ETV Bharat / state

ಮಾಜಿ - ಹಾಲಿ ಪ್ರಿಯತಮೆಯರಿಂದ ಮನನೊಂದು ಯುವಕ ಆತ್ಮಹತ್ಯೆ: ಇಬ್ಬರೂ ಯುವತಿಯರ ವಿರುದ್ಧ ಪ್ರಕರಣ ದಾಖಲು

author img

By ETV Bharat Karnataka Team

Published : Oct 7, 2023, 12:22 PM IST

ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಇಬ್ಬರು ಪ್ರೇಯಸಿಯರಿಂದ ಬೇಸತ್ತ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಯುವಕ ಆತ್ಮಹತ್ಯೆ
ಯುವಕ ಆತ್ಮಹತ್ಯೆ

ಬೆಂಗಳೂರು: ಮಾಜಿ ಪ್ರಿಯತಮೆಯ ಕಾಟಕ್ಕೆ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಅವಳೂ ಬೇಡ ಇವಳು ಬೇಡ ಎಂಬ ತೀರ್ಮಾನಕ್ಕೆ ಬಂದ ಸಂತೋಷ್ (28) ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಸಹೋದರ ನೀಡಿದ ದೂರಿನ ಅನ್ವಯ ಇಬ್ಬರೂ ಯುವತಿಯರ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಬಿಪಿಒ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಎಂಬಾತ ಅದೇ ಕಂಪನಿಯ ಯುವತಿಯೊಬ್ಬಳನ್ನ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ, ಕೆಲ ತಿಂಗಳುಗಳ ಹಿಂದೆ ಇಬ್ಬರ ನಡುವೆ ವೈಮನಸ್ಯ ಮೂಡಿದ್ದರಿಂದ ಪ್ರೀತಿ ಮುರಿದು ಬಿದ್ದಿತ್ತು. ನಂತರ ಅದೇ ಕಂಪನಿಯ ಮತ್ತೊಬ್ಬ ಯುವತಿಯನ್ನು ಸಂತೋಷ್ ಪ್ರೀತಿಸಲಾರಂಭಿಸಿದ್ದನಂತೆ.

ಹೊಸ ಪ್ರಿಯತಮೆಯೊಂದಿಗೆ ಸಂತೋಷ್ ಓಡಾಡಿಕೊಂಡಿರುವುದನ್ನು ಸಹಿಸದ ಮೊದಲನೇ ಪ್ರಿಯತಮೆ ಸಹೋದ್ಯೋಗಿಗಳ ಮುಂದೆ ಆತನಿಗೆ ಕಪಾಳಮೋಕ್ಷ ಮಾಡಿದ್ದಳು ಎನ್ನಲಾಗಿದೆ. ಅಲ್ಲದೇ ತನ್ನೊಂದಿಗೆ ಪ್ರೀತಿಯಲ್ಲಿದ್ದಾಗ ತೆಗೆದಿದ್ದ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಸಿದ್ದಳಂತೆ. ಇಷ್ಟಾದ ಬಳಿಕ ಆಕೆಯೊಂದಿಗೆ ಮಾತನಾಡಿದ್ದ ಸಂತೋಷನ ಸಹೋದರ ಸಂಧಾನ ಕೂಡಾ ಮಾಡಿದ್ದರಂತೆ.

ಅದೇ ಸಂದರ್ಭದಲ್ಲಿ ಆಕೆಗೆ ಕಂಪನಿಯಿಂದ ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಆಕೆ ಸಂತೋಷ್ ಹಾಗೂ ಆತನ ಹೊಸ ಗೆಳತಿ ಸಹಾಯದಿಂದ ತನಗೆ ವರ್ಗಾವಣೆ ಮಾಡಿಸಿದ್ದಾರೆಂದು ಆತನಿಗೆ ಕರೆ ಮಾಡಿ ಬೈದಿದ್ದಾಳೆ. ಇದರಿಂದ ಮನನೊಂದ ಸಂತೋಷ್ ಅಕ್ಟೋಬರ್ 3ರಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂತೋಷ್ ಮೃತಪಟ್ಟಿದ್ದಾನೆ.

ಇಬ್ಬರು ಯುವತಿಯರಿಂದಾಗಿ ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಿರುವ ಮೃತನ ಕುಟುಂಬಸ್ಥರು ರಾಮಮೂರ್ತಿ ನಗರ ಠಾಣಾ ಮೆಟ್ಟಿಲೇರಿದ್ದಾರೆ. ದೂರಿನ ಅನ್ವಯ, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತುಮಕೂರಲ್ಲಿ ಆರ್ಥಿಕ ಸಂಕಷ್ಟಕ್ಕೆ ದಂಪತಿ ಆತ್ಮಹತ್ಯೆ: ತುಮಕೂರು ಜಿಲ್ಲೆಯಲ್ಲಿ ಮೂರು ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಪಾವಗಡ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ. ಇಬ್ಬರು ಮನೆಯಿಂದ ಹೊರಬರದೇ ಇದ್ದಾಗ ಘಟನೆ ಬೆಳಕಿಗೆ ಬಂದಿತ್ತು. ಇನ್ನುನ ಪೊಲೀಸರು, ದಂಪತಿಗಳು 3 ವರ್ಷದ ಹಿಂದೆ ಮದುವೆಯಾಗಿದ್ದು ಕೌಟುಂಬಿಕೆ ಕಲಹ ಹಾಗೂ ಹಣದ ಸಮಸ್ಯೆಯಿಂದ ಮನೆಯಲ್ಲೇ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಪ್ರಿಯಕರನೊಂದಿಗೆ ಸಲುಗೆ, ಗಂಡನ ಕೊಲೆಗೆ ಸುಪಾರಿ ಕೊಟ್ಟ ಸುಂದರಿ.. ಬಸ್​ ಟಿಕೆಟ್​​ ನೀಡಿತ್ತು ಹತ್ಯೆ ಹಿಂದಿನ ಸುಳಿವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.