ETV Bharat / state

ಹಾಡಹಗಲೇ ಯುವತಿಗೆ ಡ್ರ್ಯಾಗರ್ ತೋರಿಸಿ ಕಿರುಕುಳ: ಮೊಬೈಲ್​ ಕಸಿಯಲು ಯತ್ನ

author img

By

Published : May 16, 2023, 12:47 PM IST

Updated : May 16, 2023, 4:55 PM IST

ಯುವತಿಗೆ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

Young woman molested with dragger
ಹಾಡಹಗಲೇ ಯುವತಿಗೆ ಡ್ರ್ಯಾಗರ್ ತೋರಿಸಿ ಕಿರುಕುಳ

ಹಾಡಹಗಲೇ ಯುವತಿಗೆ ಡ್ರ್ಯಾಗರ್ ತೋರಿಸಿ ಕಿರುಕುಳ

ಬೆಂಗಳೂರು: ರಸ್ತೆಯಲ್ಲಿ ಡ್ರ್ಯಾಗರ್ ಹಿಡಿದು ಬಂದ ಕಿಡಿಗೇಡಿಯೊಬ್ಬ ಯುವತಿಗೆ ಕಿರುಕುಳ ನೀಡಿರುವ ಘಟನೆ ಪುಲಿಕೇಶಿ ನಗರ ವ್ಯಾಪ್ತಿಯ ವಿವೇಕಾನಂದ ರೆಸಿಡೆನ್ಸಿ ಬಳಿ ಮೇ 15ರಂದು ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಿರುಕುಳಕ್ಕೊಳಗಾಗಿದ್ದ ಯುವತಿಯ ರಕ್ಷಣೆಗೆ ಮತ್ತೊಬ್ಬ ಮಹಿಳೆ ಧಾವಿಸಿದ ಬಳಿಕ ಪುಂಡ ಪರಾರಿಯಾಗಿದ್ದಾನೆ.

ಡ್ರ್ಯಾಗರ್ ಹಿಡಿದು ಬಂದ ಆರೋಪಿ ಯುವತಿಯ ಮೊಬೈಲ್ ಕಸಿಯುವ ಪ್ರಯತ್ನ ಮಾಡಿದ್ದಾನೆ. ಆಕೆಯನ್ನು ಬೆನ್ನಟ್ಟುತ್ತ ಬಂದು ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದಂತೆ, ಯುವತಿ ರಕ್ಷಣೆಗೆ ಮತ್ತೊಬ್ಬ ಮಹಿಳೆ ಧಾವಿಸಿದ್ದಾರೆ. ತಕ್ಷಣ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಪುಲಿಕೇಶಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರಿ ಪೋರ್ಟಲ್ ನ್ಯೂನತೆ ದುರ್ಬಳಕೆ- 3.6 ಕೋಟಿ ರೂ. ವಂಚಿಸಿದ್ದ ಆರೋಪಿ ಬಂಧನ: ಆದಾಯ ತೆರಿಗೆ ಮರುಪಾವತಿ ವಂಚನೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ಸಿಐಡಿ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಆರು ವಿವಿಧ ಪ್ರಕರಣಗಳಿಂದ ಒಟ್ಟಾರೆಯಾಗಿ 3.6 ಕೋಟಿ ರೂ.ಗಳ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಹಿರೀಸಾವೆ ಮೂಲದ ದಿಲೀಪ್‌ ರಾಜೇಗೌಡ ಬಂಧಿತ ಆರೋಪಿ.

ಸರ್ಕಾರಿ ಸೇವಾ ಪೋರ್ಟಲ್ ವ್ಯವಸ್ಥೆಗಳಲ್ಲಿನ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಆರೋಪಿ, ಆದಾಯ ತೆರಿಗೆ ಇಲಾಖೆಯಿಂದ ತೆರಿಗೆದಾರರಿಗೆ ಸೇರಬೇಕಾದ ದೊಡ್ಡ ಮೊತ್ತದ ಹಣವನ್ನು ಅಕ್ರಮವಾಗಿ ನಕಲಿ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದನು. ತೆರಿಗೆ ಮೊತ್ತದ ಮರುಪಾವತಿಗಾಗಿ ಅಸಲು ತೆರಿಗೆದಾರರ ಬ್ಯಾಂಕ್ ಖಾತೆಯ ವಿವರಗಳನ್ನು ಮಾರ್ಪಡಿಸಿ, ನಂತರ ನಕಲಿ ಕೆವೈಸಿ ದಾಖಲಾತಿಗಳ ಮುಖಾಂತರ ಅಸಲು ತೆರಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಆದಾಯ ತೆರಿಗೆ ಮರುಪಾವತಿ ವಿವರಗಳನ್ನು ಬದಲಾಯಿಸಿ ಒಟ್ಟು 1.42 ಕೋಟಿ ರೂ.ಗಳಷ್ಟು ಹಣವನ್ನು ನಕಲಿ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದ.

ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟ‌ಲ್​ನಲ್ಲಿ ಅಸಲು ತೆರಿಗೆದಾರರೊಬ್ಬರು ಅವರ ಸಂಬಂಧಿಕರ ಪ್ಯಾನ್ ಖಾತೆಗಳಿಗೆ ಯಾರೋ ಅಕ್ರಮ ಪ್ರವೇಶ ಪಡೆದಿದ್ದಾರೆ. ಅದರಲ್ಲಿನ ಆದಾಯ ತೆರಿಗೆ ಮರುಪಾವತಿ ವಿವರಗಳನ್ನು ಮಾರ್ಪಡಿಸಿ ವಂಚಿಸಿದ್ದಾರೆ ಎಂದು ನಗರದ ಸಿಐಡಿ ಘಟಕದ ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಿದ್ದರು. ದೂರಿನ ಮೇರೆಗೆ ಸೈಬ‌ರ್ ಅಪರಾಧ ವಿಭಾಗದ ಅಧಿಕಾರಿ ಶಿವಪ್ರಸಾದ್ ನೇತೃತ್ವದಲ್ಲಿ ಸಹಾಯಕ ಸಿಬ್ಬಂದಿಯನ್ನೊಳಗೊಂಡ ತನಿಖಾ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು.

ತನಿಖಾ ಸಮಯದಲ್ಲಿ ವಿವಿಧ ಮೂಲಗಳ ಮೂಲಕ ಸಂಗ್ರಹಿಸಲಾದ ಮಾಹಿತಿಯಿಂದ ಒಬ್ಬನೇ ಆರೋಪಿಯು ಇದೇ ರೀತಿಯ ಆರು ಅಪರಾಧಗಳಿಂದ ಒಟ್ಟಾರೆಯಾಗಿ 3.6 ಕೋಟಿ ರೂ ವಂಚನೆ ಮಾಡಿರುವುದು ಕಂಡುಬಂದಿತ್ತು. ಅಂತಿಮವಾಗಿ ಆರೋಪಿ‌ ದಿಲೀಪ್‌ ರಾಜೇಗೌಡನನ್ನು ಧಾರವಾಡದಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದು, ಆತನಿಂದ ಪ್ರಕರಣಕ್ಕೆ ಸಂಬಂಧಪಟ್ಟ ಡಿಜಿ‌ಟಲ್ ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ. ತನಿಖಾ ಸಮಯದಲ್ಲಿ ಹಲವಾರು ಬ್ಯಾಂಕ್​ಗಳಿಂದ ವಾಹನ ಸಾಲ ಪಡೆದು ಹಾಗೂ ಬಜಾಜ್ ಫಿನ್ಸರ್ವ್ ಕಂಪನಿಯಿಂದ ಸಾಲ ಪಡೆದು ವಂಚಿಸಿರುವ ಬಗ್ಗೆಯೂ ತಿಳಿದು ಬಂದಿದೆ.

ಆದಾಯ ತೆರಿಗೆ ಅಧಿಕಾರಿಗಳಿಗೆ ಆದಾಯ ತೆರಿಗೆ ಪೋರ್ಟಲ್ ವ್ಯವಸ್ಥೆಯಲ್ಲಿರುವ ನ್ಯೂನತೆಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವುಗಳನ್ನು ಸರಿಪಡಿಸುವಂತೆ ಕೋರಲಾಗಿದೆ. ಅದೇ ವಿಧಾನದಲ್ಲಿ, ಆಸ್ತಿ ನೋಂದಣಿ ವಿವರಗಳನ್ನು ಒಳಗೊಂಡ ರಾಜ್ಯ ಸರ್ಕಾರದ ಕಾವೇರಿ ಆನ್‌ಲೈನ್‌ ಪೋರ್ಟಲ್​ನ್ನು ಸಹ ಆರೋಪಿ ದುರುಪಯೋಗ ಪಡಿಸಿಕೊಂಡಿರುವ ಕುರಿತು ಸಂಬಂಧಪಟ್ಟ ಪ್ರಾಧಿಕಾರಕ್ಕೂ ಮಾಹಿತಿ ನೀಡಲಾಗಿದೆ ಎಂದು ಸಿಐಡಿ ಪೊಲೀಸ್ ಮೂಲಗಳು ತಿಳಿಸಿವೆ.

ASI Anand Kumar
ಎಎಸ್​ಐ ಆನಂದ್ ಕುಮಾರ್

ರಾತ್ರಿ ಪಾಳಿ ಮುಗಿಸಿ ತೆರಳಿದ್ದ ಎಎಸ್ಐ ಹೃದಯಾಘಾತದಿಂದ ಸಾವು: ಕೆಲಸ ಮುಗಿಸಿ ಮನೆಗೆ ಹೋಗಿ ಮಲಗಿದ್ದ ಹಲಸೂರು ಗೇಟ್​ ಸಂಚಾರಿ ಪೊಲೀಸ್ ಠಾಣೆಯ ಎಎಸ್​ಐ ಆನಂದ್ ಕುಮಾರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಿನ್ನೆ ರಾತ್ರಿ ಪಾಳಿ ಕೆಲಸ ಮಾಡಿದ್ದ ಆನಂದ್​ ನಾಗರಭಾವಿ ಬಳಿಯ ಮನೆಗೆ ತೆರಳಿ ಮಲಗಿದ್ದರು. ಆದರೆ, ಇಂದು ಮುಂಜಾನೆ ಎಂದಿನಂತೆ ಅವರನ್ನು ಮನೆಯವರು ಏಳಿಸಲು ಪ್ರಯತ್ನಿಸಿ ವಿಫಲವಾದಾಗ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮಲಗಿದ್ದಾಗಲೇ ಆನಂದ್​ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಎಎಸ್ಐ ಸಾವಿಗೆ ಹಿರಿಯ, ಕಿರಿಯ ಪೊಲೀಸ್ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಹಣದ ಆಮಿಷ ತೋರಿಸಿ ವೃದ್ಧೆಯ ಚಿನ್ನದ ಸರ ಎಗರಿಸಿ ವಂಚಕ ಪರಾರಿ

Last Updated : May 16, 2023, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.