ETV Bharat / state

ಇಂದು ಸ್ಪಂದನಾ ಅಂತ್ಯಕ್ರಿಯೆ.. ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ಅವಕಾಶ

author img

By

Published : Aug 9, 2023, 6:54 AM IST

Updated : Aug 9, 2023, 7:32 AM IST

ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯುತ್ತಿದ್ದು, ಇಂದು ಮಧ್ಯಾಹ್ನ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ.

Spandana
ಸ್ಪಂದನಾ

ಸ್ಪಂದನಾ ಅಂತಿಮ ದರ್ಶನ

ಬೆಂಗಳೂರು: ಬ್ಯಾಂಕಾಕ್ ಪ್ರವಾಸದ ವೇಳೆ ನಿಧನರಾದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರ ಮಂಗಳವಾರ ರಾತ್ರಿ ಬೆಂಗಳೂರಿಗೆ ತಲುಪಿದ್ದು, ಅಂತಿಮ ದರ್ಶನ ನಡೆಯುತ್ತಿದೆ. ಅಂತಿಮ ದರ್ಶನದ ಬಳಿಕ ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ ನಡೆಯಲಿದೆ.

ಮಂಗಳವಾರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಥಾಯ್ ಏರ್ ವೇಸ್ ವಿಮಾನದಲ್ಲಿ ಕರೆತರಲಾಗಿದ್ದು, ಕಾರ್ಗೋ ಟರ್ಮಿನಲ್​ನಲ್ಲಿ ಕುಟುಂಬಸ್ಥರಿಗೆ ಪಾರ್ಥಿವ ಶರೀರ ಹಸ್ತಾಂತರ ಮಾಡಲಾಗಿದೆ. ಇದೇ ವಿಮಾನದಲ್ಲಿ ಪತಿ ವಿಜಯ ರಾಘವೇಂದ್ರ ಮತ್ತು ಸಂಬಂಧಿಗಳು ಆಗಮಿಸಿದರು. ಮೂರು ದಿನಗಳ ಹಿಂದೆ ಬ್ಯಾಂಕಾಕ್ ಸ್ಪಂದನಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು.

ಇದನ್ನೂ ಓದಿ: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

ನಿಯಮಾನುಸಾರ ಮೃತದೇಹ ಸ್ಕ್ಯಾನ್ ಮಾಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದರು. ದಾಖಲೆ ಪರಿಶೀಲನೆ ನಂತರ ಅಧಿಕಾರಿಗಳು ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿದರು. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಶ್ರೀಮುರಳಿ ಸೇರಿದಂತೆ ಸ್ನೇಹಿತರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆ್ಯಂಬುಲೆನ್ಸ್​ ಮೂಲಕ ಮಲ್ಲೇಶ್ವರಂನ ಸ್ಪಂದನಾ ತವರು ಮನೆಗೆ ಮೃತದೇಹ ರವಾನೆ ಮಾಡಲಾಗಿದೆ.

ಅಂತಿಮ ದರ್ಶನ: ಸ್ಪಂದನಾ ತಂದೆ ಬಿ.ಕೆ ಶಿವರಾಮ್​ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅಂತಿಮ ದರ್ಶನ ಆರಂಭವಾಗಿದ್ದು, ಇಂದು ಮಧ್ಯಾಹ್ನ 2 ಗಂಟೆವರೆಗೂ ಅಂತಿಮ ದರ್ಶನ ಇರಲಿದೆ. ಬಳಿಕ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದು, ಸರತಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಗಣ್ಯರಿಂದ ಅಂತಿಮ ದರ್ಶನ: ನಟ ಶಿವರಾಜಕುಮಾರ್​ ಹಾಗೂ ಪತ್ನಿ ಗೀತಾ ಶಿವರಾಜ್​ಕುಮಾರ್​ ಅವರು ಸ್ಪಂದನಾ ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನದ ಬಳಿಕ ವಿಜಯ ರಾಘವೇಂದ್ರ ಹಾಗೂ ಕುಟುಂಬಸ್ಥರಿಗೆ ಶಿವರಾಜಕುಮಾರ್ ದಂಪತಿ ಸಾಂತ್ವನ ಹೇಳಿದರು. ಅಲ್ಲದೆ, ನಟ ಕೋಮಲ್​, ಹಿರಿಯ ನಟ ಶ್ರೀನಾಥ್​, ನಟ ರಾಘವೇಂದ್ರ ರಾಜಕುಮಾರ್​, ಹಿರಿಯ ನಟಿ ಗಿರಿಜಾ ಲೋಕೇಶ್​, ನಟಿ ಸುಧಾರಾಣಿ, ಸಚಿವ ಮಧು ಬಂಗಾರಪ್ಪ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದು ವಿಜಯ ರಾಘವೇಂದ್ರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಅಂತಿಮ ದರ್ಶನದ ಹಿನ್ನೆಲೆಯಲ್ಲಿ ಬಿ.ಕೆ. ಶಿವರಾಮ್​ ನಿವಾಸದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸುಮಾರು 300 ಪೊಲೀಸ್​ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಇದನ್ನೂ ಓದಿ: ನಾಳೆ ಮಧ್ಯಾಹ್ನದ ಹೊತ್ತಿಗೆ ಸ್ಪಂದನಾ ವಿಜಯ್​ ಪಾರ್ಥಿವ ಶರೀರ ಬೆಂಗಳೂರಿಗೆ

Last Updated : Aug 9, 2023, 7:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.