ಜನಪ್ರತಿನಿಧಿಗಳ ದೂರವಾಣಿ ಕರೆ ಸ್ವೀಕರಿಸದಿದ್ದರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಸರ್ಕಾರ ಎಚ್ಚರಿಕೆ

author img

By

Published : Oct 12, 2021, 4:10 AM IST

action-to-be-taken-if-a-telephone-call-is-not-received-by-officers

ಜನಪ್ರತಿನಿಧಿಗಳ ದೂರವಾಣಿ ಕರೆ ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್​, ಉಪ ತಹಶೀಲ್ದಾರ್​, ರಾಜಸ್ವ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರಾದಿಯಾಗಿ ಕರೆಗಳನ್ನು ಸ್ವೀಕರಿಸಿ ಚಾಚು ತಪ್ಪದೇ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಬೆಂಗಳೂರು: ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸದಿರುವ ಜಿಲ್ಲಾಧಿಕಾರಿ, ತಹಶೀಲ್ದಾರ್​​, ರಾಜಸ್ವ ನಿರೀಕ್ಷಕರಿಗೆ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ. ಈ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸುತ್ತೋಲೆ ಹೊರಡಿಸಿದ್ದಾರೆ.

ಕಂದಾಯ ಇಲಾಖೆ ರಾಜ್ಯದ ಹಾಗೂ ಸಮಾಜದ ಪ್ರಮುಖವಾದ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಜೊತೆ ನಿಕಟ ಸಂಪರ್ಕ ಹಾಗೂ ಸಂಬಂಧ ಹೊಂದಿರುವ ಜನಸ್ನೇಹಿ ಇಲಾಖೆಯಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಗ್ರಾಮಲೆಕ್ಕಿಗರಿಂದ ರಾಜಸ್ವ ನಿರೀಕ್ಷಕರು, ಉಪ ತಹಶೀಲ್ದಾರ್, ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ನೇರವಾಗಿ ಜನರ ಹಾಗೂ ಜನಪ್ರತಿನಿಧಿಗಳ ಸಂರ್ಪದಲ್ಲಿರುತ್ತಾರೆ. ಮುಖ್ಯವಾಗಿ ಜನರ ಅಹವಾಲುಗಳನ್ನು ಇತ್ಯರ್ಥ ಪಡಿಸುವ ಪ್ರಥಮ ಹಂತದಲ್ಲಿನ ಪ್ರಮುಖ ಕಾರ್ಯ ತಹಶೀಲ್ದಾರ್‌ದಾಗಿರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಧಿಗಳ ದೂರವಾಣಿ ಕರೆಗಳನ್ನು ತಹಶಿಲ್ದಾರರುಗಳು ಸ್ವೀಕರಿಸದಿರುವ ವಿಷಯವು ಸರ್ಕಾರದ ಗಮನಕ್ಕೆ ಬಂದಿರುತ್ತದೆ‌ ಎಂದು ತಿಳಿಸಲಾಗಿದೆ.

ಇನ್ನು ಮುಂದೆ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಕರೆ ಬಂದಲ್ಲಿ ಅಧಿಕೃತವಾಗಿ ಕರೆಗಳನ್ನು ಸ್ವೀಕರಿಸಿ ಸದರಿ ಅಹವಾಲು ಮನವಿಗಳಿಗೆ ಹಚ್ಚು ಗಮನ ನೀಡಿ ಕಾನೂನಿನ ವ್ಯಾಪ್ತಿಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕರೆಗಳನ್ನು ಸಕಾಲದಲ್ಲಿ ಸ್ವೀಕರಿಸಲು ಸಾಧ್ಯವಾಗದೇ ಇದ್ದಲ್ಲಿ ಸಾರ್ವಜನಿಕರಿಗೆ ತಲುಪಿಸುವ ಸೇವೆಗಳಲ್ಲಿ ಏರು ಪೇರು ಉಂಟಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ತಪ್ಪಿದ ಕರೆಗಳಿಗೆ ಮರು ಕರೆ ಮಾಡಿ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಸ್ವೀಕೃತವಾಗುವ ಕರೆಯ ಕೋರಿಕೆ, ಮನವಿಗಳನ್ನು ಸ್ವೀಕರಿಸಬೇಕು. ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್​, ಉಪ ತಹಶೀಲ್ದಾರ್​, ರಾಜಸ್ವ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರಾದಿಯಾಗಿ ಕರೆಗಳನ್ನು ಸ್ವೀಕರಿಸಿ ಚಾಚು ತಪ್ಪದೇ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಜನಪ್ರತಿನಿಧಿಗಳಿಗೆ ಅಗೌರವ ತೋರಿರುವುದು ಕಂಡುಬಂದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಹಾಗೂ ಹಕ್ಕುಚ್ಯುತಿ ಉಂಟಾಗುವ ಸಾಧ್ಯತೆ ಇರುವುದರಿಂದ ಇದಕ್ಕೆ ಅವಕಾಶ ನೀಡದಂತೆ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಬರುವ ಕರಗಳನ್ನು ಅಧಿಕೃತವಾಗಿ ಸ್ವೀಕರಿಸಿ ಅಪೇಕ್ಷಿತ ಮಾಹಿತಿಯನ್ನು ನೀಡಿ ಕಾನೂನು ವ್ಯಾಪ್ತಿಯಲ್ಲಿ ನಿಯಮಾನುಸಾರ ಆದ್ಯತೆಯ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Bengaluru Rain: ಏರ್​ಪೋರ್ಟ್​ ಟರ್ಮಿನಲ್ ಬಳಿ​ ನಿಂತ ನೀರು, ಸಂಚಾರಕ್ಕೆ ಅಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.