ಬೆಂಗಳೂರು: ಕೊಲೆ, ಕೊಲೆ ಯತ್ನ, ಸುಲಿಗೆ ಹಾಗೂ ಡ್ರಗ್ಸ್ ದಂಧೆ ಸೇರಿ 16 ವಿವಿಧ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಎಂಟು ವರ್ಷಗಳಿಂದ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೇರಿ ಇಬ್ಬರನ್ನು ಕೆಂಗೇರಿ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಉಳ್ಳಾಲ ಮೂಲದ ಹಮೀದ್ ಹಾಗೂ ಸಹೋದರ ಸಾದೀಕ್ ಬಂಧಿತರು. ಇವರಲ್ಲಿ ಹಮೀದ್ ಎಂಬಾತ ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ, ಬ್ಯಾಡರಹಳ್ಳಿಯಲ್ಲಿ ತಮ್ಮದೇ ನೇತೃತ್ವದಲ್ಲಿ ಸಹಚರರನ್ನು ಒಗ್ಗೂಡಿಸಿಕೊಂಡು ಹಲವು ವರ್ಷಗಳಿಂದ ಮಾದಕ ವಸ್ತುಗಳ ಮಾರಾಟದ ಅಕ್ರಮ ಜಾಲದಲ್ಲಿ ತೊಡಗಿಸಿಕೊಂಡಿದ್ದ. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ದಂಧೆಕೋರರಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ನಂತರ ನಗರ ಹೊರವಲಯದ ಮನೆಯೊಂದರಲ್ಲಿ ಡ್ರಗ್ಸ್ ಶೇಖರಿಸುತ್ತಿದ್ದ.
ಇದನ್ನೂ ಓದಿ: ಬೆಂಗಳೂರಲ್ಲಿ ನಿರ್ಗತಿಕರ ಕೇಂದ್ರಗಳನ್ನು ಹೆಚ್ಚಿಸಲು ಬಿಬಿಎಂಪಿ ಕ್ರಮ : ಗೌರವ್ ಗುಪ್ತಾ
ಯುವ ಜನಾಂಗವನ್ನು ಗುರಿಯಾಗಿಸಿಕೊಂಡು ಗಾಂಜಾ ಸೇರಿ ವಿವಿಧ ರೀತಿಯ ಮಾದಕ ವಸ್ತುಗಳನ್ನು ಸಣ್ಣ-ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿಕೊಂಡು ಮಾರಾಟ ಮಾಡುತ್ತಿದ್ದ. ಇತ್ತೀಚಿನ ವರ್ಷಗಳಲ್ಲಿ ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರಗ್ಸ್ ಚಟುವಟಿಕೆ ಹೆಚ್ಚಾಗಿದ್ದರಿಂದ ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸ್ಥಳೀಯರ ಕುಂದುಕೊರತೆ ಆಲಿಸಿದಾಗ ಡ್ರಗ್ಸ್ ಚಟುವಟಿಕೆಗಳ ಬಗ್ಗೆ ದೂರು ಕೇಳಿಬಂದಿತ್ತು.
ಈ ಸಂಬಂಧ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ದಂಧೆಕೋರರನ್ನು ಬಂಧಿಸುವಂತೆ ತಾಕೀತು ಮಾಡಿದ್ದರು. ಅದರಂತೆ ಕೆಂಗೇರಿ ಉಪವಿಭಾಗದ ಎಸಿಪಿ ಕೃಷ್ಣಕುಮಾರ್ ನೇತೃತ್ವದಲ್ಲಿ ಜ್ಞಾನಭಾರತಿ ಠಾಣೆಯ ಇನ್‌ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಹಾಗೂ ಅನ್ನಪೂರ್ಣೇಶ್ವರಿ ನಗರ ಠಾಣೆಯ ಇನ್‌ಸ್ಪೆಕ್ಟರ್ ಲೋಹಿತ್ ಕುಮಾರ್ ಒಳಗೊಂಡ ತಂಡ ರಚಿಸಲಾಗಿತ್ತು. ಕಳೆದ ಆರು ತಿಂಗಳಿಂದ ನಿರಂತರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿ ಹಮೀದ್ ವಿರುದ್ಧ ಕೊಲೆ, ಕೊಲೆಯತ್ನ, ಡಕಾಯಿತಿ ಯತ್ನ, ಸುಲಿಗೆ, ಬೆದರಿಕೆ, ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಬಂಧನದಿಂದ ತಾವರೆಕೆರೆ, ಕುಂಬಳಗೋಡು, ಬ್ಯಾಡರಹಳ್ಳಿ, ಜ್ಞಾನಭಾರತಿ ಸೇರಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 16 ಅಪರಾಧ ಪ್ರಕರಣ ಭೇದಿಸಲಾಗಿದೆ.