ETV Bharat / state

Spandana funeral: ಪಂಚಭೂತಗಳಲ್ಲಿ ಸ್ಪಂದನಾ ಲೀನ; ಕಣ್ಣೀರಿನ ವಿದಾಯ ಹೇಳಿಕ ಪತಿ ವಿಜಯ್​ ರಾಘವೇಂದ್ರ

author img

By

Published : Aug 9, 2023, 6:31 PM IST

Vijay Raghavendra wife Spandana Funeral: ಇಂದು ಸಂಜೆ 5 ಗಂಟೆಗೆ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಿತು.

vijay raghavendra wife spandana funeral
ಪಂಚಭೂತಗಳಲ್ಲಿ ಸ್ಪಂದನಾ ಲೀನ

ಪಂಚಭೂತಗಳಲ್ಲಿ ಸ್ಪಂದನಾ ಲೀನ

ಕನ್ನಡ ಚಿತ್ರರಂಗದ ಜನಪ್ರಿಯ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಇನ್ನು ನೆನಪು ಮಾತ್ರ. ಬ್ಯಾಂಕಾಕ್​ನಲ್ಲಿ ಹೃದಯಾಘಾತಕ್ಕೊಳಗಾಗಿ ಸ್ಪಂದನಾ ಕೊನೆಯುಸಿರೆಳೆದ ಸುದ್ದಿ ಚಿತ್ರರಂಗ ಮಾತ್ರವಲ್ಲ, ಕನ್ನಡಿಗರ ಆಘಾತಕ್ಕೆ ಕಾರಣವಾಗಿತ್ತು. ನಿನ್ನೆ (ಮಂಗಳವಾರ) ರಾತ್ರಿ ಪಾರ್ಥಿವ ಶರೀರವನ್ನು ಬ್ಯಾಂಕಾಕ್​ನಿಂದ ವಿಮಾನದ ಮೂಲಕ ಬೆಂಗಳೂರಿಗೆ ತರಲಾಗಿತ್ತು. ಮಲ್ಲೇಶ್ವರಂನ ನಿವಾಸದಲ್ಲಿ ಇಂದು ಮುಂಜಾನೆ 6 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಅಂತ್ಯಸಂಸ್ಕಾರ ನೆರವೇರಿದ್ದು, ಪಂಚಭೂತಗಳಲ್ಲಿ ಸ್ಪಂದನಾ ಲೀನರಾಗಿದ್ದಾರೆ.

ಸ್ಪಂದನಾ ಆಡಿ, ಬೆಳೆದ ಮಲ್ಲೇಶ್ವರಂನಲ್ಲಿರುವ ಮನೆಯ ಮುಂಭಾಗದಲ್ಲಿ ಬೆಳಗ್ಗೆ ಪತಿ ವಿಜಯ್​​ ರಾಘವೇಂದ್ರ ಪಾರ್ಥಿವ ಶರೀರದ ಕೈಗಳಿಗೆ ಬಳೆಗಳನ್ನು ತೊಡಿಸಿ ವಿಧಿ-ವಿಧಾನ ನೆರವೇರಿಸಿದರು. ಈ ಸನ್ನಿವೇಶ ನೆರೆದಿದ್ದವರ ಕಣ್ಣಾಳಿಗಳನ್ನು ತೇವಗೊಳಿಸಿತ್ತು. ಬಳಿಕ ಹಿರಿಯ ನಟ ಶ್ರೀನಾಥ್, ನಟಿ ಸುಧಾರಾಣಿ, ಗಿರಿಜಾ ಲೋಕೇಶ್, ಗಾಯಕ ವಿಜಯ್ ಪ್ರಕಾಶ್, ರಾಘವೇಂದ್ರ ರಾಜ್​ಕುಮಾರ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.

ಬೆಳಗ್ಗೆ 9 ಗಂಟೆಯ ಸುಮಾರಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್, ಮಕ್ಕಳಾದ ಧೃತಿ, ವಂದಿತಾ ಹಾಗೂ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಮತ್ತು ಅಣ್ಣಾವ್ರ ಮಕ್ಕಳಾದ ಲಕ್ಷ್ಮೀ, ಪೂರ್ಣಿಮಾ ಸೇರಿದಂತೆ ಇಡೀ ರಾಜ್ ಕುಟುಂಬ ಅಂತಿಮ ನಮನ ಸಲ್ಲಿಸಿದರು. ಅಶ್ವಿನಿ ಪುನೀತ್​​ ರಾಜ್​ಕುಮಾರ್ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.

ಸ್ಪಂದನಾ ನಿಧನಕ್ಕೆ ಕಂಬನಿ

ಶಿವ ರಾಜ್​ಕುಮಾರ್, ಪತ್ನಿ ಗೀತಾ ಶಿವ ರಾಜ್​ಕುಮಾರ್, ಯಶ್, ಧೃವ ಸರ್ಜಾ, ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಶರಣ್, ದೊಡ್ಡಣ್ಣ, ತಬಲ ನಾಣಿ, ಹರೀಶ್ ರಾಜ್, ರಕ್ಷಿತ್ ಶೆಟ್ಟಿ, ರವಿಚಂದ್ರನ್ ಕುಟುಂಬ, ಉಮಾಶ್ರೀ, ಅನಿರುದ್ಧ ಜತ್ಕರ್ ಕುಟುಂಬ, ಐಂದ್ರಿತಾ ರೇ, ದಿಗಂತ್, ಪೂಜಾಗಾಂಧಿ, ಶುಭಾ ಪೂಂಜಾ, ನಿರ್ದೇಶಕ ಓಂ ಸಾಯಿ ಪ್ರಕಾಶ್, ವಿನೋದ್ ರಾಜ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಟಿಯರು ಅಂತಿಮ ದರ್ಶನ ಪಡೆದರು.

ರಾಜಕೀಯ ಗಣ್ಯರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಸಿ.ಟಿ.ರವಿ, ಕಾಂಗ್ರೇಸ್ ಮುಖಂಡ ಸಲೀಂ, ಮಾಜಿ ಶಾಸಕ ಆಂಜನೇಯ, ಬಿ.ಕೆ.ಶಿವರಾಮ್ ಆಪ್ತರುಗಳಾದ ಮಾಜಿ ಹಾಗು ಹಾಲಿ ಪೊಲೀಸ್ ಅಧಿಕಾರಿಗಳು ಅಂತಿಮ ದರ್ಶನ ಪಡೆದರು.

ಬೆಳಗ್ಗೆ 6 ಗಂಟೆಯಿಂದ ಶುರುವಾದ ಅಂತಿಮ ದರ್ಶನಕ್ಕೆ ಮಧ್ಯಾಹ್ನ 2.30 ಗಂಟೆವರೆಗೂ ಜನಸಾಗರ ಹರಿದುಬಂದಿತ್ತು. 2.30 ರ ವೇಳೆಗೆ ಅಂತಿಮ ಯಾತ್ರೆ ಆರಂಭವಾಗಿ, ಕಾಡುಮಲ್ಲೇಶ್ವರ ದೇವಸ್ಥಾನ, ಮಲ್ಲೇಶ್ವರಂ 11ನೇ ಮುಖ್ಯರಸ್ತೆ, ಸಂಪಿಗೆ ರಸ್ತೆ ಜಂಕ್ಷನ್​​, ಮಲ್ಲೇಶ್ವರಂ ಕೆ.ಸಿ.ಜನರಲ್​ ಆಸ್ಪತ್ರೆ ಮೂಲಕ ಸಾಗಿ ಶ್ರೀರಾಮ್‌ಪುರದ ಹರಿಶ್ಚಂದ್ರಘಾಟ್ ತಲುಪಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸೇರಿ ಗಣ್ಯರಿಂದ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ

ಈಡಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ: ಸಂಜೆ 4 ಗಂಟೆಗೆ ಪಾರ್ಥಿವ ಶರೀರ ಶ್ರೀರಾಮಪುರದ ಹರಿಶ್ಚಂದ್ರಘಾಟ್ ತಲುಪಿತು. ಈಡಿಗ ಸಂಪ್ರದಾಯಂತೆ ವಿಜಯ್​ ರಾಘವೇಂದ್ರ ವಿಧಿ-ವಿಧಾನ ನೆರವೇರಿಸಿದರು. 5 ಗಂಟೆಗೆ ಸರಿಯಾಗಿ ವಿಜಯ್​ ರಾಘವೇಂದ್ರ ಹಾಗೂ ಮಗ ಶೌರ್ಯ ಸ್ಪಂದನಾರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಸ್ಪಂದನಾ ಪಂಚಭೂತಗಳಲ್ಲಿ ಲೀನರಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.