ETV Bharat / state

ಲೋಕಾಯುಕ್ತ ಇನ್​ಸ್ಪೆಕ್ಟರ್ ಸೋಗಿನಲ್ಲಿ ಕಾರ್ಯಪಾಲಕ ಇಂಜಿನಿಯರ್‌ರಿಂದ ಹಣಕ್ಕೆ‌ ಬೇಡಿಕೆ; ಆರೋಪಿ ಸೆರೆ

author img

By ETV Bharat Karnataka Team

Published : Nov 7, 2023, 9:28 AM IST

ಲೋಕಾಯುಕ್ತ ಇನ್​ಸ್ಪೆಕ್ಟರ್ ಸೋಗಿನಲ್ಲಿ ಕಾರ್ಯಪಾಲಕ ಇಂಜಿನಿಯರ್​ಗೆ ಕರೆ‌ ಮಾಡಿ ಹಣಕ್ಕೆ‌ ಬೇಡಿಕೆಯಿಟ್ಟ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Accused arrested
ಲೋಕಾಯುಕ್ತ ಇನ್​ಸ್ಪೆಕ್ಟರ್ ಸೋಗಿನಲ್ಲಿ ಕಾರ್ಯಪಾಲಕ ಇಂಜಿನಿಯರ್​ಗೆ ಕರೆ‌ ಮಾಡಿ ಹಣಕ್ಕೆ‌ ಬೇಡಿಕೆಯಿಟ್ಟಿದ್ದ ಆರೋಪಿ ಬಂಧನ

ಬೆಂಗಳೂರು: ಲೋಕಾಯುಕ್ತ ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಕಾರ್ಯಪಾಲಕ ಇಂಜಿನಿಯರ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಟ್ಟೇಗಾರಪಾಳ್ಯದ ತ್ಯಾಗರಾಜ್ ಬಂಧಿತ ಆರೋಪಿ. ಈತ ಶಿರಾ ವಿಭಾಗದ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಕೆ.ಬಿ.ರಾಮದಾಸಪ್ಪ ಅವರಿಗೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಎಂದು ಕರೆ ಮಾಡಿ ಬೆದರಿಕೆ ಹಾಕಿ, ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ದಾಖಲಾದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಗರಾಜ್ ಅ.4ರಂದು ರಾಮದಾಸಪ್ಪರಿಗೆ ಕರೆ ಮಾಡಿ, ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಮುಕ್ತಾಯಗೊಳಿಸಲು ಮೇಲಾಧಿಕಾರಿಗಳಿಗೆ ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡಬೇಕಿದೆ. ಇಲ್ಲವಾದರೆ, ನಿಮಗೆ ತೊಂದರೆಯಾಗುವ ಸಂಭವವಿದೆ. ಕೂಡಲೇ ನನ್ನನ್ನು ಭೇಟಿ ಮಾಡಿ ಎಂದು ಹೇಳಿದ್ದ. ರಾಮದಾಸಪ್ಪ ಅವರು ಯಾವುದೋ ಫೇಕ್ ಕಾಲ್ ಇರಬೇಕು ಎಂದು ಸುಮ್ಮನಾಗಿದ್ದಾರೆ.

ಅ.27ರಂದು ರಾಮದಾಸಪ್ಪ ಇನ್ಫೆಂಟ್ರಿ ರಸ್ತೆಯಲ್ಲಿರುವ ಇಲಾಖೆಯ ವಿ.ಜೆ.ಎನ್.ಎಲ್.ಎಂ.ಡಿ ಕಚೇರಿಯಲ್ಲಿದ್ದಾಗ ಮತ್ತೆ ಕರೆ ಮಾಡಿದ್ದ ಆರೋಪಿ, ನಾನು ಲೋಕಾಯುಕ್ತ ಇನ್‌ಸ್ಪೆಕ್ಟರ್ ಮಾತನಾಡುವುದು, ನಮ್ಮ ಎಡಿಜಿಪಿ ಸಾಹೇಬರು ನಿಮ್ಮ ಜೊತೆ ಮಾತನಾಡುತ್ತಾರೆ ಎಂದು ಹೇಳಿ ಧ್ವನಿ ಬದಲಾಯಿಸಿ ಆತನೇ ಮತ್ತೆ ಮಾತನಾಡಿ, ನಿಮ್ಮ ಮೇಲೆ ಆರೋಪ ಕೇಳಿ ಬಂದಿದೆ. ಅದನ್ನು ಮುಕ್ತಾಯ ಮಾಡಲು ನಮ್ಮ ಲೋಕಾಯುಕ್ತ ಇನ್‌ಸ್ಪೆಕ್ಟರ್ ಭೇಟಿ ಮಾಡಿ ಎಂದು ತಿಳಿಸಿದ್ದಾನೆ.

ಈ ಬಗ್ಗೆ ಅನುಮಾನಗೊಂಡ ರಾಮದಾಸಪ್ಪ ವಿಧಾನಸೌಧ ಪೊಲೀಸ್ ಠಾಣೆಗೆ ತೆರಳಿ ಅನಾಮಧೇಯ ವ್ಯಕ್ತಿಗಳು ನನ್ನಿಂದ ಬಲವಂತವಾಗಿ ಹಣ ವಸೂಲಿ ಮಾಡುವ ಉದ್ದೇಶದಿಂದ ಈ ರೀತಿಯ ಕರೆಗಳನ್ನು ಮಾಡುತ್ತಿದ್ದಾರೆ. ಇದರಿಂದ ನನಗೆ ಸರ್ಕಾರಿ ಕೆಲಸ ಮಾಡಲು ಮಾನಸಿಕವಾಗಿ ತೊಂದರೆಯಾಗುತ್ತಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ದೂರು ನೀಡಿದ್ದರು. ಇದೀಗ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಪ್ರಕರಣ- ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಸೆರೆ: ತನ್ನ ಗೆಳತಿಯ ತಂದೆಯ ಫೋನ್​ ನಂಬರ್​ನಿಂದ ಕಾಲ್​ ಮಾಡಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಕ್ಕೆ ಸಂಬಂಧಿಸಿದಂತೆ 19 ವರ್ಷದ ಯುವಕನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಅಮೀನ್ ಬಂಧಿತ ಆರೋಪಿ. ಈತ ಪೊಲೀಸ್​ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡುವ ಮೂಲಕ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ ಹಾಕಿದ್ದ. ಆರೋಪಿಯನ್ನು ಕಾನ್ಪುರದ ಬೇಗಂ ಪೂರ್ವಾ ಪ್ರದೇಶದಲ್ಲಿ ಅರೆಸ್ಟ್​ ಮಾಡಲಾಗಿದ್ದು, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ದಕ್ಷಿಣ) ಅಂಕಿತಾ ಶರ್ಮಾ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರು: ಲಿವಿಂಗ್ ಇನ್ ಟುಗೆದರ್​ನಲ್ಲಿದ್ದ ಪ್ರೇಮಿಗಳು ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.