧವಾಗುತ್ತಿದೆ. ಮಾರ್ಚ್ 27 ರಂದು ಸ್ಮಾರಕ ಹಾಗೂ ರೇಸ್ ಕೋರ್ಸ್​ಗೆ ಹೆಸರಿಡುವ ಕಾರ್ಯಕ್ರಮ ಮಾಡುತ್ತೇವೆ ಎಂದರು.

ಈ ಬಾರಿಯ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಈ ಬಾರಿ ಉತ್ತಮ ಚಿತ್ರಗಳ ಆಯ್ಕೆಯಾಗಿದೆ. ಈ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತವೆ. ಬೆಂಗಳೂರು ಅಂತರಾಷ್ಟ್ರೀಯ ನಗರ. ಪ್ರತಿದಿನ ಐದು ಸಾವಿರಕ್ಕೂ ಹೆಚ್ಚು ಜನ ವಿಜ್ಞಾನಿಗಳು ಬರುತ್ತಾರೆ‌. 400 ಆರ್ ಆ್ಯಂಡ್ ಡಿ ಕೇಂದ್ರಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಬೆಳೆದಿದೆ‌. ಇಲ್ಲಿ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಡೆಯದೆ ಇನ್ನೆಲ್ಲಿ ನಡೆಯುತ್ತದೆ ಎಂದರು.

ಸಿನೆಮಾದಲ್ಲಿಯೂ ವೇಗವಾಗಿ ಬೆಳವಣಿಗೆ ಆಗುತ್ತಿದೆ: ಡಿಜಿಟಲೀಕರಣ ಆದ ಮೇಲೆ ಬಹಳಷ್ಟು ಬದಲಾವಣೆ ಆಗಿದೆ. ನಾವು ನೋಡುವುದಕ್ಕೂ, ನಮ್ಮ ಮಕ್ಕಳು ಸಿನೆಮಾ ನೋಡುವುದಕ್ಕೂ ವ್ಯತ್ಯಾಸ ಇದೆ. ಸಿನೆಮಾಗೆ ಬಹಳ ದೊಡ್ಡ ಇತಿಹಾಸ ಇದೆ. ಅತ್ಯಂತ ಅದ್ಭುತವಾದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಈಗ ತಂತ್ರಜ್ಞಾನದ ಮೂಲಕ ಹೋದರೆ ಯಶಸ್ಸು ಸಿಗುತ್ತದೆ. ಬದುಕಿನಲ್ಲಿ ಎಲ್ಲವೂ ವೇಗವಾಗಿ ಬೆಳೆಯುತ್ತಿರುವುದರಿಂದ ಸಿನೆಮಾದಲ್ಲಿಯೂ ವೇಗವಾಗಿ ಬೆಳವಣಿಗೆ ಆಗುತ್ತಿದೆ ಎಂದರು.

ಆಸ್ಕರ್ ನಮಗೆ ದೂರ ಇಲ್ಲ: ಕಾಂತಾರ ಬಗ್ಗೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಕಾಂತಾರ ಸ್ಥಳೀಯ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗದುಕೊಂಡು ಹೋಗಿದ್ದು, ಆ ತಂಡಕ್ಕೆ ಅಭಿನಂದನೆಗಳು. ತ್ರಿಬಲ್ ಆರ್ ಸಿನೆಮಾ ಆಸ್ಕರ್ ಪಡೆದಿದ್ದು ನಾವೆಲ್ಲ ಹೆಮ್ಮೆ ಪಡಬೇಕು‌. ಇದರಿಂದ ಆಸ್ಕರ್ ನಮಗೆ ದೂರ ಇಲ್ಲ. ಪ್ರತಿವರ್ಷ ಪಡೆಯಬಹುದು ಅಂತ ತೋರಿಸಿಕೊಟ್ಟಿದೆ.‌ ಈ ವರ್ಷ ಫೆಸ್ಟಿವಲ್​ನಲ್ಲಿ ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ತಿಳಿಸಿದರು.

ಚಿತ್ರಗಳ ಸಂಖ್ಯೆ ಹೆಚ್ಚಳ ಮಾಡಿದ್ದೇನೆ: ಸಿನೆಮಾ ಇಲ್ಲದೆ ನಮ್ಮ ಬದುಕಿಲ್ಲ. ಹೀಗಾಗಿ ಸಿನೆಮಾಗಾಗಿ ನಾನು ಏನೆಲ್ಲ ಬೇಕು, ಅದನ್ನು ಮಾಡಿದ್ದೇನೆ. ಸಿನೆಮಾ ಸಬ್ಸಿಡಿ ಹೆಚ್ಚಿಗೆ ಮಾಡಿದ್ದೇನೆ. ಸಬ್ಸಿಡಿ ಪಡೆಯುವ ಚಿತ್ರಗಳ ಸಂಖ್ಯೆ ಹೆಚ್ಚಳ ಮಾಡಿದ್ದೇನೆ. ಫಿಲ್ಮ್‌ ಸಿಟಿ ಕೂಡ ಆಗಲಿದೆ. ಅಲ್ಲಿ ಹಾಲಿವುಡ್ ಚಿತ್ರಗಳೂ ಶೂಟಿಂಗ್ ಆಗಬೇಕು ಎಂದರು. ಈ ಸಂದರ್ಭಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಸದ ರಾಜೀವ್ ಚಂದ್ರಶೇಖರ್, ಸಚಿವ ಆರ್. ಅಶೋಕ್ ಹಾಗೂ ಬಾಲಿವುಡ್ ನಿರ್ದೇಶಕ, ಸಿನಿಮಾಟೋಗ್ರಾಫರ್ ಗೋವಿಂದ್ ನಿಹಾಲಾನಿ, ನಟಿ ರಮ್ಯಾ ಕೃಷ್ಣ, ಅಭಿಷೇಕ್ ಅಂಬರೀಶ್, ಸಪ್ತಮಿ ಗೌಡ, ಹರ್ಷಿಕಾ, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರ 'ಲಿಲ್ಲಿ' ಟ್ರೇಲರ್ ರಿಲೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.