ETV Bharat / state

Annabhagya: ಬಿಪಿಎಲ್ ಕಾರ್ಡ್‌ದಾರರ ಆಧಾರ್ ಲಿಂಕ್ ಕಡ್ಡಾಯ: ಅನ್ನಭಾಗ್ಯದ ಹಣ ಪಡೆಯುವುದು ಹೇಗೆ ಗೊತ್ತೇ? ಇಲ್ಲಿದೆ ಮಾಹಿತಿ..

author img

By

Published : Jun 29, 2023, 4:32 PM IST

Updated : Jun 29, 2023, 6:58 PM IST

ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ನೇರವಾಗಿ ಖಾತೆಗೆ ಹಣ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

aadhaar-link-is-mandatory-for-bpl-card-holders-to-receive-money
ಬಿಪಿಎಲ್ ಕಾರ್ಡ್​ದಾರರ ಆಧಾರ್ ಲಿಂಕ್ ಕಡ್ಡಾಯ : ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ನೇರವಾಗಿ ಖಾತೆಗೆ ಹಣ ವರ್ಗಾವಣೆ ಮಾಡುವುದೇಗೆ ?

ಬೆಂಗಳೂರು : ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಕೊಡಬೇಕಿರುವ 5 ಕೆಜಿ ಅಕ್ಕಿ ಬದಲು ಹಣ ಕೊಡಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧರಿಸಿದೆ. ಈ ಬೆನ್ನಲ್ಲೇ ಬಿಪಿಎಲ್ ಕಾರ್ಡ್‌ದಾರರಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಾಗಿದೆ. ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯನ ಖಾತೆಗೆ 5 ಕೆಜಿ ಅಕ್ಕಿಯ ಜೊತೆ ಇನ್ನುಳಿದ 5 ಕೆಜಿ ಅಕ್ಕಿ ಬದಲಿಗೆ ಮಾಸಿಕ ತಲಾ 170 ರುಪಾಯಿ ಹಣ ನೀಡಲು ಬುಧವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಜುಲೈ 1ರಿಂದಲೇ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ.

ಕೇಂದ್ರ ಸರ್ಕಾರ ಸೇರಿದಂತೆ ಇತರ ರಾಜ್ಯಗಳ ಮೊರೆ ಹೋದರೂ ಅಕ್ಕಿ ಖರೀದಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ, ಹೆಚ್ಚುವರಿಯಾಗಿ ಅಕ್ಕಿ ಹೊಂದಿಸಲು ಪ್ರತಿ ತಿಂಗಳು ಎದುರಾಗಬಹುದಾದ ಸಮಸ್ಯೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈ ಜಾಣ ನಡೆ ಇಟ್ಟಿದ್ದು, ಪರ- ವಿರೋಧಗಳು ವ್ಯಕ್ತವಾಗುತ್ತಿವೆ.

ಹೊರ ರಾಜ್ಯಗಳಿಂದ ಬರುವ ಅಕ್ಕಿ ಸಾಗಾಣಿಕೆ ವೆಚ್ಚ, ಖಾಸಗಿ ಗೋದಾಮುಗಳಲ್ಲಿ ಮಾಡಲಾಗುವ ದಾಸ್ತಾನು ವೆಚ್ಚ, ನಿರ್ವಹಣಾ ವೆಚ್ಚ ಸೇರಿಸಿದರೆ ನಿಗದಿಗಿಂತ 6 ರಿಂದ 8 ರೂ. ಹೆಚ್ಚುವರಿ ಖರ್ಚು ಮಾಡಬೇಕಿತ್ತು. ಈಗ ಇದೆಲ್ಲದರ ತಲೆನೋವಿನಿಂದ ತಪ್ಪಿಸಿಕೊಳ್ಳುವಂತಾಗುತ್ತದೆ. ಇದರಿಂದ ವಾರ್ಷಿಕ ಸರ್ಕಾರಕ್ಕೆ ಸಾಕಷ್ಟು ಹಣ ಉಳಿತಾಯ ಆಗಲಿದೆ ಎನ್ನಲಾಗಿದೆ. ಆದರೆ ಅನ್ನಭಾಗ್ಯಕ್ಕೆ ಸಾಕಷ್ಟು ಅಕ್ಕಿ ಲಭ್ಯವಾಗುವ ತನಕ ಮಾತ್ರ ಈ ಹಣ ಪಾವತಿ ಜಾರಿಯಲ್ಲಿರಲಿದೆ ಎಂದು ಸರ್ಕಾರ ಘೋಷಿಸಿದೆ.

ಬಿಪಿಎಲ್‌ ಕಾರ್ಡ್‌ಗೆ ಆಧಾರ್ ಲಿಂಕ್ ಇದ್ದರೆ ಮಾತ್ರ ಬ್ಯಾಂಕ್‌ಗೆ ಹಣ : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರು 1.28 ಕೋಟಿ ಇದ್ದು, ಇದರಲ್ಲಿ 1.22 ಕೋಟಿ ಮಂದಿ ಆಧಾರ್ ಲಿಂಕ್ ಮಾಡಿಸಿಕೊಂಡಿದ್ದಾರೆ. ಆದರೆ, ಇನ್ನೂ 6 ಲಕ್ಷ ಬಿಪಿಎಲ್ ಕಾರ್ಡ್‌ದಾರರು ಆಧಾರ್ ಲಿಂಕ್ ಮಾಡಿಸಿಲ್ಲ. ಆಧಾರ್ ಲಿಂಕ್ ಇದ್ದರೆ ಮಾತ್ರ ಐದು ಕೆಜಿ ಅಕ್ಕಿ ಬದಲಿಗೆ ಕೊಡುವ ಹಣ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಮನೆ ಯಜಮಾನನ ಬ್ಯಾಂಕ್ ಖಾತೆಗೆ ಹಣ ಹಾಕಲು ಸರ್ಕಾರ ನಿರ್ಧರಿಸಿದೆ.

ಅರ್ಜಿ ಸಲ್ಲಿಸುವ ಅಗತ್ಯವಿಲ್ಲ: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ನೀಡುವ ಹಣ ಪಡೆಯಲು ಜನರು ಯಾವುದೇ ಅರ್ಜಿ ಸಲ್ಲಿಸಬೇಕಿಲ್ಲ. ಸರ್ಕಾರದ ಬಳಿ ಇರುವ ಪಡಿತರ ಚೀಟಿದಾರರ ದತ್ತಾಂಶ ಆಧರಿಸಿ ಸರ್ಕಾರವೇ 'ನೇರ ನಗದು ವರ್ಗಾವಣೆ' (ಡಿಬಿಟಿ) ಮೂಲಕ ಹಣ ವರ್ಗಾವಣೆ ಮಾಡಲಿದೆ. ಈಗಾಗಲೇ ಪಡಿತರ ಚೀಟಿಗಳಿಗೆ ಆಧಾರ್ ಲಿಂಕ್ ಆಗಿದೆ. ಆಧಾರ್‌ಗೆ ಬ್ಯಾಂಕ್‌ ಖಾತೆ ಲಿಂಕ್ ಆಗಿರುತ್ತದೆ. 'ಗೃಹಜ್ಯೋತಿ' ಅಡಿ ನೋಂದಣಿ ಮಾಡುವ ಮಾಹಿತಿಯನ್ನೂ ಪೂರಕವಾಗಿ ಬಳಸಿಕೊಳ್ಳಲಾಗುತ್ತದೆ.

ರಾಜ್ಯದಲ್ಲಿನ ಪಡಿತರ ಚೀಟಿಗಳು ಆಧಾರ್ ಕಾರ್ಡ್ ಜತೆ ಲಿಂಕ್ ಆಗಿವೆ. ಹೀಗಾಗಿ ಶೇ.95 ರಷ್ಟು ಬಿಪಿಎಲ್, ಅಂತ್ಯೋದಯ ಕುಟುಂಬದ ನಿರ್ವಹಣೆ ಮಾಡುವ ವ್ಯಕ್ತಿಯ (ಮನೆಯೊಡೆಯ) ಬ್ಯಾಂಕ್ ಖಾತೆ ಮಾಹಿತಿ ನಮ್ಮ ಬಳಿ ಇದೆ. ಹಾಗಾಗಿ, ಕೆಲವು ತೊಡಕುಗಳನ್ನು ಸರಿಪಡಿಸಿಕೊಂಡು ಜುಲೈ 1ರಿಂದಲೇ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತೇವೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಪಡಿತರ ವಿತರಕರ ಸಂಘದಿಂದ ವಿರೋಧ : ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ತಿಂಗಳು ಅಕ್ಕಿ ಬದಲು ಹಣ ನೀಡಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ವಿರೋಧಿಸಿದೆ. ಅಕ್ಕಿ ಬದಲು ಹಣ ಕೊಟ್ಟರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದೆ. ಈ ಕುರಿತು ಪತ್ರಿಕಾ ಹೇಳಿಕೆಗೆ ನೀಡಿರುವ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಕೇಂದ್ರ ಸರ್ಕಾರ ಈಗಾಗಲೆ ಪ್ರತಿ ಬಿಪಿಎಲ್‌ ಸದಸ್ಯನಿಗೆ 5 ಕೆಜಿ ವಿತರಿಸುತ್ತಿದೆ. ಅಕ್ಕಿ ಸಿಗದಿದ್ದರೆ ರಾಜ್ಯ ಸರ್ಕಾರ ರೈತರಿಂದ ನೇರವಾಗಿ ರಾಗಿ, ಜೋಳ, ಗೋಧಿ ಖರೀದಿಸಬೇಕು. ಇದರಿಂದಾಗಿ ಬೆಳೆ ಬೆಳೆದ ರೈತರಿಗೂ ಅನುಕೂಲವಾಗುತ್ತದೆ. ಪಡಿತರ ಫಲಾನುಭವಿಗಳಿಗೆ ಹಣ ಕೊಟ್ಟರೆ ನ್ಯಾಯಬೆಲೆ ಅಂಗಡಿ ವಿತರಕರಿಗೆ ಸಿಗಬೇಕಿದ್ದ ಕಮಿಷನ್‌ ಹಣವೂ ಖೋತಾ ಆಗಲಿದೆ. ಈಗಾಗಲೇ ಜೀವನ ನಿರ್ವಹಣೆಗೆ ಕಷ್ಟುಪಡುತ್ತಿರುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸಾಕಷ್ಟು ನಷ್ಟ ಆಗಲಿದೆ. ಹಾಗಾಗಿ, ಬಿಪಿಎಲ್ ಕಾರ್ಡ್ ದಾರರಿಗೆ ಹಣದ ಬದಲು ಧಾನ್ಯ ಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಸರ್ಕಾರ ಕೊಡುವ ಹಣಕ್ಕೆ ಎರಡೂವರೆ ಕೆ.ಜಿ ಅಕ್ಕಿ ಮಾತ್ರ ಬರುತ್ತದೆ: ಬಸವರಾಜ ಬೊಮ್ಮಾಯಿ

Last Updated :Jun 29, 2023, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.